✍️ ನಿಕತ್ ಫಾತಿಮಾ
ಮಾಜಿ ಅಧ್ಯಕ್ಷರು, ಗರ್ಲ್ಸ್ ಇಸ್ಲಾಮಿಕ್ ಆಗನೈಝೇಶನ್ ಆಫ್ ಇಂಡಿಯಾ (ಜಿಐಓ), ದೆಹಲಿ
ಮುಸ್ಲಿಮ್ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಜಗತ್ತನ್ನೇ ರೂಪಿಸುವಲ್ಲಿ, ದೂರದೃಷ್ಟಿ ಮತ್ತು ಅಸಾಧಾರಣ ಕೊಡುಗೆಗಳನ್ನು ನೀಡಿರುವ ಎಷ್ಟು ಮುಸ್ಲಿಮ್ ಮಹಿಳೆಯರ ಹೆಸರುಗಳನ್ನು ನಿಮಗೆ ಹೇಳಲು ಸಾಧ್ಯ?
ಬೆರಳೆಣಿಕೆಗಿಂತ ಹೆಚ್ಚಿನ ಹೆಸರುಗಳು ನಿಮಗೆ ಗೊತ್ತಿದ್ದರೆ, ಅಭಿನಂದನೆಗಳು! ನಿಮಗೆ ಸಮೃದ್ಧವಾದ ಮತ್ತು ಹೆಚ್ಚಾಗಿ ಕಡೆಗಣಿಸಲ್ಪಟ್ಟಿರುವ ಇತಿಹಾಸದ ಪರಿಚಯವಿದೆ ಎಂದಾಯಿತು. ಆದರೆ ಹೆಚ್ಚಿನವರಂತೆ ನಿಮಗೂ ಕೆಲವರನ್ನು ಹೊರತುಪಡಿಸಿ ಹೆಚ್ಚಿನ ಹೆಸರನ್ನು ಹೇಳಲು ಕಷ್ಟವಾದರೆ, ನೀವು ಸರಿಯಾದ ಲೇಖನ ಓದುತ್ತಿದ್ದೀರಿ.
ಆಧುನಿಕ ಹೆಣ್ಣಿನ ದುರಂತವೆಂದರೆ, ಎರಡು ಪರಸ್ಪರ ವಿರೋಧಿ ತೀವ್ರವಾದಗಳ ನಡುವೆ ತೂಗಾಡುವಂತೆ ಬಲವಂತ ಮಾಡಲ್ಪಟ್ಟಿದ್ದಾಳೆ. ಒಂದು ಅವಳನ್ನು ಮನೆಯೊಳಗೆ ಬಂಧಿಸುತ್ತದೆ ಮತ್ತು ಇನ್ನೊಂದು ತಿಂಗಳ ಕೊನೆಯಲ್ಲಿ ಅವಳು ಮನೆಗೆ ತರುವ ಸಂಬಳದ ಮೊತ್ತದಿಂದ ಆಕೆಯ ಮೌಲ್ಯವನ್ನು ನಿರ್ಧರಿಸುತ್ತದೆ.
ಶತಮಾನಗಳಿಂದ, ಅಸಂಖ್ಯಾತ ಮುಸ್ಲಿಮ್ ಮಹಿಳೆಯರ ಸಾಧನೆಗಳನ್ನು ಮರೆಮಾಚಲಾಗಿದೆ ಮತ್ತು ಉದ್ದೇಶಪೂರ್ವಕವಾಗಿ ಅಲ್ಪವೇ ವರದಿ ಮಾಡಲಾಗಿದೆ. ಏಕೆಂದರೆ ಅವರಿಗೆ ಯೋಗ್ಯತೆ ಅಥವಾ ಪ್ರಭಾವವಿರಲಿಲ್ಲ ಎಂದಲ್ಲ. ಆದರೆ ಸಾಂಸ್ಕೃತಿಕ ನಿರೀಕ್ಷೆಗಳು, ಐತಿಹಾಸಿಕ ನಿರ್ಲಕ್ಷ್ಯ ಮತ್ತು ಸೀಮಿತ ದಾಖಲೆಯು ಅವರ ಕಥೆಗಳನ್ನು ಎಲ್ಲೋ ಕಳೆದುಹೋಗುವಂತೆ ಮಾಡಿದೆ.
ಶೇಖ್ ಅಕ್ರಮ್ ನದ್ವಿ ಅವರು ತಮ್ಮ “ಮುಹದ್ದಿತಾತ್” ಪುಸ್ತಕದಲ್ಲಿ, ಸುಮಾರು 8,000 ಮಹಿಳಾ ಹದೀಸ್ ವಿದ್ವಾಂಸರ (ಮುಹದ್ದಿತಾತ್) ಜೀವನಚರಿತ್ರೆಯನ್ನು ಅನೇಕ ವರ್ಷಗಳವರೆಗೆ ಅಧ್ಯಯನ ಮಾಡಿದ ನಂತರ “ಮನೆ v/s ವೃತ್ತಿ” ಎಂಬ ಈ ಆಧುನಿಕ ದ್ವಂದ್ವತೆಯನ್ನು ಸವಾಲು ಮಾಡಿದ್ದಾರೆ ಮತ್ತು ಅವರು ಒಂದು ಗಮನಾರ್ಹ ಮಾದರಿಯನ್ನು ಕಂಡುಹಿಡಿದಿದ್ದಾರೆ. ಈ ಮಹಿಳೆಯರಲ್ಲಿ ಯಾರೂ ತಮ್ಮ ಸಾಂಪ್ರದಾಯಿಕ ಪಾತ್ರಗಳನ್ನು ವಿದ್ವತ್ತ್ವಕ್ಕಿಂತ ಕೀಳು ಎಂದು ಪರಿಗಣಿಸಲಿಲ್ಲ ಅಥವಾ ತಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ಸಾಮಾಜಿಕ ಪ್ರತಿಷ್ಠೆಯ ಕಾರಣದಿಂದ ಕಳಪೆ ಎಂದೂ ಪರಿಗಣಿಸಲಿಲ್ಲ.
ವ್ಯತಿರಿಕ್ತವಾಗಿ, ಜ್ಞಾನವನ್ನು ಹುಡುಕುವುದು ಮತ್ತು ವಿಶಾಲ ಸಮುದಾಯಕ್ಕೆ ಸೇವೆ ಸಲ್ಲಿಸುವುದು ತಮ್ಮ ಸಾಮರ್ಥ್ಯ ಮತ್ತು ಅವಕಾಶವಿದ್ದಾಗ ತಮ್ಮ ಕರ್ತವ್ಯಗಳ ಭಾಗ ಎಂದು ಗುರುತಿಸುತ್ತಲೇ, ಅವರು ಕೌಟುಂಬಿಕ ಜವಾಬ್ದಾರಿಗಳ ಕಿರೀಟವನ್ನು ಗೌರವ ಮತ್ತು ವಿಶೇಷಾಧಿಕಾರವಾಗಿ ಧರಿಸಿದರು.
ನಾನು ಇತ್ತೀಚೆಗೆ ಡಾ. ಮುಹಿವುದ್ದೀನ್ ಗಾಝಿ ಅವರ ಉರ್ದು ಕೃತಿ “ಮುಸ್ಲಿಮ್ ಖವಾತೀನ್ ಆಕ್ಟಿವಿಸಮ್ ಕಿ ರಹೀನ್” ಓದುತ್ತಿದ್ದು, ಅವರು ಕಷ್ಟಕರವಾದ ಸಂದರ್ಭಗಳನ್ನು ಎದುರಿಸಿದ, ಅರ್ಥಪೂರ್ಣ ಕೊಡುಗೆಗಳನ್ನು ನೀಡಿದ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ಅಸಾಧಾರಣ ಸ್ಥಿರತೆಯನ್ನು ತೋರಿಸಿದ ಮುಸ್ಲಿಮ್ ಮಹಿಳೆಯರ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ವಿದ್ವತ್ತು ತಮ್ಮ ಕೌಟುಂಬಿಕ ಮತ್ತು ಸಾಮಾಜಿಕ ಬಾಧ್ಯತೆಗಳಿಗೆ ವಿರೋಧವಾಗಿ ಬೆಳೆಯುವುದಕ್ಕಿಂತ ಹೆಚ್ಚಾಗಿ ಅವರ ಕೌಟುಂಬಿಕ ಜವಾಬ್ದಾರಿಗಳ ಜೊತೆಗೆ ಬೆಳೆಯಬಹುದು ಎಂಬುದನ್ನು ಇದು ತೋರಿಸುತ್ತದೆ.
ಈ ಎರಡು ಸ್ಪರ್ಧಾತ್ಮಕ ನಿರೂಪಣೆಗಳ ನಡುವೆ ಸಿಲುಕಿರುವ ಅನೇಕ ಮಹಿಳೆಯರು, ತಾವು ನಿಜವಾಗಿಯೂ ಯಾರು ಎಂದು ಯೋಚಿಸುತ್ತಾ ಮತ್ತು ಸ್ತ್ರೀಯಾಗಿ ತಮ್ಮ ಅಸ್ಮಿತೆಯನ್ನು ಪ್ರಶ್ನಿಸುತ್ತಾ ಒಂದು ಅಡ್ಡದಾರಿಯಲ್ಲಿ ತಮ್ಮನ್ನು ಕಂಡುಕೊಳ್ಳುತ್ತಾರೆ.
ಸಾಮೂಹಿಕ ಮರೆವು ಇನ್ನು ಸಾಕು – ಇತಿಹಾಸದ ಪುಸ್ತಕವನ್ನು ಕೊಡವಬೇಕಾದ ಸಮಯ ಬಂದಿದೆ. ಇಸ್ಲಾಮೀ ಇತಿಹಾಸವನ್ನು ರೂಪಿಸಲು ಸಹಾಯ ಮಾಡಿದ ಮತ್ತು ಒಂದು ಮಾತಿಗಿಂತ ಹೆಚ್ಚಿನ ಉಲ್ಲೇಖಕ್ಕೆ ಅರ್ಹರಾಗಿರುವ ಅಸಾಧಾರಣ ಮುಸ್ಲಿಮ್ ಮಹಿಳೆಯರನ್ನು ಮತ್ತೊಮ್ಮೆ ಅನ್ವೇಷಿಸೋಣ.
ಕಳೆದ 14 ಶತಮಾನಗಳಿಂದ, ಸಾವಿರಾರು ಮುಸ್ಲಿಮ್ ಮಹಿಳೆಯರು ವಿದ್ವತ್ತು, ನಾಯಕತ್ವ, ಸೇವೆ, ಶಿಕ್ಷಣ ಮತ್ತು ತ್ಯಾಗದ ಮೂಲಕ ಅಸಾಧಾರಣ ಛಾಪು ಮೂಡಿಸಿದ್ದಾರೆ. ಒಂದು ಲೇಖನದಲ್ಲಿ ಎಲ್ಲರನ್ನು ಪಟ್ಟಿ ಮಾಡುವುದು ಅಸಾಧ್ಯ. ಆದ್ದರಿಂದ ಇಸ್ಲಾಮೀ ಇತಿಹಾಸದ ಹಾದಿಯನ್ನು ರೂಪಿಸಲು ಸಹಾಯ ಮಾಡಿದ ಕೆಲವು ಅತ್ಯಂತ ಪ್ರಭಾವಶಾಲಿ ಮಹಿಳೆಯರನ್ನು ನಾವು ನೋಡೋಣ.
ಪ್ರವಾದಿಯವರ(ಸ) ಜೀವಿತಾವಧಿ
ಪ್ರವಾದಿವರ್ಯ(ಸ) ಕಾಲದಲ್ಲಿಯೇ ಅನೇಕ ಮಹಿಳೆಯರು ಉದ್ದಾತ ಸೇವೆ ನೀಡಿದ್ದಾರೆ.
ರುಫೈದಾ ಅಲ್ ಅಸ್ಲಾಮಿಯ
ಮೊದಲ ಮುಸ್ಲಿಮ್ ನರ್ಸ್, ಆರೋಗ್ಯ ಕ್ಷೇತ್ರದ ಅಗ್ರಗಣ್ಯೆ ಎಂದೂ ಪರಿಗಣಿಸಲ್ಪಟ್ಟಿದ್ದಾರೆ. ರುಫೈದಾ ರವರು ವೃತ್ತಿಯಿಂದ ವೈದ್ಯರಾಗಿದ್ದ ತಮ್ಮ ತಂದೆಯಿಂದ ವೈದ್ಯಕೀಯ ಜ್ಞಾನವನ್ನು ಪಡೆದರು. ಮದೀನಾದಲ್ಲಿರುವ ಪ್ರವಾದಿಯವರ(ಸ) ಮಸೀದಿಯ ಬಳಿ ಡೇರೆ ತರಹದ ರಚನೆಯಲ್ಲಿ ಕ್ಲಿನಿಕ್ ಶುರು ಮಾಡಿ ಗಾಯಗೊಂಡವರಿಗೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲು ಹೆಸರುವಾಸಿಯಾಗಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಕೆಲಸದ ಬಗ್ಗೆ ಅತ್ಯಂತ ಉತ್ಸಾಹ ಹೊಂದಿದ್ದರು ಮತ್ತು ವೈದ್ಯಕೀಯ ಕಾಳಜಿ, ಸಾಮಾಜಿಕ ಸಹಕಾರ, ರೋಗಿಗಳ ಸಹಾಯಕ್ಕಾಗಿ ತರಬೇತಿ ಗುಂಪುಗಳು ಮತ್ತು ಸಂಘಟಿತ ನರ್ಸಿಂಗ್ ಸೇವೆಯ ಸಮಗ್ರ ಮಾದರಿಯನ್ನು ರಚಿಸುವಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದರು.
ಆರೋಗ್ಯ ವಲಯಕ್ಕೆ ಅವರ ಆರಂಭಿಕ ಕೊಡುಗೆಗಳ ಹೊರತಾಗಿ, ಅವರನ್ನು ಶಿಕ್ಷಣತಜ್ಞೆ, ಆಡಳಿತಗಾರ್ತಿ ಮತ್ತು ಸಂಘಟಕಿ ಎಂದೂ ಕೊಂಡಾಡಲಾಗುತ್ತದೆ. ರುಫೈದಾರ ಪರಂಪರೆಯು ಅವರು ತೋರಿದ ಸಹಾನುಭೂತಿ, ಸಾರ್ವಜನಿಕ ಸೇವೆಗೆ ಬದ್ಧತೆ, ಕ್ಲಿನಿಕಲ್ ಪರಿಣತಿ, ತರಬೇತಿ ಕಾರ್ಯಕ್ರಮಗಳಿಗೆ ಭಾರೀ ಒತ್ತು ಮತ್ತು ಆರೋಗ್ಯ ಸೇವಾ ವಿತರಣಾ ವ್ಯವಸ್ಥೆಯ ಸ್ಥಾಪನೆಯಿಂದ ವ್ಯಾಖ್ಯಾನಿಸಲ್ಪಟ್ಟಿದೆ.
ನರ್ಸಿಂಗ್ ವೃತ್ತಿಯ ಮೇಲೆ ಅವರ ಗಮನಾರ್ಹ ಪ್ರಭಾವವನ್ನು ಗುರುತಿಸಿ, ಅವರ ಜೀವಿತಾವಧಿಯ ಹದಿನಾಲ್ಕು ಶತಮಾನಗಳಿಗಿಂತ ಹೆಚ್ಚು ಕಾಲದ ನಂತರವೂ ಅವರ ಕೊಡುಗೆಗಳ ಶಾಶ್ವತ ಪ್ರಭಾವವನ್ನು ಪ್ರದರ್ಶಿಸುತ್ತಾ, ವಿವಿಧ ಸಮಕಾಲೀನ ಪ್ರಶಸ್ತಿಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಪದಕಗಳನ್ನು ಅವರ ಗೌರವಾರ್ಥವಾಗಿ ಹೆಸರಿಸಲಾಗಿದೆ.
ಅಲ್ ಶಿಫಾ ಬಿಂತ್ ಅಬ್ದುಲ್ಲಾ
ಮಕ್ಕಾದ ಆರಂಭಿಕ ಅವಧಿಯಲ್ಲಿ ಸಾಕ್ಷರ ಮಹಿಳೆಯರಲ್ಲಿ ಇವರು ಗಮನಾರ್ಹರು. ಪ್ರವಾದಿಯವರ(ಸ) ಒಡನಾಡಿಯಾದ ಇವರು ತಮ್ಮ ಬೋಧನಾ ಕೌಶಲ್ಯ, ಸಾರ್ವಜನಿಕ ಆಡಳಿತ, ಶುಶ್ರೂಷೆ ಮತ್ತು ಸಾಕ್ಷರತೆಗಾಗಿ ನೆನಪಿಸಲ್ಪಡುತ್ತಾರೆ. ಹಫ್ಸಾ ಬಿಂತ್ ಉಮರ್ (ರ) ಅವರಿಗೆ ಓದಲು ಮತ್ತು ಬರೆಯಲು ಕಲಿಸಿದ ಶ್ರೇಯ ಕೂಡ ಇವರಿಗೆ ಸಲ್ಲುತ್ತದೆ.
ತಮ್ಮ ಕ್ಷೇತ್ರದಲ್ಲಿ ಎಷ್ಟೊಂದು ಅರಿವನ್ನು ಪಡೆದಿದ್ದರೆಂದರೆ, ಎರಡನೇ ಖಲೀಫರಾದ ಉಮರ್ ಇಬ್ನ್ ಅಲ್-ಖತ್ತಾಬ್ ಅವರು ವಾಣಿಜ್ಯ ಮತ್ತು ಮಾರುಕಟ್ಟೆ ವಿಷಯಗಳಲ್ಲಿ ಅಲ್ ಶಿಫಾ ಬಿಂತ್ ಅಬ್ದುಲ್ಲಾ ರವರ ಪರಿಣತಿಯ ಲಾಭ ಪಡೆದುಕೊಳ್ಳುತ್ತಿದ್ದರು.
ಶಿಕ್ಷಣತಜ್ಞೆ, ಸಲಹೆಗಾರ್ತಿ, ಶುಶ್ರೂಷಕಿ ಮತ್ತು ಮೇಲ್ವಿಚಾರಕಿ ಎಂಬ ಕೌಶಲ್ಯಗಳ ಸಂಯೋಜನೆಯನ್ನು ಹೊಂದಿದ್ದರು ಎಂಬರ್ಥದಲ್ಲಿ ಅವರು ಅನನ್ಯರಾಗಿದ್ದರು.
ಸಾಕ್ಷರತೆ ಮತ್ತು ಪ್ರಾಯೋಗಿಕ ವ್ಯವಹಾರಗಳಲ್ಲಿನ ಪರಿಣತಿಯಿಂದಾಗಿ ಮುಸ್ಲಿಮ್ ಮಹಿಳೆಯರಿಗೆ ಸಾರ್ವಜನಿಕ ವಲಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ಥಾನವನ್ನು ಹೇಗೆ ನೀಡಲಾಗಿತ್ತು ಎಂಬುದನ್ನು ಚಿತ್ರಿಸಲು ಅವರ ಜೀವನವು ಒಂದು ಉತ್ತಮ ಉದಾಹರಣೆಯಾಗಿದೆ.
ರಾಣಿಯರು ಮತ್ತು ನಾಯಕಿಯರು
ಅರ್ವಾ ಅಲ್ ಸುಲೈಹಿದ್
ಸುಲೈಹಿದ್ ರಾಜವಂಶದ ಸಮಯದಲ್ಲಿ ಯೆಮೆನ್ನಲ್ಲಿ ಜನಿಸಿದ ಅವರು ಆಡಳಿತ, ರಾಜ್ಯಶಾಸ್ತ್ರ, ಶಿಕ್ಷಣ ಮತ್ತು ಸಾರ್ವಜನಿಕ ಸೇವೆಗೆ ಹೆಸರುವಾಸಿಯಾಗಿದ್ದರು. ಸರಿಸುಮಾರು 50 ವರ್ಷಗಳ ಕಾಲ ಯೆಮೆನ್ ಅನ್ನು ಆಳಿದ ಮೊದಲ ಮುಸ್ಲಿಮ್ ಮಹಿಳೆ ಇವರಾಗಿರುವುದರಿಂದ ಅತ್ಯಂತ ದೀರ್ಘಕಾಲ ಆಳಿದ ಮುಸ್ಲಿಮ್ ರಾಣಿಯರಲ್ಲಿ ಒಬ್ಬರು ಎಂಬ ಬಿರುದನ್ನು ಗಳಿಸಿದರು. ಅರ್ವಾ ಅಲ್ ಸುಲೈಹಿದ್ ರವರ ಆಳ್ವಿಕೆಯು ರಾಜಕೀಯ ಸ್ಥಿರತೆ, ಶೈಕ್ಷಣಿಕ ಪೋಷಣೆ, ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಆಡಳಿತಾತ್ಮಕ ಉತ್ಕೃಷ್ಟತೆಗಾಗಿ ಆಚರಿಸಲ್ಪಡುತ್ತದೆ. ಯೆಮೆನ್ನಾದ್ಯಂತ ವಿದ್ವಾಂಸರು, ರಾಜ್ಯಪಾಲರು ಮತ್ತು ಆಡಳಿತಗಾರರ ದೊಡ್ಡ ಬೆಂಬಲಿಗರಾಗಿದ್ದರು.
ಜಿಬಾಲ್ನಲ್ಲಿ ಪ್ರಸಿದ್ಧವಾದ ರಾಣಿ ಅರ್ವಾ ಮಸೀದಿಯನ್ನು ನಿರ್ಮಿಸಿದರು, ಅದು ಅವರ ಸಮಾಧಿಯ ನೆಲೆಯಾಗಿದೆ. ಸುಧಾರಿತ ಆರ್ಥಿಕ ಅಭಿವೃದ್ಧಿ ಸಾಧನಗಳನ್ನು ಅಳವಡಿಸಿಕೊಂಡರು ಮತ್ತು ಯೆಮೆನ್ ಅನ್ನು ವಿಶಾಲವಾದ ಇಸ್ಲಾಮಿಕ್ ರಾಜ್ಯಗಳಿಗೆ ಸಂಪರ್ಕಿಸಿದರು. ಹೀಗಾಗಿ ವ್ಯಾಪಾರ ಜಾಲಗಳನ್ನು ಬಲಪಡಿಸಿದರು.
ಚಿಕ್ಕಪ್ಪ ಮತ್ತು ಚಿಕ್ಕಮ್ಮ ಆಕೆಯನ್ನು ಬೆಳೆಸಿದ್ದರು ಮತ್ತು ಆಕೆಯನ್ನು ಅತ್ಯಂತ ಬುದ್ಧಿವಂತಳು ಎಂದು ವರ್ಣಿಸಿದರು. ರಾಣಿ ಅರ್ವಾ ರಾಜತಾಂತ್ರಿಕತೆಯ ಜಾಣ್ಮೆಯನ್ನು ಹೊಂದಿದ್ದರು, ಇದು ಅವರ ಆಡಳಿತಾತ್ಮಕ ಸಮರ್ಥನೆಗೆ ಕಾರಣವಾಯಿತು ಮತ್ತು ಅವರನ್ನು ಮಧ್ಯಕಾಲೀನ ಯೆಮೆನ್ ಅನ್ನು ರೂಪಿಸಿದ ರಾಣಿಯನ್ನಾಗಿ ಮಾಡಿತು.
ತುರ್ಹಾನ್ ಸುಲ್ತಾನ್
ಹತೀಜೆ(ಖತೀಜಾ) ತುರ್ಹಾನ್ ಸುಲ್ತಾನ್ ಎಂದೂ ಕರೆಯಲ್ಪಡುವ ಇವರು ಅಟೋಮನ್ ಸಾಮ್ರಾಜ್ಯದ ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರಾಗಿದ್ದರು. ಮಹಿಳಾ ಸುಲ್ತಾನರ ಕಾಲದಲ್ಲಿ, ಅವರು ಸಾಮ್ರಾಜ್ಯದ ರಾಜಕೀಯದಲ್ಲಿ ಮುಂಚೂಣಿಯ ಪಾತ್ರವನ್ನು ವಹಿಸಿದರು.
ತುರ್ಹಾನ್ ಸುಲ್ತಾನ್ ರವರ ಮಗ ಸುಲ್ತಾನ್ ಮಹ್ಮದ್ IV ಸಿಂಹಾಸನಕ್ಕೇರಿದಾಗ ಆರು ವರ್ಷ ವಯಸ್ಸಿನವರಾಗಿದ್ದ ಅವರು ತಮ್ಮ ಮಗನಿಗೆ ರೀಜೆಂಟ್ ಆಗಿ ಸೇವೆ ಸಲ್ಲಿಸಿದರು. ತೀವ್ರ ಆಂತರಿಕ ಸಂಘರ್ಷದ ಅವಧಿಯಲ್ಲಿ ರಾಜಕೀಯ ಸ್ಥಿರತೆಯನ್ನು ಮರಳಿ ತರುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.
ರಾಜಕೀಯ ಪ್ರಭಾವದ ಆಚೆಗೆ, ತುರ್ಹಾನ್ ಸುಲ್ತಾನ್ ಸಾರ್ವಜನಿಕ ಸೇವೆಯ ವಿಶಿಷ್ಟ ಪೋಷಕರಾಗಿದ್ದರು. ವಕ್ಫ್ (ದತ್ತಿ ಸಂಸ್ಥೆಗಳು) ಸಂಸ್ಥೆಯ ಮೂಲಕ, ಮಸೀದಿಗಳು, ಶಾಲೆಗಳು, ಮಾರುಕಟ್ಟೆಗಳು, ಕಾರಂಜಿಗಳು ಮತ್ತು ಇತರ ದತ್ತಿ ಸಂಸ್ಥೆಗಳ ನಿರ್ಮಾಣವನ್ನು ಮಾಡಿದರು. ಒಟೋಮನ್ ಸಾಮ್ರಾಜ್ಯದಾದ್ಯಂತ ಶಿಕ್ಷಣ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣದಲ್ಲಿ ಶಾಶ್ವತ ಪರಂಪರೆಯನ್ನು ಉಳಿಸಿದರು.
ಫಿಖ್ ಮತ್ತು ಹದೀಸ್ ವಿದ್ವಾಂಸರು
ಫಾತಿಮಾ ಬಿಂತ್ ಮುಹಮ್ಮದ್ ಅಲ್-ಸಮರ್ಖಂದಿ
12 ನೇ ಶತಮಾನದ ಪ್ರಸಿದ್ಧ ಮಹಿಳಾ ನ್ಯಾಯಶಾಸ್ತ್ರಜ್ಞೆ ಮತ್ತು ಮಧ್ಯಕಾಲೀನ ಇಸ್ಲಾಮೀ ಜಗತ್ತಿನ ಮಹಿಳಾ ವಿದ್ವಾಂಸರಲ್ಲಿ ಪ್ರಮುಖರು. ತಂದೆಯ ತರಬೇತಿಯಡಿಯಲ್ಲಿ ಬೆಳೆದ ಇವರು, ನಂತರ ಅಲೆಪ್ಪೊದ ಹೆಸರಾಂತ ವಿದ್ವಾಂಸರ ಜೊತೆ ಸಂಬಂಧಗಳಿಗೆ ಕಾರಣವಾಯಿತು. ಫಿಖ್(ಕರ್ಮಶಾಸ್ತ್ರ)ನಲ್ಲಿ ಅವರ ಪರಿಣತಿಯು ಪ್ರಮುಖ ಹನಫಿ ದೃಷ್ಟಿಕೋನದ ಮೇಲೆ ಆಳ ಪ್ರಭಾವ ಬೀರಿತು.
ಫಾತಿಮಾ ರವರ ತಂದೆ ಮುಹಮ್ಮದ್ ಇಬ್ನ್ ಅಹ್ಮದ್ ಅಲ್-ಸಮರ್ಖಂದಿ ಪ್ರಸಿದ್ಧ ಹನಫಿ ನ್ಯಾಯಶಾಸ್ತ್ರಜ್ಞರಾಗಿದ್ದರು. ತಂದೆಯವರ ಪ್ರಭಾವಶಾಲಿ ಕಾನೂನು ಕೈಪಿಡಿ ‘ತುಹ್ಫತ್-ಅಲ್ ಫುಕಾಹಾ’ ಅನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿದ್ದರು.
ತಂದೆ ಮತ್ತು ಪತಿಯ ಜೊತೆಯಲ್ಲಿಯೇ ನೆನಪಿಸಿಕೊಳ್ಳುವ ಪ್ರಮುಖ ಮುಸ್ಲಿಮ್ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಇವರ ಪಾಂಡಿತ್ಯವು ಹನಫಿ ನ್ಯಾಯಶಾಸ್ತ್ರವನ್ನು ರೂಪಿಸಲು ಸಹಾಯ ಮಾಡಿದೆ.
ಅಮ್ರಾ ಬಿಂತ್ ಅಬ್ದುರ್ ರೆಹಮಾನ್
ಅಮ್ರಾ ಮದೀನಾದ ಅನ್ಸಾರ್ ಕುಟುಂಬದಲ್ಲಿ ಜನಿಸಿದರು. ಮದೀನಾದಿಂದ ಮೊದಲು ಇಸ್ಲಾಮ್ ಸ್ವೀಕಾರ ಮಾಡಿರುವವರಲ್ಲಿ ಒಬ್ಬರಾದ ಅಸ್ದ್ ಇಬ್ನ್ ಝುರಾರಾ ಅವರ ಮೊಮ್ಮಗಳು.
ಆಯಿಶಾ ಬಿಂತ್ ಅಬೂಬಕರ್(ರ) ಅವರ ಮಾರ್ಗದರ್ಶನದಲ್ಲಿ ಬೆಳೆದರು. ಹಾಗಾಗಿ ಹದೀಸ್ ಮತ್ತು ಫಿಖ್ ಬಗ್ಗೆ ಆಳವಾದ ಜ್ಞಾನವನ್ನು ಪಡೆದರು. ಆಯಿಶಾ(ರ) ಅವರ ಪ್ರಮುಖ ವಿದ್ಯಾರ್ಥಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಮತ್ತು ಮುಹದ್ದಿತಾ ಮತ್ತು ಫಕಿಹ್ ಎರಡೂ ಕ್ಷೇತ್ರದಲ್ಲಿಯೂ ಗುರುತಿಸಲ್ಪಟ್ಟಿದ್ದಾರೆ. ಅಮ್ರಾ ಅವರ ಜ್ಞಾನದ ಆಳವು ಎಷ್ಟು ಅಸಾಧಾರಣವಾಗಿತ್ತೆಂದರೆ ನಂತರದ ವಿದ್ವಾಂಸರು ಅದನ್ನು “ಜ್ಞಾನದ ಸಾಗರ” ಎಂದು ಪ್ರಶಂಶಿಸಿದರು.
ಅಮ್ರಾ ಅವರ ಪ್ರಭಾವವು ಕೇವಲ ಹದೀಸ್ ಪ್ರಸರಣಕ್ಕೆ ಸೀಮಿತವಾಗಿರಲಿಲ್ಲ. ವಿದ್ವಾಂಸರು ಮತ್ತು ನ್ಯಾಯಾಧೀಶರು ತೀರ್ಪುಗಳನ್ನು ನೀಡುವಾಗ ಅವರ ಅಭಿಪ್ರಾಯಗಳನ್ನು ಸ್ವೀಕರಿಸುವವರೆಗೆ ವಿಸ್ತರಿಸಿತು. ಇದು ಮದೀನಾದ ವಿದ್ವಾಂಸರ ಸಮುದಾಯದಲ್ಲಿ ಅವರು ಹೊಂದಿದ್ದ ಪ್ರಭಾವಿ ಸ್ಥಾನವನ್ನು ವಿವರಿಸುತ್ತದೆ.
ಅಧ್ಯಾತ್ಮಿಕ ನಾಯಕರು
ರಬಿಯಾ ಅಲ್ ಅದವಿಯ್ಯಾ
ಪ್ರಸ್ತುತ ಇರಾಕ್ನಲ್ಲಿ ರಬಿಯಾ ಅಲ್ ಅದಾವಿಯಾ ಜನಿಸಿದರು. ಇಸ್ಲಾಮಿನ ಆಧ್ಯಾತ್ಮಿಕತೆ ಮತ್ತು ತಪಸ್ವಿ ಇತಿಹಾಸದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಅಲ್ಲಾಹನನ್ನು ಆಶೆ, ಭಯ ಅಥವಾ ಶಿಕ್ಷೆಗಾಗಿ ಅಲ್ಲ, ಬದಲಾಗಿ ಆತನಿಗಾಗಿ ಮತ್ತು ಆತನ ಸಂಪ್ರೀತಿಗಾಗಿ ಆರಾಧಿಸುವುದು ಅವರ ಬೋಧನೆಯ ತಿರುಳಾಗಿದೆ. ಆಧ್ಯಾತ್ಮಿಕ ಜೀವನದ ಹೃದಯಭಾಗದಲ್ಲಿ ಅಲ್ಲಾಹನ ಮೇಲೆ ಪರಿಶುದ್ಧ ಪ್ರೀತಿಯನ್ನು ಇರಿಸುವ ‘ಮುಹಬ್ಬಾ’ ಗಾಗಿ ನೆನಪಿಸಿಕೊಳ್ಳುತ್ತಾರೆ.
ಸೂಫಿ ಬರಹಗಾರರು ಅವರನ್ನು ಅಲ್ಲಾಹನ ಕಡೆಗೆ ಅಚಲವಾದ ಭಕ್ತಿಯ ಸಾಕಾರರೂಪವೆಂದು ಚಿತ್ರಿಸುತ್ತಾರೆ. ಅಸಂಖ್ಯಾತ ಕಥೆಗಳು, ಕವಿತೆಗಳು, ಪ್ರಾರ್ಥನೆಗಳು ಮತ್ತು ಪವಾಡ ನಿರೂಪಣೆಗಳು ಅವರೊಂದಿಗೆ ಸಂಬಂಧ ಹೊಂದಿವೆ.
ಶಿಕ್ಷಣತಜ್ಞರು ಮತ್ತು ಶಿಕ್ಷಣ ಸಂಸ್ಥೆಗಳ ನಿರ್ಮಾತೃಗಳು
ಫಾತಿಮಾ ಅಲ್ ಫಹಿರಿ
ಫಾತಿಮಾ ಅಲ್ ಫಹಿರಿ ರವರ ದೂರದೃಷ್ಟಿ ಮತ್ತು ಲೋಕೋಪಕಾರವು ಮುಸ್ಲಿಮ್ ಸಮುದಾಯದ ಬೌದ್ಧಿಕ ನೆಲೆಯನ್ನು ಪರಿವರ್ತಿಸಿತು. ಇಸ್ಲಾಮಿನ ಇತಿಹಾಸದಲ್ಲಿ ಮಹಿಳೆಯರಿಗೆ ಶಿಕ್ಷಣದ ಶ್ರೇಷ್ಠ ಪೋಷಕಿ ಎಂದು ಕರೆಯಲಾಗುತ್ತದೆ.
ಮೊರಾಕೋಯಿ ಫೆಜ್ನಲ್ಲಿರುವ ವಿಶ್ವದ ಮೊದಲ ವಿಶ್ವವಿದ್ಯಾಲಯ ಅಲ್-ಖರಾವಿಯಿನ್ ಸ್ಥಾಪನೆಯ ಶ್ರೇಯ ಇವರಿಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ಜೀವ ವಿಜ್ಞಾನ, ಮಾನವಿಕ ಶಾಸ್ತ್ರ, ವಾಣಿಜ್ಯ ಮತ್ತು ಇತರ ವಿಭಾಗಗಳನ್ನು ವಿಶ್ವವಿದ್ಯಾಲಯವು ತನ್ನ ಪಠ್ಯಕ್ರಮದಲ್ಲಿ ಸೇರಿಸಿತು. ಇಷ್ಟೇ ಅಲ್ಲದೇ ವಿವಿಧ ಶೈಕ್ಷಣಿಕ ಕೇಂದ್ರಗಳನ್ನು ಸ್ಥಾಪಿಸಿದರು, ಅನೇಕ ವಿದ್ವಾಂಸರು ಇಸ್ಲಾಮಿಕ್ ವಿಜ್ಞಾನ ಮತ್ತು ಭಾಷೆಗಳನ್ನು ಈ ಕೇಂದ್ರಗಳಲ್ಲಿ ಅಧ್ಯಯನ ಮಾಡಿದರು.
ಫಾತಿಮಾ ಅಲ್ ಫಹಿರಿ ಅವರ ಲೋಕೋಪಕಾರದ ಪ್ರಯತ್ನಗಳು ಬಹಳಷ್ಟು ಶೈಕ್ಷಣಿಕ ಸಂಸ್ಥೆಗಳನ್ನು ಸೃಷ್ಟಿಸಿದವು, ಇದರಿಂದ ಇಂದಿನ ತಲೆಮಾರುಗಳ ವರೆಗೂ ಪ್ರಯೋಜನ ಸಿಗುತ್ತಿದೆ.
ನಾನಾ ಅಸ್ಮಾಉ
ನಾನಾ ಅಸ್ಮಾಉ 1793 ರಲ್ಲಿ ಜನಿಸಿದರು. ಅವರು ಆಫ್ರಿಕನ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರು. ವಿದ್ವಾಂಸರು, ಕವಿ, ಶಿಕ್ಷಣತಜ್ಞೆ ಮತ್ತು ಸಾಮಾಜಿಕ ಸುಧಾರಕಿ ಹೀಗೆ ಹಲವು ಗರಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸೊಕೊಟೊ ಖಿಲಾಫತ್ತಿನ ಕಾಲದಲ್ಲಿ ಮಹಿಳೆಯರ ಇಸ್ಲಾಮಿಕ್ ಶಿಕ್ಷಣವನ್ನು ಸುಧಾರಿಸುವ ಮತ್ತು ವಿಸ್ತರಿಸುವಲ್ಲಿ ಪ್ರಮುಖ ಕಾರ್ಯವನ್ನು ನಿರ್ವಹಿಸಿದರು.
ಪಶ್ಚಿಮ ಆಫ್ರಿಕಾದ ಮಹಿಳೆಯರಿಗಾಗಿ ಇಸ್ಲಾಮಿಕ್ ಅಧ್ಯಯನದ ಸಂಘಟಿತ ವ್ಯವಸ್ಥೆಯನ್ನು ಸ್ಥಾಪಿಸಿದ ಮೊದಲ ವ್ಯಕ್ತಿ. ಮಹಿಳೆಯರಿಗೆ ಕುರ್ಆನ್, ಇಸ್ಲಾಮಿಕ್ ವಿಜ್ಞಾನಗಳು, ನೈತಿಕತೆ ಇತ್ಯಾದಿಗಳನ್ನು ಕಲಿಸಲು ‘ಯಾನ್ ತಾರು’ ಜಾಲವನ್ನು ಸ್ಥಾಪಿಸಿದರು; ಆ ಮೂಲಕ ಶಿಕ್ಷಕರನ್ನು ತರಬೇತಿ ಮಾಡಿ ದೇಶದ ಗ್ರಾಮೀಣ ಭಾಗಗಳಿಗೆ ಕಳುಹಿಸಿದರು.
ಫಿಖ್, ನೈತಿಕ ಮೌಲ್ಯಗಳು, ದೇವತಾಶಾಸ್ತ್ರ, ಇಸ್ಲಾಮಿಕ್ ಇತಿಹಾಸ, ಕಾವ್ಯ, ಫುಲಾ ಭಾಷೆ, ಹೌಸಾ ಭಾಷೆ ಇತ್ಯಾದಿಗಳ ಕುರಿತು 60 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
ವಿಜ್ಞಾನಿಗಳು ಮತ್ತು ಬುದ್ಧಿಜೀವಿಗಳು
ಕಾರ್ಡೋಬಾದ ಲುಬ್ನಾ
ಕಾರ್ಡೋಬಾದ ಲುಬ್ನಾ ಅಲ್-ಅಂದಲುಸ್ (ಇಸ್ಲಾಮಿಕ್ ಸ್ಪೇನ್) ನ ಅತ್ಯಂತ ಯಶಸ್ವಿ ಮಹಿಳೆಯರಲ್ಲಿ ಒಬ್ಬರಾಗಿದ್ದರು. ಉಮಯ್ಯದ್ ಖಿಲಾಫತ್ತಿನ ಸಮಯದಲ್ಲಿ ಜನಿಸಿದರು ಮತ್ತು ಅನೇಕ ಭಾಷೆಗಳಲ್ಲಿ ಔನ್ನತ್ಯ ಸಾಧಿಸಿದರು. ಗಣಿತಶಾಸ್ತ್ರ, ಕ್ಯಾಲಿಗ್ರಫಿ ಮತ್ತು ಗ್ರಂಥಾಲಯ ಆಡಳಿತ ಕೆಲಸದಲ್ಲಿ ಹೆಚ್ಚು ನುರಿತರಾಗಿದ್ದರು. ಹೀಗಾಗಿ ಉಮಯ್ಯದ್ ಖಿಲಾಫತ್ತಿನ ಸಮಯದಲ್ಲಿ ಬೌದ್ಧಿಕ ಪ್ರಯತ್ನದಲ್ಲಿ ಫಲಪ್ರದ ಪಾತ್ರವನ್ನು ವಹಿಸಿದರು.
ಮಧ್ಯಕಾಲೀನ ಜಗತ್ತಿನಲ್ಲಿ ಲಕ್ಷಾಂತರ ಹಸ್ತಪ್ರತಿಗಳನ್ನು ಹೊಂದಿರುವ ಜ್ಞಾನದ ಅತಿ ದೊಡ್ಡ ಭಂಡಾರಗಳಲ್ಲಿ ಒಂದಾದ ಕಾರ್ಡೋಬಾದ ರಾಜಮನೆತನದ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದರು. ನಿಖರತೆ ಮತ್ತು ವಿದ್ವತ್ಪೂರ್ಣ ಪರಿಣತಿಗೆ ಹೆಸರುವಾಸಿಯಾದ ಅವರು, ಹಸ್ತಪ್ರತಿಗಳನ್ನು ನಿಖರವಾಗಿ ನಕಲು ಮಾಡುವ, ಸಂಪಾದಿಸುವ ಮತ್ತು ಕ್ಯಾಟಲಾಗ್ ಮಾಡುವ ಮೂಲಕ ಜ್ಞಾನವನ್ನು ಸಂರಕ್ಷಿಸುವ ಮತ್ತು ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗಾಗಿ ಇಸ್ಲಾಮಿಕ್ ಸ್ಪೇನ್ನ ಬೌದ್ಧಿಕ ಪರಂಪರೆಗೆ ಕೊಡುಗೆ ನೀಡಿದರು.
ಇಸ್ಲಾಮಿಕ್ ನಾಗರಿಕತೆಯ ಬೌದ್ಧಿಕ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡಿದ ವಿಶಿಷ್ಟ ವ್ಯಕ್ತಿತ್ವವಾಗಿ ಅವರನ್ನು ನೆನಪಿಸಿಕೊಳ್ಳಲಾಗುತ್ತದೆ.
20-21 ನೇ ಶತಮಾನ
ಮರ್ಯಮ್ ಜಮೀಲಾ
ಅಮೆರಿಕದಲ್ಲಿ ಜನಿಸಿದ ಬರಹಗಾರ್ತಿಯಾಗಿದ್ದು, ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ ನಂತರ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬರಾದರು. 30 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ, ಅದರಲ್ಲಿ ತುಲನಾತ್ಮಕ ಧರ್ಮದ ಕುರಿತಾದ ಅವರ ಪ್ರಬಂಧಗಳು ಬಹಳಷ್ಟು ಮೆಚ್ಚುಗೆಯನ್ನು ಪಡೆದಿವೆ.
ಅವರ ಪುಸ್ತಕಗಳ ಪಟ್ಟಿಯಲ್ಲಿ: ಇಸ್ಲಾಮ್ ಆಂಡ್ ಮಾಡರ್ನಿಸಮ್, ಇಸ್ಲಾಮ್ ವರ್ಸಸ್ ದಿ ವೆಸ್ಟ್, ವೆಸ್ಟ್ರನ್ ಸಿವಿಲೈಸೇಶನ್ ಕಂಡೆಮ್ಡ್ ಬೈ ಇಟ್ಸೆಲ್ಫ್, ಇಸ್ಲಾಮ್ ಇನ್ ಥಿಯರಿ ಅಂಡ್ ಪ್ರಾಕ್ಟೀಸ್ ಸೇರಿವೆ. ಮರ್ಯಮ್ ಜಮೀಲಾ ಅವರ ಬರಹಗಳು ಇಸ್ಲಾಮ್ ಮತ್ತು ಆಧುನಿಕ ಜಗತ್ತಿನ ಬಗ್ಗೆ ವಿಶೇಷವಾಗಿ ಇಂಗ್ಲಿಷ್ ಭಾಷೆ ಮಾತನಾಡುವ ಪ್ರೇಕ್ಷಕರ ನಡುವೆ ಚರ್ಚೆಗಳು ಮತ್ತು ವಾದಗಳನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದವು.
ಆಧುನಿಕ ಜಗತ್ತಿನ ಅತ್ಯಂತ ಪ್ರಮುಖ ಇಂಗ್ಲಿಷ್ ಭಾಷೆ ಮಾತನಾಡುವ ಮಹಿಳಾ ಮುಸ್ಲಿಮ್ ಬುದ್ಧಿಜೀವಿಗಳಲ್ಲಿ ಒಬ್ಬರೆಂದು ಅವರನ್ನು ನೆನಪಿಸಿಕೊಳ್ಳಲಾಗುತ್ತದೆ.
ಈ ವಿಶಿಷ್ಟ ಮಹಿಳೆಯರ ಜೀವನವು ಕುಟುಂಬಕ್ಕೆ ಬದ್ಧತೆ ಮತ್ತು ಸಮಾಜಕ್ಕೆ ಕೊಡುಗೆ ನೀಡುವುದನ್ನು ಸ್ಪರ್ಧಾತ್ಮಕ ಜವಾಬ್ದಾರಿಗಳಾಗಿ ಅಲ್ಲ, ಬದಲಾಗಿ ವಿಶ್ವಾಸದ ಪೂರಕ ಗುರುತುಗಳಾಗಿ ನೋಡಲಾಗುತ್ತದೆ ಎಂಬುದನ್ನು ತೋರಿಸುತ್ತದೆ.
ತಮ್ಮ ಮನೆಯಲ್ಲಿ ಬಲವಾದ ಅಡಿಪಾಯವನ್ನು ಹಾಕುವ ಮೂಲಕ ಮತ್ತು ಅದೇ ಸಮಯದಲ್ಲಿ ವಿದ್ವತ್ತು, ಶಿಕ್ಷಣ, ವ್ಯವಹಾರ ಮತ್ತು ರಾಜಕೀಯ ಕುಶಾಗ್ರಮತಿ, ಔಷಧ ಮತ್ತು ಸಾರ್ವಜನಿಕ ಕಲ್ಯಾಣದಲ್ಲಿ ಮುನ್ನಡೆಯುವ ಮೂಲಕ – ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಕರ್ತವ್ಯಗಳು ಪರಸ್ಪರ ಪ್ರತ್ಯೇಕವಾಗಿಲ್ಲ ಬದಲಿಗೆ ಅಲ್ಲಾಹನಿಗೆ ಸೇವೆ ಸಲ್ಲಿಸುವ ಮತ್ತು ಮಾನವೀಯತೆಗೆ ಪ್ರಯೋಜನವನ್ನು ನೀಡುವ ಅನ್ವೇಷಣೆಯಲ್ಲಿ ಸಾಮರಸ್ಯದಿಂದ ಸಂಯೋಜಿಸಲ್ಪಡಬಹುದು ಎಂಬುದನ್ನು ಇವರಲ್ಲಾ ನಿರೂಪಿಸಿದ್ದಾರೆ.
ನಿಕತ್ ಫಾತಿಮಾ
ನಿಕತ್ ಫಾತಿಮಾ ಅವರು ಜೆ.ಎಂ.ಐ (JMI) ಯಿಂದ ಬಯೋಇನ್ಫರ್ಮ್ಯಾಟಿಕ್ಸ್ನಲ್ಲಿ ಎಂ.ಎಸ್ಸಿ (MSc) ಪದವಿ ಪಡೆದಿದ್ದಾರೆ. ಜಿ.ಐ.ಒ (GIO) ದೆಹಲಿಯ ಮಾಜಿ ಅಧ್ಯಕ್ಷರಾಗಿದ್ದಾರೆ. ಅರೇಬಿಕ್ ಮತ್ತು ಕುರ್ಆನ್ ವಿದ್ಯಾರ್ಥಿನಿಯಾಗಿದ್ದಾರೆ.












