ರಾಜರು ದೇವತೆಯರಿಂದ ಕತ್ತಿಗಳನ್ನು ಪಡೆದಿದ್ದರು ಎಂದ ಎನ್‌ಸಿಇಆರ್‌ಟಿ: ವಿವಾದದಲ್ಲಿ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕ

0
174

ಸನ್ಮಾರ್ಗ ವಾರ್ತೆ

ಹೊಸ ದೆಹಲಿ: ಎನ್‌ಸಿಇಆರ್‌ಟಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕವು ಮತ್ತೊಮ್ಮೆ ದೇಶದಲ್ಲಿ ಚರ್ಚೆಯ ವಿಷಯವಾಗಿದೆ. 9ನೇ ತರಗತಿಯ ಹೊಸ ಪಠ್ಯಪುಸ್ತಕದಲ್ಲಿ ರಾಜರು ದೇವತೆಯರಿಂದ ಕತ್ತಿಗಳನ್ನು ಸ್ವೀಕರಿಸಿದ್ದಾರೆ ಎಂಬ ಉಲ್ಲೇಖವು ಈಗ ವಿವಾದಕ್ಕೆ ಕಾರಣವಾಗಿದೆ. ಮಂಗಳವಾರ ಬಿಡುಗಡೆಯಾದ ‘ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್ – ಭಾಗ 2’ ಪುಸ್ತಕದಲ್ಲಿ ಈ ವಿಷಯವನ್ನು ನಮೂದಿಸಲಾಗಿದೆ.

7ನೇ ಶತಮಾನದಿಂದ ಭಾರತ ಉಪಖಂಡದ ಮೇಲೆ ನಡೆದ ನಿರಂತರ ದಾಳಿಗಳನ್ನು ಹಿಮ್ಮೆಟ್ಟಿಸಲು ಅನೇಕ ರಾಜರು ಮತ್ತು ರಾಜಕುಮಾರರು ಕಾಳಿ, ದುರ್ಗಾ ಮತ್ತು ಭವಾನಿಯಂತಹ ದೇವತೆಯರು ನೀಡಿದ ಕತ್ತಿಗಳನ್ನು ಬಳಸುತ್ತಿದ್ದರು ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ. ‘ಪ್ರತಿರೋಧ ಮತ್ತು ಸ್ಥೈರ್ಯ’ (ರೆಸಿಸ್ಟೆನ್ಸ್ ಅಂಡ್ ರೆಸೀಲಿಯನ್ಸ್) ಎಂಬ ಶೀರ್ಷಿಕೆಯ ಅಧ್ಯಾಯದಲ್ಲಿ ಈ ಬಗ್ಗೆ ವಿವರಿಸಲಾಗಿದೆ.

7ನೇ ಶತಮಾನದಿಂದ ಭಾರತ ಉಪಖಂಡವು ಎದುರಿಸಿದ ಸರಣಿ ದಾಳಿಗಳು ಮತ್ತು ಪ್ರಾದೇಶಿಕ ವಿಸ್ತರಣೆ ಹಾಗೂ ಧಾರ್ಮಿಕ ಉದ್ದೇಶಗಳಿಗಾಗಿ ಅವುಗಳನ್ನು ಹೇಗೆ ನಡೆಸಲಾಯಿತು ಎಂಬುದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ. ಅರಬ್, ತುರ್ಕಿ, ಮುಘಲ್ ಮತ್ತು ಯುರೋಪಿಯನ್ ಸೇನೆಗಳನ್ನು ಭಾರತೀಯ ಆಡಳಿತಗಾರರು ಮತ್ತು ಸಮಾಜಗಳು ಹೇಗೆ ಪ್ರತಿರೋಧಿಸಿದವು ಎಂಬುದನ್ನೂ ಪುಸ್ತಕವು ವಿವರಿಸುತ್ತದೆ. ಇತಿಹಾಸದ ಮೂರು ಪ್ರಮುಖ ರಾಜರನ್ನು ಉದಾಹರಣೆಗಳಾಗಿ ಪುಸ್ತಕವು ಉಲ್ಲೇಖಿಸಿದೆ.

ಬಸ್ತರ್‌ನ ಆಡಳಿತಗಾರರಾದ ಅನ್ನಮರಾಜ ಅವರು ಮಾಣಿಕ್ಯ ದೇವಿ (ದಂತೆಶ್ವರಿ)ಯಿಂದ ಕತ್ತಿಯನ್ನು ಸ್ವೀಕರಿಸಿದ್ದಾರೆ ಎಂದು ನಂಬಲಾಗಿದೆ, ಹಾಗೆಯೇ ಕುಮಾರ ಕಂಪಣ (ವಿಜಯನಗರ) ಅವರು ಮಧುರೈ ಸುಲ್ತಾನರ ಸೇನೆಯ ವಿರುದ್ಧ ದೇವತೆ ನೀಡಿದ ಕತ್ತಿಯನ್ನು ಬಳಸಿದ್ದರು ಎಂದು ನಂಬಲಾಗಿದೆ. ಅದೇ ರೀತಿ, ಶಿವಾಜಿ ಮಹಾರಾಜರು ಕೂಡ ತುಳಜಾ ಭವಾನಿ ದೇವಿಯಿಂದ ಕತ್ತಿಯನ್ನು ಪಡೆದಿದ್ದರು ಎಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ ಎಂದು ಅಧ್ಯಾಯದಲ್ಲಿ ತಿಳಿಸಲಾಗಿದೆ.

ಯುದ್ಧದ ಧಾರ್ಮಿಕ ಪರಂಪರೆಗಳನ್ನೂ ಪುಸ್ತಕದಲ್ಲಿ ವರ್ಣಿಸಲಾಗಿದೆ. ದೇವತೆಗಳ ಆರಾಧನೆಯು ಭಾರತದಲ್ಲಿ ದೀರ್ಘಕಾಲದ ಸಂಪ್ರದಾಯವಾಗಿದೆ ಮತ್ತು ರಾಜರು ಯುದ್ಧದ ಸಮಯದಲ್ಲಿ ರಕ್ಷಕರಾಗಿ ದೇವತೆಗಳನ್ನು ಪೂಜಿಸುತ್ತಿದ್ದರು. ಮುಘಲರು ಸಿಖ್ ಗುರುಗಳಿಗೆ ತೋರಿದ ಕ್ರೌರ್ಯವು ಇತಿಹಾಸದಲ್ಲಿ ಸಾಟಿಯಿಲ್ಲದ್ದು ಎಂದು ಪುಸ್ತಕ ಹೇಳುತ್ತದೆ.

ಪಠ್ಯಪುಸ್ತಕದ ಮೊದಲ ಭಾಗವು ಜೂನ್‌ನಲ್ಲಿ ಬಿಡುಗಡೆಯಾಗಿತ್ತು. ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಆರು ತಿಂಗಳ ನಂತರ ಎರಡನೇ ಭಾಗವನ್ನು ಬಿಡುಗಡೆ ಮಾಡಲಾಗಿದೆ. ಮಾಧ್ಯಮಿಕ ಹಂತದಲ್ಲಿ ಸಮಾಜ ವಿಜ್ಞಾನದ ಅಧ್ಯಯನವು ವಿಮರ್ಶಾತ್ಮಕ ವಿಚಾರಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಎನ್‌ಸಿಇಆರ್‌ಟಿ ಮುಖ್ಯಸ್ಥ ದಿನೇಶ್ ಸಕ್ಲಾನಿ ತಿಳಿಸಿದ್ದಾರೆ.

“ಈ ಹಂತದಲ್ಲಿ ಸಮಾಜ ವಿಜ್ಞಾನದ ಅಧ್ಯಯನವು ವಿಶ್ಲೇಷಣಾತ್ಮಕ ಮತ್ತು ಚರ್ಚಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ, ವಿಮರ್ಶಾತ್ಮಕ ವಿಚಾರಣೆಯನ್ನು ಪ್ರೋತ್ಸಾಹಿಸುತ್ತದೆ, ಸಾಂಸ್ಕೃತಿಕ ತಿಳುವಳಿಕೆಯನ್ನು ಉತ್ತೇಜಿಸುತ್ತದೆ ಮತ್ತು ನಾಗರಿಕ ಹಾಗೂ ಸಾಮಾಜಿಕ ಜೀವನದಲ್ಲಿ ಕಲಿಯುವವರು ಆತ್ಮವಿಶ್ವಾಸದಿಂದ ಮತ್ತು ಜವಾಬ್ದಾರಿಯುತವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದೇ ಸ್ಫೂರ್ತಿಯಿಂದ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವಾದ ‘ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್’ ಅನ್ನು ರೂಪಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ” ಎಂದು ಸಕ್ಲಾನಿ ಹೇಳಿದರು.