✍️ ನಿಹಾಲ್ ಕಿದಿಯೂರ್
ಮಾಜಿ ರಾಷ್ಟ್ರೀಯ ಕಾರ್ಯದರ್ಶಿ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ
‘ಅದರೈಝೇಶನ್'(Otherization) ಅಥವಾ ʻಅನ್ಯರನ್ನಾಗಿ ಮಾಡುವುದುʼ ಎಂಬುದು ಒಂದು ಜನಸಮುದಾಯವನ್ನು ಅಸ್ಪೃಶ್ಯರನ್ನಾಗಿ, ಅಂಚಿಗೆ ತಳ್ಳಲ್ಪಟ್ಟವರನ್ನಾಗಿ, ಅಪ್ರಸ್ತುತರಾಗಿ ಮತ್ತು ತ್ಯಜಿಸಲ್ಪಡುವವರನ್ನಾಗಿ ಮಾಡುವಂತಹ ಒಂದು ಪ್ರಕ್ರಿಯೆಯಾಗಿದೆ. ಕಾದಂಬರಿಕಾರ ಆಲ್ಡಸ್ ಹಕ್ಸ್ಲಿ ಹೇಳುವಂತೆ, ಪ್ರಚಾರದ (ಪ್ರಪೋಗಂಡಾ) ಕೆಲಸವೇ ಒಂದು ಜನ ಸಮುದಾಯವನ್ನು ಅದೃಶ್ಯರನ್ನಾಗಿ ಮಾಡುವುದಾಗಿದೆ. ಇಂದಿನ ಆಡಳಿತಾರೂಢರ ರಾಜಕೀಯ ಸಿದ್ಧಾಂತವನ್ನು ವಿಮರ್ಶಾತ್ಮಕ ವಿಶ್ಲೇಷಣೆಗೆ ಒಳಪಡಿಸಿದಾಗ, ‘ಅನ್ಯಗೊಳಿಸುವಿಕೆ’ ಎಂಬುದೇ ಅವರ ಇಡೀ ಪರಿಕಲ್ಪನೆಯ ತಾತ್ವಿಕ ತಳಹದಿಯಾಗಿದ್ದು, ಅವರ ದೃಷ್ಟಿಕೋನ ಮತ್ತು ಕಾರ್ಯಾಚರಣೆಯ ಚೌಕಟ್ಟನ್ನು ಅದು ನಿರ್ಣಯಿಸುತ್ತದೆ. ಈ ವೈಚಾರಿಕತೆಯ ಬೌದ್ಧಿಕ ತಳಹದಿ ಮತ್ತು ಸಾಮಾಜಿಕ ಪರಿಣಾಮಗಳನ್ನು ವಿಶ್ಲೇಷಿಸುವ ಮೂಲಕ ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
ಅನ್ಯಗೊಳಿಸುವಿಕೆಯ ಬೌದ್ಧಿಕ ತಳಹದಿಗಳು
ಒಂದನೇಯದಾಗಿ, ಒಂದು ರಾಜಕೀಯ ಸಿದ್ಧಾಂತ ಹಾಗೂ ಪರಿಕಲ್ಪನೆಯಾಗಿ ‘ರಾಷ್ಟ್ರ-ರಾಜ್ಯ'(Nation-state)ದ ಉಗಮ ಮತ್ತು ವಿಕಾಸವು ಆಧುನಿಕತೆಯ ಉತ್ಪನ್ನವಾಗಿ ಯುರೋಪಿನಲ್ಲಿ ತನ್ನ ಬೇರುಗಳನ್ನು ಹೊಂದಿದೆ. ಯುರೋಪಿಯನ್ ಸಮಾಜದ ಪ್ರಮುಖ ಲಕ್ಷಣಗಳಲ್ಲಿ ಒಂದೇನೆಂದರೆ, ಅದರ ಸಾಂಸ್ಕೃತಿಕ ಏಕರೂಪತೆ ಹಾಗೂ ಜನಸಮುದಾಯದಲ್ಲಿ ಎದ್ದು ಕಾಣಿಸುವ ವೈವಿಧ್ಯತೆಯು ಇಲ್ಲದಿರುವುದಾಗಿದೆ. ಆದ್ದರಿಂದ ಅಲ್ಲಿ ಹುಟ್ಟಿಕೊಂಡ ‘ರಾಷ್ಟ್ರ-ರಾಜ್ಯ’ದಲ್ಲಿ ಯಾವಾಗಲೂ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಿನ ಗೊಂದಲವಿದ್ದು; ಅದು ‘ಅನ್ಯರು’ ಅಥವಾ ಹೊರಗಿನವರು ಎಂಬ ಶಾಶ್ವತ ವರ್ಗವನ್ನು ಹೊಂದಿರುತ್ತದೆ. ಜಾರ್ಜ್ ಆರ್ವೆಲ್ ತಮ್ಮ ‘ಆನಿಮಲ್ ಫಾರ್ಮ್’ ಕೃತಿಯಲ್ಲಿ ಹೇಳುವಂತೆ, “ಎಲ್ಲಾ ಪ್ರಾಣಿಗಳೂ ಸಮಾನ, ಆದರೆ ಕೆಲವು ಪ್ರಾಣಿಗಳು ಇತರಕ್ಕಿಂತ ಹೆಚ್ಚು ಸಮಾನ.” ಈ ‘ಹೆಚ್ಚು ಸಮಾನ’ ಎಂಬ ಅಂಶವೇ ಅನ್ಯಗೊಳಿಸುವಿಕೆಯ ಮೂಲ ತಿರುಳಾಗಿದೆ. ಭಾರತದ ಸಾಮಾಜಿಕ ಮತ್ತು ರಾಜಕೀಯ ವಾಸ್ತವಗಳನ್ನು ಯೋಚಿಸದೆ ಈ ‘ರಾಷ್ಟ್ರ-ರಾಜ್ಯ’ದ ಕಲ್ಪನೆಯನ್ನು ಎಲ್ಲದಕ್ಕೂ ರಾಮಬಾಣ ಎಂಬಂತೆ ವಸಾಹತು ಅಧೀನ ಪ್ರಜೆಗಳ ಮೇಲೆ ಹೇರಲಾಯಿತು. ಇದು ನಮ್ಮ ರಾಜಕೀಯ ಆಲೋಚನೆಯಲ್ಲಿ ದೊಡ್ಡ ಗೊಂದಲವನ್ನು ಉಂಟುಮಾಡಿತು. ಗಾಂಧೀಜಿಯಂತಹ ನಾಯಕರು ಇದನ್ನು ವಿರೋಧಿಸಿ, ಗ್ರಾಮಕೇಂದ್ರೀತ ಸ್ವರಾಜ್ಯವನ್ನು ದೇಶದ ಪರ್ಯಾಯ ರಾಜಕೀಯ ಕಲ್ಪನೆಯನ್ನಾಗಿ ಪ್ರತಿಪಾದಿಸಿದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ರಾಷ್ಟ್ರ-ರಾಜ್ಯ ಎಂಬ ಪರಿಕಲ್ಪನೆಯು ತನ್ನ ಸಹಜ ಸ್ವಭಾವದಿಂದಲೇ ‘ಅನ್ಯರನ್ನು’ ಸೃಷ್ಟಿಸುತ್ತದೆ, ಮತ್ತು ಆ ಅನ್ಯರು ಸದಾ ಅನುಮಾನಾಸ್ಪದ ಪ್ರಜೆಯಾಗಿಯೇ ಉಳಿಯುತ್ತಾರೆ.
ಎರಡನೆಯದಾಗಿ, ರಾಷ್ಟ್ರ-ರಾಜ್ಯ ಎಂಬ ಕಲ್ಪನೆಯು ಹಿಂದುತ್ವದ ಸಾಂಸ್ಕೃತಿಕ ರಾಷ್ಟ್ರೀಯತೆಯೊಂದಿಗೆ ಸಮ್ಮಿಲನಗೊಂಡಾಗ, ಅದು ಇತರ ಸಮುದಾಯಗಳಿಗಿಂತ ಹಿಂದೂ ಸಮುದಾಯವೇ ಶ್ರೇಷ್ಠ ಎಂಬ ತಳಹದಿಯ ಮೇಲೆ ಜನಾಂಗೀಯ ಗಣರಾಜ್ಯವನ್ನು ಕಲ್ಪಿಸುತ್ತದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಈ ದೇಶದ ಎರಡನೇ ದರ್ಜೆಯ ಪ್ರಜೆಗಳಂತೆ ನೋಡಬೇಕು ಎಂದು ಗೋಲ್ವಾಲ್ಕರ್ ಹೇಳಿರುವುದು ಹಿಂದುತ್ವ ಮತ್ತು ಈ ಆಲೋಚನೆಯನ್ನು ಪ್ರತಿನಿಧಿಸುವ ಆರ್.ಎಸ್.ಎಸ್.ನ ಮುಖ್ಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಆಶಿಶ್ ನಂದಿ ಅವರು ಹೇಳುವಂತೆ, ನಾವು ಗಮನಿಸಬೇಕಾದ ಒಂದು ಮುಖ್ಯ ವಿಷಯವೆಂದರೆ — ಹಿಂದುತ್ವದ ಆಲೋಚನೆಯು ಮೂಲತಃ ಪಾಶ್ಚಿಮಾತ್ಯರ ಜನಾಂಗೀಯ ಶ್ರೇಷ್ಠತೆಯ ಯೋಜನೆಯಾಗಿದ್ದು, ಅದು ‘ಅನ್ಯರನ್ನು’ ಅಂಚಿಗೆ ತಳ್ಳಲು ಬಯಸುತ್ತದೆ. ಭಾರತೀಯ ನಾಗರಿಕತೆ ಮತ್ತು ಸಂಪ್ರದಾಯದಲ್ಲಿ ಇದಕ್ಕೆ ಯಾವುದೇ ಬೇರುಗಳಿಲ್ಲ; ಬದಲಿಗೆ ಇದು ಧರ್ಮವನ್ನು ಉಪಕರಣವನ್ನಾಗಿ ಬಳಸಿಕೊಂಡು ಅಧಿಕಾರ ಹಿಡಿಯುವ ಪಾಶ್ಚಿಮಾತ್ಯರ ಆಧುನಿಕ ಯೋಜನೆಯಾಗಿದೆ. ಈ ಅನ್ಯ ಗೊಳಿಸುವಿಕೆಯೇ ಹಿಂದುತ್ವದ ಇಡೀ ಸಿದ್ಧಾಂತ ಕೆಲಸ ಮಾಡುವ ಮುಖ್ಯ ಅಕ್ಷವಾಗಿದೆ.
ಇದುವೇ ಪ್ರಸ್ತುತ ಆಡಳಿತದ ವರ್ಗದ ಬೌದ್ಧಿಕ ತಳಹದಿಯಾಗಿದೆ. ಈಗ ಅನ್ಯ ಗೊಳಿಸುವಿಕೆಯು ನಮ್ಮ ಸಮಾಜದಲ್ಲಿ ಹೇಗೆ ಪ್ರಕಟಗೊಳ್ಳುತ್ತದೆ ಎಂಬುದನ್ನು ನೋಡೋಣ.
ನಾನು ‘ಬ್ಲ್ಯಾಕ್ ಮಿರರ್’ ಟಿವಿ ಸರಣಿಯ ‘ಫೈರ್ ಇನ್ ದಿ ಆರ್ಮ್ಸ್’ ಎಂಬ ನೆಟ್ಫ್ಲಿಕ್ಸ್ ಎಪಿಸೋಡಿನ ಕಥೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಇದರಲ್ಲಿ ಮುಖ್ಯ ಪಾತ್ರಧಾರಿಯನ್ನು ಝೋಂಬಿಗಳ ಅಪಾಯವನ್ನು ಮಟ್ಟ ಹಾಕಲು ಕಳುಹಿಸಲಾಗುತ್ತದೆ. ಕಾರ್ಯಾಚರಣೆ ನಡೆಸುವಾಗ, ಒಂದು ಝೋಂಬಿ ಆತನಿಗೆ ಸಾಮಾನ್ಯ ಮನುಷ್ಯನ ತರ ಕಾಣಿಸುತ್ತದೆ. ಆಗ ಅದನ್ನು ಎದುರಿಸುವುದು ಆತನಿಗೆ ತುಂಬಾ ಕಷ್ಟವಾಗುತ್ತದೆ. ಆತ ಬೇಸ್ಕ್ಯಾಂಪ್ಗೆ ಮರಳಿ ಬಂದಮೇಲೆ ತನ್ನ ಸೂಪರ್ವೈಸರ್ ಬಳಿ ಇದರ ಬಗ್ಗೆ ವಿಚಾರಿಸುತ್ತಾನೆ. ಸೂಪರ್ವೈಸರ್, “ನಿನಗೆ ಸರಿಯಾಗಿ ನಿದ್ದೆ ಇಲ್ಲದೆ ಹೀಗೆ ಕಾಣಿಸುತ್ತಿರಬಹುದು” ಎಂದು ಆ ವಿಷಯವನ್ನು ತಳ್ಳಿ ಹಾಕುತ್ತಾನೆ. ಮುಂದಿನ ಕಾರ್ಯಾಚರಣೆಯಲ್ಲಿ, ಆತ ಝೋಂಬಿಗಳನ್ನು ಮನುಷ್ಯರಂತೆ ನೋಡುವುದು ಮಾತ್ರವಲ್ಲದೆ, ತನ್ನ ಜೊತೆಗಿದ್ದ ಸೈನಿಕರ ವಿರುದ್ಧವೇ ಹೋಗಿ ಆ ಝೋಂಬಿಗಳಿಗೆ ಸಹಾಯ ಮಾಡುತ್ತಾನೆ. ಈ ಬಾರಿ ಕ್ಯಾಂಪ್ಗೆ ಮರಳಿ ಬಂದಾಗ ಅವನು ಸೂಪರ್ವೈಸರ್ನನ್ನು ತೀವ್ರವಾಗಿ ಪ್ರಶ್ನಿಸುತ್ತಾನೆ. ಮೊದಲು ವಿಷಯವನ್ನು ಮುಚ್ಚಿಡಲು ನೋಡಿದ ಸೂಪರ್ವೈಸರ್, ಕೊನೆಗೆ “ನಾವು ದಾಳಿ ಮಾಡುತ್ತಿರುವುದು ಝೋಂಬಿಗಳ ಮೇಲಲ್ಲ, ಮನುಷ್ಯರ ಮೇಲೆಯೇ” ಎಂದು ಒಪ್ಪಿಕೊಳ್ಳುತ್ತಾನೆ. ಆದರೆ ಮನುಷ್ಯನ ಸಹಜ ಗುಣದಿಂದಾಗಿ ಇನ್ನೊಬ್ಬ ಮನುಷ್ಯನಿಗೆ ಹಾನಿ ಮಾಡಲು ಮನಸ್ಸು ಬರುವುದಿಲ್ಲವಲ್ಲ, ಅದಕ್ಕಾಗಿಯೇ ಸೈನಿಕರ ತಲೆಯಲ್ಲಿ ಒಂದು ಚಿಪ್ ಅಳವಡಿಸಲಾಗಿರುತ್ತದೆ. ಅದು ಎದುರಾಳಿಗಳನ್ನು/ಅನ್ಯರನ್ನು ಝೋಂಬಿಗಳಂತೆ ಕಾಣುವ ತರಹ ಮಾಡುತ್ತದೆ. ಇದರಿಂದ ಅವರನ್ನು ಕೊಲ್ಲುವುದು ಸುಲಭವಾಗುತ್ತದೆ. ಈ ಕಥೆಯು ಅನ್ಯಗೊಳಿಸುವಿಕೆ ‘ಏಕೆ, ಏನು ಮತ್ತು ಹೇಗೆ’ ಎಂಬುದನ್ನು ವಿವರಿಸುತ್ತದೆ. ಇಂದು ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ಚಲನಚಿತ್ರಗಳು, ಸಾಹಿತ್ಯ ಮತ್ತು ಪಠ್ಯಪುಸ್ತಕಗಳ ಮೂಲಕವೂ ‘ಅನ್ಯರನ್ನು’ ಕೃತಕವಾಗಿ ಸೃಷ್ಟಿಸಲಾಗುತ್ತಿದೆ.
ಅನ್ಯಗೊಳಿಸುವಿಕೆ ಮತ್ತು ಜನರ ಆಲೋಚನೆ ನಿಯಂತ್ರಣ
ಜೇಮಿ ಸಸ್ಕೈಂಡ್ ತಮ್ಮ ‘ಫ್ಯೂಚರ್ ಪಾಲಿಟಿಕ್ಸ್’ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ— ಹಿಂದೆ ಸರ್ಕಾರದ ಬಳಿ ದೌರ್ಜನ್ಯ ಮಾಡುವ ಅಧಿಕಾರ ಮಾತ್ರ ಇತ್ತು, ಆದರೆ ಈಗ ತಂತ್ರಜ್ಞಾನ ಬೆಳೆದಂತೆ ಜನರ ಆಲೋಚನೆ(ಗ್ರಹಿಕೆ)ಗಳನ್ನು ನಿಯಂತ್ರಿಸುವ (ಪರ್ಸೆಪ್ಷನ್ ಕಂಟ್ರೋಲ್) ಮತ್ತು ಕಣ್ಣಿಡುವ ಹೆಚ್ಚಿನ ಅವಕಾಶ ಸಿಕ್ಕಿದೆ. ಈ ಆಲೋಚನಾ ನಿಯಂತ್ರಣವನ್ನು ಇಂದಿನ ಸರ್ಕಾರವು ಭಾರತದಲ್ಲಿ ‘ಅನ್ಯರು’ ಎಂದು ಭಾವಿಸಲಾದ ಜನರ ಮೇಲೆ ನಿರ್ದಯವಾಗಿ ಬಳಸುತ್ತಿದೆ. ಭಾರತದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅವರು ತಮ್ಮದೇ ಆದ ಗಣರಾಜ್ಯದ ಕಲ್ಪನೆಯನ್ನು ಮುನ್ನೆಲೆಗೆ ತಂದಿರುವುದನ್ನು ನಾವು ನೋಡುತಿದ್ದೇವೆ. ‘ಅನ್ಯರು’ ಎಂಬ ಭಾವನೆಯನ್ನು ಅವರು ಗಟ್ಟಿ ಮಾಡಿದ್ದಾರೆ ಮತ್ತು ಅವರ ಜನಾಂಗೀಯ ರಾಷ್ಟ್ರೀಯತೆಯನ್ನು ಒಪ್ಪದ ಯಾರನ್ನೇ ಆದರೂ ‘ಅನ್ಯರು’ ಎಂದು ಹಣೆಪಟ್ಟಿ ಕಟ್ಟುತ್ತಾರೆ. ಅರ್ಬನ್ ನಕ್ಸಲ್, ದೇಶದ್ರೋಹಿ, ದಿಮಾಗಿ ನಕ್ಸಲ್, ತುಕಡೆ-ತುಕಡೆ ಗ್ಯಾಂಗ್ ಮುಂತಾದ ಪದಾವಳಿಗಳನ್ನು ವ್ಯಾಪಕಗೊಳಿಸಿದ್ದಾರೆ. ಜನರ ಮನಸ್ಸಿನಲ್ಲಿ ‘ಅನ್ಯರ’ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಮತ್ತು ಕೆಲವೊಮ್ಮೆ ಇಡೀ ಸಮುದಾಯವನ್ನು ದುಷ್ಟರಾಗಿ ಚಿತ್ರಿಸಲು ಹೀಗೆ ಮಾಡಲಾಗುತ್ತಿದೆ.
ಹಾಗಂತ ಈ ಅನ್ಯ ಗೊಳಿಸುವಿಕೆಯು 2014 ರ ನಂತರವೇ ಶುರುವಾಯಿತು, ಅದಕ್ಕೂ ಮೊದಲು ಎಲ್ಲವೂ ಚೆನ್ನಾಗಿತ್ತು ಎಂದರ್ಥವಲ್ಲ. ಅನ್ಯಗೊಳಿಸುವಿಕೆಯು ರಾಷ್ಟ್ರ-ರಾಜ್ಯ ಕಲ್ಪನೆಯ ಜೀವಾಳದಲ್ಲೇ ಅಡಗಿದೆ ಹಾಗೂ ಅದು ಅದರ ವೈಫಲ್ಯಕ್ಕಿಂತ ಹೆಚ್ಚಾಗಿ ಅದರ ಒಂದು ಲಕ್ಷಣವಾಗಿದೆ. ಆದ್ದರಿಂದ ಬಿಜೆಪಿ- ಆರ್.ಎಸ್.ಎಸ್ ಅದನ್ನು ಸಾಂಸ್ಥಿಕ ರೂಪದಲ್ಲಿ ಅಳವಡಿಸಿಕೊಂಡಿದೆ ಎಂಬುದು ನನ್ನ ಮುಖ್ಯ ವಾದವಾಗಿದೆ. ಉದಾಹರಣೆಗೆ, ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಜನಪ್ರಿಯವಾಗಿ ಸಿಎಎ ಎಂದು ಕರೆಯಲ್ಪಡುವ ಕಾಯ್ದೆ, ಒಂದು ಧರ್ಮವನ್ನು ತಾರತಮ್ಯದಿಂದ ಹೊರಗಿಟ್ಟ ಸ್ಪಷ್ಟ ನಿದರ್ಶನವಾಗಿದ್ದು, ಇದನ್ನು ತೀವ್ರವಾಗಿ ಪ್ರತಿಭಟಿಸಲಾಯಿತು. ಸಿಎಎ ವಿರೋಧಿ ಚಳವಳಿಯ ಸಮಯದಲ್ಲಿ, ಅನ್ಯ ಗೊಳಿಸುವಿಕೆಯ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಪ್ರದರ್ಶನಗೊಂಡಿತು. ಪ್ರತಿಭಟನಾಕಾರರನ್ನು ದೇಶದ್ರೋಹಿಗಳೆಂದೂ, ಸಭೆ-ಸಮಾರಂಭಗಳನ್ನು ಭಾರತ ವಿರೋಧಿ ಎಂದೂ ಹಣೆಪಟ್ಟಿ ಕಟ್ಟಲಾಯಿತು. ಯಾವ ಮಟ್ಟಿಗಂದರೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು ಗುಂಡಿನ ದಾಳಿಗೆ ಸಾಕ್ಷಿಯಾಯಿತು, ಜಾಮಿಯಾ ಮಿಲ್ಲಿಯಾ ಗ್ರಂಥಾಲಯದಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಮಿಲಿಟರಿ ಪಡೆಗಳು ಭೀಕರ ದಾಳಿ ನಡೆಸಿದವು, ಮತ್ತು ಉಮರ್ ಖಾಲಿದ್, ಮೀರಾನ್ ಹೈದರ್, ಶರ್ಜೀಲ್ ಇಮಾಮ್ ಮುಂತಾದವರು ಇಂದಿಗೂ ಕಾರಾಗೃಹದಲ್ಲಿದ್ದಾರೆ.
ಶೋಷಕ ಕಾನೂನನ್ನು ರದ್ದುಗೊಳಿಸಲು ರೈತರು ನಡೆಸಿದ ಚಳವಳಿಯ ಸಮಯದಲ್ಲಿಯೂ, ಪ್ರತಿಭಟನಾಕಾರರನ್ನು ಖಾಲಿಸ್ತಾನಿಗಳೆಂದು ಕರೆದು ಅವರ ವಿರುದ್ಧ ದುಷ್ಪ್ರಚಾರ ನಡೆಸಲಾಯಿತು. ಭೀಮಾ-ಕೋರೆಗಾಂವ್ ಹೋರಾಟಗಾರರನ್ನು ಅರ್ಬನ್ ನಕ್ಸಲರೆಂದು ಹೇಗೆ ಹಣೆಪಟ್ಟಿ ಹಚ್ಚಲಾಯಿತು ಎಂಬುದನ್ನೂ ನಾವು ಕಂಡಿದ್ದೇವೆ. ಆದರೆ ಇದನ್ನು ಶಿಕ್ಷಣದ ವ್ಯವಸ್ಥೆಯ ವೈಫಲ್ಯ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮತ್ತು ಈಗ ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಹೋಲಿಸಿ ನೋಡಿರಿ. ಈ ಪ್ರತಿಭಟನಾಕಾರರು ‘ಜೆರಳೆ (cockroach)’ ಎಂಬ ನಿಂದನೆಯಿಂದ ಹುಟ್ಟಿಕೊಂಡಿದ್ದರೂ, ಅವರು ವಿಕಿರಣಶೀಲ ಅಣು ಇಂಧನದಷ್ಟು ಅಪಾಯಕಾರಿಯಾಗಿ ಸ್ಫೋಟಗೊಂಡು ದೇಶಕ್ಕೆ ಹಾನಿ ಮಾಡಬಹುದಾದ ದೇಶದ್ರೋಹಿ, ಖಾಲಿಸ್ತಾನಿ ಅಥವಾ ಅರ್ಬನ್ ನಕ್ಸಲ್ ಎನ್ನುವಷ್ಟರ ಮಟ್ಟಿಗಿನ ಕಳಂಕವನ್ನು ಎದುರಿಸುತ್ತಿಲ್ಲ.
ಪ್ರತಿರೋಧ ಮತ್ತು ಅದಕ್ಕೆ ಬಂದ ವಿಭಿನ್ನ ಪ್ರತಿಕ್ರಿಯೆಗಳು
ನಾನು ಸ್ಪಷ್ಟಪಡಿಸಲು ಬಯಸುವ ಅಂಶವೆಂದರೆ, ಜುಲೈ 20 ರಂದು ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ಜನರ ಮೇಲೆ ದೌರ್ಜನ್ಯ ನಡೆದಾಗ, ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಯಿತು, ಅದು ಹಾಗೆಯೇ ಆಗಬೇಕಿತ್ತು ಕೂಡ. ಆಗ ಜನರು ಕೇಳಿದ ಪ್ರಶ್ನೆಗಳು ಹೀಗಿದ್ದವು— “ನಾವು ಈ ದೇಶದ ನಾಗರಿಕರಲ್ಲವೇ? ನಮ್ಮ ದೇಶದಲ್ಲಿ ಪ್ರತಿಭಟನೆ ಮಾಡುವ ಹಕ್ಕು ನಮಗಿಲ್ಲವೇ? ನಾವು ಕಟ್ಟುವ ತೆರಿಗೆ ಹಣದಿಂದಲೇ ಸಂಬಳ ಪಡೆಯುವ ಪೊಲೀಸರೇ ನಮ್ಮನ್ನು ಹೀಗೆ ಹೊಡೆಯಬೇಕಾ?”. ಇದು ತುಂಬಾ ನ್ಯಾಯಯುತ ಮತ್ತು ಅರ್ಥಪೂರ್ಣವಾದ ಪ್ರಶ್ನೆ. ಆದರೆ ದುರದೃಷ್ಟವಶಾತ್, ಹಿಂದೆ ನಡೆದ ಪ್ರತಿಭಟನೆಗಳ ಸಮಯದಲ್ಲಿ ಇಂತಹ ಪ್ರಶ್ನೆಗಳು ಕೇಳಿಬರಲೇ ಇಲ್ಲ. ಈಗ ನಡೆಯುತ್ತಿರುವುದನ್ನು ನಾನು ಯಾವುದೇ ರೀತಿಯಲ್ಲೂ ಸಮರ್ಥಿಸುತ್ತಿಲ್ಲ ಅಥವಾ ಅದರ ಗಂಭೀರತೆಯನ್ನು ತಗ್ಗಿಸುತ್ತಿಲ್ಲ; ಹಣೆಪಟ್ಟಿ ಹಚ್ಚುವುದು ಹಾಗೂ ಜನರ ಆಲೋಚನೆ ನಿಯಂತ್ರಣ(Perception control)ದ ಮೂಲಕ ಎಸಗುವ ಅನ್ಯಗೊಳಿಸುವಿಕೆಯು ಅನ್ಯರನ್ನು ‘ಅದೃಶ್ಯಗೊಳಿಸುತ್ತದೆ’ ಎಂಬುದಷ್ಟೇ ನನ್ನ ಪ್ರತಿಪಾದನೆ.
ಈ ಪ್ರತಿಭಟನೆಯು ಸರ್ಕಾರದ ಕ್ರೂರ ಮುಖವನ್ನು ಬಯಲು ಮಾಡುವುದರ ಜೊತೆಗೆ, ನಮ್ಮ ಸಮಾಜದ ಬೂಟಾಟಿಕೆ(Hypocrisy) ಯನ್ನು ಮತ್ತು ಅನ್ಯಗೊಳಿಸುವಿಕೆಯ ದೀರ್ಘಕಾಲಿಕ ದುಷ್ಪರಿಣಾಮಗಳನ್ನು ತೋರಿಸಿದೆ. ಸಿಎಎ, ರೈತ ಹೋರಾಟಗಾರರು ಮತ್ತು ಭೀಮಾ ಕೋರೆಗಾಂವ್ ಪ್ರತಿಭಟನಾಕಾರರಿಗೆ ಕಿರುಕುಳ ನೀಡಿದಾಗ, ‘ದೇಶದ್ರೋಹಿಗಳು’ ಎಂದು ಕರೆದಾಗ, ಹೊಡೆದಾಗ— “ಅವರು ಏನೋ ತಪ್ಪು ಮಾಡಿರಬೇಕು, ಅದಕ್ಕೇ ಅವರಿಗೆ ಶಿಕ್ಷೆಯಾಗುತ್ತಿದೆ” ಎಂಬ ಅನುಮಾನ ಸದಾ ಇತ್ತು. ಇದುವೇ ಅನ್ಯಗೊಳಿಸುವಿಕೆಯ ನಿಜವಾದ ರೂಪ. ಅಲ್ಲಿ ನಡೆಯುವ ಅಮಾನವೀಯತೆಯೇ ಜನರ ಆಲೋಚನಾ ಶೈಲಿಯಾಗಿಬಿಡುತ್ತದೆ. ಹಿಂದುತ್ವದ ಶ್ರೇಷ್ಠತೆ(Hindutva supremacy)ಯ ಆಲೋಚನೆಯನ್ನು ತೆಗೆದುಹಾಕಲು ಇತ್ತೀಚಿನ ಎಸ್ಐಆರ್ (SIR) ಚುನಾವಣಾ ಚಳವಳಿಯು ದೊಡ್ಡ ತಿರುವು ಎಂದು ನಾವು ಅಂದುಕೊಂಡರೂ ಸಹ, ಈ ‘ಅನ್ಯ ಗೊಳಿಸುವಿಕೆ’ ಎಂಬ ಸಮಸ್ಯೆಯನ್ನು ನಾವು ಒಪ್ಪಿಕೊಂಡು ಸರಿಪಡಿಸದಿದ್ದರೆ, ಇದರ ಮೂಲ ಕಾರಣ ಹಾಗೆಯೇ ಉಳಿದುಬಿಡುತ್ತದೆ ಎಂದು ನಾನು ಬಲವಾಗಿ ಅನ್ನಿಸುತ್ತದೆ.
ಎಸ್ಐಆರ್ ವಿರೋಧಿ ಮತ್ತು ಚುನಾವಣಾ ಆಯೋಗ ಸುಧಾರಣಾ ಚಳವಳಿ
ಈಗ ನಡೆಯುತ್ತಿರುವ ಈ ಪ್ರತಿಭಟನೆಯು ಬಿಜೆಪಿ ಮತ್ತು ಆರ್.ಎಸ್.ಎಸ್.ಗೆ ಶಾಂತಿ ಹಾಗೂ ಸೌಹಾರ್ದತೆಯ ಸಮಾಜ ಕಟ್ಟುವ ಯಾವುದೇ ದೃಷ್ಟಿಕೋನ ಇಲ್ಲ, ಬದಲಿಗೆ ತಮ್ಮ ಜನಾಂಗೀಯ ಗಣರಾಜ್ಯ ಸ್ಥಾಪಿಸುವುದೇ ಅವರ ಮುಖ್ಯ ಉದ್ದೇಶ ಎಂಬುದನ್ನು ಬಟಾಬಯಲು ಮಾಡಿದೆ. ಹೊಸ ಚಳವಳಿಯು ವ್ಯಾಪಕ ಸಾರ್ವಜನಿಕ ಬೆಂಬಲ ಪಡೆದು ಯಶಸ್ವಿಯಾಗಿದೆ; ಏಕೆಂದರೆ ಇದಕ್ಕೆ ‘ಅನ್ಯರು’ ಎಂಬ ಬ್ರಹ್ಮಾಸ್ತ್ರವನ್ನು ತಗುಲಿಸಲು ಸಾಧ್ಯವಾಗಿಲ್ಲ. ಈ ಹೋರಾಟವು ತನ್ನ ಹಿಂದಿನ ಚಳವಳಿಗಳಾದ ಸಿಎಎ, ರೈತ ಹೋರಾಟ ಹಾಗೂ ಶಿಕ್ಷಣ ಚಳವಳಿಗಳಿಂದ ಪ್ರೇರಣೆ ಮತ್ತು ಬಲವನ್ನು ಪಡೆದುಕೊಂಡಿದೆ. ಅಲ್ಲದೇ, ಸಾರ್ವಜನಿಕ ಅಭಿಪ್ರಾಯವನ್ನು ಪರಿವರ್ತಿಸುವಲ್ಲಿ ಮತ್ತು ಸರ್ಕಾರದ ವಿಭಜನಾತ್ಮಕ ಹಾಗೂ ಧ್ರುವೀಕರಣ ತಂತ್ರಗಳನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ನಿರುದ್ಯೋಗ, ತೀವ್ರವಾಗಿ ಕುಸಿಯುತ್ತಿರುವ ಆರ್ಥಿಕತೆ, ಮೌಲ್ಯ ಕಳೆದುಕೊಳ್ಳುತ್ತಿರುವ ರೂಪಾಯಿ ಮತ್ತು ವಿದೇಶಾಂಗ ನೀತಿಯ ವೈಫಲ್ಯಗಳು ಈ ಆಡಳಿತದ ಬೌದ್ಧಿಕ ಅಸಾಮರ್ಥ್ಯ ಹಾಗೂ ಆಡಳಿತಾತ್ಮಕ ವೈಫಲ್ಯವನ್ನು ಅನಾವರಣಗೊಳಿಸಿವೆ. ಅನ್ಯರು ಎಂಬ ಕನ್ನಡಕವನ್ನು ಬದಿಗಿರಿಸಿದಾಗ, ‘ಲವ್ ಜಿಹಾದ್’, ‘ಯುಪಿಎಸ್ಸಿ ಜಿಹಾದ್’, ‘ಅರ್ಬನ್ ನಕ್ಸಲ್’, ‘ಖಾಲಿಸ್ತಾನಿ’, ‘ಜನಸಂಖ್ಯಾ ಜಿಹಾದ್’ ನಂತಹ ಹುಸಿ ವಿಷಯಗಳಿಗಿಂತ ಆಹಾರ, ಆರೋಗ್ಯ, ಉದ್ಯೋಗ, ಸಹಬಾಳ್ವೆ, ಸೌಹಾರ್ದತೆ ಮತ್ತು ಶಾಂತಿಯಂತಹ ನೈಜ ಪ್ರಶ್ನೆಗಳು ಮುಖ್ಯ ವಿಷಯಗಳಾಗಿ ಮುನ್ನೆಲೆಗೆ ಬರುತ್ತವೆ. ಅನ್ಯಗೊಳಿಸುವಿಕೆಯು ಧ್ರುವೀಕರಣ ಮತ್ತು ಏಕಮುಖ ಚಿಂತನೆಯ ಪರಿಸರ(Echo chamber)ವನ್ನು ಪೋಷಿಸುತ್ತದೆ; ಇದು ಜನರನ್ನು ವಶೀಕರಿಸಿ, ಅವರನ್ನು ಝೋಂಬಿಗಳಂತೆ ಸಂವೇದನಾರಹಿತ ಪ್ರಜೆಗಳನ್ನಾಗಿ ಪರಿವರ್ತಿಸುತ್ತದೆ. ತದನಂತರ, ಅನ್ಯರನ್ನು ದ್ವೇಷಿಸುವುದೇ ತಮ್ಮ ಧರ್ಮ ಹಾಗೂ ಕರ್ತವ್ಯ ಎಂದು ಅವರು ಭಾವಿಸತೊಡಗುತ್ತಾರೆ. ಆದ್ದರಿಂದ ಈ ದುಷ್ಟಚಕ್ರವನ್ನು ಭೇದಿಸುವುದು ಅತ್ಯಂತ ಅಗತ್ಯವಾಗಿದೆ.
ಅನ್ಯ ಗೊಳಿಸುವಿಕೆಯು ಸರ್ಕಾರದ ಮಾತುಗಳನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳುವಂತೆ ಮಾಡುತ್ತದೆ ಮತ್ತು ಬೇರೆಯವರ ಮೇಲೆ ದ್ವೇಷ ಹಾಗೂ ವಿಷ ಕಾರುವಂತೆ ಮಾಡುತ್ತದೆ. ಪ್ರೀತಿ ಹಾಗೂ ಪರಸ್ಪರ ಸಹಕಾರದ ತಳಹದಿಯ ಮೇಲೆ ನಿಂತಿರುವ ಮಾನವನ ಮೂಲ ಪ್ರವೃತ್ತಿ ಇದಲ್ಲ; ಆದ್ದರಿಂದ ಹ್ಯಾಕ್ ಆದ ಹಾಗೂ ಧ್ರುವೀಕೃತಗೊಂಡ ಮನಸ್ಸುಗಳನ್ನು ಪ್ರೀತಿ ಮತ್ತು ಸೌಹಾರ್ದತೆಯ ಮೂಲಕವೇ ತಲುಪಬೇಕಾಗಿದೆ. ಆದ್ದರಿಂದ, ಅನ್ಯಗೊಳಿಸುವಿಕೆಯು ನಿರ್ಮಿಸಿರುವ ಗೋಡೆಗಳನ್ನು ಹಾಗೂ ತಡೆಗಳನ್ನು ಭೇದಿಸಲು ಈ ಚಳವಳಿಯು ಸಂವಾದ, ಸಮಾಲೋಚನೆ ಮತ್ತು ಸಂಪರ್ಕಕ್ಕಾಗಿ ಹೊಸ ಅವಕಾಶವನ್ನು ತಂದಿದೆ. ನಮ್ಮ ಮಾನವೀಯತೆಯನ್ನು ಮತ್ತೆ ಪಡೆದುಕೊಳ್ಳಲು ನಮಗೆ ವೈಚಾರಿಕ ಚರ್ಚೆಗಳು, ಸಾಮಾಜಿಕ ಯೋಜನೆಗಳು ಮತ್ತು ಪ್ರಾಯೋಗಿಕ ಹೆಜ್ಜೆಗಳು ಬೇಕಾಗಿವೆ; ಈಗ ಎಸ್ಐಆರ್(SIR) ವಿರುದ್ಧ ಮತ್ತು ಚುನಾವಣಾ ಆಯೋಗದ ಹೊಣೆಗಾರಿಕೆಗಾಗಿ ನಡೆಯುತ್ತಿರುವ ಪ್ರತಿಭಟನೆಯು ಖಂಡಿತವಾಗಿಯೂ ಅಂತಹ ಒಂದು ಪ್ರಯತ್ನವಾಗಿದೆ.
ಕೊನೆಯದಾಗಿ ನಾನು ಹೇಳಬಯಸುವುದು ಏನೆಂದರೆ— ಅನ್ಯ ಗೊಳಿಸುವಿಕೆಯ ಮುಖ್ಯ ಕಾರಣವೇ ಸ್ಥಳ, ಜನಾಂಗ, ವಂಶ ಮುಂತಾದವುಗಳ ಆಧಾರದ ಮೇಲೆ ನಾವು ಮೇಲು ಎಂಬ ಭಾವನೆ. ಆದರೆ ಈ ವ್ಯತ್ಯಾಸಗಳು ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಇರುವುದೇ ಹೊರತು ಮೇಲು-ಕೀಳು ಅಥವಾ ಪ್ರಾಬಲ್ಯ ಸಾಧಿಸಲು ಅಲ್ಲ ಎಂದಾಗಿ ಇಸ್ಲಾಮ್ ಕಲಿಸುತ್ತದೆ. ಪವಿತ್ರ ಕುರ್ಆನ್ ಹೀಗೆ ಹೇಳುತ್ತದೆ: “ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ˹ಪರಿಚಯ ಪಟ್ಟುಕೊಳ್ಳಲಿಕ್ಕಾಗಿ˺ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ನೀತಿವಂತನೇ ವಾಸ್ತವದಲ್ಲಿ ದೇವನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ದೇವನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ.”(49:13) ಅನ್ಯಗೊಳಿಸುವಿಕೆಯ ಕಲ್ಪನೆಯನ್ನು ಇಲ್ಲದಾಗಿಸಲು ಮತ್ತು ಪ್ರತಿರೋಧಿಸಲು ಈ ದೃಷ್ಟಿಕೋನವನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ.












