ದಾವಣಗೆರೆ | ಎಸ್‌ಐಆರ್‌ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ

0
232

ಸನ್ಮಾರ್ಗ ವಾರ್ತೆ

ದಾವಣಗೆರೆ ನಗರದಲ್ಲಿ ಜಮಾಅತೆ-ಇಸ್ಲಾಮಿ‌ ಹಿಂದ್ ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಇವರ ಸಂಯುಕ್ತ ಆಶ್ರಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರಿಗೆ ಎರಡು ಕಡೆಗಳಲ್ಲಿ ಜಾಗೃತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಲಾಯಿತು.

ದಾವಣಗೆರೆ ನಗರದ ಬೀಡಿ ಲೇಔಟ್‌ನಲ್ಲಿರುವ ಹೆಚ್ ಕೆ ಜಿ ಎನ್ ಸಭಾಂಗಣ ಹಾಗೂ ಭಗತ್ ಸಿಂಗ್ ನಗರದ ಸ್ಟಾರ್ ಶಾದಿ ಮಹಲ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ರಾಜ್ಯಾಧ್ಯಕ್ಷರಾದ ಡಾ.‌ ನಸೀಂ ಅಹ್ಮದ್ ಭಾಗವಹಿಸಿ, SIR ಪ್ರಕ್ರಿಯೆ, ಅದರ ಉದ್ದೇಶ, ಅಗತ್ಯ ದಾಖಲೆಗಳು, ಅರ್ಜಿ ಭರ್ತಿ ವಿಧಾನ ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.

ಎನ್ಯುಮರೇಷನ್ ಫಾರಂ ಭರ್ತಿ ಮಾಡುವ ಪ್ರಕ್ರಿಯೆಯ ಬಗ್ಗೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ಮಾಧ್ಯಮ ಸಂಯೋಜಕರಾದ ಇರ್ಷಾದ್ ವೇಣೂರು ಕನ್ನಡದಲ್ಲಿ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದವರು ತಮ್ಮ ಸಂದೇಹಗಳಿಗೆ ಸ್ಪಷ್ಟನೆ ಪಡೆದು, SIR ಪ್ರಕ್ರಿಯೆಯಲ್ಲಿ ಜನರಿಗೆ ನೆರವಾಗುವ ಕುರಿತು ಮಾರ್ಗದರ್ಶನ ಪಡೆದರು.

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಶಿವಮೊಗ್ಗ ವಲಯ ಸಂಚಾಲಕರಾದ ಮೌಲಾನಾ ಮುಹಮ್ಮದ್ ಸಲೀಂ‌ ಉಮ್ರಿ, ದಾವಣಗೆರೆ ಸ್ಥಳೀಯ ಸಂಚಾಲಕರಾದ ಅಯ್ಯೂಬ್ ದಾವಣಗೆರೆ, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ದಾವಣಗೆರೆ ಮುಖಂಡರಾದ ಸೆಯ್ಯದ್ ಯಾಕೂಬ್, ಇಸ್ಮಾಯಿಲ್ ಝಬೀವುಲ್ಲಾ ಉಪಸ್ಥಿತರಿದ್ದರು. ಇಮ್ತಿಯಾಝ್ ಬೇಗ್ ದಾವಣಗೆರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.