✍️ ಏ.ಕೆ. ಕುಕ್ಕಿಲ
ಭಾರತದಲ್ಲಿ ಸುಮಾರು 705 ಬುಡಕಟ್ಟು ಸಮುದಾಯಗಳಿವೆ ಮತ್ತು ಸುಮಾರು 11 ಕೋಟಿ ಜನಸಂಖ್ಯೆಯಿದೆ. ಆದರೆ,
ಈ ಬುಡಕಟ್ಟು ಸಮುದಾಯಗಳು ಮದುವೆ, ವಿಚ್ಛೇದನ, ಉತ್ತರಾಧಿಕಾರ, ಆಸ್ತಿ ಹಂಚಿಕೆ ಇತ್ಯಾದಿ ವಿಷಯಗಳಲ್ಲಿ ತನ್ನದೇ ಆದ ಪರಂಪರಾಗತ ಪದ್ಧತಿಯನ್ನು ಅನುಸರಿಸುತ್ತದೆಯೇ ಹೊರತು ಅದಕ್ಕೆ ಲಿಖಿತ ಪದ್ಧತಿ ಎಂಬುದಿಲ್ಲ. ‘ಹಿಂದೂ ಉತ್ತರಾಧಿಕಾರ ಕಾಯ್ದೆ 1956’ ಮತ್ತು ‘ಹಿಂದೂ ಮದುವೆ ಕಾಯ್ದೆ’ಯಂಥ ವೈಯಕ್ತಿಕ ಕಾನೂನುಗಳು ಈ ಸಮುದಾಯಗಳಿಗೆ ಅನ್ವಯಿಸುವುದಿಲ್ಲ. ಭಾರತದ ಹೆಚ್ಚಿನ ಬುಡಕಟ್ಟುಗಳಲ್ಲಿ ಪಿತೃವಂಶೀಯ ಪರಂಪರೆ ಇದೆ. ಗೊಂಡ್, ಭಿಲ್, ಸಂತಾಲ್ ಇತ್ಯಾದಿ ಉತ್ತರ ಭಾರತದ ಬುಡಕಟ್ಟುಗಳಲ್ಲಿ ಆಸ್ತಿ ಪುರುಷರಿಗೆ ಹೋಗುತ್ತದೆ. ಮಹಿಳೆಯರಿಗೆ ಅವಕಾಶಗಳು ಬಹಳ ಕಡಿಮೆ. ಇದೇವೇಳೆ,
ಮೇಘಾಲಯ ಸಹಿತ ಖಾಸಿ, ಗಾರೋ ಮುಂತಾದ ಈಶಾನ್ಯ ಭಾರತದ ಬುಡಕಟ್ಟುಗಳಲ್ಲಿ ಆಸ್ತಿಯು ಮಹಿಳೆಯರ ಮೂಲಕ ಹೋಗುತ್ತದೆ. ಇಲ್ಲಿ ಮಾತೃವಂಶೀಯ ಪದ್ಧತಿ ಅನುಸರಣೆಯಾಗುತ್ತದೆ. ಕೆಲವು ಬುಡಕಟ್ಟುಗಳಲ್ಲಿ
ಆಸ್ತಿ ಸಮುದಾಯದ ಒಡೆತನದಲ್ಲಿರುತ್ತದೆಯೇ ಹೊರತು ವೈಯಕ್ತಿಕವಾಗಿ ಇರುವುದಿಲ್ಲ. ಒಂದು ಬುಡಕಟ್ಟಿನಿಂದ ಇನ್ನೊಂದು ಬುಡಕಟ್ಟಿನ ನಡುವೆ ವೈಯಕ್ತಿಕ ನಿಯಮಗಳಲ್ಲಿ ಹತ್ತು-ಹಲವು ವ್ಯತ್ಯಾಸಗಳಿವೆ. ಮೇಘಾಲಯದ ಈಸ್ಟ್ ಜೈಂತಿಯ ಹಿಲ್ಸ್ನ ಬುಡಕಟ್ಟು ಸಮುದಾಯದಲ್ಲಿ 20% ಬಹುಪತ್ನಿತ್ವ ಆಚರಣೆಯಲ್ಲಿದೆ. ಮೇಘಾಲಯದಲ್ಲಿ ಒಟ್ಟು 6% ಬಹುಪತ್ನಿತ್ವವಿದೆ. ಇದೊಂದು ಉದಾಹರಣೆ ಮಾತ್ರ. ಹೀಗೆ ಸುಮಾರು 11 ಕೋಟಿಯಷ್ಟು ಬೃಹತ್ ಜನಸಂಖ್ಯೆಯೊಂದು ಲಿಖಿತ ಕಾನೂನಿಗೆ ಒಳಪಡದೇ ತನ್ನದೇ ಆದ ಪರಂಪರೆ ಮತ್ತು ಪದ್ಧತಿಯನುಸಾರ ಬದುಕುತ್ತಿದ್ದರೂ ಏಕರೂಪ ನಾಗರಿಕ ಸಂಹಿತೆಯಿಂದ (ಯುಸಿಸಿ) ಇವರನ್ನೆಲ್ಲ ಹೊರಗಿಡಲು ಬಿಜೆಪಿ ತೀರ್ಮಾನಿಸಿದೆ.
ಈಗಾಗಲೇ ಕಾನೂನಾಗಿ ಜಾರಿಯಾಗಿರುವ ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆಯಿಂದ ಬುಡಕಟ್ಟು ಸಮುದಾಯಗಳನ್ನು ಹೊರಗಿಡಲಾಗಿದೆ. ಗುಜರಾತ್, ಮಧ್ಯಪ್ರದೇಶ ಮತ್ತು ಅಸ್ಸಾಮ್ ರಾಜ್ಯಗಳ ಯುಸಿಸಿ ಮಸೂದೆಯಲ್ಲೂ ಈ ಸಮುದಾಯಗಳನ್ನು ಹೊರಗಿಡಲಾಗಿದೆ. ಬಿಜೆಪಿ ಆಡಳಿತದ ಈ ನಾಲ್ಕೂ ರಾಜ್ಯಗಳು ತಯಾರಿಸಿರುವ ಯುಸಿಸಿ ಮಸೂದೆಯಲ್ಲಿ ಮದುವೆ, ವಿಚ್ಛೇದನ, ಉತ್ತರಾಧಿಕಾರ ಇತ್ಯಾದಿಗಳು ಏಕ ಕಾನೂನಿಗೆ ಒಳಪಡಲಿದೆ. ಬಹುಪತ್ನಿತ್ವಕ್ಕೆ ನಿಷೇಧವಿದೆ. ಲಿವ್ ಇನ್ ರಿಲೇಶನ್ಶಿಪ್ ಅನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗಿದೆ. ಆಸ್ತಿಯಲ್ಲಿ ಪುತ್ರ, ಪುತ್ರಿ, ಪತಿ, ಪತ್ನಿ, ಪೋಷಕರಿಗೆ ಸಮಾನ ಹಕ್ಕನ್ನು ನೀಡಲಾಗಿದೆ.
ಮದುವೆಯನ್ನು 60 ದಿನಗಳೊಳಗೆ ಕಡ್ಡಾಯವಾಗಿ ನೋಂದಣಿ ಮಾಡಬೇಕಾಗಿದೆ. ಮದುವೆ ವಯಸ್ಸು ಪುರುಷನಿಗೆ 21 ಮತ್ತು ಹೆಣ್ಣಿಗೆ 18 ಎಂದು ನಿಯಮ ಮಾಡಲಾಗಿದೆ. ಪತ್ನಿ ಅಥವಾ ಪತಿಯ ಮೇಲೆ ಕ್ರೌರ್ಯ ಎಸಗುವುದು, ಪತಿ ಅಥವಾ ಪತ್ನಿಯನ್ನು ತ್ಯಜಿಸುವುದು ಮತ್ತು ಪರಸಂಗ ಇತ್ಯಾದಿಗಳನ್ನು ವಿಚ್ಛೇದನಕ್ಕೆ ಕಾರಣವಾಗಿ ಪರಿಗಣಿಸಲಾಗಿದ್ದು, ಹಿಂದೂ-ಮುಸ್ಲಿಮರೆಲ್ಲರಿಗೂ ಕಾನೂನು ಸಮಾನವಾಗಿರುತ್ತದೆ. ತ್ರಿವಳಿ ತಲಾಕ್ ಮತ್ತು ನಿಕಾಹ್ ಹಲಾ ಲನ್ನು ನಿಷೇಧಿಸಲಾಗಿದೆ. ಉತ್ತರಾಖಂಡ ಈಗಾಗಲೇ ಇವನ್ನು ಕಾನೂನಾಗಿ ಜಾರಿಗೊಳಿಸಿದೆ. ಗುಜರಾತ್, ಮಧ್ಯಪ್ರದೇಶ ಮತ್ತು ಅಸ್ಸಾಮ್ಗಳಲ್ಲಿ ಈ ಮಸೂದೆ ಅಂಗೀಕಾರವಾಗಿದ್ದು, ರಾಷ್ಟ್ರಪತಿ ಅಂಗಳದಲ್ಲಿದೆ.
ಇದೇವೇಳೆ,
ಇದಕ್ಕೆ ವಿರೋಧವೂ ಬಲವಾಗಿದೆ. ಧರ್ಮವನ್ನು ಆಚರಿ ಸುವುದಕ್ಕೆ ಮತ್ತು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವುದಕ್ಕೆ ಸಂವಿಧಾನದ 25 ಮತ್ತು 26ನೇ ಆರ್ಟಿಕಲ್ಗಳು ಹಕ್ಕನ್ನು ನೀಡುತ್ತವೆ. ಏಕರೂಪ ನಾಗರಿಕ ಸಂಹಿತೆಯು ಈ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ವಾದ ಇದೆ. ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರಗಳು ಬುಡಕಟ್ಟುಗಳೂ ಸೇರಿದಂತೆ ಅನೇಕ ಸಮುದಾಯಗಳ ಧಾರ್ಮಿಕ ಗುರುತಾಗಿದ್ದು, ಇವುಗಳನ್ನು ಬದಲಾಯಿಸುವುದೆಂದರೆ, ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ನಡೆಸಿದಂತಾಗುತ್ತದೆ ಎಂಬ ಪ್ರತಿವಾದವಿದೆ. ಒಂದೇ ಕಾನೂನನ್ನು ಎಲ್ಲರ ಮೇಲೆ ಹೇರಿದರೆ ಸಮುದಾಯಗಳ ವಿಶಿಷ್ಟ ಪದ್ಧತಿಗಳು ಅಳಿಸಿ ಹೋಗಬಹುದು, ಏಕರೂಪತೆ ಎಂಬುದನ್ನು ಸಮಾನ ಎಂಬAತೆ ಹೇರಬಾರದು ಎಂದೂ ಹೇಳಲಾಗುತ್ತದೆ. ಅಂದಹಾಗೆ,
2015ರಲ್ಲಿ ರಚನೆಯಾದ 21ನೇ ಕಾನೂನು ಆಯೋಗವು ಈ ಬಗ್ಗೆ ಮಹತ್ವಪೂರ್ಣ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸುಪ್ರೀಮ್ ಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ಡಾ| ಬಲ್ವಿಂದರ್ ಸಿಂಗ್ ಚೌಹಾಣ್ ನೇತೃತ್ವ ಈ ಆಯೋಗಕ್ಕೆ ಮೋದಿ ಸರಕಾರವು 2016 ಜೂನ್ 17ರಂದು ಒಂದು ಉಲ್ಲೇಖ ನೀಡಿತ್ತು. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ವಿಷಯಗಳನ್ನೂ ಪರಿಶೀಲಿಸುವಂತೆ ಆ ಉಲ್ಲೇಖದಲ್ಲಿ ಕೋರಲಾಗಿತ್ತು. 2018 ಆಗಸ್ಟ್ನಲ್ಲಿ ಈ ಆಯೋಗ ವರದಿ ನೀಡಿತಲ್ಲದೇ, ಯುಸಿಸಿ ಈ ಹಂತದಲ್ಲಿ ಅಗತ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ ಎಂದು ಹೇಳಿತು. ಇದಕ್ಕೆ ಅದು ಕೆಲವು ಕಾರಣಗಳನ್ನು ಕೊಟ್ಟಿತು-
- ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸಬೇಕು. ವ್ಯತ್ಯಾಸಗಳು ತಾರತಮ್ಯವನ್ನು ಸೂಚಿಸುವುದಿಲ್ಲ. ಇವು ಪ್ರಬಲ ಪ್ರಜಾಪ್ರಭುತ್ವದ ಲಕ್ಷಣ.
- ಸಮುದಾಯಗಳ ನಡುವೆ ಸಮಾನತೆಯ ಬದಲು ಸಮುದಾಯಗಳೊಳಗೆ ಸಮಾನತೆಯನ್ನು ಸಾಧಿಸಬೇಕು. ಅಂದರೆ, ಪುರುಷ ಮತ್ತು ಮಹಿಳೆಯರ ನಡುವೆ ಸಮಾನತೆ ತರಬೇಕು.
- ಒಂದೇ ನಾಗರಿಕ ಸಂಹಿತೆಯನ್ನು ಎಲ್ಲ ಸಮುದಾಯಗಳ ಮೇಲೆಯೂ ಹೇರುವುದಕ್ಕಿಂತ ಪ್ರತಿ ಧರ್ಮದ ವೈಯಕ್ತಿಕ ಕಾನೂನುಗಳಲ್ಲಿರುವ ತಾರತಮ್ಯವನ್ನು ಕಿತ್ತುಹಾಕುವುದು ಉತ್ತಮ.
- ಎಲ್ಲಾ ಧರ್ಮೀಯರ ಮದುವೆ ವಯಸ್ಸನ್ನು 18ಕ್ಕೆ ನಿಗದಿ ಪಡಿಸಬೇಕು. ಮದುವೆ ನೋಂದಣಿಯನ್ನು ಕಡ್ಡಾಯಗೊಳಿಸ ಬೇಕು. ತಪ್ಪೇ ಇಲ್ಲದಿದ್ದರೂ ವಿಚ್ಛೇದನಕ್ಕೆ ಅವಕಾಶ ಇರುವ ವ್ಯವಸ್ಥೆಯನ್ನು ಪರಿಚಯಿಸಬೇಕು, ವಿಚ್ಛೇದನದಲ್ಲಿ ಆಸ್ತಿ ಹಂಚಿಕೆ ಸಮಾನವಾಗಿರಬೇಕು.
ಅಂದಹಾಗೆ,
ಕಾನೂನು ಆಯೋಗ ಹೇಳಿರುವುದರಲ್ಲಿ ಕೆಲವು ಪ್ರಮುಖ ಅಂಶಗಳಿವೆ. ಏಕ ಕಾನೂನನ್ನು ಎಲ್ಲರ ಮೇಲೂ ಹೇರುವುದಕ್ಕಿಂತ ಸಮುದಾಯಗಳ ಒಳಗಡೆ ಸುಧಾ ರಣೆಯಾಗುವಂತೆ ನೋಡಿಕೊಳ್ಳುವುದರಿಂದ ‘ಹೇರಿಕೆಯ ಭಾವ’ವನ್ನು ತಪ್ಪಿಸಬಹುದು ಎಂದು ಅದು ಹೇಳಿದೆ. ಅಷ್ಟಕ್ಕೂ,
ಈಗಾಗಲೇ ಯುಸಿಸಿಯನ್ನು ಜಾರಿಗೊಳಿಸಿರುವ ಉತ್ತರಾಖಂಡ ಸರಕಾರವು ಈ ನಿಯಮದಿಂದ ಬುಡಕಟ್ಟುಗಳನ್ನು ಹೊರಗಿಟ್ಟಿದೆ. ಗುಜರಾತ್, ಅಸ್ಸಾಮ್ ಮತ್ತು ಮಧ್ಯಪ್ರದೇಶ ರಾಜ್ಯಗಳ ಯುಸಿಸಿ ಕರಡು ರಚನೆಯಿಂದಲೂ ಬುಡಕಟ್ಟುಗಳನ್ನು ಹೊರಗಿಡಲಾಗಿದೆ. ಇನ್ನು ಮುಂದೆ ರಚನೆಯಾಗಲಿರುವ ಬಿಜೆಪಿ ಆಡಳಿತದ ಮಹಾರಾಷ್ಟ್ರ, ರಾಜಸ್ಥಾನ, ತ್ರಿಪುರಾ, ಪಶ್ಚಿಮ ಬಂಗಾಳ ಇತ್ಯಾದಿ ರಾಜ್ಯಗಳ ಕರಡು ರಚನೆಯೂ ಉತ್ತರಾಖಂಡ ಮಾದರಿಯನ್ನೇ ಅನುಸರಿಸಲಿವೆ ಎಂದು ಹೇಳಲಾಗಿದೆ. ಹಾಗಿದ್ರೆ,
ಏಕರೂಪ ನಾಗರಿಕ ಸಂಹಿತೆ ಎಂಬ ವಾದಕ್ಕೆ ಏನು ಅರ್ಥ ಇದೆ? ಈ ದೇಶದ 11 ಕೋಟಿಯಷ್ಟು ಬೃಹತ್ ಜನಸಂಖ್ಯೆಗೆ ಏಕರೂಪ ನಾಗರಿಕ ಸಂಹಿತೆಯಿಂದ ವಿನಾ ಯಿತಿ ನೀಡುವುದಾದರೆ, 15 ಕೋಟಿಯಷ್ಟಿರುವ ಮುಸ್ಲಿಮ್ ಸಮುದಾಯಕ್ಕೆ ಯಾಕೆ ವಿನಾಯಿತಿ ನೀಡಬಾರದು? ಬುಡಕಟ್ಟು ಸಂಪ್ರದಾಯಗಳನ್ನು ರಕ್ಷಿಸುವುದು ಸರಕಾರಗಳ ಜವಾಬ್ದಾರಿ ಎಂದಾದರೆ, ಮುಸ್ಲಿಮ್ ಸಮುದಾಯದ ಆಚರಣೆಗಳನ್ನು ರಕ್ಷಿಸುವುದು ಯಾಕೆ ಸರಕಾರದ ಜವಾಬ್ದಾರಿ ಆಗುವುದಿಲ್ಲ? ವರ್ತಮಾನ ಭಾರತವು ನಿಜಕ್ಕೂ ಏಕರೂಪ ನಾಗರಿಕ ಸಂಹಿತೆಯ ಕೊರತೆಯಿಂದ ಬಳಲುತ್ತಿದೆಯೇ? ಈ ಸಂಹಿತೆ ಜಾರಿಗೊಂಡರೆ, ಭಾರತದ ಅಭಿವೃದ್ಧಿಗೆ ಪ್ರಮುಖ ತೊಡಕೊಂದು ನಿವಾರಣೆ ಆದಂತಾಗುತ್ತದೆಯೇ? ದೇಶವನ್ನು ಸದ್ಯ ಕಾಡುತ್ತಿರುವ ನಿರುದ್ಯೋಗ, ಬೆಲೆಯೇರಿಕೆ, ಭ್ರಷ್ಟಾಚಾರ, ಜಾತಿ ತಾರತಮ್ಯ, ಧರ್ಮ ದ್ವೇಷದ ಹಿಂಸಾಚಾರಗಳಿಗೆ ಈ ಯುಸಿಸಿ ಶಾಶ್ವತ ಪರದೆ ಎಳೆದು ಬಿಡಲಿದೆಯೇ? ನಿಜವಾಗಿ,
2029ರ ಲೋಕಸಭಾ ಚುನಾವಣೆಗಿಂತ ಮೊದಲು ಬಿಜೆಪಿ ಮತ್ತು ಎನ್ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿಗೊಳಿಸುವುದಾಗಿ ಗೃಹಸಚಿವ ಅಮಿತ್ ಶಾ ಹೇಳಿರುವುದರ ಹಿಂದೆ ಈ ಯುಸಿಸಿ ಮೇಲಿನ ಪ್ರೀತಿಗಿಂತ, ಮುಸ್ಲಿಮ್ ಸಮುದಾಯವನ್ನು ಬೀದಿಗಿಳಿಸುವ ಉದ್ದೇಶವಿದೆ.
ಈಗಿನದೇ ವಾತಾವರಣ 2029ರ ವರೆಗೆ ಮುಂದುವರಿದರೆ ಕೇಂದ್ರದಲ್ಲಿ ಅಧಿಕಾರ ಕೈ ತಪ್ಪುವುದು ಶತಸಿದ್ಧ ಎಂಬುದು ಬಿಜೆಪಿಗೆ ಅರಿವಾಗಿದೆ. ದೇಶದಲ್ಲಿ ತೀವ್ರ ಆಡಳಿತ ವಿರೋಧಿ ಅಲೆ ಇದೆ. ಕಾಕ್ರೋಚ್ ಪಾರ್ಟಿಯ ಹೆಸರಲ್ಲಿ ಆರಂಭವಾದ ವಿದ್ಯಾರ್ಥಿ ಪ್ರತಿರೋಧವು ದೇಶ ದುದ್ದಕ್ಕೂ ವ್ಯಾಪಿಸಿದೆ. ಈವರೆಗೆ ಪ್ರಶ್ನಾತೀತ ರೀತಿಯಲ್ಲಿ ವರ್ತಿಸುತ್ತಿದ್ದ ಕೇಂದ್ರ ಸರಕಾರವನ್ನು ವಿದ್ಯಾರ್ಥಿ ಸಮುದಾಯ ಬೆತ್ತಲೆಗೊಳಿಸತೊಡಗಿದೆ. ಪ್ರಧಾನಿಯಿಂದ ಹಿಡಿದು ಬಿಜೆಪಿಯ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ವರೆಗೆ ಪ್ರತಿಯೊಬ್ಬರನ್ನೂ ಬಿಡದೇ ಕಾಡತೊಡಗಿದೆ. ಈ ವಿದ್ಯಾರ್ಥಿ ಶಕ್ತಿಯನ್ನು ಬಲವಂತದಿಂದ ಮಣಿಸಬಹುದೆಂದು ಅಂದುಕೊಂಡು ಕೈ ಸುಟ್ಟುಕೊಂಡಾಗಿದೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡುವುದಕ್ಕೆ ನಿರ್ಬಂಧಿತರಾಗುವಷ್ಟು ಜೆನ್ಝಿ ಪೀಳಿಗೆಯ ಒತ್ತಡ ಪ್ರಬಲವಾಗಿದೆ. ಇಂಥ ಸ್ಥಿತಿಯಲ್ಲಿ,
ಹಿಂದೂ-ಮುಸ್ಲಿಮ್ ವಿಷಯವೊಂದೇ ತಮ್ಮನ್ನು ಉಳಿಸಬಲ್ಲುದು ಎಂದು ಬಿಜೆಪಿಗೆ ಸ್ಪಷ್ಟವಾಗಿದೆ. ಏಕರೂಪ ನಾಗರಿಕ ಸಂಹಿತೆಯನ್ನು ವಿವಿಧ ರಾಜ್ಯಗಳು ಪ್ರತ್ಯಪ್ರತ್ಯೇಕವಾಗಿ ಜಾರಿಗೊಳಿಸುವುದರಿಂದ ಮುಸ್ಲಿಮರ ವಿರೋಧವನ್ನು ಚಾಲ್ತಿಯಲ್ಲಿಡಬಹುದು. ಅವರು ಯುಸಿಸಿ ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಬಹುದು. ಬೀದಿಗಿಳಿದು ಪ್ರತಿಭಟಿಸಬಹುದು. ಸರಕಾರವನ್ನು ಖಂಡಿಸಿ ಹೇಳಿಕೆ, ಭಾಷಣಗಳನ್ನು ಮಾಡಬಹುದು. ಪತ್ರಿಕಾಗೋಷ್ಠಿ ನಡೆಸಬಹುದು. ಘರ್ಷಣೆಗಳೂ ಉಂಟಾಗಬಹುದು. ಹೀಗೆ ಇನ್ನೆರಡು ವರ್ಷಗಳನ್ನು ಅಭಿವೃದ್ಧಿಯ ವಿಷಯಕ್ಕಿಂತ ಹಿಂದೂ-ಮುಸ್ಲಿಮ್ ವಿಷಯದ ಮೇಲೆ ಕೇಂದ್ರೀಕೃತವಾಗುವಂತೆ ಮಾಡಬೇಕು. ರಾಜ್ಯಗಳು ಬಿಡಿಬಿಡಿಯಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗುವುದರಿಂದ ಪ್ರತಿಭಟನೆಗಳು ನಿರಂತರವಾಗಬಹುದು. ಆಗ ವಿದ್ಯಾರ್ಥಿ ಪ್ರತಿಭಟನೆಗಳಿಂದ ಜನರ ಗಮನವನ್ನು ಏಕರೂಪ ನಾಗರಿಕ ಸಂಹಿತೆಯಲ್ಲಿ ಸುತ್ತ ತಿರುಗಿಸಬಹುದು. ವಿವಿಧ ಚಾನೆಲ್ಗಳಲ್ಲಿ ಈ ಬಗ್ಗೆ ನಿರಂತರ ಡಿಬೇಟ್, ವರದಿ, ಗ್ರೌಂಡ್ ರಿಪೋರ್ಟ್ ಗಳು ನಡೆಯುವಂತೆ ನೋಡಿಕೊಳ್ಳಬಹುದು. ಇದು ಯಶಸ್ವಿಯಾದರೆ 2029ರ ಚುನಾವಣೆಯನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಅಮಿತ್ ಶಾ ಹಾಕಿರುವಂತಿದೆ.
ಇಲ್ಲದಿದ್ದರೆ,
ಬಿ.ಎಸ್. ಚೌಹಾಣ್ ನೇತೃತ್ವದ 21ನೇ ಕಾನೂನು ಆಯೋಗವು ಅನಗತ್ಯ ಮತ್ತು ಅನಪೇಕ್ಷಣಿಯ ಎಂದು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಷರಾ ಬರೆದಿರುವುದರ ಹೊರತಾಗಿಯೂ 2029ರೊಳಗೆ ಯುಸಿಸಿ ಜಾರಿಗೊಳಿಸುವುದಾಗಿ ಅಮಿತ್ ಶಾ ಹೇಳುತ್ತಿರಲಿಲ್ಲ.












