ನೆತನ್ಯಾಹು ಹೆಸರು ಹೊರೆಯಾಗುತ್ತಿದೆ, ಅಮೆರಿಕದಲ್ಲಿ ವ್ಯಾಪಾರ ಕುಸಿತದ ಭೀತಿ: ಕುಟುಂಬದ ಹೆಸರನ್ನು ಕೈಬಿಟ್ಟ ಪುತ್ರ

0
333

ಸನ್ಮಾರ್ಗ ವಾರ್ತೆ

ಟೆಲ್ ಅವಿವ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪುತ್ರ ತಮ್ಮ ಹೆಸರಿನಿಂದ ಕುಟುಂಬದ ಉಪನಾಮವನ್ನು ಕೈಬಿಟ್ಟಿದ್ದಾರೆ ಎಂದು ವರದಿಯಾಗಿದೆ. ನೆತನ್ಯಾಹು ಅವರ ಹಿರಿಯ ಪುತ್ರ ಯೈರ್ ನೆತನ್ಯಾಹು ಅವರು ತಮ್ಮ ಹೆಸರಿನಿಂದ ‘ನೆತನ್ಯಾಹು’ ಉಪನಾಮವನ್ನು ತೆಗೆದುಹಾಕಿ, ‘ಯೊನಾಥನ್ ಹಾರ್ನ್’ ಎಂಬ ಹೆಸರನ್ನು ಅಳವಡಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ತಮ್ಮ ಉಪನಾಮದೊಂದಿಗೆ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಯೈರ್ ಈ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಡಿಸೆಂಬರ್ 2024ರಲ್ಲಿ ಬಿಡುಗಡೆಯಾದ ಅವರ ತೆರಿಗೆ ತಡೆಹಿಡುವಿಕೆ ದಾಖಲೆಗಳಲ್ಲಿ ಹಳೆಯ ಹೆಸರಾದ ‘ಯೈರ್ ನೆತನ್ಯಾಹು’ ಎಂದು ನಮೂದಿಸಲಾಗಿತ್ತು. ಆದರೆ, ಈ ವರ್ಷ ಬಿಡುಗಡೆಯಾದ ದಾಖಲೆಗಳಲ್ಲಿ ಅವರ ಹೊಸ ಹೆಸರು ‘ಯೊನಾಥನ್ ಹೂನ್’ ಎಂದು ಕಾಣಿಸಿಕೊಂಡಿದೆ. ಯೈರ್ ಈ ಹಿಂದೆಯೂ ತಮ್ಮ ಹೆಸರಿನಲ್ಲಿ ಇಂತಹ ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಹಿಂದೆ ಅವರು ನಿರ್ವಹಿಸುತ್ತಿದ್ದ ಸಾಮಾಜಿಕ ಮಾಧ್ಯಮ ಖಾತೆಗಳ ಹೆಸರು ‘ಯೈರ್ ಹೂನ್’ ಎಂದಿತ್ತು. ತಮ್ಮ ತಾಯಿಯ ಕಡೆಯ ಅಜ್ಜ ಶಮೈಲ್ ಅವರ ಉಪನಾಮವನ್ನು ಬಳಸಿಕೊಂಡು ‘ಹೂನ್’ ಎಂಬ ಉಪನಾಮವನ್ನು ಅವರು ಅಳವಡಿಸಿಕೊಂಡಿದ್ದರು.

ಅಮೆರಿಕ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ‘ನೆತನ್ಯಾಹು ಕುಟುಂಬ’ವು ಹಲವು ರಾಜಕೀಯ ಮತ್ತು ಕಾನೂನು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಯೈರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ಪ್ರಧಾನಿ ನೆತನ್ಯಾಹು ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಅಮಾನವೀಯ ಕೃತ್ಯಗಳು ಮತ್ತು ಯುದ್ಧ ಅಪರಾಧಗಳ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಇದರ ಬೆನ್ನಲ್ಲೇ ಅಮೆರಿಕಾದಾದ್ಯಂತ ನೆತನ್ಯಾಹು ವಿರುದ್ಧ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ. ನೆತನ್ಯಾಹು ವಿರುದ್ಧ ಉದ್ಭವಿಸುತ್ತಿರುವ ಕ್ರಿಮಿನಲ್ ಪ್ರಕರಣಗಳು ಮತ್ತು ವಿವಾದಗಳು ಯೈರ್ ಅವರ ವ್ಯಾಪಾರ ಪ್ರಯತ್ನಗಳಿಗೆ ದೊಡ್ಡ ಹಿನ್ನಡೆಯಾಗಿವೆ ಎಂದು ವರದಿಯಾಗಿದೆ. ಯೈರ್ ಅಮೆರಿಕದ ಅತೀವ ಬಲಪಂಥೀಯ ಸಂಘಟನೆಗಳೊಂದಿಗೆ ವಿವಿಧ ವಾಣಿಜ್ಯ ವಹಿವಾಟುಗಳನ್ನು ನಡೆಸುತ್ತಿದ್ದಾರೆ.

ನೆತನ್ಯಾಹು ಕುಟುಂಬದ ಸದಸ್ಯರು ಉಪನಾಮಗಳನ್ನು ಬದಲಾಯಿಸುತ್ತಿರುವುದು ಇದೇ ಮೊದಲೇನಲ್ಲ. ಯೈರ್ ಅವರ ಸಹೋದರ ಅವ್ನರ್ ಐದು ವರ್ಷಗಳ ಹಿಂದೆ ತಮ್ಮ ಹೆಸರನ್ನು ‘ಅವಿ ಸೆಗಲ್’ ಎಂದು ಬದಲಾಯಿಸಿಕೊಂಡಿದ್ದರು. ಹೊಸ ಹೆಸರನ್ನು ಅಳವಡಿಸಿಕೊಂಡ ನಂತರ ಇಂಗ್ಲೆಂಡ್‌ನಲ್ಲಿ ವ್ಯಾಪಾರ ಮಾಡಿ ಅವರು ಭಾರಿ ಆಸ್ತಿ ಗಳಿಸಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಸ್ವತಃ ಬೆಂಜಮಿನ್ ನೆತನ್ಯಾಹು ಅವರು 1980ರ ದಶಕದಲ್ಲಿ ಅಮೆರಿಕದಲ್ಲಿ ಅಡ್ಡಹೆಸರಿನಲ್ಲಿ ವಾಸಿಸಿದ್ದರು. ‘ಬೆನ್ ನಿತೈ’ ಎಂಬ ಹೆಸರಿನಲ್ಲಿ ನೆತನ್ಯಾಹು ದೀರ್ಘಕಾಲ ಅಮೆರಿಕದಲ್ಲಿ ನೆಲೆಸಿದ್ದರು.

ಗಾಝಾ ಮತ್ತು ಲೆಬನಾನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಗಳು ಹಾಗೂ ಹೆಚ್ಚುತ್ತಿರುವ ಭ್ರಷ್ಟಾಚಾರದ ಆರೋಪಗಳು ನೆತನ್ಯಾಹು ವಿರುದ್ಧ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಮುಖ್ಯ ಕಾರಣಗಳಾಗಿವೆ. ಫೆಲೆಸ್ತೀನ್ ನರಮೇಧದ ನಂತರ, ಇಸ್ರೇಲಿ ನ್ಯಾಯಾಲಯಗಳಲ್ಲಿ ನೆತನ್ಯಾಹು ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಕಾನೂನು ಪ್ರಕ್ರಿಯೆಗಳನ್ನು ಪುನರಾರಂಭಿಸಲಾಗುವುದು ಎಂಬ ವರದಿಗಳಿವೆ. ನೆತನ್ಯಾಹು ಭ್ರಷ್ಟಾಚಾರ, ವಂಚನೆ ಮತ್ತು ನಂಬಿಕೆ ದ್ರೋಹ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹಾಲಿವುಡ್ ನಿರ್ಮಾಪಕ ಅರ್ನಾನ್ ಮಿಲ್ಚನ್ ಮತ್ತು ಇತರ ಶ್ರೀಮಂತ ವ್ಯಕ್ತಿಗಳಿಂದ ಲಕ್ಷಾಂತರ ಮೌಲ್ಯದ ಉಡುಗೊರೆಗಳನ್ನು ಸ್ವೀಕರಿಸಿದ ಆರೋಪ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಮೇಲಿದೆ. ಇವು ದುಬಾರಿ ಸಿಗರೇಟುಗಳಿಂದ ಹಿಡಿದು ಶಾಂಪೇನ್ ಮತ್ತು ಆಭರಣಗಳವರೆಗೆ ವ್ಯಾಪಿಸಿವೆ. ಈ ಉಡುಗೊರೆಗಳಿಗೆ ಪ್ರತಿಯಾಗಿ, ಮಿಲ್ಚನ್ ಅವರ ವ್ಯಾಪಾರ ಹಿತಾಸಕ್ತಿಗಳಿಗೆ ಅನುಕೂಲವಾಗುವಂತಹ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬುದು ಒಂದು ಪ್ರಕರಣದ ಆರೋಪವಾಗಿದೆ.

ಮತ್ತೊಂದು ಪ್ರಕರಣವು ಇಸ್ರೇಲ್‌ನ ಪ್ರಮುಖ ಪತ್ರಿಕೆ ‘ಯೆಡಿಯೋತ್ ಅಹರೋನೋತ್’ನ ಮಾಲೀಕ ಅರ್ನಾನ್ ಮೋಶೆ ಅವರೊಂದಿಗಿನ ನೆತನ್ಯಾಹು ಅವರ ನಿಗೂಢ ಸಂಬಂಧಕ್ಕೆ ಸಂಬಂಧಿಸಿದೆ. ತಮಗೆ ಅನುಕೂಲಕರವಾದ ಸುದ್ದಿಯನ್ನು ಪ್ರಕಟಿಸುವಂತೆ ಪತ್ರಿಕೆಯ ಮೇಲೆ ಒತ್ತಡ ಹೇರಲಾಗಿತ್ತು. ಪ್ರತಿಯಾಗಿ, ಯೆಡಿಯೋತ್‌ಗೆ ಪ್ರತಿಸ್ಪರ್ಧಿಯಾದ ‘ಇಸ್ರೇಲ್ ಹಯೋಮ್’ ಮೇಲೆ ನಿರ್ಬಂಧಗಳನ್ನು ಹೇರುವುದಾಗಿ ನೆತನ್ಯಾಹು ಭರವಸೆ ನೀಡಿದ್ದರು ಎಂದು ದೋಷಾರೋಪಣ ಪಟ್ಟಿಯಲ್ಲಿ ತಿಳಿಸಲಾಗಿದೆ.

ಮೂರನೇ ಪ್ರಕರಣವು ಮಾಧ್ಯಮ ಕಂಪನಿಗೆ ಸಂಬಂಧಿಸಿದೆ. ಇದು ಮಾಧ್ಯಮ ದಿಗ್ಗಜ ‘ಬೆಜೆಕ್’ ರೊಂದಿಗಿನ ರಹಸ್ಯ ಸಂಬಂಧವನ್ನು ಒಳಗೊಂಡಿದೆ. ಬೆಜೆಕ್ ಟೆಲಿಕಾಂ ಕಂಪನಿಯ ಮಾಲೀಕ ಮತ್ತು ಅವರ ಸ್ನೇಹಿತ ಶಾಲ್ ಎಲೋವಿಚ್ ಅವರ ವ್ಯಾಪಾರ ಹಿತಾಸಕ್ತಿಗಳಿಗೆ ತಕ್ಕಂತೆ ಕಾನೂನನ್ನು ರೂಪಿಸಲಾಗಿತ್ತು. ಪ್ರತಿಯಾಗಿ, ಬೆಜೆಕ್ ಅಡಿಯಲ್ಲಿರುವ ಹೀಬ್ರೂ ಮಾಧ್ಯಮ ಸಂಸ್ಥೆ ‘ವಾಲ್ಲಾ’ ವೆಬ್‌ಸೈಟ್‌ನಲ್ಲಿ ತಮಗೆ ಅನುಕೂಲಕರವಾದ ಸುದ್ದಿಗಳನ್ನು ಪ್ರಕಟಿಸಲು ಪ್ರಯತ್ನಿಸಲಾಗಿತ್ತು ಎಂದು ಪ್ರಕರಣವು ಬೊಟ್ಟು ಮಾಡಿದೆ.

ನೆತನ್ಯಾಹು ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಅದೇ ಸಮಯದಲ್ಲಿ, ಪ್ರಕರಣದ ಪ್ರಕ್ರಿಯೆಗಳ ಭಾಗವಾಗಿ ಅವರು ಹಲವಾರು ಬಾರಿ ನ್ಯಾಯಾಲಯಕ್ಕೆ ಹಾಜರಾಗಬೇಕಾಯಿತು. ಇದರ ನಂತರ, ನೆತನ್ಯಾಹು ಕ್ಷಮೆಯಾಚಿಸಿ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿದ್ದರು. ಈ ಕಾರಣಗಳಿಂದಾಗಿ, ನೆತನ್ಯಾಹು ಕುಟುಂಬದ ಹೆಸರಿನಲ್ಲಿ ಅಮೆರಿಕದಲ್ಲಿ ವ್ಯಾಪಾರ ಮುಂದುವರಿಸುವುದು ಉತ್ತಮ ನಿರ್ಧಾರವಲ್ಲ ಎಂಬ ತೀರ್ಮಾನದ ಮೇಲೆ ಯೈರ್ ಹೆಸರು ಬದಲಾಯಿಸಿಕೊಂಡಿದ್ದಾರೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿದೆ.