ಮ್ಯಾನ್ಮಾರ್: ಬಂಡುಕೋರ ಪಡೆಗೆ ಭಾರಿ ಮುನ್ನಡೆ

0
381

ಸನ್ಮಾರ್ಗ ವಾರ್ತೆ

ಪುಟ್ಟ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ಆಂತರಿಕ ಘರ್ಷಣೆ ಜೋರಾಗಿದೆ. ಬಾಂಗ್ಲಾದೇಶಕ್ಕೆ ತಾಗಿಕೊಂಡಂತಿರುವ ಉತ್ತರ ಭಾಗದ ರಾಕೈನ್ ಪ್ರದೇಶದಲ್ಲಿರುವ 17 ಟೌನ್ ಷಿಪ್‌ಗಳ ಪೈಕಿ 14 ಅನ್ನು ಅರಕ್ಕಾನ್ ಲಿಬರೇಷನ್ ಆರ್ಮಿ ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ. ಮುಂದಿನ ಡಿಸೆಂಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುತ್ತೇವೆ ಎಂದು ಸೇನಾ ಸರ್ಕಾರ ಹೇಳಿರುವ ಬಳಿಕ ಈ ಘಟನೆ ನಡೆದಿದೆ.

ಅರಕ್ಕಾನ್ ವಿಭಾಗದ ಶಕ್ತಿ ಕೇಂದ್ರ ಎಂದೇ ಹೇಳಲಾಗಿರುವ ರಾಖೈನ್‌ಗೆ ಸೇನೆ ಆಹಾರ ಧಾನ್ಯಗಳನ್ನು ಹೋಗದಂತೆ ತಡೆದಿದೆ. ಈ ಮೂಲಕ 20 ಲಕ್ಷದಷ್ಟು ಜನರ ಬದುಕಿನ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ. ಇಲ್ಲಿನ 57 ಶೇಕಡದಷ್ಟು ಜನರು ಆಹಾರ ಕ್ಷಮವನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಅಲ್ಲದೆ ಸೇನೆ ವೈಮಾನಿಕ ದಾಳಿಯನ್ನು ನಡೆಸುತ್ತಿದೆ. 2023ರಿಂದ 25ರ ನಡುವೆ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 96 ಮಕ್ಕಳು ಸೇರಿದಂತೆ 402 ಮಂದಿ ಮೃತಪಟ್ಟಿದ್ದಾರೆ.

ಡಿಸೆಂಬರ್ 28ರಂದು ಸಾರ್ವತ್ರಿಕ ಚುನಾವಣೆ ನಡೆಸುವುದಾಗಿ ಮ್ಯಾನ್ಮಾರ್ ಸೇನೆ ಇತ್ತೀಚಿಗಷ್ಟೇ ಘೋಷಿಸಿತ್ತು. ಇದೇ ವೇಳೆ 21 ಗೋತ್ರಗಳು ಮತ್ತು ನ್ಯಾಷನಲ್ ಯುನಿಟಿ ಗವರ್ನಮೆಂಟ್, ಪೀಪಲ್ಸ್ ಡಿಫೆನ್ಸ್ ಫೋರ್ಸ್ ಮುಂತಾದವುಗಳು ಈ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ.

ವರ್ಷಗಳಿಂದ ಮ್ಯಾನ್ಮಾರ್ ಆಂತರಿಕ ಘರ್ಷಣೆಯನ್ನು ಎದುರಿಸುತ್ತಿದೆ. ಪ್ರಜಾತಂತ್ರ ರೂಪದಲ್ಲಿ ಗೆದ್ದಿದ್ದ ಸೂಕಿ ಸರಕಾರವನ್ನು ಬುಡಮೇಲು ಗೊಳಿಸಿ ಸೇನೆ ಅಧಿಕಾರವನ್ನು ಪಡೆದುಕೊಂಡಿದೆ. ಸೂಕಿಯನ್ನು ಜೈಲಲ್ಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಒತ್ತಡವನ್ನು ತಾಳಲಾರದೆ ಇದೀಗ ಮ್ಯಾನ್ಮಾರ್ ಚುನಾವಣೆಯನ್ನು ಘೋಷಿಸಿದೆ.