ಸನ್ಮಾರ್ಗ ವಾರ್ತೆ
ಕದನ ವಿರಾಮ ಒಪ್ಪಂದದಂತೆ ಇಸ್ರೇಲ್ ಜೈಲಿನಿಂದ ಬಿಡುಗಡೆಗೊಂಡು ಗಾಝಾಕ್ಕೆ ಮರಳಿದ ಫೆಲೆಸ್ತೀನ್ ಫೋಟೋಗ್ರಾಫರ್ ಶಾದಿ ಅಬು ಸಿದ್ವಿ ತನ್ನ ಕಣ್ಣನ್ನೇ ನಂಬಲಿಲ್ಲ. ಒಂದುವರೆ ವರ್ಷದ ಹಿಂದೆ ಅವರನ್ನು ಇಸ್ರೇಲಿ ಸೇನೆ ಬಂಧಿಸಿ ಜೈಲಿಗೆ ಅಟ್ಟಿತ್ತು. ಇವರ ಪತ್ನಿ ಮತ್ತು ಮಕ್ಕಳು ಇಸ್ರೇಲ್ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ ಎಂಬ ಸುದ್ದಿಯನ್ನು ಜೈಲಿಗೆ ರವಾನಿಸಲಾಗಿತ್ತು. ಭಾರ ಹೃದಯದಿಂದ ಗಾಝಕ್ಕೆ ತಲುಪಿದ ಅವರಿಗೆ ಅಚ್ಚರಿ ಕಾದಿತ್ತು.
ನನ್ನ ಪತ್ನಿಯ ಧ್ವನಿಯನ್ನು ಕೇಳಿದೆ. ನನ್ನ ಮಗಳ ಧ್ವನಿಯನ್ನು ಕೇಳಿದೆ. ನನ್ನ ಪಾಲಿಗೆ ಇದು ಅನಿರೀಕ್ಷಿತವಾಗಿತ್ತು. ನಾನೆಲ್ಲ ಆಸೆಯನ್ನು ಕಳಕೊಂಡು ಗಾಝಕ್ಕೆ ಬಂದಿದ್ದೆ ಎಂದು ಅವರು ಹೇಳಿದ್ದಾರೆ.
ಖಾನ್ ಯೂನಿಸ್ನಲ್ಲಿರುವ ಕುಟುಂಬದ ಮನೆಗೆ ತಲುಪಿದಾಗ ಪತ್ನಿ ಹನ ಆಲಿಂಗಿಸಿದರು. ಇನ್ನೆಂದೂ ತಾನು ನೋಡಲಾರೆ ಎಂದು ಅಂದುಕೊಂಡಿದ್ದ ಮಗಳು ಮತ್ತು ಮಗನನ್ನು ಕಂಡು ಅವರು ಕಣ್ಣೀರುಳಿಸಿದರು.
2024 ಮಾರ್ಚ್ ಹದಿನೆಂಟರಂದು ಗಾಝಾದ ಅಲ್ ಶಿಫಾ ಆಸ್ಪತ್ರೆಯಿಂದ ಇವರನ್ನು ಇಸ್ರೇಲ್ ಸೇನೆ ಬಂಧಿಸಿತ್ತು. ಇವರನ್ನು ಇಸ್ರೇಲ್ ಸೇನೆ ಬಂಧಿಸಿಟ್ಟಿರುವುದನ್ನು ವಕೀಲರು ಪತ್ನಿ ಹನಗೆ ತಿಳಿಸಿದ್ದರು. ಆದರೆ ಇವರನ್ನು ಸಂಪರ್ಕಿಸುವ ಯಾವ ದಾರಿಯೂ ಸಿಕ್ಕಿರಲಿಲ್ಲ.
ಇಸ್ರೇಲಿನ ಜೈಲು ಎಂಬುದು ಜೀವಂತ ಇರುವವರ ಸ್ಮಶಾನ ಎಂದು ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅವರು ಹೇಳಿದ್ದಾರೆ. ಜೈಲಿನಲ್ಲಿ ತನ್ನ ಮೇಲೆ ಅತಿಹೀನ ದೌರ್ಜನ್ಯವನ್ನು ನಡೆಸಲಾಗಿದೆ. ಕಣ್ಣನ್ನು ಮುಚ್ಚಿ ಬಟ್ಟೆಯನ್ನು ಕಟ್ಟಲಾಗಿದೆ. ದೀರ್ಘ ಸಮಯ ಮಂಡಿಯೂರಿ ನಿಲ್ಲುವಂತೆ ನಿರ್ಬಂಧಿಸಲಾಗಿದೆ. ನಾನು ಗಾಝಕ್ಕೆ ಮರಳಿದಾಗ ನನ್ನ ಆತ್ಮ ನನ್ನೊಳಗೆ ಮರಳಿ ಸೇರಿಕೊಂಡಂತೆ ಅನಿಸಿತು. ಆದರೆ ಇಲ್ಲಿ ಎಲ್ಲವೂ ನಾಶವಾಗಿದೆ. ಇನ್ನು ಹೇಗೆ ನಾನು ಮೊದಲಿನಿಂದ ಕೆಲಸ ಪ್ರಾರಂಭಿಸಲಿ ಎಂದು ಅವರು ದುಃಖದಿಂದ ಪ್ರತಿಕ್ರಿಯಿಸಿದ್ದಾರೆ.












