ಪ್ರವಾದಿ ಮುಹಮ್ಮದ್(ಸ): ನಾಯಕತ್ವ, ರಾಜತಾಂತ್ರಿಕತೆ ಮತ್ತು ಆಡಳಿತದ ಅಪೂರ್ವ ಮಾದರಿ

0
223

✍️ ಇರ್ಶಾದ್‌ ಬೆಂಗಳೂರು
ಪತ್ರಕರ್ತರು ಮತ್ತು ತಂತ್ರಜ್ಞಾನ ಪರಿಣತರು

ಸ್ಕಾಟಿಷ್ ಇತಿಹಾಸಕಾರ ಹಾಗೂ ಓರಿಯಂಟಲಿಸ್ಟ್ ವಿಲಿಯಂ ಮಾಂಟ್ಗೊಮರಿ ವಾಟ್ ಅವರು ಪ್ರವಾದಿ ಮುಹಮ್ಮದ್(ಸ)ರ ವ್ಯಕ್ತಿತ್ವ ಮತ್ತು ಸಾಧನೆಯನ್ನು ವಿಶ್ಲೇಷಿಸುವಾಗ ಮೂರು ಮಹತ್ವದ ಗುಣಗಳನ್ನು ಗುರುತಿಸುತ್ತಾರೆ. ಅವರ ಪ್ರಕಾರ, ಪ್ರವಾದಿಯವರ ಸಂಪೂರ್ಣ ಕ್ರಾಂತಿಯಲ್ಲಿ ಈ ಮೂರೂ ಗುಣಗಳು ಅನಿವಾರ್ಯವಾಗಿದ್ದವು.

ದಾರ್ಶನಿಕತೆ: ಪ್ರವಾದಿಯವರು ಒಬ್ಬ ಶ್ರೇಷ್ಠ ದಾರ್ಶನಿಕರಾಗಿದ್ದರು. ಅರೇಬಿಯಾದ ಜನರಿಗೆ ಅವರ ಮೂಲಕ ಒಂದು ಭದ್ರವಾದ ಸಿದ್ಧಾಂತ ಹಾಗೂ ವೈಚಾರಿಕ ಚೌಕಟ್ಟು ದೊರೆಯಿತು. ಪರಿಣಾಮವಾಗಿ, ಅವರಲ್ಲಿನ ಆಂತರಿಕ ಸಂಘರ್ಷ ಮತ್ತು ಉದ್ವಿಗ್ನತೆಗಳಿಗೆ ಪರಿಹಾರ ಕಂಡುಕೊಂಡು, ಸಮುದಾಯವನ್ನು ಒಂದಾಗಿಸಲು ಸಾಧ್ಯವಾಯಿತು.

ದೂರದೃಷ್ಟಿಯ ನಾಯಕತ್ವ: ಪ್ರಬಲ ನಾಯಕತ್ವ ಮತ್ತು ದೂರದೃಷ್ಟಿಯ ಫಲವಾಗಿ, ಕುರ್‌ಆನ್ ನೀಡಿದ ಮೌಲ್ಯಗಳನ್ನು ಕೇವಲ ತಾತ್ವಿಕ ವಿಚಾರಗಳಾಗಿ ಉಳಿಸದೆ, ಅವುಗಳನ್ನು ಸಾಮಾಜಿಕ ಮತ್ತು ರಾಜಕೀಯ ನೀತಿಗಳಾಗಿ ರೂಪಿಸಿ ಜನರ ಜೀವನದಲ್ಲಿ ಅನುಷ್ಠಾನಗೊಳಿಸುವಂತೆ ಮಾಡುವಂತಾಯಿತು.

ದಕ್ಷ ಆಡಳಿತ: ಒಬ್ಬ ದಕ್ಷ ಆಡಳಿತಗಾರನಾಗಿ, ಆಡಳಿತದ ವಿವಿಧ ಸ್ಥಾನಗಳಿಗೆ ಸೂಕ್ತ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಜವಾಬ್ದಾರಿಗಳನ್ನು ವಹಿಸುವಲ್ಲಿ ಪ್ರವಾದಿಯವರು ತೋರಿದ ವಿವೇಕ ಮತ್ತು ದೂರದೃಷ್ಟಿ ಗಮನಾರ್ಹವಾಗಿತ್ತು.

ಪ್ರವಾದಿ ಮುಹಮ್ಮದ್(ಸ)ರನ್ನು ಕೇವಲ ಧಾರ್ಮಿಕ ನಾಯಕನಾಗಿ ನೋಡುವುದರಿಂದ ಅವರ ನಾಯಕತ್ವದ ಸಂಪೂರ್ಣ ಆಯಾಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪ್ರವಾದಿವರ್ಯರು ಸಮಾಜ ನಿರ್ಮಾತೃ, ನಾಯಕ, ರಾಜತಾಂತ್ರಿಕ, ಆಡಳಿತಗಾರ ಎಲ್ಲವೂ ಆಗಿದ್ದರು.

“ಇತಿಹಾಸದ ಯಾವುದೇ ಮಹಾನ್ ವ್ಯಕ್ತಿಯನ್ನೂ ಪ್ರವಾದಿ ಮುಹಮ್ಮದ್(ಸ) ಅವರಷ್ಟು ತಪ್ಪಾಗಿ ಅರ್ಥೈಸಲಾಗಿಲ್ಲ” ಎಂಬ ಅಭಿಪ್ರಾಯವನ್ನು ವಿಲಿಯಂ ಮಾಂಟ್ಗೊಮರಿ ವಾಟ್ ವ್ಯಕ್ತಪಡಿಸಿದ್ದಾರೆ.

ಆದರೆ, ಅವರನ್ನು ಅಲ್ಲಾಹನ ಸಂದೇಶವಾಹಕರೆಂದು ಬಲವಾಗಿ ನಂಬುವ ಮುಸ್ಲಿಂ ಜಗತ್ತೂ ಸಹ, ಅವರ ಜೀವನದ ರಾಜಕೀಯ ಮತ್ತು ದಕ್ಷ ಆಡಳಿತದ ಆಯಾಮಗಳನ್ನು ಗ್ರಹಿಸುವಲ್ಲಿ ವಿಫಲರಾಗಿದೆ ಎಂಬುದಕ್ಕೆ ನಮ್ಮ ಇಂದಿನ ಸ್ಥಿತಿಯೇ ಸಾಕ್ಷಿಯಾಗಿದೆ.

ಪ್ರವಾದಿ ಜೀವನ ಚರ್ಯೆಯನ್ನು ಕೇವಲ ಆಧ್ಯಾತ್ಮಿಕ ಜೀವನದ ಚರಿತ್ರೆಯಾಗಿ ಓದುವುದಕ್ಕಿಂತ, ಸಂಘರ್ಷಪೀಡಿತ ಸಮಾಜವೊಂದನ್ನು ಹೇಗೆ ಸಂಘಟಿತ ಸಮುದಾಯವನ್ನಾಗಿ ರೂಪಿಸಲಾಯಿತು, ವಿವಿಧ ಸಮುದಾಯಗಳ ನಡುವೆ ಹೇಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು, ಅಧಿಕಾರವನ್ನು ಹೇಗೆ ನಿಯಂತ್ರಿಸಲಾಯಿತು ಮತ್ತು ಆಡಳಿತದಲ್ಲಿ ಜನರ ಧ್ವನಿಗೆ ಹೇಗೆ ಸ್ಥಾನ ನೀಡಲಾಯಿತು ಎಂಬ ದೃಷ್ಟಿಯಿಂದಲೂ ಅಧ್ಯಯನ ಮಾಡಬೇಕಾಗಿದೆ.

16 ನೇ ಶತಮಾನಕ್ಕಿಂತ ಮೊದಲು ಇಬ್ನ್ ಇಸ್ಹಾಕ್(768), ಅತ್-ತಬರಿ(838-923), ಅಲ್-ಘಝ್ಝಾಲಿ(1058–1111), ಇಬ್ನ್ ಅಸಾಕಿರ್(1105–1175), ಇಬ್ನ್ ಖಲ್ದೂನ್ (1332–1406) ಸೇರಿದಂತೆ ಅನೇಕ ಮಹಾನ್ ವಿದ್ವಾಂಸರು ಪ್ರವಾದಿಯವರ ಜೀವನದ ರಾಜಕೀಯ ತತ್ವಗಳ ಆಳವಾದ ಅಧ್ಯಯನ ನಡೆಸಿದ್ದರು. ತಮ್ಮ ಕಾಲದ ಅಗತ್ಯಗಳಿಗೆ ತಕ್ಕಂತೆ ಅವುಗಳ ಆಧಾರದ ಮೇಲೆ ಅನೇಕ ಕೃತಿಗಳನ್ನು ರಚಿಸಿದರು. ಈ ರಚನೆಗಳು ಅಂದಿನ ನಾಯಕರ ಮೇಲೆ ಹಾಗೂ ಬುದ್ಧಿಜೀವಿ ಸಮುದಾಯದ ಮೇಲೆ ಅಪಾರ ಪ್ರಭಾವ ಬೀರಿದವು. ಇಸ್ಲಾಮಿನ ರಾಜನೀತಿ ಮತ್ತು ನೈತಿಕ ತತ್ವಗಳನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡಿದ್ದರಿಂದಲೇ ಅವರು ಉನ್ನತ ನಾಗರಿಕತೆಯ ಹರಿಕಾರರಾಗಲು ಸಾಧ್ಯವಾಯಿತು.

ಏಳನೇ ಶತಮಾನದ ಅರೇಬಿಯಾ: ಅರಾಜಕತೆಯ ನಡುವೆ ಹೊಸ ನಾಯಕತ್ವ

ಏಳನೇ ಶತಮಾನದ ಆರಂಭದಲ್ಲಿ ಜಗತ್ತಿನ ಎರಡು ಸೂಪರ್ ಪವರ್‌ಗಳಾದ ರೋಮನ್ ಮತ್ತು ಪರ್ಷಿಯನ್ ಸಾಮ್ರಾಜ್ಯಗಳು ಪರಸ್ಪರ ಪ್ರಾಬಲ್ಯಕ್ಕಾಗಿ ಹೋರಾಡುತ್ತಿದ್ದವು. ಆದರೆ ಅರೇಬಿಯಾದ ಬಹುಭಾಗದ ಸಾಮಾಜಿಕ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. ಬುಡಕಟ್ಟುಗಳ ನಡುವಿನ ನಿರಂತರ ಸಂಘರ್ಷ, ಸಣ್ಣಪುಟ್ಟ ಕಾರಣಗಳಿಗೂ ನಡೆಯುತ್ತಿದ್ದ ರಕ್ತಪಾತ, ಪ್ರತೀಕಾರವನ್ನು ಗೌರವದ ಸಂಕೇತವೆಂದು ಪರಿಗಣಿಸುವ ಮನೋಭಾವ, ಮಹಿಳೆ ಮತ್ತು ದುರ್ಬಲರ ಹಕ್ಕುಗಳಿಗೆ ಸಮರ್ಪಕ ರಕ್ಷಣೆ ಇಲ್ಲದಿರುವುದು ಸಾಮಾನ್ಯವಾಗಿತ್ತು.

ಇಂತಹ ಪರಿಸ್ಥಿತಿಯಲ್ಲಿಯೇ ಮಕ್ಕಾದಲ್ಲಿ ಹೊಸ ನಾಯಕತ್ವದ ಉದಯವಾಯಿತು. ಅದು ಕೇವಲ ಧಾರ್ಮಿಕ ಸಂದೇಶವನ್ನು ಸಾರಿದ ನಾಯಕತ್ವವಾಗಿರಲಿಲ್ಲ; ಸಮಾಜವನ್ನು ಪುನರ್‌ರಚಿಸುವ, ಸಂಘರ್ಷಗಳನ್ನು ಪರಿಹರಿಸುವ ಮತ್ತು ನ್ಯಾಯಾಧಾರಿತ ಆಡಳಿತ ವ್ಯವಸ್ಥೆಯನ್ನು ನಿರ್ಮಿಸುವ ನಾಯಕತ್ವವಾಗಿತ್ತು.

ಹಿಲ್ಫುಲ್ ಫುದುಲ್: ಅನ್ಯಾಯದ ವಿರುದ್ಧ ನಿಲ್ಲುವ ಬದ್ಧತೆ

ಪ್ರವಾದಿತ್ವದ ಪೂರ್ವದಲ್ಲೇ ಅರೇಬಿಯಾದಲ್ಲಿ ಬುಡಕಟ್ಟುಗಳ ನಡುವೆ ನಿರಂತರ ಕಲಹಗಳಾಗುತ್ತಿದ್ದವು. ಮಕ್ಕಾ ನಗರಕ್ಕೆ ಹೊರಗಿನಿಂದ ಬರುವ ವ್ಯಾಪಾರಿಗಳಿಗೆ ಸ್ಥಳೀಯ ಪ್ರಭಾವಿಗಳಿಂದ ಮೋಸ ಮತ್ತು ದೌರ್ಜನ್ಯಗಳು ಎಡೆತಡೆಯಿಲ್ಲದೆ ನಡೆಯುತ್ತಿದ್ದವು. ಇದನ್ನು ತಡೆಯಲು ಮಕ್ಕಾದ ಕೆಲವು ಪ್ರಮುಖ ಕುಲಗಳು ಒಗ್ಗೂಡಿ ‘ಹಿಲ್ಫ್ ಅಲ್-ಫುದುಲ್’ ಎಂಬ ನ್ಯಾಯಪರ ಒಪ್ಪಂದವನ್ನು ಮಾಡಿಕೊಂಡವು. ಯುವಕರಾಗಿದ್ದ ಮುಹಮ್ಮದ್(ಸ) ಈ ಒಪ್ಪಂದದ ಸಭೆಯಲ್ಲಿ ಭಾಗವಹಿಸಿ, ಅನ್ಯಾಯದ ವಿರುದ್ಧ ಸದಾ ಹೋರಾಡುವುದಾಗಿ ಪ್ರಮಾಣ ಮಾಡಿದರು. ಪ್ರವಾದಿತ್ವ ಲಭಿಸಿದ ನಂತರವೂ ಅವರು ಈ ಒಪ್ಪಂದವನ್ನು ಮುಕ್ತವಾಗಿ ಶ್ಲಾಘಿಸಿದರು. “ದೇವಸಂದೇಶ ತಲುಪಿದ ಮೇಲೆಯೂ ಇಂತಹ ನ್ಯಾಯಯುತ ಒಪ್ಪಂದಕ್ಕೆ ಕರೆ ಬಂದರೆ, ನಾನು ಖಂಡಿತವಾಗಿಯೂ ಸ್ಪಂದಿಸುತ್ತೇನೆ” ಎಂದು ಸಾರಿದ್ದರು.

ಮದೀನಾ ಸಂವಿಧಾನ: ಮಾನವ ಕುಲದ ಮೊದಲ ಲಿಖಿತ ಶಾಸನ

ಮಕ್ಕಾದಿಂದ ಮದೀನಾಕ್ಕೆ ವಲಸೆ ಬಂದಾಗ ಪ್ರವಾದಿ ಮುಹಮ್ಮದ್(ಸ) ಎದುರಿಸಿದ ಪ್ರಮುಖ ಸವಾಲುಗಳಲ್ಲಿ ಒಂದು ಅಲ್ಲಿನ ದೀರ್ಘಕಾಲದ ಬುಡಕಟ್ಟು ಸಂಘರ್ಷವಾಗಿತ್ತು. ಶತಮಾನಗಳಿಂದ ‘ರಕ್ತಕ್ಕೆ ರಕ್ತವೇ ಉತ್ತರ’ ಎಂಬ ಹಿಂಸಾತ್ಮಕ ಮನಸ್ಥಿತಿಯಲ್ಲಿದ್ದ ‘ಔಸ್’ ಮತ್ತು ‘ಖಜ್ರಜ್’ ಬುಡಕಟ್ಟುಗಳು ಆಂತರಿಕ ಯುದ್ಧಗಳಿಂದ ಜರ್ಜರಿತಗೊಂಡಿದ್ದವು. ಇಂತಹ ವಾತಾವರಣದಲ್ಲಿ ಪ್ರವಾದಿಯವರು ಜಾರಿಗೆ ತಂದಿದ್ದೇ ‘ಮದೀನಾ ಸಂವಿಧಾನ’ (ಸಹೀಫಾ).

ಡಾ. ಮುಹಮ್ಮದ್ ಹಮೀದುಲ್ಲಾ ಅವರಂತಹ ಪ್ರಖ್ಯಾತ ವಿದ್ವಾಂಸರು ಇದನ್ನು “ಮಾನವ ಇತಿಹಾಸದ ಮೊದಲ ಲಿಖಿತ ಸಂವಿಧಾನ” ಎಂದು ಬಣ್ಣಿಸುತ್ತಾರೆ. ಈ ಸಂವಿಧಾನವು ಮುಸ್ಲಿಮರು, ಯಹೂದಿಗಳು ಹಾಗೂ ಇತರ ಧರ್ಮೀಯರನ್ನು ಒಂದೇ ರಾಜಕೀಯ ಮತ್ತು ಸಾಮಾಜಿಕ ಚೌಕಟ್ಟಿನಡಿ ತಂದು ನಿಲ್ಲಿಸಿತು. ಈ ಒಪ್ಪಂದವು ಮದೀನಾದ ವಿವಿಧ ಸಮುದಾಯಗಳ ನಡುವಿನ ಹಕ್ಕುಗಳು, ಕರ್ತವ್ಯಗಳು, ಪರಸ್ಪರ ರಕ್ಷಣೆ ಮತ್ತು ರಾಜಕೀಯ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಒಳಗೊಂಡಿತ್ತು. ಇದು ವಿವಿಧ ಸಮುದಾಯಗಳು ಒಂದೇ ರಾಜಕೀಯ ವ್ಯವಸ್ಥೆಯ ಅಡಿಯಲ್ಲಿ ಸಹಬಾಳ್ವೆ ನಡೆಸುವ ಪ್ರಯತ್ನಕ್ಕೆ ನಾಂದಿಯಾಯಿತು.

ಸಾಮಾಜಿಕ ಒಪ್ಪಂದ ಸಿದ್ಧಾಂತ ಮತ್ತು ‘ಶೂರಾ’ ವ್ಯವಸ್ಥೆ

ಆಧುನಿಕ ರಾಜಕೀಯ ಚಿಂತನೆಯಲ್ಲಿರುವ ‘ಸಾಮಾಜಿಕ ಒಪ್ಪಂದ ಸಿದ್ಧಾಂತ’ದ ಮೂಲಭೂತ ಕಲ್ಪನೆಯೆಂದರೆ, ಆಡಳಿತವು ಕೇವಲ ಅಧಿಕಾರದ ಬಲದ ಮೇಲೆ ನಿಂತಿರದೆ, ಆಡಳಿತಗಾರ ಮತ್ತು ಜನರ ನಡುವಿನ ಕೆಲವು ಒಪ್ಪಂದಗಳು, ಹಕ್ಕುಗಳು ಮತ್ತು ಕರ್ತವ್ಯಗಳ ಆಧಾರದ ಮೇಲೆ ನಡೆಯಬೇಕು ಎಂಬುದು.

ಸಮಾಜದಲ್ಲಿ ಜನರು ಪರಸ್ಪರ ಕೆಲವು ನೈತಿಕ ಮತ್ತು ರಾಜಕೀಯ ನಿಯಮಗಳನ್ನು ಒಪ್ಪಿಕೊಂಡು ಬದುಕುತ್ತಾರೆ. ಆಡಳಿತಗಾರನಿಗೂ ಅಧಿಕಾರದ ಜೊತೆಗೆ ಹೊಣೆಗಾರಿಕೆ ಇರುತ್ತದೆ. ಆತ ಆ ಹೊಣೆಗಾರಿಕೆಯಿಂದ ದಾರಿ ತಪ್ಪಿದರೆ, ಅವನನ್ನು ಪ್ರಶ್ನಿಸುವ ಮತ್ತು ತಿದ್ದುವ ವ್ಯವಸ್ಥೆ ಇರಬೇಕು.

ಪ್ರವಾದಿಯವರು ‘ಶೂರಾ’ (ಪ್ರಜೆಗಳೊಂದಿಗೆ ಸಮಾಲೋಚನೆ ನಡೆಸುವ ವ್ಯವಸ್ಥೆ) ಪ್ರಕ್ರಿಯೆಯನ್ನು ಆಡಳಿತಗಾರರಿಗೆ ಕಡ್ಡಾಯಗೊಳಿಸಿದರು. ಆಡಳಿತಗಾರ ದಾರಿ ತಪ್ಪಿದರೆ ಆತನನ್ನು ನೇರವಾಗಿ ಪ್ರಶ್ನಿಸುವ ಮತ್ತು ತಿದ್ದುವ ಹಕ್ಕನ್ನು ಪ್ರಜೆಗಳಿಗೆ ನೀಡಿದರು. ಪ್ರವಾದಿಯವರ ತರಬೇತಿಯಲ್ಲೇ ಬೆಳೆದ ಅನುಯಾಯಿಗಳಲ್ಲಿ ಈ ಪ್ರಜಾಸತ್ತಾತ್ಮಕ ಮೌಲ್ಯ ಆಳವಾಗಿ ಬೇರೂರಿತ್ತು.

ಖಲೀಫಾ ಉಮರ್(ರ) ಅವರ ಆಡಳಿತಾವಧಿಯ ಘಟನೆಯೊಂದೇ ಇದಕ್ಕೆ ಉತ್ತಮ ಉದಾಹರಣೆ: ಒಮ್ಮೆ ಉಮರರು, “ಸ್ತ್ರೀಯರ ವಿವಾಹದ ಮೊತ್ತವನ್ನು (ಮಹ್ರ್) ಮಿತಿಗಿಂತ ಹೆಚ್ಚಿಸಬೇಡಿ” ಎಂದು ಸಾರ್ವಜನಿಕವಾಗಿ ಆದೇಶಿಸಿದರು. ಆಗ ತಕ್ಷಣವೇ ಮಹಿಳೆಯೊಬ್ಬಳು ಎದ್ದು ನಿಂತು, “ಓ ಉಮರ್! ಇದು ಸರಿಯಲ್ಲ. ಏಕೆಂದರೆ ಅಲ್ಲಾಹನು ಕುರ್‌ಆನ್‌ನಲ್ಲಿ—’ನೀವು ಅವರಿಗೆ ಅಪಾರ ಧನರಾಶಿಯನ್ನೇ ನೀಡಿದ್ದರೂ…’ (4:20) ಎಂದು ಹೇಳಿಲ್ಲವೇ?” ಎಂದು ಪ್ರಶ್ನಿಸಿದಳು. ಅದಕ್ಕೆ ಉಮರ್ (ರ) ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಹಠ ಹಿಡಿಯಲಿಲ್ಲ. ಬದಲಾಗಿ: “ಒಬ್ಬ ಮಹಿಳೆ ಉಮರ್‌ನೊಂದಿಗೆ ವಾದಿಸಿ, ಅವನನ್ನು ಮಣಿಸಿದ್ದಾಳೆ” ಎಂದು ಒಪ್ಪಿಕೊಂಡರು.

ಈ ಘಟನೆಯ ಆಳ ಸಂದೇಶವೆಂದರೆ; ಅಧಿಕಾರದಲ್ಲಿರುವ ವ್ಯಕ್ತಿ ಸತ್ಯಕ್ಕಿಂತ ಮೇಲಲ್ಲ.

ಯುದ್ಧದಲ್ಲಿಯೂ ಮಾನವೀಯ ಮೌಲ್ಯಗಳಿಗೆ ಆದ್ಯತೆ

ಇಸ್ಲಾಮಿಕ್ ಆಡಳಿತದಲ್ಲಿ ಯುದ್ಧವು ಅನಿವಾರ್ಯವಾದಾಗಲೂ, ಪ್ರವಾದಿಯವರು ಅರಬ್‌ರಲ್ಲಿ ಸಾಮಾನ್ಯವಾಗಿದ್ದ ಅಮಾನವೀಯ ಯುದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಿದರು. ವೈರಿಗಳ ಮೇಲೆ ಸೇಡು ತೀರಿಸಿಕೊಳ್ಳುವುದು, ಕೃಷಿ ಬೆಳೆಯನ್ನು ಸುಡುವುದು, ಮರಗಳನ್ನು ಕಡಿಯುವುದು, ಯುದ್ಧದಲ್ಲಿ ಭಾಗವಹಿಸದವರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆ ನೀಡದಂತೆ ನಿರ್ದೇಶನ ನೀಡಿದರು.

ಬದ್ರ್ ಯುದ್ಧದ ನಂತರದ ಯುದ್ಧ ಕೈದಿಗಳ ವಿಚಾರವೂ ಇದಕ್ಕೆ ಗಮನಾರ್ಹ ಉದಾಹರಣೆಯಾಗಿದೆ. ಕೈದಿಗಳೊಂದಿಗೆ ಮಾನವೀಯವಾಗಿ ವರ್ತಿಸುವಂತೆ ಪ್ರವಾದಿಯವರು ಸೂಚಿಸಿದ್ದರು. ತಮ್ಮ ಬಳಿ ಬಿಡುಗಡೆ ಧನ(Ransom) ಇಲ್ಲದ ಕೈದಿಗಳಿಗೆ ಮದೀನಾದ ಮಕ್ಕಳನ್ನು ಓದು ಬರಹ ಕಲಿಸಿ ಬಿಡುಗಡೆಯಾಗುವ ಅವಕಾಶ ಕಲ್ಪಿಸಲಾಯಿತು. 

ಜ್ಞಾನವನ್ನೇ ಬಿಡುಗಡೆಯ ಧನವನ್ನಾಗಿ(Ransom) ಬಳಸಿದ ಈ ಘಟನೆ ಮಾನವ ಇತಿಹಾಸದಲ್ಲೇ ಅಪರೂಪದ್ದಾಗಿತ್ತು.

ಹುದೈಬಿಯಾ: ಯುದ್ಧಕ್ಕಿಂತ ಶಾಂತಿಯನ್ನು ಆಯ್ಕೆ ಮಾಡಿದ ರಾಜತಾಂತ್ರಿಕತೆ

ರಾಜತಾಂತ್ರಿಕತೆಯ ಅತ್ಯುನ್ನತ ಮಾದರಿಯೆಂದರೆ ಅದು ಹುದೈಬಿಯಾ ಒಪ್ಪಂದ. 1400 ನಿಶಸ್ತ್ರ ಅನುಯಾಯಿಗಳೊಂದಿಗೆ ಉಮ್ರಾ ನಿರ್ವಹಿಸಲು ಹೊರಟ ಪ್ರವಾದಿಯವರನ್ನು ಕುರೈಶರು ಹುದೈಬಿಯಾ ಎಂಬಲ್ಲಿ ತಡೆದರು. ಅಲ್ಲಿ ನಡೆದ ಸುದೀರ್ಘ ಸಂಧಾನದಲ್ಲಿ ಕುರೈಶರ ಪ್ರತಿನಿಧಿ ಸುಹೇಲ್ ಇಬ್ನ್ ಅಮ್ರ್ ಪ್ರತಿಯೊಂದು ಷರತ್ತನ್ನೂ ಮುಸ್ಲಿಮರಿಗೆ ಅನ್ಯಾಯವಾಗುವ ರೀತಿಯಲ್ಲೇ ಹೇರುತ್ತಿದ್ದರು.

ಒಪ್ಪಂದದ ಪತ್ರದಲ್ಲಿ ‘ಪ್ರವಾದಿ ಮುಹಮ್ಮದ್’ ಎಂಬ ಪದವನ್ನು ಬರೆಯಲೂ ಅವರು ಒಪ್ಪಲಿಲ್ಲ. ಅನುಯಾಯಿಗಳ ತೀವ್ರ ಆಕ್ಷೇಪದ ನಡುವೆಯೂ, ಶಾಂತಿ ಸ್ಥಾಪನೆಗಾಗಿ ಪ್ರವಾದಿಯವರು ಸ್ವತಃ ತಮ್ಮ ಕೈಯಾರೇ ಆ ಪದವನ್ನು ಅಳಿಸಿ ‘ಮುಹಮ್ಮದ್ ಇಬ್ನ್ ಅಬ್ದುಲ್ಲಾ’ ಎಂದು ಬರೆಸಿದರು. ಆ ಕ್ಷಣಕ್ಕೆ ಇದು ಹಿನ್ನಡೆ ಎನಿಸಿದರೂ, ಮುಂದಿನ 10 ವರ್ಷಗಳ ಕಾಲ ಲಭಿಸಿದ ಯುದ್ಧರಹಿತ ವಾತಾವರಣವೇ ಇಡೀ ಅರೇಬಿಯಾದಲ್ಲಿ ಇಸ್ಲಾಮಿಕ್ ಆಡಳಿತ ಗಟ್ಟಿಯಾಗಲು ದಾರಿಯಾಯಿತು. ಅದಕ್ಕೇ ಪವಿತ್ರ ಕುರ್‌ಆನ್ ಈ ಒಪ್ಪಂದವನ್ನು ‘ಫತ್ಹನ್ ಮುಬೀನ್’ (ಸ್ಪಷ್ಟ ಜಯ) ಎಂದು ಬಣ್ಣಿಸಿದೆ.

ಪ್ರತಿಯೊಂದು ವಿಜಯವೂ ಯುದ್ಧಭೂಮಿಯಲ್ಲಿ ದೊರೆಯಬೇಕೆಂದಿಲ್ಲ; ಕೆಲವೊಮ್ಮೆ ಶಾಂತಿಯ ಮೇಜಿನ ಮೇಲೆ ಸಾಧಿಸಿದ ಒಪ್ಪಂದವೇ ಅತ್ಯಂತ ದೊಡ್ಡ ವಿಜಯವಾಗಬಹುದು.

ಮಕ್ಕಾ ವಿಜಯ: ಪ್ರತಿಕಾರದ ಶಕ್ತಿ ಇರುವಾಗ ಕ್ಷಮೆ

ವರ್ಷಗಳ ಕಾಲ ಹಿಂಸೆ, ವಿರೋಧ ಮತ್ತು ಸ್ವಂತ ನಾಡಿನಿಂದ ಹೊರಹಾಕುವಿಕೆಯನ್ನು ಎದುರಿಸಿದ್ದ ಪ್ರವಾದಿ ಮುಹಮ್ಮದ್(ಸ) ರು ಕೊನೆಗೆ ವಿಜಯಶಾಲಿಯಾಗಿ ಮಕ್ಕಾವನ್ನು ಪ್ರವೇಶಿಸಿದಾಗ, ಪ್ರತೀಕಾರಕ್ಕಿಂತ ಕ್ಷಮೆಗೆ ಆದ್ಯತೆ ನೀಡಿದರು. ವರ್ಷಗಳ ಕಾಲ ತಮ್ಮನ್ನು ವಿರೋಧಿಸಿದ್ದ ಅನೇಕರಿಗೂ ಕ್ಷಮೆಯ ಅವಕಾಶ ದೊರೆಯಿತು. ಇದು ಅಧಿಕಾರ ದೊರೆತ ನಂತರ ಪ್ರತೀಕಾರ ತೀರಿಸಿಕೊಳ್ಳುವ ಬದಲು, ಕ್ಷಮೆ ಮತ್ತು ಸಾಮಾಜಿಕ ಸೌಹಾರ್ದಕ್ಕೆ ಆದ್ಯತೆ ನೀಡಿದ ನಾಯಕತ್ವದ ಅಪೂರ್ವ ಉದಾಹರಣೆಯಾಗಿದೆ.

ನಜ್ರಾನ್‌ನ ಕ್ರೈಸ್ತರೊಂದಿಗೆ ಸಂಬಂಧ: ಭಿನ್ನತೆಯ ನಡುವೆ ಸಹಬಾಳ್ವೆ

ಪ್ರವಾದಿ ಮುಹಮ್ಮದ್(ಸ) ಅವರ ರಾಜತಾಂತ್ರಿಕತೆಯ ಮತ್ತೊಂದು ಉದಾಹರಣೆಯೆಂದರೆ ನಜ್ರಾನ್‌ನ ಕ್ರೈಸ್ತರೊಂದಿಗೆ ನಡೆದ ಒಪ್ಪಂದ. ಆ ಮೂಲಕ ಕ್ರಿಶ್ಚಿಯನ್ ಸಮುದಾಯಕ್ಕೆ ಅವರ ಧಾರ್ಮಿಕ ಸ್ಥಳಗಳ ರಕ್ಷಣೆ ಮತ್ತು ಸ್ವಾಯತ್ತತೆಯ ಸಂಪೂರ್ಣ ಭರವಸೆ ನೀಡಲಾಯಿತು. ವಿಭಿನ್ನ ಧರ್ಮ ಮತ್ತು ಸಮುದಾಯಗಳೊಂದಿಗೆ ಸಂವಾದ ನಡೆಸಿ, ಒಪ್ಪಂದಗಳ ಮೂಲಕ ಸಹಬಾಳ್ವೆಯ ವ್ಯವಸ್ಥೆ ನಿರ್ಮಿಸುವ ಪ್ರಯತ್ನವು ಪ್ರವಾದಿಯವರ ರಾಜತಾಂತ್ರಿಕ ನೀತಿಯ ಪ್ರಮುಖ ಅಂಶವಾಗಿತ್ತು. ಒಂದು ಉತ್ತಮ ಸಮಾಜವನ್ನು ನಿರ್ಮಿಸಲು ಎಲ್ಲರೂ ಒಂದೇ ರೀತಿಯವರಾಗಿರಬೇಕಾಗಿಲ್ಲ; ವಿಭಿನ್ನತೆಯ ನಡುವೆ ನ್ಯಾಯಯುತ ಒಪ್ಪಂದ ಮತ್ತು ಪರಸ್ಪರ ಗೌರವವನ್ನು ನಿರ್ಮಿಸುವುದು ಸಾಕಾಗಬಹುದು.

ಆಧುನಿಕ ಯುಗಕ್ಕೆ ನೈತಿಕ ದಾರಿದೀಪ

ಇಂದು ನಾವು ಜಿನೀವಾ ಒಪ್ಪಂದಗಳು ಹಾಗೂ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಎಂದು ಕರೆಯುವ ಅನೇಕ ತತ್ವಗಳ ಪ್ರಾಯೋಗಿಕ ಹೆಜ್ಜೆಗಳು ಮೂಡಿದ್ದು 7ನೇ ಶತಮಾನದ ಅರೇಬಿಯಾದ ಮರುಭೂಮಿಯಲ್ಲಿ.

ನಿರಂಕುಶ ಅಧಿಕಾರಕ್ಕೆ ಹೊಣೆಗಾರಿಕೆಯ ಕಡಿವಾಣ, ಜನರೊಂದಿಗೆ ಸಮಾಲೋಚಿಸುವ ನಾಯಕತ್ವ, ಒಪ್ಪಂದಗಳಿಗೆ ಗೌರವ ನೀಡುವ ರಾಜತಾಂತ್ರಿಕತೆ, ಯುದ್ಧದಲ್ಲಿಯೂ ನೈತಿಕತೆ ಕಾಯ್ದುಕೊಳ್ಳುವ ಆಡಳಿತ, ಅಧಿಕಾರ ದೊರೆತಾಗ ಪ್ರತೀಕಾರಕ್ಕಿಂತ ಕ್ಷಮೆಯನ್ನು ಆಯ್ಕೆ ಮಾಡುವ ಮನೋಭಾವ.

ನ್ಯಾಯವಿಲ್ಲದ ಅಧಿಕಾರಕ್ಕೆ ಶಕ್ತಿ ಇರಬಹುದು; ಆದರೆ ಶಾಶ್ವತ ನಾಯಕತ್ವಕ್ಕೆ ನ್ಯಾಯ, ಸಮಾಲೋಚನೆ, ಸಂಯಮ ಮತ್ತು ಜನರ ವಿಶ್ವಾಸ ಅನಿವಾರ್ಯ. ಇವೆಲ್ಲಾ ಪ್ರವಾದಿ(ಸ) ರವರ ಜೀವನದ ರಾಜಕೀಯ ಆಯಾಮಗಳ ಆಳವಾದ ಅಧ್ಯಯನ ನಮಗೆ ನೀಡುವ ಮೌಲ್ಯಗಳು. ಇವತ್ತಿಗೂ ಈ ಮೌಲ್ಯಗಳ ಪ್ರಸ್ತುತತೆ ಕಡಿಮೆಯಾಗಿಲ್ಲ. ಇಂದಿನ ಜಾಗತಿಕ ಸಂಘರ್ಷಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಪ್ರವಾದಿವರ್ಯರ(ಸ) ಜೀವನದ ಈ ರಾಜಕೀಯ ಮತ್ತು ರಾಜತಾಂತ್ರಿಕ ಆಯಾಮಗಳು ಕಾಲಾತೀತ ದಾರಿದೀಪವಾಗಿವೆ.