ಸಮಯವನ್ನು ಪೋಲು ಮಾಡಬೇಡಿ

0
239

✍️ ಎಸ್ಸೆಮ್ಕೆ

ಸಮಯವನ್ನು ಗರಿಷ್ಠವಾಗಿ ಬಳಸಿಕೊಂಡು ಜೀವನವನ್ನು ಫಲಪ್ರದವಾಗಿಸಿದ ಅನೇಕ ಮಹಾನ್ ವ್ಯಕ್ತಿಗಳ ಇತಿಹಾಸವನ್ನು ನಾವು ಕೇಳಿದ್ದೇವೆ. ಅವುಗಳಲ್ಲಿ ಯಾರನ್ನೂ ಅಚ್ಚರಿಗೊಳಿಸುವ, ಐತಿಹಾಸಿಕವಾದ ಅನುಭವವು ಇಮಾಮ್ ಸರಖ್ಸಿಯವರದ್ದಾಗಿದೆ. ಅವರ ಪೂರ್ಣ ಹೆಸರು ಇಮಾಮ್ ಅಬೂಬಕರ್ ಮುಹಮ್ಮದ್ ಇಬ್ನ್ ಅಹ್ಮದ್ ಸರಖ್ಸಿ, ಇವರು ಬುಖಾರಾದ ಸರಖ್ಸ್‌ನಲ್ಲಿ ಜನಿಸಿದರು. ಅವರು ಹದಿನಾಲ್ಕು ವರ್ಷಗಳ ಕಾಲ ಸೆರೆಮನೆಯಲ್ಲಿ ಕಳೆಯ ಬೇಕಾಯಿತು. ಸೆರೆಮನೆಯಲ್ಲಿ ಆ ಶ್ರೇಷ್ಠ ವಿದ್ವಾಂಸರು ಹತ್ತು ಮಹಾನ್ ಗ್ರಂಥಗಳನ್ನು ಬರೆದರು.

ಇಮಾಮ್ ಸರಖ್ಸಿ ಧೀರ ಮತ್ತು ಕ್ರಾಂತಿಕಾರಿಯಾದ ಕಾನೂನು ತಜ್ಞರಾಗಿದ್ದರು. ರಾಜನ ಅನ್ಯಾಯದ ತೆರಿಗೆಯನ್ನು ವಿರೋಧಿಸಿದ ಕಾರಣಕ್ಕಾಗಿ ಅವರು ಜೈಲು ಪಾಲಾದರು. ನೀರಿಲ್ಲದ ಒಂದು ಬಾವಿಯಲ್ಲಿ ಅವರನ್ನು ಸೆರೆಯಲ್ಲಿಡಲಾಗಿತ್ತು. ಶಿಷ್ಯರು ಆಗಾಗ ಬಂದು ಬಾವಿಯ ಮೇಲಿಂದ ಮಾತನಾಡುತ್ತಿದ್ದರು ಎಂಬುದು ಮಾತ್ರವೇ ಏಕೈಕ ಆಶಾಭಾವನೆಯಾಗಿತ್ತು. ಶಿಷ್ಯರು ಬಂದು ಬಾವಿಯ ಅಂಚಿನಲ್ಲಿ ಕುಳಿತುಕೊಳ್ಳುತ್ತಾರೆ, ಇಮಾಮ್ ಹೇಳುವುದನ್ನು ಶಿಷ್ಯರು ಬರೆದುಕೊಳ್ಳುತ್ತಾರೆ. ಹೀಗೆಯೇ ಸರಖ್ಸಿಯವರ ಅತೀ ಮಹತ್ತರವಾದ ಅನೇಕ ಗ್ರಂಥಗಳು ರಚಿಸಲ್ಪಟ್ಟವು.

ʻಕಿತಾಬುಲ್ ಮಬ್‌ಸೂತ್'ಗೆ ಮೂವತ್ತು ಸಂಪುಟಗಳಿವೆ. ಇದು ಬಾವಿಯಲ್ಲಿನ ಹದಿನಾಲ್ಕು ವರ್ಷಗಳ ಸೆರೆವಾಸದ ನಡುವೆ ಶಿಷ್ಯರಿಗೆ ಹೇಳಿಕೊಟ್ಟು ಬರೆಸಿದುದಾಗಿದೆ. ಹನಫಿ ಮದ್‌ಹಬಿನ ಕರ್ಮಶಾಸ್ತ್ರ ವಿಷಯಗಳ ಆಧಾರ ಗ್ರಂಥಗಳಲ್ಲಿ ಇದೂ ಒಂದಾಗಿದೆ. ʻಶೈಬಾನಿಯಸಿಯರುಲ್ ಕಬೀರ್’ಗೆ ಇಮಾಮ್ ಸರಖ್ಸಿ ನಾಲ್ಕು ಸಂಪುಟಗಳ ವ್ಯಾಖ್ಯಾನವನ್ನು ಸಿದ್ಧಪಡಿಸಿದುದೂ ಇಲ್ಲಿಂದಲೇ. ಅಂತರರಾಷ್ಟ್ರೀಯ ಕಾನೂನಿಗೆ ಸಂಬಂಧಿಸಿದ ಅತ್ಯಂತ ಪ್ರಾಚೀನ ಅಧಿಕೃತ ಗ್ರಂಥವಾಗಿ ಇದನ್ನು ಪರಿಗಣಿಸಲಾಗುತ್ತದೆ. ಇಷ್ಟು ದೊಡ್ಡ ಗ್ರಂಥವನ್ನು ಸಿದ್ಧಪಡಿಸಲು ಸೆರೆಮನೆಯ ಪ್ರತಿಕೂಲ ಪರಿಸ್ಥಿತಿಯೂ ಅವರಿಗೆ ತಡೆಯಾಗಲಿಲ್ಲ. ಸಮಯವನ್ನೂ ಜೀವನವನ್ನೂ ಫಲಪ್ರದವಾಗಿ ಬಳಸುವುದಕ್ಕೆ ಇದಕ್ಕಿಂತ ಉತ್ತಮ ಮಾದರಿ ಬೇರೆ ಇರಲು ಸಾಧ್ಯವಿಲ್ಲ.

ಆರೋಗ್ಯ ಸ್ಥಿತಿಯಿಂದ ರೋಗಕ್ಕೆ ಜಾರುವುದರೊಂದಿಗೆ ಕರ್ಮ ನಿರತರಾಗಿ ಬದುಕನ್ನು ಸಾಗಿಸುವವರು ಕೂಡ ಕುಗ್ಗಿ ಹೋಗುತ್ತಾರೆ. ಗಂಭೀರವಾದ ಕಾಯಿಲೆಗೆ ತುತ್ತಾಗಿರುವಾಗಲೂ ಕಾರ್ಯನಿರತರಾಗಿ ಇರುವವರು ಅತ್ಯಂತ ಅಪರೂಪ. ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಡಾ. ಮುಸ್ತಫಾ ಅಸ್-ಸಿಬಾಯಿ ಪ್ರಮುಖರು. ಸಿರಿಯಾದವರಾದ ಇವರು ಪ್ರಮುಖ ವಿದ್ವಾಂಸರು, ಗ್ರಂಥಕರ್ತರು, ಭಾಷಣಕಾರರು ಮತ್ತು ಉತ್ತಮ ಚಿಂತಕರೂ ಆಗಿದ್ದರು. ಜೈಲಿನಲ್ಲಿ ಇದ್ದಾಗ ಅನುಭವಿಸಿದ ಕಠಿಣ ಹಿಂಸೆಗಳಿಂದಾಗಿ ಅವರ ದೇಹದ ಎಡಭಾಗವು ಪೂರ್ತಿಯಾಗಿ ನಿಷ್ಕ್ರೀಯಗೊಂಡಿತ್ತು. ಆದರೂ ಅವರು ಎದೆಗುಂದಲಿಲ್ಲ. ಕಾಲೇಜು ಚಟುವಟಿಕೆ, ಇಸ್ಲಾಮೀ ಭಾಷಣಗಳು, ಶೈಕ್ಷಣಿಕ ಚಟುವಟಿಕೆಗಳು, ರಾಜಕೀಯ ನಾಯಕತ್ವ ಮತ್ತು ಗ್ರಂಥ ರಚನೆ ಮುಂತಾದ ಮಹಾನ್ ಕಾರ್ಯಗಳನ್ನೆಲ್ಲಾ ಅಡ್ಡಿಯಿಲ್ಲದೆ ನಡೆಸಲು ನಿರಂತರ ಜಾಗ್ರತೆ ವಹಿಸಿದ್ದರು. ಮೂಳೆವಾತದ ರೋಗಿಯಾಗಿದ್ದರೂ ಕಠಿಣ ದೈಹಿಕ ನೋವನ್ನು ಸಹಿಸಿ, ಕರ್ಮ ಯೋಗಿಯಾಗಿದ್ದ ಅವರು ಮೂರು ಗಂಟೆಗಳ ಕಾಲ ʻಇಸ್ಲಾಮೀ ಸೋಷಿಯಲಿಸಂ' ಎಂಬ ವಿಖ್ಯಾತ ಪ್ರವಚನ ನೀಡಿದರು. ಮತ್ತೊಮ್ಮೆ ಮೂರು ಗಂಟೆಗಳ ಕಾಲ ʻಸ್ತ್ರೀ ಮತ್ತು ಇಸ್ಲಾಮೀ ಕಾನೂನುಗಳು ಮತ್ತು ಸರ್ಕಾರಿ ಕಾನೂನುಗಳು’ ಎಂಬ ವಿಷಯದ ಮೇಲೆ ಪ್ರವಚನ ಮಾಡಿ ದರು. ಜೀವನ ನನಗೆ ಹೀಗೆ ಕಲಿಸಿತು' ಎಂಬ ಪುಸ್ತಕವನ್ನು 1962ರ ಆಸ್ಪತ್ರೆ ವಾಸದ ಸಮಯದಲ್ಲಿ ಸಿದ್ಧಪಡಿಸಿದರು. ಹೀಗೆ ಸಮಯವನ್ನೂ ಜೀವನವನ್ನೂ ಗರಿಷ್ಠವಾಗಿ ಬಳಸಿಕೊಂಡ ಉಜ್ವಲ ಮಾದರಿಯಾಗಿತ್ತು ಮುಸ್ತಫಾ ಸಿಬಾಯಿಯವರ ಜೀವನ.

ಸಮಯ ಅಮೂಲ್ಯವಾದುದು. ಅದನ್ನು ಯಾರಿಗೂ ದಾನ ಮಾಡಲು ಸಾಧ್ಯವಿಲ್ಲ ಅಥವಾ ಸಾಲವಾಗಿ ಕೊಡಲು ಸಾಧ್ಯವಿಲ್ಲ. ಸಮಯ ಮತ್ತು ಅಧ್ಯಯನದ ನಂತರ ಉಳಿಯುವ ಸಮಯವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ (ವ್ಯರ್ಥ ಮಾಡಿದರೆ); ಅವುಗಳನ್ನು ಬಳಸಿಕೊಂಡರೆ ಲಾಭ, ವ್ಯರ್ಥ ಮಾಡಿದರೆ ನಷ್ಟ. ಇಮಾಮ್ ಹಸನುಲ್ ಬನ್ನಾ ಹೇಳಿದರು: "ಪ್ರತೀ ಪ್ರಭಾತವೂ ಹೀಗೆ ಸಾರುತ್ತಾ ಹುಟ್ಟಿ ಬರುವುದು:ಓ ಮಾನವನೇ, ನಾನೊಂದು ಹೊಸ ಸೃಷ್ಟಿ. ನಿನ್ನ ಕರ್ಮ ಗಳಿಗೆ ಸಾಕ್ಷಿ. ಆದ್ದರಿಂದ ನೀನು ನನ್ನನ್ನು ಬಳಸಿಕೊಳ್ಳು. ನಾನು ಒಮ್ಮೆ ಹೋಗಿಬಿಟ್ಟರೆ ಮತ್ತೆ ಹಿಂದಿರುಗಿ ಬರುವುದಿಲ್ಲ.’ ಮಾನವನೇ, ನೀನು ದಿನಗಳ ಒಂದು ಸಮೂಹವಾಗಿದ್ದೀಯ. ಪ್ರತಿಯೊಂದು ದಿನವೂ ಕಳೆದು ಹೋಗುವಾಗ ನಿನ್ನ ಒಂದು ಭಾಗವೂ ಇಲ್ಲವಾಗುತ್ತದೆ.”

ಸಮಯವು ದೇವದತ್ತವಾದದ್ದು. ಅದು ಅಲ್ಲಾಹನು ನೀಡಿದ ಮಹತ್ತರವಾದ ಅನುಗ್ರಹ. ಆದ್ದರಿಂದ ಅದರ ಬಳಕೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ವ್ಯರ್ಥವಾಗದಂತೆ ನಿರಂತರ ಜಾಗರೂಕರಾಗಿರಬೇಕು. ಅದರ ಬಳಕೆಯ ಬಗ್ಗೆ ಪ್ರತಿಯೊಬ್ಬರೂ ಉತ್ತರ ನೀಡಬೇಕಾಗುತ್ತದೆ. ಪ್ರವಾದಿ(ಸ) ಹೇಳಿದ್ದಾರೆ:

“ವಯಸ್ಸನ್ನು ಯಾವುದಕ್ಕೆ ಬಳಸಿದೆ, ಯೌವನವನ್ನು ಯಾವ ಕಾರ್ಯದಲ್ಲಿ ಸವೆಸಿದೆ, ಹಣವನ್ನು ಹೇಗೆ ಸಂಪಾದಿಸಿದೆ ಮತ್ತು ಹೇಗೆ ಬಳಸಿದೆ, ಜ್ಞಾನದಿಂದ ಏನು ಮಾಡಿದೆ – ಈ ನಾಲ್ಕು ವಿಷಯಗಳ ಬಗ್ಗೆ ವಿಚಾರಿಸದೇ ಅಂತ್ಯದಿನದಂದು ಮನುಷ್ಯನ ಎರಡೂ ಪಾದಗಳು ಮುಂದೆ ಚಲಿಸುವುದಿಲ್ಲ” (ತಿರ್ಮಿದಿ).

ಸಮಯ ವ್ಯರ್ಥ ಮಾಡುವುದು ಹಣವನ್ನು ವ್ಯರ್ಥ ಮಾಡುವುದಕ್ಕಿಂತ ಅಪಾಯಕಾರಿ. ಹಣವನ್ನು ಮತ್ತೆ ಸಂಪಾ ದಿಸಬಹುದು, ಆದರೆ ಸಮಯವು ಎಂದಿಗೂ ಹಿಂತಿರುಗಿ ಬರುವುದಿಲ್ಲ. ಇದು ತಿಳಿಯದವರೇ ಇಲ್ಲ. ಆದರೆ, ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವವರು ಬಹಳ ಕಡಿಮೆ. ಆದ್ದರಿಂದ ಪ್ರವಾದಿಯವರು ಹೇಳಿದ್ದಾರೆ: “ಜನರು ವಂಚಿತರಾಗುವ ಎರಡು ವಿಷಯಗಳಿವೆ; ಆರೋಗ್ಯ ಮತ್ತು ಬಿಡುವಿನ ಸಮಯ” (ಬುಖಾರಿ, ಮುಸ್ಲಿಂ).

ಈಗ ಹೆಚ್ಚಿನ ಜನರ ಅಧಿಕ ಸಮಯವನ್ನು ಮೊಬೈಲ್ ಫೋನ್ ಕಬಳಿಸುತ್ತಿದೆ. ಅಗತ್ಯವಿರುವುದನ್ನು ನೋಡಲು ಫೋನ್ ತೆಗೆದುಕೊಂಡರೆ, ಅನುಮತಿಯಿಲ್ಲದೆ ನಿರಂತರವಾಗಿ ಒಂದರ ನಂತರ ಒಂದರಂತೆ ವಿಷಯಗಳು ನಮ್ಮ ಮುಂದೆ ಬರುತ್ತವೆ. ಅಗತ್ಯವಿರುವಲ್ಲಿ ಪ್ರಾರಂಭವಾದರೂ ಅದು ಅನಗತ್ಯದ ಕಡೆಗೆ ತಲುಪುತ್ತದೆ. ಫೋನನ್ನು ನಿಯಂತ್ರಿಸಲಾಗದವರು ಅದರ ನಿಯಂತ್ರಣಕ್ಕೆ ಒಳಗಾಗುತ್ತಾರೆ. ಪಕ್ಕದಲ್ಲಿರುವವರನ್ನೂ ಗಮನಿಸದಂತಾಗುತ್ತದೆ. ದಾಂಪತ್ಯವನ್ನೂ, ಕೌಟುಂಬಿಕ ವ್ಯವಸ್ಥೆಯನ್ನೂ, ಸಾಮಾಜಿಕ ಜೀವನವನ್ನೂ ಶಿಥಿಲ ಗೊಳಿಸುವಲ್ಲಿ ಅದು ವಹಿಸುವ ಪಾತ್ರದ ಬಗ್ಗೆ ಈಗ ಯಾರೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆಗ ಸ್ವಾಭಾವಿಕ ವಾಗಿ ಅದು ಮನುಷ್ಯನನ್ನು ದೈವಸ್ಮರಣೆಯಿಂದಲೂ ಮತ್ತು ಸತ್ಕರ್ಮಗಳಿಂದಲೂ ದೂರವಿರಿಸುತ್ತದೆ.