ಬೀದಿ ವ್ಯಾಪಾರಿಗಳ ಎತ್ತಂಗಡಿ ಕಾರ್ಯಾಚರಣೆ ತಕ್ಷಣ ನಿಲ್ಲಿಸಿ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾಧ್ಯಕ್ಷ ತಾಜುದ್ದೀನ್ ಶರೀಫ್ ಆಗ್ರಹ

0
259

ಸನ್ಮಾರ್ಗ ವಾರ್ತೆ

ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬೀದಿ ವ್ಯಾಪಾರಿಗಳ ವಿರುದ್ಧ ನಡೆಸುತ್ತಿರುವ ಕಾನೂನು ಬಾಹಿರ ಎತ್ತಂಗಡಿ ಕಾರ್ಯಾಚರಣೆಯನ್ನು ಕೂಡಲೇ ನಿಲ್ಲಿಸಬೇಕು. ಆ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ 80ನೇ ಸ್ವಾತಂತ್ರೋತ್ಸವ ಶುಭಾಶಯ ಕೋರುವಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾಧ್ಯಕ್ಷ ತಾಜುದ್ದೀನ್ ಶರೀಫ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೀದಿ ವ್ಯಾಪಾರಿಗಳ ಎತ್ತಂಗಡಿ ಕಾರ್ಯಾಚರಣೆ ಸಂಪೂರ್ಣವಾಗಿ ಕಾನೂನು ಬಾಹಿರವಾಗಿದ್ದು, ಬಡವರ ಘನತೆಗೆ ಧಕ್ಕೆ ತರುವ ಸರಕಾರದ ನಡೆ ಖಂಡನೀಯ. ರಸ್ತೆಗಳಲ್ಲಿ ಪಾದಚಾರಿಗಳು ಮತ್ತು ಬೀದಿ ವ್ಯಾಪಾರಿಗಳು ಸಹಜೀವನ ನಡೆಸಲು ಸಾಧ್ಯವಿದೆ. ಇವರ ನಡುವೆ ವೈರತ್ವ ಸೃಷ್ಟಿಸುವ ಬದಲು, ಇಬ್ಬರ ಹಕ್ಕುಗಳನ್ನು ರಕ್ಷಿಸುವಂತಹ ವೈಜ್ಞಾನಿಕ ವ್ಯವಸ್ಥೆಯನ್ನು ಸರಕಾರ ರೂಪಿಸಬೇಕು ಎಂದಿದ್ದಾರೆ.

ನಗರದ ಜನರಿಗೆ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತುಗಳು ಹಾಗೂ ಉತ್ತಮ ಗುಣಮಟ್ಟದ ಸರಕುಗಳನ್ನು ಒದಗಿಸುವ ಬೀದಿ ವ್ಯಾಪಾರವು ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ. ಆದರೆ, ಮುಖ್ಯ ರಸ್ತೆಗಳು ಮತ್ತು ಪ್ರಮುಖ ಜಂಕ್ಷನ್‌ಗಳಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ಮೌಖಿಕ ಆದೇಶವನ್ನು ನೆಪ ಮಾಡಿಕೊಂಡು, ಯಾವುದೇ ಮುನ್ಸೂಚನೆ ನೀಡದೆ ಜೆಸಿಬಿಗಳೊಂದಿಗೆ ತೆರಳಿ ವ್ಯಾಪಾರಿಗಳ ಗಾಡಿಗಳು ಹಾಗೂ ಸರಕುಗಳನ್ನು ನಾಶ ಪಡಿಸುವುದು ಅಮಾನವೀಯ ಮತ್ತು ಖಂಡನೀಯ. ಅಧಿಕಾರಿಗಳು ಕಾನೂನುಬದ್ಧ ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ತಾಜುದ್ದೀನ್ ಶರೀಫ್ ಹೇಳಿದರು.

ಬೀದಿ ವ್ಯಾಪಾರಿಗಳ ಜೀವನೋಪಾಯದ ಹಕ್ಕಿಗೆ ಕಾನೂನು ರಕ್ಷಣೆ ಇದೆ. ಅವರ ಹಕ್ಕುಗಳ ರಕ್ಷಣೆಗೆ 2014ರಲ್ಲಿ ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಕಾಯ್ದೆ ಜಾರಿಗೆ ಬಂದಿದೆ. ತುಮಕೂರು ನಗರದಲ್ಲಿ ಸುಮಾರು 2000 ಮಂದಿ ಬೀದಿ ವ್ಯಾಪಾರಿಗಳಿದ್ದು, ಅನೇಕ ವ್ಯಾಪಾರಿಗಳನ್ನು ಸಮೀಕ್ಷೆಯಿಂದ ಹೊರಗಿಡಲಾಗಿದೆ. ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ನೀಡುವಲ್ಲಿ ವಿಫಲವಾಗಿರುವ ಅಧಿಕಾರಿಗಳು ಇದೀಗ ಅದೇ ಬಡವರ ಬದುಕಿನ ಮೇಲೆ ದಾಳಿ ನಡೆಸುತ್ತಿರುವುದು ವಿಪರ್ಯಾಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಯ್ದೆಯ ಪ್ರಕಾರ ಸಮೀಕ್ಷೆ ಪೂರ್ಣಗೊಂಡು ಅರ್ಹ ಬೀದಿ ವ್ಯಾಪಾರಿಗಳಿಗೆ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ನೀಡುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರನ್ನು ಮನಬಂದಂತೆ ಎತ್ತಂಗಡಿ ಮಾಡಬಾರದು. ಹಾಗೆಯೇ, ‘ನೋ-ವೆಂಡಿಂಗ್ ಜೋನ್’ ಘೋಷಿಸುವ ಮುನ್ನ ಟೌನ್ ವೆಂಡಿಂಗ್ ಸಮಿತಿಯ ಕಾನೂನುಬದ್ಧ ಪ್ರಕ್ರಿಯೆ ಮತ್ತು ಶಿಫಾರಸುಗಳನ್ನು ಪಾಲಿಸಬೇಕು. ಪರ್ಯಾಯ ವ್ಯಾಪಾರ ಸ್ಥಳ ಕಲ್ಪಿಸದೆ ಮುಖ್ಯ ರಸ್ತೆಗಳನ್ನು ಏಕಾಏಕಿ ‘ನೋ-ವೆಂಡಿಂಗ್ ಜೋನ್’ ಎಂದು ಘೋಷಿಸಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವುದು ನ್ಯಾಯ ಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೊಟೀಷ್ ನೀಡದೆ ಎತ್ತಂಗಡಿ ಮಾಡಿರುವ ಬೀದಿ ವ್ಯಾಪಾರಿಗಳಿಗೆ ಅದೇ ಸ್ಥಳದಲ್ಲಿ ಅಥವಾ ಸಮೀಪದ ಸೂಕ್ತ ಸ್ಥಳದಲ್ಲಿ ಪುನಃ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು. ಪಾದಚಾರಿಗಳ ಸಂಚಾರಕ್ಕೆ ನಿಜವಾಗಿಯೂ ಅಡ್ಡಿಯಾಗುವ ಸ್ಥಳಗಳಿದ್ದರೆ, ಪರ್ಯಾಯ ರಸ್ತೆ ಬದಿ ವ್ಯಾಪಾರ ಸ್ಥಳಗಳನ್ನು ತಕ್ಷಣ ಗುರುತಿಸಿ ಒದಗಿಸಬೇಕು. ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು. ನಗರದಲ್ಲಿ ಸಮಗ್ರ ಮರುಸಮೀಕ್ಷೆ ನಡೆಸಿ ಅರ್ಹ ಎಲ್ಲ ಬೀದಿ ವ್ಯಾಪಾರಿಗಳನ್ನು ಗುರುತಿಸಿ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ನೀಡಬೇಕು. ಟೌನ್ ವೆಂಡಿಂಗ್ ಸಮಿತಿಯನ್ನು ಕಾನೂನುಬದ್ಧವಾಗಿ ರಚಿಸಿ, ಬೀದಿ ವ್ಯಾಪಾರಿಗಳ ಪ್ರತಿನಿಧಿತ್ವವನ್ನು ಖಚಿತಪಡಿಸಬೇಕು. ಪಾದಚಾರಿ ಮಾರ್ಗಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿ ಪಾದಚಾರಿಗಳು ಹಾಗೂ ಬೀದಿ ವ್ಯಾಪಾರಿಗಳಿಗೂ ಸೂಕ್ತ ಸ್ಥಳ ಕಲ್ಪಿಸಬೇಕು. ನಿಜವಾದ ಒತ್ತುವರಿದಾರರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಬೀದಿ ವ್ಯಾಪಾರಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರ ಸಮಸ್ಯೆಗಳನ್ನು ನ್ಯಾಯಯುತವಾಗಿ ಪರಿಹರಿಸಬೇಕು. ಆ ಮೂಲಕ 80ನೇ ಸ್ವಾತಂತ್ರ ದಿನ ಶುಭಾಶಯಗಳನ್ನು ಸಲ್ಲಿಸುವಂತೆ ತಾಜುದ್ದೀನ್ ಷರೀಫ್ ಒತ್ತಾಯಿಸಿದ್ದಾರೆ.