ಸನ್ಮಾರ್ಗ ವಾರ್ತೆ
ಗೋಕಳ್ಳ ಸಾಗಣೆ ಆರೋಪದ ಮೇಲೆ ಮುಸ್ಲಿಂ ಟ್ರಕ್ ಚಾಲಕನನ್ನು ಹೊಡೆದು ಕೊಂದ 14 ದುಷ್ಕರ್ಮಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನಂತರ ಹೆಚ್ಚುವರಿ ಜಿಲ್ಲಾ ಮತ್ತು ಸೆಶೆನ್ಸ್ ನ್ಯಾಯಾಧೀಶ ತಬುಸ್ಸಮ್ ಖಾನ್ ಅವರ ವಿರುದ್ಧ ಕೋಮು ಬೆದರಿಕೆಗಳು ಮತ್ತು ಜೀವ ಬೆದರಿಕೆ ಬಂದಿರುವುದಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅವನೇಂದ್ರ ಕುಮಾರ್ ಸಿಂಗ್ ಅವರಿದ್ದ ವಿಭಾಗಿಯ ಪೀಠ ನ್ಯಾಯಾಧೀಶರಿಗೆ ತಕ್ಷಣ ಪೊಲೀಸ್ ರಕ್ಷಣೆ ಒದಗಿಸುವಂತೆ ಆದೇಶಿಸಿದೆ.
2022ರಲ್ಲಿ ಮಧ್ಯಪ್ರದೇಶದ ಬರಾಕ್ಕರ್ ಗ್ರಾಮದಲ್ಲಿ ಟ್ರಕ್ ಚಾಲಕ ನಜೀರ್ ಅಹ್ಮದ್ ಅವರನ್ನು ಗುಂಪು ಥಳಿಸಿ ಹತ್ಯೆ ಮಾಡಿತ್ತು. ಇದಕ್ಕಾಗಿ 14 ಮಂದಿ ಯನ್ನು ದೋಷಿಗಳು ಎಂದು ತೀರ್ಪು ನೀಡಿದ ನ್ಯಾಯಾಧೀಶ ರನ್ನು ಇದೀಗ ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ನಿಂದಿಸಲಾಗುತ್ತಿದೆ.
ಈ ತೀರ್ಪಿನ ಬಳಿಕ ಗೋ ಸಂರಕ್ಷಣಾ ಸಂಘಟನೆಗಳೆಂದು ಗುರುತಿಸಿಕೊಳ್ಳುವ ಗುಂಪುಗಳು ಪ್ರತಿಭಟನೆ ನಡೆಸಿದವು. ನ್ಯಾಯಾಧೀಶರ ಪ್ರತಿ ಕೃತಿಯನ್ನು ಸುಟ್ಟು ಹಾಕಿದವು. ಅವರನ್ನು ನಿಂದಿಸಿದವು. ಅವರನ್ನು ಗುರಿಯಾಗಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟುಗಳನ್ನು ಪ್ರಸಾರ ಮಾಡಿದವು. 14 ಮಂದಿಗೆ ನೀಡಲಾದ ಜೀವಾವಧಿ ಶಿಕ್ಷೆಯನ್ನು 10 ದಿನದಲ್ಲಿ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರವನ್ನು ನಡೆಸುವುದಾಗಿ ಓರ್ವ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ವಿಡಿಯೋ ಹಾಕಿದ್ದಾನೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಇಂತಹ ಕ್ರಮಗಳು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ನೇರ ಬೆದರಿಕೆ ಒಡ್ದುತ್ತತ್ತೇವೆ ಎಂದು ಹೇಳಿದೆ. ಬೆದರಿಕೆ ಹಾಕಿದವರ ವಿರುದ್ಧ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರವಾದ ಅಫಿಡವಿತ್ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.












