ಸನ್ಮಾರ್ಗ ವಾರ್ತೆ
ಕೋಲ್ಕತ್ತಾ: ಮುರ್ಷಿದಾಬಾದ್ ಜಿಲ್ಲೆಯ ಶೈಕ್ಷಣಿಕ ಕ್ರಾಂತಿಯ ಹರಿಕಾರ ರಾಜಾ ಕೃಷ್ಣನಾಥ್ ಅವರ ಐತಿಹಾಸಿಕ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ, ಪಶ್ಚಿಮ ಬಂಗಾಳ ಸರ್ಕಾರವು ಮುರ್ಷಿದಾಬಾದ್ ವಿಶ್ವವಿದ್ಯಾಲಯವನ್ನು ‘ಮುರ್ಷಿದಾಬಾದ್ ರಾಜಾ ಕೃಷ್ಣನಾಥ್ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ.
ಈ ಮಹತ್ವದ ಬದಲಾವಣೆಗೆ ಸಂಬಂಧಿಸಿದ ವಿಧೇಯಕವನ್ನು ಶನಿವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗುತ್ತಿದ್ದು, ರಾಜ್ಯಪಾಲರ ಅಂತಿಮ ಅನುಮೋದನೆ ದೊರೆತ ನಂತರ ನೂತನ ಹೆಸರು ಅಧಿಕೃತವಾಗಿ ಜಾರಿಗೆ ಬರಲಿದೆ.
ಮುರ್ಷಿದಾಬಾದ್ ಜಿಲ್ಲೆಯ ಜನರ ದೀರ್ಘಕಾಲದ ಬೇಡಿಕೆ ಮತ್ತು ಭಾವನೆಗಳಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಈ ನಾಮಕರಣ ಪ್ರಕ್ರಿಯೆಗೆ ಹಸಿರು ನಿಶಾನೆ ನೀಡಿದ್ದಾರೆ ಎಂದು ಸರ್ಕಾರಿ ಮೂಲಗಳು ಖಚಿತಪಡಿಸಿವೆ. 1853 ರಲ್ಲಿ ಸ್ಥಾಪನೆಯಾದ ಐತಿಹಾಸಿಕ ಕೃಷ್ಣನಾಥ್ ಕಾಲೇಜಿನ ಆವರಣದಲ್ಲೇ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದ್ದರೂ, ಆರಂಭದಲ್ಲಿ ರಾಜಾ ಕೃಷ್ಣನಾಥ್ ಅವರ ಹೆಸರನ್ನು ಕೈಬಿಟ್ಟಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಸರ್ಕಾರದ ಈ ನಡೆಯನ್ನು ಜಿಲ್ಲೆಯ ಇತಿಹಾಸಕಾರರು, ಹಳೆಯ ವಿದ್ಯಾರ್ಥಿಗಳು ಮತ್ತು ಪ್ರಮುಖ ನಾಗರಿಕರು ಮುರ್ಷಿದಾಬಾದ್ನ ಸಾಂಸ್ಕೃತಿಕ ಪರಂಪರೆಗೆ ಎಸಗಿದ ಅವಮಾನ ಎಂದು ಖಂಡಿಸಿ ಸರಣಿ ಪ್ರತಿಭಟನೆಗಳನ್ನು ನಡೆಸಿದ್ದರು.
ಈ ಹೋರಾಟಕ್ಕೆ ಮಣಿದಿರುವ ಸರ್ಕಾರವು ಈಗ ಜಿಲ್ಲೆಯ ಶಿಕ್ಷಣ ಪ್ರೇಮಿಯ ಹೆಸರನ್ನು ಮರುಸ್ಥಾಪಿಸಲು ಮುಂದಾಗಿದೆ. ವಿಶ್ವವಿದ್ಯಾನಿಲಯಕ್ಕೆ ರಾಜಾ ಕೃಷ್ಣನಾಥ್ ಅವರ ಹೆಸರಿಡುವುದರಿಂದ ಜಿಲ್ಲೆಯ ಶೈಕ್ಷಣಿಕ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಗೆ ಅಂತಿಮವಾಗಿ ನ್ಯಾಯ ದೊರೆತಂತಾಗಿದೆ ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
ಆಡಳಿತಾತ್ಮಕ ಮಟ್ಟದಲ್ಲಿ ಮರುನಾಮಕರಣ ಪ್ರಕ್ರಿಯೆಯು ಈಗಾಗಲೇ ಚುರುಕುಗೊಂಡಿದ್ದು, ಈ ಕ್ರಮವನ್ನು ಕೇವಲ ಕಾನೂನು ತಿದ್ದುಪಡಿಯನ್ನಾಗಿ ಮಾತ್ರವಲ್ಲದೆ ಸಾರ್ವಜನಿಕ ಗೌರವದ ಮರುಸ್ಥಾಪನೆಯಾಗಿಯೂ ನಾಗರಿಕರು ಸ್ವಾಗತಿಸಿದ್ದಾರೆ.












