✍️ ಅರಫಾ ಮಂಚಿ
ಸತೀಶ್ ಜಾರಕಿಹೊಳಿ ಈಡಿ ಕುಣಿಕೆಗೆ ಸಿಲುಕಿದರೆ ಅವರು ಕಾಂಗ್ರೆಸ್ ಬಂಧ ಅನಿವಾರ್ಯವಾಗಿ ಕಡಿದುಕೊಳ್ಳಬೇಕಾಗ್ತದೆ. ಅಣ್ಣ ರಮೇಶ್ ಜಾರಕಿಹೊಳಿ ಕೂತ ಪಾರ್ಟಿಯೊಳಗೆ ಹೋಗಿ ಅವರೂ ಸೇರಿಕೊಳ್ಳುತ್ತಾರೆ. ಸತೀಶ್ ಜಾರಕಿಹೊಳಿ ವಿರುದ್ಧ ಈಡಿ ದಾಳಿಯಾಗಿರುವ ಹಿನ್ನೆಲೆಯಲ್ಲಿ ಈಗ ಹೀಗೆ ಜನರ ನಡುವೆ ಚರ್ಚೆಯಾಗುತ್ತಿದೆ. ಜಾರಕಿಹೊಳಿಯನ್ನು ಸಿಕ್ಕಿಬೀಳಿಸುವ ಬಿಜೆಪಿ ಪ್ಲಾನ್ ಸಕ್ಸಸ್ ಆಗುತ್ತೆಂದಾದಾಗ ಅದರ ವಾಷಿಂಗ್ ಮೆಶಿನ್ನು ವರ್ಕಿಂಗ್ ಮೋಡ್ಗೆ ಸಹಜವಾಗಿ ಬಂದು ನಿಂತಿರುತ್ತದೆ. ಕರ್ನಾಟಕ ರಾಜಕೀಯದಲ್ಲಿ 2008ರ ನಂತರದಲ್ಲಿ ಮತ್ತೊಂದು ಕಂಪನ. ಮತ್ತೊಮ್ಮೆ ಆಪರೇಷನ್ ಕಮಲ! 2029ರ ಲೋಕಸಭೆ ಚುನಾವಣೆಗೆ ಇದು ಪೂರ್ವತಯಾರಿ!
ಈಗ ಚರ್ಚೆಯಾಗುತ್ತಿರುವಂತೆ ಒಂದು ವೇಳೆ ಜಾರಕಿಹೊಳಿ ಈಡಿ ಕುಣಿಕೆಗೆ ಸಿಕ್ಕರೆ, ಕರ್ನಾಟಕದ ಕಾಂಗ್ರೆಸ್ ಸರಕಾರ ಕತಮ್ ಎಂದು ಕಾಂಗ್ರೆಸ್ ವಿರೋಧಿ ಪಾಳಯ ಮನಸ್ಸಲ್ಲೇ ಸಂಭ್ರಮಿಸುತ್ತಿದೆ. ಕುಮಾರಣ್ಣ ಈ ಮೀನಮೇಷಕ್ಕೆ ಹಬ್ಬದ ಗಡುವು ವಿಧಿಸಿದ್ದಾರೆ.
ಕುತೂಹಲ ಅಂದ್ರೆ ಬಿಜೆಪಿ ಉಚ್ಚಾಟಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಜಾರಕಿಹೊಳಿ ಈಡಿ ದಾಳಿಯನ್ನು ಇನ್ನೊಂದು ಮಗ್ಗುಲಿಗೆ ಪುಟಿಯಿಸಿದ್ದಾರೆ. ಜಾರಕಿಹೊಳಿಗೆ ಸಿದ್ದರಾಮಯ್ಯರ ಶಾಪ ತಟ್ಟಿದ್ದರಿಂದ ಈಡಿ ದಾಳಿಯಾಗಿದ್ದು! ಸಿದ್ದರಾಮಯ್ಯರ ತೆರವಿಗೆ 23 ಶಾಸಕರ ಸಹಿ ಹಾಕಿಸಿಕೊಟ್ಟವರು ಜಾರಕಿಹೊಳಿ. ಇಂತಹ ತುಟ್ಟಿ ಆರೋಪ ಹೊರಿಸುತ್ತಿರುವ ಈ ಯತ್ನಾಳ್ ಬಿಟ್ಟಿ ಚಾಲಾಕಿ ಮನುಷ್ಯ. ಅವರಿಂದಾಗಿ ಮಾಜಿ ಮುಖ್ಯಮಂತ್ರಿ ಜನರ ಮುಂದೆ ವಿಲನ್ ತರದ ಪ್ರತಿಬಿಂಬ ಮೂಡುತ್ತದೆ.
ಬಿಜೆಪಿಯ ಲೆಕ್ಕಾಚಾರ ಏನು?
ಈಗ ಸಧ್ಯ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರದಲ್ಲಿದೆ. ಪಾರ್ಟಿ ಒಡೆದು ಅಧಿಕಾರದಿಂದ ಕೆಳಗಿಳಿಸಿ ಜಾರಕಿಹೊಳಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರುವುದು. ಮಹಾರಾಷ್ಟ್ರದಲ್ಲಿ ಬಿಜೆಪಿ ಮಾಡಿದ್ದೂ ಇದೇ. ಶಿವಸೇನೆಯನ್ನು ಏಕನಾಥ ಶಿಂಧೆಯ ಮೂಲಕ ಒಡೆದು, ನಂತರ ಅವರನ್ನೇ ಮುಖ್ಯಮಂತ್ರಿ ಮಾಡಿದೆ. ವಿಧಾನಸಭಾ ಚುನಾವಣೆ ನಡೆದ ನಂತರ ಅವರನ್ನು ಬದಿಗೊತ್ತಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ. ರಾಜಕೀಯದಲ್ಲಿ ರಾಜಕಾರಣಿಗಳು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿಯ ವಾಷಿಂಗ್ ಮೆಶಿನ್ನು ಮತ್ತು ಆಪರೇಷನ್ ಕಮಲ ಎರಡೂ ವರ್ಕಿಂಗ್ ಮೋಡಿಗೆ ಬಂದಿದ್ದನ್ನೇ ಈಡಿ ಕಾರ್ಯಾಚರಣೆ ಸೂಚಿಸುತ್ತಿದೆ.
ಆಪರೇಷನ್ ಲೋಟಸ್ ಪಟ್ಟಿ:
2022 ಮಹಾರಾಷ್ಟ್ರದಲ್ಲಿ ಶಿವಸೇನೆಯ ಕೈಯಿಂದ ಅಧಿಕಾರ ಕಿತ್ತಿರುವುದು, 2008ರಲ್ಲಿ ಕರ್ನಾಟಕದಲ್ಲಿ ಕುಮಾರಸ್ವಾಮಿ ಸರಕಾರ ಬೀಳಿಸಿದ್ದು, ಮಾರ್ಚ್ 2020ರಲ್ಲಿ ಸಿಂಧಿಯಾ ನೇತೃತ್ವದಲ್ಲಿ ಕಾಂಗ್ರೆಸ್ಸಿನ ಕಮಲನಾಥ್ ಸರಕಾರ ಉರುಳಿಸಿದ್ದು, 2017 ಮಣಿಪುರದಲ್ಲಿ, 2023 ತ್ರಿಪುರದಲ್ಲಿ, 2022ರಲ್ಲಿ ಏಕನಾಥ ಶಿಂಧೆ ಶಿವಸೇನೆಯ 50 ಎಂಎಲ್ಎಗಳಲ್ಲಿ 36 ಎಂಎಲ್ಎಗಳನ್ನು ಕಿತ್ತುಕೊಂಡು ಹೋಗಿ ಉದ್ಧವ್ ಠಾಕ್ರೆಯವರ ಮಹಾವಿಕಾಸ್ ಅಗಾಢಿ ಸರಕಾರ ಬೀಳಿಸಿದ್ದು ಹೀಗೆ ಪಟ್ಟಿ ಉದ್ದ ಇದೆ.
ಗೋವಾದಲ್ಲಿ 2019ರಲ್ಲಿ ಕಾಂಗ್ರೆಸ್ನ 14 ಎಂಎಲ್ಎಗಳು, 2022ರಲ್ಲಿ ಅದೇ ಕಾಂಗ್ರೆಸ್ಸಿನಿಂದ ಹನ್ನೊಂದು ಎಂಎಲ್ಎಗಳಲ್ಲಿ ಎಂಟು ಮಂದಿಯನ್ನು ಬಿಜೆಪಿ ಆಪರೇಷನ್ ಲೋಟಸ್ ಮಾಡಿತ್ತು. ಆದರೆ ಫಸ್ಟ್ ಆಪರೇಷನ್ ಲೋಟಸ್ ಕರ್ನಾಟಕದ್ದೆಂದು ಹೇಳಲಾಗುತ್ತದೆ. ಈಗ ಮತ್ತೊಂದು ಆಪರೇಷನ್ ಲೋಟಸ್ಗೆ ಜಾರಕಿಹೊಳಿ ದಾಳವಾಗಿ ಬಳಕೆಯಾಗ್ತಾರಾ? ನೋಡ್ಬೇಕು. ಆದ್ದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದು ಸತೀಶ್ ಜಾರಕಿಹೊಳಿಯ ವಿರುದ್ಧ ಈಡಿ ದಾಳಿ ರಾಜಕೀಯ ಪ್ರೇರಿತವಾದದ್ದು. ದಾಳಿಯ ವೇಳೆ ಸುಮಾರು 3.45 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಂಡಿರುವುದಾಗಿ ಈಡಿ ತಿಳಿಸಿದ್ದು, ಒಬ್ಬ ಅಷ್ಟು ದೊಡ್ಡ ಉದ್ಯಮಿಯ ಮಟ್ಟಿಗೆ ಎರಡ್ಮೂರು ಕೋಟಿ ರೂಪಾಯಿ ಬಿಗ್ ಕ್ಯಾಶ್ ಅಲ್ಲ. ಕರ್ನಾಟಕ ಸರಕಾರದಲ್ಲಿ ಉನ್ನತ ಸಚಿವನಾದ ವ್ಯಕ್ತಿ ಟ್ಯಾಕ್ಸ್ ಕೊಡದೆ, ಭ್ರಷ್ಟಾಚಾರದಿಂದ ಗಳಿಸಿದ್ದು ಮನೆಯಲ್ಲಿ ಇಟ್ಟುಕೊಳ್ಳುವಷ್ಟು ಮುಗ್ಧರಿರಲು ಸಾಧ್ಯವಿಲ್ಲ. ಈಡಿ ಕೇಳುವ ಎಲ್ಲ ಪ್ರಶ್ನೆಗೂ ಉತ್ತರಿಸುತ್ತೇನೆ ಎಂದು ಜಾರಕಿಹೊಳಿ ಹೇಳುತ್ತಾ ಬಂದಿದ್ದಾರೆ. ಬಹುತೇಕ ಆಪರೇಷನ್ ಲೋಟಸ್ ಟುಸ್ ಎನ್ನಬಹುದೆ?
ಖರ್ಗೆ ಸವಾಲು
ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಳೆದ ಕೆಲವು ವರ್ಷಗಳಲ್ಲಿ 196 ದಾಳಿಗಳು ನಡೆದಿದ್ದು ಎಷ್ಟು ಶಿಕ್ಷೆಯಾಗಿದೆ ಎಂದು ಪ್ರಶ್ನಿಸಿದ್ದಾರೆ. ಈಡಿಯ ಅಷ್ಟೂ ದಾಳಿಗಳಲ್ಲಿ ಕೇವಲ ಎರಡು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಶೇಕಡ 98ರಷ್ಟು ದಾಳಿಗಳು ಟುಸ್, ರಾಜಕೀಯ ಪ್ರೇರಿತ ಮತ್ತು ವಿರೋಧ ಪಕ್ಷದ ನಾಯಕರ ಮೇಲೆ ನಡೆಯಿತು. ಈಡಿ ಆರೋಪ ಹೊರಿಸಿ ಪತ್ರಿಕೆಗೆ ಕಳುಹಿಸುತ್ತಾರೆ ಬಿಟ್ಟರೆ ಸಾಬೀತುಪಡಿಸಲು ವಿಫಲರಾಗಿದ್ದಾರೆ. ಖರ್ಗೆ ಮಾತು ನಿಜ. ಹೌದು, ಪ್ರತಿಪಕ್ಷಗಳ ನಾಯಕರ ವಿರುದ್ಧ ನಡೆದ ದಾಳಿಯ ಹಣೆಬರಹ ಇಷ್ಟೇ. ದೊಡ್ಡ ಆರೋಪ ಮಾಡಿ ಗದ್ದಲ ಮಾಡಿ ಗೊಂದಲ ಸೃಷ್ಟಿ ಮಾಡುತ್ತಾರೆ. ಆ ನಂತರ ಆರೋಪಿಗಳಲ್ಲಿ ಕೆಲವರು ಬಿಜೆಪಿ ಸೇರಿದ ಸುದ್ದಿ ಬರುತ್ತದೆ. ಅಲ್ಲಿಗೆ ತನಿಖೆ, ಶಿಕ್ಷೆ ಎಲ್ಲ ಖತಂ.
ಈ ರಾಜಕೀಯ ಪ್ರೇರಿತ ಅಂದ್ರೇನು?
ಬಿಜೆಪಿಯ ಪ್ಲಾನಿಂಗಿಗೆ ಕೊರಳು ಬಗ್ಗಿಸದಿರುವುದರ ಪರಿಣಾಮ ಜಾರಕಿಹೊಳಿ ವಿರುದ್ಧ ಈಡಿ ದಾಳಿ. ಸ್ವತಃ ಮುಖ್ಯಮಂತ್ರಿ ಈಡಿ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಕರೆದದ್ದು ನಿಮಗೂ ಗೊತ್ತು. ಈಗ ಯಾರೇನೇ ಹೇಳಿದರೂ ಕೇಂದ್ರದಲ್ಲಿ ಕೂತ ಬಿಜೆಪಿ ಸರಕಾರದ ಸ್ವಭಾವ ಬಣ್ಣ ಗುಣ ಎಲ್ಲರಿಗೂ ಗೊತ್ತಿದ್ದದ್ದೇ. ಪ್ರತಿಪಕ್ಷಗಳ ಮೇಲೆ ಸಾಲು ಸಾಲು ಈಡಿ ದಾಳಿಗಳಾಗುತ್ತವೆ. ಯಾರಾದರೂ ಸಿಕ್ಕಿಬಿದ್ದರೆ ಅವರ ಶುದ್ಧೀಕರಣಕ್ಕೆಂದೇ ಇರುವ ಬಿಜೆಪಿಯ ವಾಷಿಂಗ್ ಮೆಶಿನ್ನು ವರ್ಕ್ ಆಗುತ್ತದೆ. ಬಿಜೆಪಿಗೆ ಸರಿದುಕೊಂಡ ಮೇಲೆ ಈಡಿ ಸುಮ್ಮನಾಗುತ್ತದೆ. ಬಿಜೆಪಿ ಪ್ರತಿಪಕ್ಷಗಳನ್ನು ಕೆಳಗಿಳಿಸಿ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ. ಇದೇ ಕಾರಣದಿಂದ ಶೇಕಡ 2ರಷ್ಟು ದಾಳಿಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದು. ನಿಜವಾದ ಆರೋಪಿಗಳಿಗೆ ಬಿಜೆಪಿ ಸೇರಿ ಶುದ್ಧೀಕರಿಸುವ ಆಪ್ಶನ್ ಇರುತ್ತದೆ. ಇದೊಂದು ರಾಜಕೀಯ ಆಟ. ಹೌದಲ್ವಾ?
ಮುಸ್ಲಿಮರ ಟಾರ್ಗೆಟ್ಗೆ ಹಳೆ ಟೂಲ್ ಬಳಕೆ:
ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಮುಂದಿನ 2029ರ ಲೋಕಸಭಾ ಚುನಾವಣೆಯ ಮೊದಲು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುತ್ತೇವೆ ಅಂದಿದ್ದಾರೆ. ಈ ಯುಸಿಸಿ ಬಿಜೆಪಿಯ ಚುನಾವಣೆ ಗೆಲ್ಲುವ ಹಳೆ ಟೂಲ್. ಯಾಕೆಂದರೆ ಈಗ 2026ರ ಕೊನೆಕೊನೆಗೆ ಇಂತಹದ್ದೊಂದು ಬಾಂಬು ಸಿಡಿಸಿದರೆ ಅದನ್ನು ಚ್ಯಾನೆಲ್ಗಳಲ್ಲಿ ಚರ್ಚೆ ಮಾಡಿಸಿ, ಯುಸಿಸಿ ಮುಸ್ಲಿಮರ ವಿರುದ್ಧವೇ ಇರುವಂತೆ ತೋರ್ಪಡಿಸಿ 2029ರ ಲೋಕಸಭಾ ಚುನಾವಣೆಯ ಇಶ್ಯೂಗೆ ವೇದಿಕೆ ಸಜ್ಜುಗೊಳಿಸುವುದು. ಕೇಂದ್ರ ಯುಸಿಸಿ ತರುವುದಿಲ್ಲ, ಆದರೆ ಬಿಜೆಪಿ/ಎನ್ಡಿಎ ಇರುವ ರಾಜ್ಯದಲ್ಲಿ ತರಲಾಗುತ್ತದೆ. ಗೋದಿ ಚಾನೆಲ್ಗಳಿಗೆ ಅಮಿತ್ ಶಾ ವಸ್ತು ಬಿತ್ತು ಹಾಕಿದ್ದಾರೆ. ಮುಂದೆ ವಟವೃಕ್ಷಗೊಳಿಸುವ ಚರ್ಚೆ ಬೆಳೆದು ಬರುತ್ತಿರಬೇಕು. ಅದಕ್ಕೆ ತಯಾರಿ ಇದು. ಅಮಿತ್ ಶಾ ನಡೆಸುವ ಏನೇ ಕಸರತ್ತು ಚಲಾವಣೆ ಆಗಬಹುದು ಎಂಬ ಪ್ರತೀತಿ ಇದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಅಭಿಜಿತ್ ದೀಪ್ಕೆ ರಾಜೀನಾಮೆ:
ಸಿಜೆಪಿ ಮೂವ್ಮೆಂಟಿನ ಹುಡುಗ ಅಭಿಜಿತ್ ದೀಪ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ತಾನು ರಾಜೀನಾಮೆ ನೀಡಿರುವುದಾಗಿ ಬರೆದುಕೊಂಡಿದ್ದಾರೆ. ಯಾವುದೋ ಸೋಂಕಿನ ಕಾರಣದಿಂದ ಮಧ್ಯಪ್ರದೇಶದಲ್ಲಿ ಬುಡಕಟ್ಟು ಮಗು ಮೃತಪಟ್ಟಿತ್ತು. ಅದರ ಪೋಷಕರನ್ನು ದೀಪ್ಕೆ ಭೇಟಿ ಮಾಡಲು ಹೋದಾಗ ಕೆಲವರು ಹಲ್ಲೆಗೆ ಮುಂದಾಗಿದ್ದಾರೆ. ಈ ಘಟನೆಯನ್ನು ಮಾರನೇ ದಿನ ಅಭಿಜಿತ್ ಪ್ರತಿಭಟಿಸಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ತಾನು ರಾಜೀನಾಮೆ ನೀಡಿದ್ದೇನೆ ಎಂದು ವ್ಯಂಗ್ಯ ಪೋಸ್ಟ್ ಹಾಕಿದ್ದಾರೆ. ಜೊತೆಗೆ ಈ ಅವಕಾಶ ಕೊಟ್ಟ ಪ್ರಧಾನಿ ಶ್ರೀ ನರೇಂದ್ರ ಮೋದಿಗೂ ಕೃತಜ್ಞ ತಿಳಿಸಿದ್ದಾರೆ. ಬುಡಕಟ್ಟು ಜನರಿರುವ ಜಾಗದ ಬಗ್ಗೆ ಅಸಡ್ಡೆಯಿಂದ ನಡೆದುಕೊಂಡ ಸರಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿಯದ್ದು ಜನರ ದುಃಖ ನೋವುಗಳಿಗೆ ಸ್ಪಂದಿಸದಿರುವ ಸರಕಾರ. ಬರೇ ಅಧಿಕಾರದಲ್ಲಿ ಕುಳಿತುಕೊಳ್ಳಲು ಆಪರೇಷನ್ ಕಮಲ, ಶಾಸಕರ ಖರೀದಿಗೆ ಇಳಿಯುತ್ತದೆ. ಬುಡಕಟ್ಟು ಆದಿವಾಸಿಗಳ ವಿಚಾರದಲ್ಲಿ ಹೇಳುವುದಿದ್ದರೆ ಈಗಲೂ ಮಧ್ಯಪ್ರದೇಶದಲ್ಲಿ 55,795 ಬುಡಕಟ್ಟು ಜನಾಂಗದವರ ಮನೆಗಳಿಗೆ ವಿದ್ಯುತ್ತಿಲ್ಲ, ಕರಂಟಿಲ್ಲ. ಶೇಕಡ 32ರಷ್ಟು ಅಪರಾಧ ಕೃತ್ಯಗಳು ಅಲ್ಲಿನ ಬುಡಕಟ್ಟಿನವರ ಮೇಲೆ ಆಗ್ತಿದೆ ಎಂಬ ವರದಿ ಇದೆ.
ಮತ್ತೆ ವಿಚಾರಕ್ಕೆ ಬರುವುದಾದರೆ:
ಕರ್ನಾಟಕದ ಕಾಂಗ್ರೆಸ್ ಸರಕಾರ ಬೀಳಿಸುವ ಶ್ರಮ ನಡೆಯುತ್ತಿದೆ. ಆದ್ದರಿಂದ ಇಲ್ಲಿ ಸತೀಶ್ರಿಗೆ ಮತ್ತು ಅವರ ಕುಟುಂಬಕ್ಕೆ ಸೇರಿದ 3.45 ಕೋಟಿ ರೂಪಾಯಿ ಇಶ್ಯೂ ಅಲ್ಲ, ಕಾಂಗ್ರೆಸ್ ಸರಕಾರವನ್ನು ಬೀಳಿಸುವುದು ಇಶ್ಯೂ. ಈಡಿಯನ್ನು ಛೂ ಬಿಟ್ಟ ಈ ಇಶ್ಯೂ ಜೆನ್-ಝಿ ಜಾಗೃತಿಯ ಈ ಕಾಲದಲ್ಲಿ ಖರ್ಚಾಗುವುದು ಸಂದೇಹ. ಯಾಕೆಂದರೆ ಇದು 2008 ಅಲ್ಲ, ಇಂದು ಸಿಜೆಪಿಯಂತಹ ಯುವಕರು ಬಿಜೆಪಿಯ ವಾಮಮಾರ್ಗಕ್ಕೆ ತಿರುಗೇಟು ಕೊಡುತ್ತಿದ್ದಾರೆ. ಪ್ರಶ್ನಿಸಿ ಉತ್ತರ ಕಂಡುಕೊಳ್ಳುವ ಶಕ್ತಿ ದೇಶದ ಜೆನ್-ಝಿಗಳಿಗಿದೆ.












