ವಂದೇ ಮಾತರಂ ಮತ್ತು ವಿವಾದ

0
351

✍️ ಏ.ಕೆ. ಕುಕ್ಕಿಲ

ಸನ್ಯಾಸಿ-ಫಕೀರ್ ಹೋರಾಟ
ಆನಂದ ಮಠ
ವಂದೇ ಮಾತರಂ

1763ರಿಂದ 1800ರ ವರೆಗೆ ನಡೆದ ಸನ್ಯಾಸಿ-ಫಕೀರ್ ಜಂಟಿ ಹೋರಾಟವು ಬ್ರಿಟಿಷರ ವಿರುದ್ಧ ಭಾರತದಲ್ಲಿ ನಡೆದ ಮೊತ್ತಮೊದಲ ಜಂಟಿ ಸಶಸ್ತ್ರ ಹೋರಾಟ ಎಂಬುದಾಗಿ ಗುರುತಿಸಿಕೊಂಡಿದೆ. ಬಂಗಾಲದಲ್ಲಿ ನಡೆದ ಈ ಹೋರಾಟದ ಹಿಂದೆ ಒಂದು ರೋಚಕ ಇತಿಹಾಸ ಇದೆ.

1765ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಅಥವಾ ಭಾರತದಲ್ಲಿರುವ ಬ್ರಿಟಿಷ್ ಆಡಳಿತಕ್ಕೆ ತೆರಿಗೆ ವಸೂಲಿ ಮಾಡುವುದಕ್ಕೆ ಅನುಮತಿ ಸಿಗುತ್ತದೆ. ಇದರ ನಂತರ ಅಧಿಕಾರಿಗಳು ಅಪರಿಮಿತ ಪ್ರಮಾಣದಲ್ಲಿ ತೆರಿಗೆ ವಸೂಲಿಗೆ ಇಳಿಯುತ್ತಾರೆ. ಮುಖ್ಯವಾಗಿ ಜಮೀನ್ದಾರರು ಮತ್ತು ರೈತರು ಇದರಿಂದ ಸಂಕಷ್ಟಕ್ಕೆ ಒಳಗಾಗುತ್ತಾರೆ. ಸಾಲಕ್ಕೆ ತುತ್ತಾಗುತ್ತಾರೆ. ಇದೇ ಸಮಯದಲ್ಲಿ 1780ರಲ್ಲಿ ಬಂಗಾಳವನ್ನು ಮಹಾ ಕ್ಷಾಮವೊಂದು ಆವರಿಸುತ್ತದೆ. ಈ ಕ್ಷಾಮದ ಭೀಕರತೆ ಎಷ್ಟಿತ್ತೆಂದರೆ ಜನಸಂಖ್ಯೆಯ ಮೂರರಲ್ಲಿ ಒಂದು ಭಾಗ ಸಾವನ್ನಪ್ಪುತ್ತದೆ. ಲಕ್ಷಕ್ಕಿಂತ ಹೆಚ್ಚು ಜನರು ಸಾವಿಗೀಡಾಗುತ್ತಾರೆ. ಇದರಿಂದಾಗಿ ಕೃಷಿ ಕಾರ್ಯ ನಡೆಯದೇ ಭೂಮಿ ಬಂಜರಾಗುತ್ತದೆ. ಒಂದು ಕಡೆ, ಬ್ರಿಟಿಷ್ ಸರಕಾರದ ಅತಿಯಾದ ದಂಡ ವಸೂಲಿ ಮತ್ತು ಇನ್ನೊಂದು ಕಡೆ ಕ್ಷಾಮದಿಂದಾಗಿ ಉಣ್ಣಲು-ಉಡಲು ಇಲ್ಲದ ಸ್ಥಿತಿ- ಇವೆರಡೂ ಸೇರಿಕೊಂಡು ಜನರನ್ನು ಹೈರಾಣುಗೊಳಿಸಿರುವುದರ ನಡುವೆಯೇ ಹಿಂದೂ ಸನ್ಯಾಸಿಗಳು ಮತ್ತು ಫಕೀರರು ಅಥವಾ ಸೂಫಿಗಳು ಬ್ರಿಟಿಷ್ ಸರಕಾರದ ಕೆಂಗಣ್ಣಿಗೆ ಗುರಿಯಾಗುತ್ತಾರೆ.

ಈ ಸನ್ಯಾಸಿಗಳು ಮತ್ತು ಫಕೀರರು ಯಾತ್ರೆ ಮಾಡುತ್ತಾ ಮತ್ತು ಭಜನೆ-ಕವ್ವಾಲಿ ಹಾಡುತ್ತಾ ಹೊಟ್ಟೆ ಹೊರೆಯುತ್ತಿದ್ದರು. ಜನರಿಂದ ಪಡೆದ ದಾನವೇ ಇವರ ಬದುಕಿನ ಏಕೈಕ ಮೂಲವಾಗಿತ್ತು. ಆದರೆ, ಸರಕಾರ ಇವರ ದಾನ ವಸೂಲಿಯನ್ನು ನಿಷೇಧಿಸಿತು. ಸನ್ಯಾಸಿಗಳ ಕೈಯಲ್ಲಿರುವ ಸಾಂಪ್ರದಾಯಿಕ ಶಸ್ತ್ರಕ್ಕೂ ನಿಷೇಧ ಹೇರಿತು. ಫಕೀರರಿಗಾಗಿ ಮೀಸಲಾಗಿದ್ದ ವಕ್ಫ್ ಭೂಮಿಯನ್ನು ವಶಪಡಿಸಿಕೊಂಡಿತು. ಇದರಿಂದಾಗಿ ಫಕೀರರು ಮತ್ತು ಸನ್ಯಾಸಿಗಳಿಬ್ಬರೂ ಸರಕಾರದ ವಿರುದ್ಧ ನಿಂತರು. ಮಜ್ನು ಶಾ ನೇತೃತ್ವದಲ್ಲಿ ಫಕೀರರು ಸಂಘಟಿತರಾದರು. ಇವರಲ್ಲಿ ಮೂಸಾ ಶಾ, ಚಿರಾಗ್ ಅಲಿ ಶಾ, ಶೋಭಾಸ್ ಶಾ, ಕರೀಮ್ ಶಾ ಮುಂತಾದವರು ಸೇರಿಕೊಂಡರು. ಇತ್ತ ಭವಾನಿ ಪಾಠಕ್ ನೇತೃತ್ವದಲ್ಲಿ ಸನ್ಯಾಸಿಗಳು ಒಟ್ಟಾದರು. ದೇವಿ ಚೌಧುರಾಣಿ ಕೂಡಾ ಈ ಗುಂಪನ್ನು ಸೇರಿದರು. ಹೀಗೆ ಫಕೀರ್‌ಗಳು ಢಾಕಾ, ಬೇಕರ್‌ಗಂಜ್ ಬ್ರಿಟಿಷ್ ವ್ಯಾಪಾರ ಕೇಂದ್ರಗಳನ್ನು ಆಕ್ರಮಿಸಿದರು. ಭವಾನಿ ಪಾಠಕ್ ಅರಣ್ಯ ಪ್ರದೇಶದಿಂದ ದಾಳಿ ನಡೆಸಿದರು. ಚೌಧುರಾಣಿ ನದಿ ತೀರದಿಂದ ದಾಳಿ ನಡೆಸಿದಳು. ಈ ನಡುವೆ,

ಬ್ರಿಟಿಷ್ ಸೇನೆ ಫಕೀರ್ ಮತ್ತು ಸನ್ಯಾಸಿಗಳ ಮೇಲೆ ದಾಳಿ ನಡೆಸಿ 200ಕ್ಕಿಂತಲೂ ಅಧಿಕ ಮಂದಿಯ ಹತ್ಯೆ ನಡೆಸಿತು. 1771ರಲ್ಲಿ ನಡೆದ ಈ ಘಟನೆ ಈ ಶಸ್ತçಸಜ್ಜಿತ ಹೋರಾಟಗಾರರ ಮೇಲೆ ಭಾರೀ ಪರಿಣಾಮ ಬೀರಿತಾದರೂ ಮರುವರ್ಷ ಮಜ್ನು ಶಾ ನೇತೃತ್ವದಲ್ಲಿ ರಂಗ್ಪುರ, ಬೊಗ್ರಾ, ರಾಜ್‌ಶಾಹಿ ದಿನಾಜ್ಪುರಗಳ ಮೇಲೆ ನಡೆಯಿತು. ಬ್ರಿಟಿಷ್ ಸರಕಾರದ ಖಜಾನೆಯನ್ನು ಲೂಟಿ ಮಾಡಲಾಯಿತು. ವಿಶೇಷ ಏನೆಂದರೆ,

ಸನ್ಯಾಸಿಗಳು ಮತ್ತು ಫಕೀರರು ಜಂಟಿಯಾಗಿ ಈ ದಾಳಿ ನಡೆಸುತ್ತಿದ್ದರು. ಸರಕಾರಕ್ಕೆ ಬೆಂಬಲ ನೀಡುತ್ತಿದ್ದ ಜಮೀನ್ದಾರರ ಮೇಲೂ ಆಕ್ರಮಣ ನಡೆಸುತ್ತಿದ್ದಳು. ಗೆರಿಲ್ಲಾ ಮಾದರಿ ಹೋರಾಟವಾದ್ದರಿಂದ ಬ್ರಿಟಿಷರಿಗೂ ಈ ಗುಂಪು ತಲೆನೋವಾಗಿತ್ತು. ಕೊನೆಗೆ ವಾರನ್ ಹೇಸ್ಟಿಂಗ್ಸ್ ಮುಂತಾದ ಅಧಿಕಾರಿಗಳ ಬಲಪ್ರಯೋಗದ ಕ್ರಮಗಳಿಂದಾಗಿ 1800ರ ವೇಳೆಗೆ ಈ ಹಿಂದೂ-ಮುಸ್ಲಿಮ್ ಜಂಟಿ ಹೋರಾಟ ದುರ್ಬಲವಾಯಿತು. ಅಂದಹಾಗೆ,

ಬಂಕಿಮಚಂದ್ರ ಚಟರ್ಜಿ ಅವರ ‘ಆನಂದ ಮಠ’ ಕಾದಂಬರಿ ರಚನೆಯಾಗಿರುವುದೇ ಈ ಹೋರಾಟದ ಮೇಲೆ.
1882ರಲ್ಲಿ ಬಂಗಾಳಿ ಭಾಷೆಯಲ್ಲಿ ಬರೆದ ಈ ಕಾದಂಬರಿಯಲ್ಲಿ ಅವರು ವಂದೇ ಮಾತರಂ ಹಾಡನ್ನು ಸೇರಿಸಿದರು. ನಿಜವಾಗಿ ಅವರು ಈ ಹಾಡನ್ನು 1775ರಲ್ಲಿ ಬರೆದಿದ್ದರು.

1770ರಲ್ಲಿ ಬಂಗಾಳಕ್ಕೆ ಎರಗಿದ ಮಹಾಕ್ಷಾಮ ಮತ್ತು ಸನ್ಯಾಸಿ ದಂಗೆಯ ಹಿನ್ನೆಲೆಯಲ್ಲಿ ಕಾದಂಬರಿಯ ಕತೆ ಸಾಗುತ್ತದೆ. ಜಮೀನ್ದಾರನಾದ ಮಹೇಂದ್ರ ಮತ್ತು ಅವನ ಹೆಂಡತಿ ಕಲ್ಯಾಣಿ ಕ್ಷಾಮದಿಂದಾಗಿ ತಮ್ಮ ಹಳ್ಳಿಯನ್ನು ತ್ಯಜಿಸುತ್ತಾರೆ. ಮಾರ್ಗ ಮಧ್ಯೆ ಅವರಿಬ್ಬರೂ ಬೇರ್ಪಡುತ್ತಾರೆ. ಮಹೇಂದ್ರ ಸನ್ಯಾಸಿಗಳ ಗುಂಪನ್ನು ಭೇಟಿ ಯಾಗುತ್ತಾನೆ. ಅವರ ನಾಯಕ ಸತ್ಯಾನಂದ. ಈ ಸನ್ಯಾಸಿಗಳು ಆನಂದ ಮಠ ಎಂಬ ಆಶ್ರಮದಲ್ಲಿ ವಾಸಿಸುತ್ತಾ ಭಾರತ ಮಾತೆಯ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡವರಾಗಿರುತ್ತಾರೆ. ಅವರು ಬಂಗಾಳದ ನವಾಬನ ಆಡಳಿತದ ವಿರುದ್ಧ ಹೋರಾಡುತ್ತಾರೆ. ಅಚ್ಚರಿ ಏನೆಂದರೆ,

ಸನ್ಯಾಸಿ-ಫಕೀರ್ ಹೋರಾಟವು ಹಿಂದೂ-ಮುಸ್ಲಿಮ್ ಜಂಟಿಯಾಗಿ ನಡೆಸಿರುವ ಬ್ರಿಟಿಷ್ ವಿರೋಧಿ ಪ್ರತಿರೋಧ ವಾಗಿದ್ದರೂ ಈ ಕಾದಂಬರಿಯಲ್ಲಿ ಫಕೀರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಸನ್ಯಾಸಿಗಳು ಮತ್ತು ಮುಸ್ಲಿಮ್ ನವಾಬ ಎಂಬ ರೀತಿಯಲ್ಲಿ ಚಿತ್ರಿಸಲಾಗಿದೆ. ಕ್ಷಾಮ ಮತ್ತು ಜನರ ದುಃಖಕ್ಕೆ ಬ್ರಿಟಿಷ್ ಸರಕಾರದ ತೆರಿಗೆ ನೀತಿಯೇ ಕಾರಣವಾಗಿದ್ದರೂ ನವಾಬ ಮೀರ್ ಜಾಫರ್‌ನನ್ನೇ ಅಪರಾಧಿಯಾಗಿ ಅಚ್ಚೊತ್ತಲಾಗಿದೆ. ಆತ ಬ್ರಿಟಿಷ್ ನಿಯೋಜಿತ ನವಾಬನಷ್ಟೇ ಆಗಿದ್ದ ಎಂಬುದನ್ನು ಮರೆ ಮಾಡಿದ್ದಲ್ಲದೇ, ಆತನನ್ನು ದುಷ್ಟ, ಅಫೀಮು ಸೇವಿಸುವವ ಎಂದೆಲ್ಲಾ ಕಾದಂಬರಿಯಲ್ಲಿ ಹೇಳಲಾಗಿದೆ. ಅಂದಹಾಗೆ,

ಈ ನವಾಬ ಮೀರ್ ಜಾಫರ್ 1765ರಲ್ಲಿ ಸಾವಿಗೀಡಾಗಿದ್ದ. ಸನ್ಯಾಸಿ ಮತ್ತು ಫಕೀರ್ ಹೋರಾಟದ ಪ್ರಮುಖ ಕಾಲವು 1770ರಲ್ಲಾಗಿತ್ತು. ಈ ಹೋರಾಟದ ಸಮಯದಲ್ಲಿ ಬಂಗಾಳದ ನವಾಬನಾಗಿದ್ದವ ನಜ್ಮುದ್ದೀನ್ ಆಲಿ ಖಾನ್. ಇದಲ್ಲದೇ, ಕ್ಷಾಮವನ್ನು, ‘ಮುಸ್ಲಿಮರು ಹಿಂದೂಗಳ ಮೇಲೆ ಹೇರಿದ ಶಾಪ’ ಎಂದು ಕಾದಂಬರಿಯಲ್ಲಿ ಹೇಳಲಾಗಿದೆ ಎಂಬ ಆರೋಪ ಇದೆ. ಮುಸ್ಲಿಮರನ್ನು ‘ದೇವರ ಶತ್ರುಗಳು’ ಎಂದು ಕಾದಂಬರಿಯಲ್ಲಿ ನಿರೂಪಿಸಲಾಗಿದೆ ಎಂದೂ ಆರೋಪ ಇದೆ. ಆದ್ದರಿಂದಲೇ, ‘ಇತಿಹಾಸವನ್ನು ಹಿಂದೂ ರಾಷ್ಟ್ರೀಯತೆಯ ಅಗತ್ಯಕ್ಕೆ ತಕ್ಕಂತೆ ಮರು ರಚಿಸುವುದು’ ಎಂಬುದಕ್ಕೆ ಈ ಕಾದಂಬರಿಯೇ ಸಾಕ್ಷಿ ಎಂದು ಇತಿಹಾಸಕಾರ ತಾನಿಕ್ ಸರ್ಕಾರ್ ಹೇಳಿದ್ದಾರೆ. ಈ ಕಾದಂಬರಿಯು ಬ್ರಿಟಿಷರ ವಿರುದ್ಧ ಧ್ವನಿಯೆತ್ತುವ ಬದಲು ಮುಸ್ಲಿಮರ ವಿರುದ್ಧ ಮಾತ್ರ ಧ್ವನಿಯೆತ್ತುತ್ತದೆ ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಇನ್ನೊಂದು ಕಾರಣ ಏನೆಂದರೆ, ಬಂಕಿಮಚಂದ್ರ ಚಟರ್ಜಿಯವರು ಬ್ರಿಟಿಷ್ ಸರಕಾರದಲ್ಲಿ ಉದ್ಯೋಗಿಯಾಗಿದ್ದರು ಎಂಬುದು. ಅಂದಹಾಗೆ,

ಸನ್ಯಾಸಿ-ಫಕೀರ್ ಹೋರಾಟ ಎಂಬುದು ಹಿಂದೂ-ಮುಸ್ಲಿಮರ ನಡುವಿನ ಸೌಹಾರ್ದ ಸಂಬಂಧಕ್ಕೆ ಅತಿದೊಡ್ಡ ಉದಾಹರಣೆಯಾಗಿದ್ದರೂ ಈ ಕಾದಂಬರಿಯಲ್ಲಿ ಇದೇ ಹೋರಾಟವು ಮುಸ್ಲಿಮ್ ವಿರೋಧಿ ಹಿಂದೂ ಹೋರಾಟವಾಗಿ ಬಿಂಬಿತವಾಗಿರುವುದೇ ಅತಿದೊಡ್ಡ ವೈಫಲ್ಯ ಎಂಬ ಅಭಿಪ್ರಾಯ ದೊಡ್ಡಮಟ್ಟದಲ್ಲಿದೆ. ಇದೇ ಕಾದಂಬರಿಯಲ್ಲಿ ವಂದೇ ಮಾತರಂ ಹಾಡನ್ನೂ ಬಳಸಲಾಗಿದೆ. ಒಂದುಕಡೆ ಕಾದಂಬರಿಯ ಉದ್ದಕ್ಕೂ ಕಾಣಿಸುವ ಮುಸ್ಲಿಮ್ ವಿರೋಧಿ ಧೋರಣೆ ಮತ್ತು ಅದೇ ಕಾದಂಬರಿಯಲ್ಲಿ ವಂದೇ ಮಾತರಂ ಹಾಡನ್ನು ಬಳಸಿಕೊಂಡಿರುವುದು- ಈ ಎರಡನ್ನೂ ಜೊತೆಗಿಟ್ಟು ನೋಡಿದರೆ, ವಿರೋಧಗಳು ವ್ಯಕ್ತವಾಗುವುದು ಸಹಜ. ಈ ಹಾಡಿನ ಮೊದಲ ಎರಡು ಚರಣಗಳಲ್ಲಿ ಭಾರತವನ್ನು ಮಾತೆಯಾಗಿ ಮತ್ತು ಭಾರತದ ಪ್ರಕೃತಿ ಸೌಂದರ್ಯ, ನದಿ ಬೆಟ್ಟಗಳ ಕುರಿತಾಗಿ ವರ್ಣಿಸಲಾಗಿದೆ. ನಂತರದ ಚರಣಗಳಲ್ಲಿ ಭಾರತ ಮಾತೆಯನ್ನು ದುರ್ಗೆ, ಲಕ್ಷ್ಮಿ, ಸರಸ್ವತಿ ದೇವತೆಗಳ ಸ್ವರೂಪವಾಗಿ ಚಿತ್ರಿಸಲಾಗಿದೆ.

1893ರಲ್ಲಿ ರವೀಂದ್ರನಾಥ ಟಾಗೋರ್‌ರು ಈ ಹಾಡಿಗೆ ಮೊಟ್ಟಮೊದಲು ರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಕೊಟ್ಟರು. ಇದನ್ನು ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದರು. 1905ರಲ್ಲಿ ಬಂಗಾಳ ವಿಭಜನೆಯ ವಿರುದ್ಧದ ಸ್ವದೇಶಿ ಚಳವಳಿಯಲ್ಲಿ ಇದು ಸ್ವಾತಂತ್ರ್ಯ ಹೋರಾಟದ ಘೋಷಣೆಯಾಯಿತು. ಬ್ರಿಟಿಷರು ಈ ಹಾಡನ್ನು ನಿಷೇಧಿಸುವಷ್ಟರ ಮಟ್ಟಿಗೆ ಈ ಹಾಡು ಜನಜನಿತವಾಯಿತು. 1937ರಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತು. ರಾಷ್ಟ್ರೀಯ ಸಭೆಗಳಲ್ಲಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂಬ ತೀರ್ಮಾನಕ್ಕೆ ಬಂತು. ಈ ವರ್ಕಿಂಗ್ ಕಮಿಟಿ ಸಭೆಯಲ್ಲಿ ನೆಹರೂ, ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ರಾಜೇಂದ್ರ ಪ್ರಸಾದ್ ಮುಂತಾದವರು ಇದ್ದರು. ಅವರೆಲ್ಲರ ಒಪ್ಪಿಗೆಯೊಂದಿಗೆ ಈ ನಿರ್ಧಾರಕ್ಕೆ ಬರಲಾಗಿತ್ತು. 1950 ಜನವರಿ 24ರಂದು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ರು ಜನಗಣಮನವನ್ನು ರಾಷ್ಟçಗೀತೆ ಎಂದು ಘೋಷಿಸಿದರು. ಜೊತೆಗೇ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರ ನಿಭಾಯಿಸಿರುವ ವಂದೇ ಮಾತರಂಗೆ ಜನಗಣಮನದಷ್ಟೇ ಸಮಾನ ಗೌರವ ನೀಡಲಾಗುವುದು ಎಂದೂ ಹೇಳಿದರು.

ಅಂದಹಾಗೆ, ವಂದೇ ಮಾತರಂ ಹಾಡಿಗೆ ವಿರೋಧ ವ್ಯಕ್ತವಾಗಿರುವುದು ಸ್ವಾತಂತ್ರ್ಯಾಂನಂತರ ಅಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಸೈದ್ಧಾಂತಿಕ ಕಾರಣಕ್ಕಾಗಿ ಆಕ್ಷೇಪಗಳು ವ್ಯಕ್ತವಾಗಿದ್ದುವು. 1930ರ ಸಮಯದಲ್ಲಿ ಈ ಹಾಡಿಗೆ ಮುಸ್ಲಿಮರಿಂದ ತಕರಾರು ಎದುರಾಗಿತ್ತು. ಬಹುಸಂಸ್ಕೃತಿಯ ಭಾರತಕ್ಕೆ ಈ ಹಾಡು ಹೊಂದುವುದಿಲ್ಲ ಎಂಬ ಅಭಿಪ್ರಾಯಗಳು ಆಗಲೇ ಬಲವಾಗಿದ್ದುವು. 1937ರಲ್ಲಿ ಕಾಂಗ್ರೆಸ್ ಈ ವಂದೇ ಮಾತರಂ ಅನ್ನು ಮೊದಲೆರಡು ಚರಣಗಳಿಗೆ ಸೀಮಿತಗೊಳಿಸುವುದಕ್ಕೆ ಈ ವಿರೋಧಕ್ಕೂ ಪಾಲು ಇತ್ತು. ಮೊದಲೆರಡು ಚರಣಗಳು ಮುಸ್ಲಿಮರ ಏಕದೇವ ವಿಶ್ವಾಸಕ್ಕೆ ಅಡ್ಡಿಪಡಿಸುವುದಿಲ್ಲ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತಾಳಲಾಗಿತ್ತು. ಆದರೆ ಜನಗಣಮನಕ್ಕೆ ಮುಸ್ಲಿಮರಿಂದಾಗಲಿ, ಇತರರಿಂದಾಗಲಿ ಇಂಥ ವಿರೋಧ ವ್ಯಕ್ತವಾಗಿರಲಿಲ್ಲ ಎಂಬುದು ಗಮನಾರ್ಹ. ಆದರೆ,

ಇದೀಗ ಕೇಂದ್ರ ಸರಕಾರವು ವಂದೇ ಮಾತರಂನ ಆರು ಚರಣಗಳನ್ನು ಪೂರ್ಣವಾಗಿ ಹಾಡುವುದನ್ನು ಕಡ್ಡಾಯಗೊಳಿಸಿರುವುದಷ್ಟೇ ಅಲ್ಲ, ವಂದೇ ಮಾತರಂಗೆ ಮಾಡುವ ಯಾವುದೇ ಅವಮಾನವನ್ನು ಕ್ರಿಮಿನಲ್ ಅಪರಾಧವೆಂದು ಸಾರಿದೆ. ಈ ಕುರಿತಾದ ಮಸೂದೆಯನ್ನು ಪಾರ್ಲಿಮೆಂಟಲ್ಲಿ ಮಂಡಿಸಿ ಅಂಗೀಕರಿಸಿಕೊಂಡಿದೆ. ವಂದೇ ಮಾತರಂ ಹಾಡುವ ವೇಳೆ ಅವಮಾನವೆಸಗಿದರೆ ಮೂರು ವರ್ಷ ಜೈಲು ಹಾಗೂ ದಂಡ ವಿಧಿಸಲು ಈ ಮಸೂದೆ ಅವಕಾಶ ಒದಗಿಸುತ್ತದೆ. ಇದರ ಪ್ರಕಾರ, ವಂದೇ ಮಾತರಂ ಹಾಡುವುದನ್ನು ತಡೆಯುವುದು, ವಂದೇ ಮಾತರಂ ಹಾಡುತ್ತಿರುವ ಸಭೆಗೆ ಅಡ್ಡಿಪಡಿಸುವುದನ್ನು ಅಪರಾಧವಾಗಿ ಪರಿಗಣಿಸಲಾಗುತ್ತದೆ. ಹಾಗಂತ, ಹಾಡದಿರುವುದು ಅಥವಾ ಮೌನವಾಗಿರುವುದನ್ನು ಮತ್ತು ವಂದೇ ಮಾತರಂ ಬಗ್ಗೆ ವಿಮರ್ಶೆ ಮಾಡುವುದನ್ನು ಅಪರಾಧವಾಗಿ ಪರಿಗಣಿಸಲಾಗುವುದಿಲ್ಲ. ಈ ಮಸೂದೆಯ ಮೂಲಕ ಜನಗಣಮನಕ್ಕೆ ಇರುವ ರಕ್ಷಣೆಯನ್ನು ಇದೀಗ ವಂದೇ ಮಾತರಂಗೂ ನೀಡಿದಂತಾಗಿದೆ. ಅಂದಹಾಗೆ,

ವಂದೇ ಮಾತರಂ ಅನ್ನು ಮೊದಲೆರಡು ಚರಣಗಳಿಗೆ ಸೀಮಿತ ಗೊಳಿಸಿದ್ದ ಗಾಂಧಿ, ನೆಹರೂ, ಪಟೇಲ್, ಪ್ರಸಾದ್ ಅವರ ನಿರ್ಧಾರಕ್ಕೆ ವಿರುದ್ಧವಾಗಿ ಈಗಿನ ಸರಕಾರ ನಡೆದುಕೊಂಡಿದೆ.