ಸನ್ಮಾರ್ಗ ವಾರ್ತೆ
ಗಾಝಾದಲ್ಲಿ ಕದನ ವಿರಾಮ ಒಪ್ಪಂದವನ್ನು ಘೋಷಿಸಿ ಒಂದು ವರ್ಷ ಕಳೆದಿದ್ದರೂ, ಅದು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದೆ ಎಂದು 100 ಕ್ಕೂ ಹೆಚ್ಚು ಮಾನವ ಹಕ್ಕು, ಮಾನವೀಯ ಮತ್ತು ನಾಗರಿಕ ಸಮಾಜ ಸಂಘಟನೆಗಳು ತಿಳಿಸಿವೆ. ಇಸ್ರೇಲಿ ಪಡೆಗಳ ದಾಳಿಯಿಂದ ಪ್ರತಿದಿನ ಫೆಲೆಸ್ತೀನಿಯನ್ನರು ಕೊಲ್ಲಲ್ಪಡುತ್ತಿದ್ದಾರೆ ಮತ್ತು ಗಾಯಗೊಳ್ಳುತ್ತಿದ್ದಾರೆ. ಗಾಝಾಕ್ಕೆ ನೆರವು ನೀಡುವುದು ಮತ್ತು ಪುನರ್ನಿರ್ಮಾಣ ಕಾರ್ಯಗಳ ಮೇಲಿನ ನಿರ್ಬಂಧಗಳು ಮುಂದುವರಿದಿವೆ ಎಂದು ಸಂಘಟನೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಅಮ್ನೆಸ್ಟಿ ಇಂಟರ್ನ್ಯಾಷನಲ್, ನಾರ್ವೇಜಿಯನ್ ರೆಫ್ಯೂಜಿ ಕೌನ್ಸಿಲ್, ಸೇವ್ ದಿ ಚಿಲ್ಡ್ರನ್, ಆಕ್ಸ್ಫ್ಯಾಮ್ ಮತ್ತು ಗ್ರೀನ್ಪೀಸ್ ಸೇರಿದಂತೆ ಹಲವು ಸಂಘಟನೆಗಳು ಈ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2025 ರ ಅಕ್ಟೋಬರ್ 10 ರಂದು ಕದನ ವಿರಾಮವನ್ನು ಘೋಷಿಸಿದ ನಂತರದ ಒಂದು ವರ್ಷದಲ್ಲಿ ಇಸ್ರೇಲಿ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಫೆಲೆಸ್ತೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಎಂದು ಸಂಘಟನೆಗಳು ಬೆಟ್ಟು ಮಾಡಿವೆ. ಮೃತರ ಪೈಕಿ ಕನಿಷ್ಠ 327 ಮಕ್ಕಳಿದ್ದಾರೆ.
“ಕದನ ವಿರಾಮವು ಕೇವಲ ಹೆಸರಿಗಷ್ಟೇ ಇದೆ. ಇಸ್ರೇಲಿ ಪಡೆಗಳು ಪ್ರತಿದಿನ ಫೆಲೆಸ್ತೀನಿಯನ್ನರನ್ನು ಕೊಲ್ಲುತ್ತಿವೆ ಮತ್ತು ಗಾಯಗೊಳಿಸುತ್ತಿವೆ. ನೆರವು, ಉಪಕರಣಗಳು ಮತ್ತು ಪುನರ್ನಿರ್ಮಾಣ ಸಾಮಗ್ರಿಗಳ ಮೇಲಿನ ನಿರ್ಬಂಧಗಳು ಕುಟುಂಬಗಳು ಸಾಮಾನ್ಯ ಜೀವನಕ್ಕೆ ಮರಳುವುದನ್ನು ತಡೆಯುತ್ತಿವೆ” ಎಂದು ಜಂಟಿ ಹೇಳಿಕೆ ತಿಳಿಸಿದೆ.
“ಕದನ ವಿರಾಮ ಜಾರಿಗೆ ಬಂದು ಒಂದು ವರ್ಷವಾದರೂ ಗಾಝಾದಲ್ಲಿ ಫೆಲೆಸ್ತೀನಿಯನ್ನರ ಜೀವನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ನಾರ್ವೇಜಿಯನ್ ರೆಫ್ಯೂಜಿ ಕೌನ್ಸಿಲ್ನ ಪ್ರಧಾನ ಕಾರ್ಯದರ್ಶಿ ಜಾನ್ ಎಗೆಲ್ಯಾಂಡ್ ಹೇಳಿದ್ದಾರೆ.
“ಮಕ್ಕಳು ಇಂದಿಗೂ ಕೊಲ್ಲಲ್ಪಡುತ್ತಿರುವಾಗ ಮತ್ತು ಕುಟುಂಬಗಳಿಗೆ ತಮ್ಮ ಜೀವನವನ್ನು ಮರುನಿರ್ಮಾಣ ಮಾಡಲು ಸಾಧ್ಯವಾಗದಿರುವಾಗ ಕದನ ವಿರಾಮದ ಅರ್ಥ ಏನು?” ಎಂದು ಸೇವ್ ದಿ ಚಿಲ್ಡ್ರನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಇಂಗರ್ ಆಶಿಂಗ್ ಪ್ರಶ್ನಿಸಿದ್ದಾರೆ. 2025 ರ ಅಕ್ಟೋಬರ್ 10 ರಂದು ಕದನ ವಿರಾಮ ಘೋಷಣೆಯಾದಾಗಿನಿಂದ ಪ್ರತಿದಿನ ಸುಮಾರು ಒಬ್ಬ ಮಗು ಕೊಲ್ಲಲ್ಪಟ್ಟಿದೆ ಎಂದು ಅವರು ಬೆಟ್ಟು ಮಾಡಿದ್ದಾರೆ.
74,000 ಕ್ಕೂ ಹೆಚ್ಚು ಜನರ ಸಾವು:
ಫೆಲೆಸ್ತೀನಿಯನ್ ಆರೋಗ್ಯ ಸಚಿವಾಲಯದ ಪ್ರಕಾರ, 2023 ರ ಅಕ್ಟೋಬರ್ನಲ್ಲಿ ಇಸ್ರೇಲಿ ದಾಳಿ ಪ್ರಾರಂಭವಾದಾಗಿನಿಂದ ಗಾಝಾದಲ್ಲಿ 74,000 ಕ್ಕೂ ಹೆಚ್ಚು ಫೆಲೆಸ್ತೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಮತ್ತು 175,000 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಸುಮಾರು ಶೇಕಡಾ 24 ರಷ್ಟು ಜನರು ತೀವ್ರ ಮತ್ತು ಜೀವನವನ್ನೇ ಬದಲಾಯಿಸುವಂತಹ ಗಾಯಗಳಿಗೆ ಒಳಗಾಗಿದ್ದಾರೆ ಹಾಗೂ ಅವರಿಗೆ ದೀರ್ಘಕಾಲೀನ ಪುನರ್ವಸತಿಯ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಇವರಲ್ಲಿ ಕಾಲು ಭಾಗದಷ್ಟು ಜನರು ಮಕ್ಕಳಾಗಿದ್ದಾರೆ.
ಗಾಝಾದಲ್ಲಿ ಉಳಿದಿರುವ ಆರೋಗ್ಯ ಸೌಲಭ್ಯಗಳು ಸಹ ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಇಂಧನದ ತೀವ್ರ ಅಭಾವವನ್ನು ಎದುರಿಸುತ್ತಿವೆ. ಗಾಝಾದ 36 ಆಸ್ಪತ್ರೆಗಳಲ್ಲಿ ಯಾವುದೂ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕನಿಷ್ಠ 4,000 ಮಕ್ಕಳು ಸೇರಿದಂತೆ 18,500 ಕ್ಕೂ ಹೆಚ್ಚು ರೋಗಿಗಳನ್ನು ಚಿಕಿತ್ಸೆಗಾಗಿ ಗಾಝಾದಿಂದ ಹೊರಗೆ ತುರ್ತಾಗಿ ಸ್ಥಳಾಂತರಿಸುವ ಅಗತ್ಯವಿದೆ ಎಂದು ಸಚಿವಾಲಯ ತಿಳಿಸಿದೆ. ಚಿಕಿತ್ಸೆಗಾಗಿ ಸ್ಥಳಾಂತರಗೊಳ್ಳಲು ಕಾಯುತ್ತಿದ್ದಾಗ ಈಗಾಗಲೇ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಕದನ ವಿರಾಮದ ನಡುವೆಯೂ ಮುಂದುವರಿದ ದಾಳಿಗಳು:
ಶುಕ್ರವಾರ ಮಧ್ಯ ಗಾಝಾದ ನಿರಾಶ್ರಿತರ ಶಿಬಿರ ಪ್ರದೇಶಗಳ ಮೇಲೆ ಇಸ್ರೇಲಿ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಒಬ್ಬ ಫೆಲೆಸ್ತೀನಿಯನ್ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ದಕ್ಷಿಣ ಗಾಝಾದಲ್ಲಿ ಇಸ್ರೇಲಿ ಟ್ಯಾಂಕ್ಗಳು ಸಹ ಭಾರಿ ಗುಂಡಿನ ದಾಳಿ ನಡೆಸಿದ್ದು, ಹಲವರು ಗಾಯಗೊಂಡಿದ್ದಾರೆ. ಗುರುವಾರ ನಡೆದ ವೈಮಾನಿಕ ದಾಳಿ ಮತ್ತು ಶೆಲ್ ದಾಳಿಯಲ್ಲಿ ಕನಿಷ್ಠ ಎಂಟು ಫೆಲೆಸ್ತೀನಿಯನ್ನರು ಕೊಲ್ಲಲ್ಪಟ್ಟರು ಮತ್ತು ಇತರ ಹಲವರು ಗಾಯಗೊಂಡರು.
ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರೇಲ್ ನಿಯಂತ್ರಿತ ಪ್ರದೇಶಗಳು ಮತ್ತು ಫೆಲೆಸ್ತೀನಿಯನ್ ಪ್ರದೇಶಗಳನ್ನು ಪ್ರತ್ಯೇಕಿಸಲು ನಿಗದಿಪಡಿಸಲಾಗಿದ್ದ ‘ಯೆಲ್ಲೋ ಲೈನ್’ (ಹಳದಿ ರೇಖೆ) ಅನ್ನು ಏಕಪಕ್ಷೀಯವಾಗಿ ಬದಲಾಯಿಸುತ್ತಿರುವುದು ಫೆಲೆಸ್ತೀನಿಯನ್ನರನ್ನು ಮತ್ತಷ್ಟು ಕಿರಿದಾದ ಪ್ರದೇಶಗಳಿಗೆ ತಳ್ಳುತ್ತಿದೆ ಎಂದೂ ಸಂಘಟನೆಗಳು ಆರೋಪಿಸಿವೆ.
ಕದನ ವಿರಾಮ ಜಾರಿಗೆ ಬಂದ ನಂತರ ಇಸ್ರೇಲಿ ದಾಳಿಯಲ್ಲಿ ಕನಿಷ್ಠ 1,471 ಫೆಲೆಸ್ತೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಮತ್ತು 5,189 ಜನರು ಗಾಯಗೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಸ್ರೇಲಿ ದಾಳಿ ಪ್ರಾರಂಭವಾದಾಗಿನಿಂದ ಕನಿಷ್ಠ 21,000 ಮಕ್ಕಳು ಸೇರಿದಂತೆ ಒಟ್ಟು 74,254 ಫೆಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ ಎಂದು ಫೆಲೆಸ್ತೀನಿಯನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ನೈಜ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಸಂಘಟನೆಗಳು ಹೇಳುತ್ತವೆ. ಸಚಿವಾಲಯದ ಅಂಕಿಅಂಶಗಳು ಅಧಿಕೃತವಾಗಿ ನೋಂದಾಯಿತ ಸಾವುಗಳು ಮಾತ್ರವಾಗಿವೆ. ಕಟ್ಟಡಗಳ ಅಡಿಯಲ್ಲಿ ಸಿಲುಕಿರುವ ಮತ್ತು ನಾಪತ್ತೆಯಾಗಿರುವ ಸಾವಿರಾರು ಜನರನ್ನು ಈ ಅಂಕಿಅಂಶ ಒಳಗೊಂಡಿಲ್ಲ.
“ಜವಾಬ್ದಾರಿಯನ್ನು ಶೇಷಾವಶೇಷಗಳ ಅಡಿಯಲ್ಲಿ ಹೂತುಹಾಕಲು ಸಾಧ್ಯವಿಲ್ಲ” ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ನ ಪ್ರಧಾನ ಕಾರ್ಯದರ್ಶಿ ಆಗ್ನೆಸ್ ಕಲ್ಲಮಾರ್ಡ್ ಹೇಳಿದ್ದಾರೆ. ಇಸ್ರೇಲ್ ಅನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯದ (ICJ) ಆದೇಶಗಳನ್ನು ಪಾಲಿಸುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಲು ವಿಫಲವಾಗುತ್ತಿರುವುದು ಫೆಲೆಸ್ತೀನಿಯನ್ನರ ವಿರುದ್ಧದ ವ್ಯಾಪಕ ದೌರ್ಜನ್ಯಗಳಿಗೆ ಹಾದಿ ಮಾಡಿಕೊಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.












