
ಹೊಸದಿಲ್ಲಿ, ಜೂ.19: ಬಿಜೆಪಿಯ ಪಶ್ಚಿಮ ದಿಲ್ಲಿಯ ಸಂಸದ ಪ್ರವೇಶ್ ಸಾಹಿಬ್ ಸಿಂಗ್ ವರ್ಮಾ ದಿಲ್ಲಿಯ ಉಪ ರಾಜ್ಯಪಾಲರಿಗೆ ಪತ್ರ ಬರೆದಿದ್ದು ತನ್ನ ಸಂಸದೀಯ ಕ್ಷೇತ್ರದಲ್ಲಿ ಹಾಗೂ ನಗರದ ಹಲವು ಸ್ಥಳಗಳಲ್ಲಿ ಸರಕಾರಿ ಜಮೀನು ಮತ್ತು ರಸ್ತೆಬದಿಯಲ್ಲಿ ತ್ವರಿತಗತಿಯಲ್ಲಿ ಮಸೀದಿ ನಿರ್ಮಾಣಗೊಳ್ಳುತ್ತಿದೆ. ಇದರ ವಿರುದ್ಧ ಕ್ರಮ ಜರಗಿಸುವಂತೆ ಆಗ್ರಹಿಸಿದ್ದಾರೆ. ಇದರಿಂದ ಟ್ರಾಫಿಕ್ ವ್ಯವಸ್ಥೆಗೆ ಅಡೆತಡೆಯಾಗುತ್ತದೆ, ಜನರಿಗೆ ಅಸೌಕರ್ಯವಾಗುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
“ನಾನು ಇಡೀ ದಿಲ್ಲಿಯಲ್ಲಿ ವಿಶೇಷವಾಗಿ ನನ್ನ ಸಂಸದೀಯ ಕ್ಷೇತ್ರ ಪಶ್ಚಿಮ ದಿಲ್ಲಿಯ ಕೆಲವು ಭಾಗಗಳಲ್ಲಿ, ಸರಕಾರಿ ಜಮೀನಿನಲ್ಲಿ, ರಸ್ತೆಬದಿ ಹಾಗೂ ನಿರ್ಜನ ಸ್ಥಳಗಳಲ್ಲಿ ಮಸೀದಿಯು ತ್ವರಿತವಾಗಿ ಮೇಲೆದ್ದು ನಿಲ್ಲುತ್ತಿದ್ದು ಇದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತಿದ್ದೇನೆ. ಎಂದು ವರ್ಮಾ ಪತ್ರದಲ್ಲಿ ವಿವರಿಸಿದ್ದಾರೆ. ಈ ರೀತಿ ಮಸೀದಿ ನಿರ್ಮಾಣವಾಗುವುದರಿಂದ ಸಂಚಾರಕ್ಕೆ ಧಕ್ಕೆ ಆಗುತ್ತದೆ ಮಾತ್ರವಲ್ಲ ಸಾರ್ವಜನಿಕರಿಗೆ ಅಸೌಕರ್ಯವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಉಪರಾಜ್ಯಪಾಲರ ಕಚೇರಿ ತಕ್ಷಣದಿಂದ ಕ್ರಮ ಜರಗಿಸಲು ಮುಂದಾಗಬಹುದು ಎಂದು ನಿರೀಕ್ಷಿಸುತ್ತೇನೆ೦ದು ವರ್ಮಾ ಹೇಳಿದ್ದಾರೆ.











