ಈ ಸರಕಾರದ್ದು ಜನರ ವಿರುದ್ಧ ಯುದ್ಧ

0
161

✍️ ಅರಫಾ ಮಂಚಿ

ಮೋದಿ ಸರಕಾರ ನಾಗರಿಕರ ವಿರುದ್ಧ ಯುದ್ಧ ಸಾರಿದೆಯೇ? ಹಾಗೆಂದು ಸಿಜೆಪಿ ಸಂಯೋಜಕ ಅಭಿಜಿತ್ ದೀಪ್ಕೆ ಹೇಳಿದ್ದಾರೆ. ಅಂದರೆ ಇನ್ನೊಂದು ಅರ್ಥದಲ್ಲಿ ಪ್ರಜಾಪ್ರಭುತ್ವದ ವಿರುದ್ಧ ಯುದ್ಧ ಇದು. ಜಂತರ್ ಮಂತರ್ ಪ್ರತಿಭಟನೆಯನ್ನು ಕೇಂದ್ರ ಸರಕಾರ ತಡೆದ ರೀತಿ ಹಾಗಿತ್ತು. ಯುದ್ಧೋಪಾದಿ ಸಿದ್ಧತೆ! ಜ್ಞಾನೇಶ್ ಕುಮಾರ್‌ರನ್ನು ರಕ್ಷಿಸಲು ಪ್ರಜೆಗಳ ವಿರುದ್ಧ ಯುದ್ಧಕ್ಕಿಳಿದದ್ದು ಹೌದೆಂದು ಒಪ್ಪುವಂತಹ ಸಿದ್ಧತೆಯನ್ನು ಈ ಸಲ ಕೇಂದ್ರ ಸರಕಾರ ಮಾಡಿದೆ. ದೇಶದ ನಾಗರಿಕರನ್ನೇ ಒಬ್ಬ ಮುಖ್ಯ ಚುನಾವಣಾ ಆಯುಕ್ತನಿಗಾಗಿ ಈ ತರ ಎದುರು ಹಾಕಿಕೊಳ್ಳುವ ಔಚಿತ್ಯ ಇತ್ತೇ. ಇಂಡಿಯಾ ಕೂಟದವರೋ ಸಿಜೆಪಿಯವರೋ ಅಲ್ಲ ತಟಸ್ಥ ವಿವೇಕಿಗಳು ಯೋಚಿಸುವಂತೆ ಸರಕಾರದ ನಡೆ ಇದೆ. ಚುನಾವಣಾ ಆಯೋಗ ಮತ್ತು ಸರಕಾರದ ನಡುವೆ ಸಮ್‌ಥಿಂಗ್ ಕೊಡು ಕೊಳ್ಳು ಇರಬಹುದು ಎಂಬ ಅನುಮಾನ ಗಟ್ಟಿಯಾಗುವುದಕ್ಕೆ ಈ ನಡೆ ಕಾರಣವಾಗಿದೆ. ವೋಟಿನ ಹಕ್ಕು ಕಳಕೊಂಡವರ ನೋವಿಗೆ ಜಂತರ್ ಮಂತರ್ ಅನ್ನೇ ಪ್ರತಿಬಂಧಿಸುವುದು ಅನ್ಯಾಯ. ಇಂಡಿಯನ್ ಡೆಮಕ್ರಸಿ ಪಾತಾಳಕ್ಕೆ ಕುಸಿದಿದ್ದಕ್ಕೆ ಇದು ಸ್ಪಷ್ಟ ಉದಾಹರಣೆ.

ಜಾಗೃತ ಪ್ರಜೆಗಳು:

ಭಾರತದ್ದು ವಿಶಾಲ ಪ್ರಜಾಪ್ರಭುತ್ವ ಎಂದು ವಿದೇಶದಲ್ಲಿ ಮೋದಿ ಹೇಳಿಕೆ ನೀಡುತ್ತಾರೆ. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಿಗೆ ಸರಕಾರವನ್ನು ಪ್ರಶ್ನಿಸುವ ಹಕ್ಕು ಇರುತ್ತದೆ. ಅದು ಗೋಣಲ್ಲಾಡಿಸುವ ಭಕ್ತರ ಕೂಟ ಖಂಡಿತ ಅಲ್ಲ. ಅಂದರೆ ಸರ್ವಸಂಪೂರ್ಣ ಜಾಗೃತ ಪ್ರಜೆಗಳ ಸಮಾಜ. ಸರಕಾರದ ಆಡಳಿತವನ್ನು ಗಮನಿಸುವುದು ವೋಟಿನ ಮೂಲಕ ತಮಗೆ ಬೇಕಾದವರನ್ನು ಆಡಳಿತ ನಡೆಸಲು ಗೆಲ್ಲಿಸುವುದು. ಪ್ರಜಾಪ್ರಭುತ್ವದ ರೀತಿ ಇದು. ಈಗ ಹಾಗಿಲ್ಲ. ಪ್ರಜೆಗಳ ಮತಗಳ ಹಕ್ಕನ್ನೇ ಕದಿಯಲಾಗುತ್ತಿದೆ. ಜ್ಞಾನೇಶ್ ಎಸ್‌ಎಸ್‌ಆರ್ ತಂದದ್ದೇ ಪ್ರತಿಪಕ್ಷಗಳ ವೋಟ್ ಕಟ್ ಮಾಡುವುದಕ್ಕೆ. ಅದರಲ್ಲೂ ಮುಸ್ಲಿಮರ ವೋಟ್ ಕಟ್ ಮಾಡುವುದಕ್ಕೆ ಎಂಬ ಆರೋಪವಿದೆ. ಕರ್ನಾಟಕದಿಂದ ಹಿಡಿದು ಪಶ್ಚಿಮಬಂಗಾಳದವರೆಗೂ ಅಂತಹ ವರದಿ ಇದೆ. ಪಶ್ಚಿಮ ಬಂಗಾಳದ ಮುಸ್ಲಿಂ ಬಾಹುಳ್ಯದ ರೆಜಿನಗರದಲ್ಲಿ ಈ ಸಲ ಬಿಜೆಪಿ ಗೆದ್ದಿತು ಅಥವಾ ಬಿಜೆಪಿಯನ್ನು ಎಸ್‌ಐಆರ್ ಗೆಲ್ಲಿಸಿತು. ಹೀಗಾಗಿ ಚುನಾವಣಾ ಆಯುಕ್ತರ ಮೂಲಕ ಒಂದು ವರ್ಗದ ನಾಗರಿಕರ ಮೇಲೆ ಯುದ್ಧ ಸಾರಿದ್ದರೆ ಹಾಗೆ ಮಾಡುವುದು ಸರಕಾರಕ್ಕಾಗಿರಲೇ ಬೇಕಾಗುತ್ತದೆ. 

ಯುದ್ಧ ಸ್ವರೂಪ

ಈವರೆಗೂ ಜನರು ಕೇಳಿದ್ದನ್ನು ತಿರಸ್ಕರಿಸುವುದು ಮೋದಿ ಸರಕಾರದ ಸ್ವರೂಪವಾಗಿದೆ. ನೀವು ಇಂತಹ ಎಷ್ಟೋ ಉದಾಹರಣೆಗಳನ್ನು ನೋಡಬಹುದು. ಮೋದಿ ಸರಕಾರ ಸೈನ್ಯಕ್ಕೆ ನೇಮಕಾತಿಯಲ್ಲಿ ನಾಲ್ಕು ವರ್ಷ ಅವಧಿಯ ಅಗ್ನಿವೀರ್ ತಂದಿತು. ನಾಲ್ಕು ವರ್ಷದ ನಂತರ ಸೇನೆಯಿಂದ ನಿವೃತ್ತಿ. ಉದ್ಯೋಗ ಅಸ್ಥಿರತೆಯ ಅತಂಕ ಮೂಡಿಸಿದುದರಿಂದ ಯುವಕರು ಹೋರಾಟಕ್ಕಿಳಿದರು. ಬಿಹಾರ, ಉತ್ತರಪ್ರದೇಶ, ಹರಿಯಾಣ, ತೆಲಂಗಾಣ ಸಹಿತ ದೇಶದುದ್ದಕ್ಕೂ 2022ರಲ್ಲಿ ಪ್ರತಿಭಟನೆ ನಡೆಯಿತು. ಆದರೆ ಅಗ್ನಿವೀರ್ ರದ್ದಾಗಲೇ ಇಲ್ಲ.

ರೈಲ್ವೆ ಉದ್ಯೋಗ, ಲೋಕೊ ಪೈಲೆಟ್ ನೇಮಕಾತಿಗಾಗಿ, ನಿರುದ್ಯೋಗ, ಉದ್ಯೋಗ ನೇಮಕಾತಿಗಾಗಿ, ಬೆಲೆಯೇರಿಕೆ ವಿರೋಧಿಸಿ ಜನರು, ರಾಜಕೀಯ ಪಾರ್ಟಿಗಳು, ಆಕ್ಟಿವಿಸ್ಟ್‌ಗಳು ಪ್ರತಿಭಟನೆ, ಹೋರಾಟಗಳನ್ನು ನಡೆಸುತ್ತಲೇ ಇದ್ದಾರೆ. ಸರ್ಕಾರ ಸ್ಪಂದಿಸಿಲ್ಲ, ದಮನಿಸಿದೆ. ಬಹುಶಃ ಸರಕಾರದ ಈ ವರ್ತನೆಗಾಗಿ ಮೋದಿ ಸರಕಾರ ಪ್ರಜೆಗಳ ವಿರುದ್ಧ ಯುದ್ಧ ಸಾರಿದೆ ಅಂದಿದ್ದಾರೆ. 

ಪ್ರಜಾ ದಮನಗಳನ್ನೇ ಸಂಘಪರಿವಾರವು ಗೆಲುವು ಎಂದು ಬಿಂಬಿಸುತ್ತದೆ. ಆದರೂ ಯುದ್ಧ ಗೆದ್ದದ್ದು ಯಾರು? ಖಂಡಿತ ನಾಗರಿಕರು, ಪ್ರಜೆಗಳು. ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನೆಯ ಸ್ಥಳದ ಪಟ್ಟಿಯಿಂದಲೇ ತೆಗೆದು ಹಾಕಿಸುವಷ್ಟು ಈ ಸಲ ಪ್ರತಿಭಟನೆಯ ಕಾವಿತ್ತು. ಸರಕಾರ ಜಂತರ್ ಮಂತರ್ ಬದಲಿಗೆ ರಾಮಲೀಲ ಮೈದಾನ, ಬರುರಿ ಮೈದಾನ, ಸಿಬಿಡಿ ಮೈದಾನಗಳನ್ನು ಪ್ರತಿಭಟನೆಯ ಸ್ಥಳ ಎಂದು ಸೂಚಿಸಿತು. ಈ ಪ್ರಕ್ರಿಯೆ ಸೋಲುವ ಮೊದಲೇ ಯುದ್ಧಾಂಗಣವನ್ನು ಬದಲಿಸಿದ್ದಕ್ಕೆ ಸಮ. ಸಿಜೆಪಿಯ ಹಿಂದಿನ ಪ್ರತಿಭಟನೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟಿದ್ದಾರೆ. ಈ ಸಲ ಹೋರಾಟದ ಕಣವೇ ಬೇಡೆಡೆಗೆ ಹೋಗಿದೆ. ಇಷ್ಟು ಸಂಚಲನೆ ಮೂಡಿಸಿದ್ದು ಪ್ರಜೆಗಳ ಪರ ಪ್ರತಿಭಟನೆಗೆ ಸಿಕ್ಕ ಗೆಲುವು.

ಸುಳ್ಳು ಹೇಳಿ ಸೋತ ಜ್ಞಾನೇಶ್

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಫಾರ್ಮ್ ಆರರಲ್ಲಿ ಮಾಡಿದ ಕೆಲವು ಬದಲಾವಣೆಗಳು ಸುಪ್ರೀಂ ಕೋರ್ಟಿನ ಅನುಮತಿಯಿದೆ ಎಂದು ಜ್ಞಾನೇಶ್ ಕುಮಾರ್ ವಾದಿಸಿದ್ದರು. ಈಗದು ಸುಳ್ಳು ಎಂದು ಬಯಲಾಗಿದೆ. ಸುಧಾರಿತ ಫಾರ್ಮ್ ಆರಿಗೆ ಕೋರ್ಟು ಅಂಗೀಕಾರ ನೀಡೇ ಇಲ್ಲ ಎಂದು ಚೀಫ್ ಜಸ್ಟಿಸ್ ಸೂರ್ಯಕಾಂತ್ ಅಧ್ಯಕ್ಷತೆಯ ಪೀಠ ತಿಳಿಸಿದೆ. ಸುಳ್ಳು ಬಯಲಾಗಿಸುವಷ್ಟು ಹೋರಾಟ ಸಮರ್ಥವಾಗುವುದು ಪ್ರಜೆಗಳಿಗೆ ಸಿಕ್ಕ ಗೆಲುವು. ಈ ಗೆಲುವಿನ ಪ್ರಮಾಣ ಚಿಕ್ಕದಾಗಿರಲಿ, ಅಂತು ಸತ್ಯ ಹೊರಬಂತು. ಹೀಗಾಗಿ ಮೋದಿ ಸರಕಾರ ಜ್ಞಾನೇಶ್‌ರನ್ನು ರಕ್ಷಿಸಲು ಎಷ್ಟೇ ನೋಡಲಿ, ಖಂಡಿತ ಸುಪ್ರೀಂ ಕೋರ್ಟಿನ ಸ್ಪಷ್ಟನೆಯು ಸರಕಾರ ಕೆದರಿದ ಯುದ್ಧ ಗೆದ್ದದ್ದು ಯಾರೆಂಬುದನ್ನು ಜಗತ್ತಿನ ಮುಂದೆ ನಿರ್ಣಯಿಸಿದೆ. ಎಸ್‌ಐಆರ್ ಮೋದಿ ಸರಕಾರಕ್ಕೆ ಸಿಕ್ಕಿದ ಲಕ್ಷಾಂತರ ಮತಗಳ ವಿರುದ್ಧ ವಿಫಲ ಯುದ್ಧಾಸ್ತ್ರ ಆಯಿತು.

ಮೋದಿ ಸರಕಾರದ ಮೊದಲ ಯುದ್ಧ

ಮೋದಿ ಸರಕಾರ ಪ್ರಜೆಗಳ ವಿರುದ್ಧ ತೀವ್ರ ಯುದ್ಧ 2019ರಿಂದ ಆರಂಭಿಸಿದ್ದು ಗೊತ್ತಾಗುತ್ತದೆ. 2019 ಡಿಸೆಂಬರ್‌ನಲ್ಲಿ ಯುನೈಟೆಡ್ ಎಗೆನ್ಸ್‌ಟ್‌ ಹೇಟ್ ಎಂಬ ವೇದಿಕೆ ಮಾಡಿಕೊಂಡು ವಿದ್ಯಾರ್ಥಿಗಳು ಜಂತರ್ ಮಂತರ್‌ನಲ್ಲಿ ಸಿಎಎ ವಿರುದ್ಧ ಹೋರಾಟ ಆರಂಭಿಸಿದ್ದರು. ಈ ಪ್ರತಿಭಟನಾಕಾರರನ್ನು ಮೋದಿ ಸರಕಾರ, ಸಂಘಪರಿವಾರದ ಗೂಂಡಾಗಳು ಹೇಗೆ ನಡೆಸಿಕೊಂಡರು? ಸರಕಾರವೇ ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಸಿಎಎ ಅಥವಾ ಪೌರತ್ವ ತಿದ್ದುಪಡಿ ಕಾನೂನನ್ನು ತಂದಿದ್ದನ್ನು ವಿರೋಧಿಸಿ ಜನ ಪ್ರತಿಭಟನೆಗಿಳಿದರು. ಪ್ರತಿಭಟನಾ ನಿರತ ವಿದ್ಯಾರ್ಥಿ ಆಕ್ಟಿವಿಸ್ಟ್‌ಗಳ ವಿರುದ್ಧ ಸಂಘಿ ಗೂಂಡಾಗಳ ಧಾಂಧಲೆ, ಅಪಾರ ಪೊಲೀಸ್ ಬಲಪ್ರಯೋಗ, ಮಂತ್ರಿಗಳೇ ‘ಗೋಲಿ ಮಾರೋ’ ಎಂದು ದ್ವೇಷ ಭಾಷಣ ಮಾಡಿದ್ದು, ಯುಎಪಿಎ ಅಡಿಯಲ್ಲಿ ಬಂಧನಗಳು ಎಲ್ಲವೂ ನಡೆಯಿತು. ಸರಕಾರ ಬಲಪ್ರಯೋಗಿಸಿ ಜನರ ಧ್ವನಿಯನ್ನು ಅಡಗಿಸಿತು. ಅಥವಾ ಸಂಪೂರ್ಣ ದಮನಿಸಿತು.

ಆದರೆ ಜಂತರ್ ಮಂತರ್‌ನಲ್ಲಿ ಆರಂಭವಾದ ಈ ಪ್ರತಿಭಟನೆ ಕ್ಷಿಪ್ರವಾಗಿ ಇಡೀ ದೇಶದಲ್ಲಿ ಹರಡಿಕೊಂಡಿತ್ತು. ಯಾಕೆಂದರೆ ಎಸ್‌ಐಆರ್‌ನಂತೆ ಸಿಎಎ ಕೂಡ ಜನರ ಅಸ್ತಿತ್ವದ ಮೇಲೆ ಮೋದಿ ಸರಕಾರ ನಡೆಸಿದ್ದ ಪ್ರಹಾರ. ಇನ್ನೊಂದು ಅರ್ಥದಲ್ಲಿ ಪ್ರಜೆಗಳ ನಿರ್ದಿಷ್ಟ ಒಂದು ವರ್ಗದ ವಿರುದ್ಧ ಯುದ್ಧವಾಗಿದೆ.

‘ಚಲೋ ದಿಲ್ಲಿ’ ಘೋಷಣೆಯೊಂದಿಗೆ ಯುವಕರು ದಿಲ್ಲಿಗೆ ಬಂದಾಗ ಜಂತರ್ ಮಂತರ್‌ನೊಂದಿಗೆ ರಾಜಕೀಯ ಪಾರ್ಟಿಗಳು ಸೇರಿವೆ. ಪೊಲೀಸರಿಂದಾಗಿ ಪ್ರತಿಭಟನೆಗೆ ಅವಕಾಶವೇ ಇಲ್ಲದಂತೆ ಮೋದಿ ಸರಕಾರ ಮಾಡಿದೆ. ಆದರೆ, ದಮನವು ಜನರ ಹೋರಾಟದ ಶೌರ್ಯವನ್ನು ಹೆಚ್ಚಿಸಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯ ಮತ್ತು ಅಗತ್ಯವನ್ನು ಸಾಮಾನ್ಯ ಜನತೆಗೂ ಮನವರಿಕೆ ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿಯೂ ಸರಕಾರ ಸೋತಿದೆ. ಜನ ಹಕ್ಕು ಕೇಳುವುದು ಮುಂದುವರಿದಿದೆ.

ಯುಎನ್ ಮತ್ತು ಮಾನವ ಹಕ್ಕುಗಳು

ಸಿಜೆಪಿ ಪ್ರತಿಭಟನೆಯ ಕುರಿತಂತೆ ವಿಶ್ವಸಂಸ್ಥೆ ಪ್ರತಿಕ್ರಿಯೆ ನೀಡಿದ್ದು ಸರಿಯೋ ತಪ್ಪೋ, ಆದರೆ ದಿಲ್ಲಿಯ ಬೃಹತ್ ಪೊಲೀಸ್ ಕಾರ್ಯಾಚರಣೆ, ಪ್ರತಿಭಟನಾಕಾರರು, ಪತ್ರಕರ್ತರು ಮತ್ತು ವಿದ್ಯಾರ್ಥಿ ನಾಯಕರ ಸಾಮೂಹಿಕ ಬಂಧನಗಳೆಲ್ಲ ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಒಂದು ಕ್ಲಿಕ್‌ಗೆ ವಿಶ್ವವ್ಯಾಪಿ ತಲುಪುತ್ತದೆ. ಈ ಬೆಳವಣಿಗೆ ಉಲ್ಲೇಖಿಸಿಯೇ ವಿಶ್ವಸಂಸ್ಥೆ ಶಾಂತಿಯುತವಾಗಿ ಸಭೆ-ಸಮಾರಂಭ ನಡೆಸುವ ಹಕ್ಕನ್ನು ಗೌರವಿಸಬೇಕು ಎಂದು ಭಾರತ ಸರಕಾರಕ್ಕೆ ಹೇಳಿರಬಹುದು. ವಿಶ್ವಸಂಸ್ಥೆ ಸೂಚಿಸಿದ ಪ್ರಕಾರ ಪ್ರತಿಭಟನೆಗಳ ಮೇಲಿನ ನಿರ್ಬಂಧಗಳು ಸೂಕ್ತವಾಗಿರಬೇಕು ಹಾಗೂ ಅನಿಯಂತ್ರಿತವಾಗಿ ಬಂಧನಕ್ಕೊಳಗಾದವರನ್ನು ತಕ್ಷಣವೇ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ ಎಂದಿದೆ.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆಯ ಹೇಳಿಕೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ ಮತ್ತು “ಅನಗತ್ಯ ಮತ್ತು ಭಾರತದ ಆಂತರಿಕ ವ್ಯವಹಾರಗಳಲ್ಲಿ ಸಹಿಸಲಾಗದ ಹಸ್ತಕ್ಷೇಪ” ಎಂದು ಕರೆದಿದೆ. ಆದರೆ ಯಾರಿಗೆ ಬುದ್ಧಿ ಹೇಳುವುದು? ಮೋದಿ ಸರಕಾರಕ್ಕಾ?

ನೋಡಿ ಮೋದಿ ಪ್ರತಿಭಟನೆಯನ್ನು ತಡೆಯಲು ದಿಲ್ಲಿಯಾದ್ಯಂತ 20,000 ರಿಂದ 23,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಭದ್ರತೆಯನ್ನು ಬಲಪಡಿಸಲು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಿಂದ ಸುಮಾರು 7,000 ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯನ್ನು ವಿಶೇಷವಾಗಿ ನಿಯೋಜಿಸಿದ್ದು, ಅವರ ಮೂಲಕ ಒಟ್ಟಾರೆ 7,000 ರಿಂದ 15,000 ಪ್ರತಿಭಟನಾಕಾರರನ್ನು ನಿರ್ದಿಷ್ಟಪಡಿಸಿದ ಬಂಧನ ಕೇಂದ್ರಗಳಲ್ಲಿ (ಛತ್ರಸಾಲ್ ಕ್ರೀಡಾಂಗಣ, ರಾಜೀವ್ ಗಾಂಧಿ ಕ್ರೀಡಾಂಗಣ ಮತ್ತು ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಂತಹ) ಬಂಧಿಸಿಟ್ಟದ್ದು. ಹೌದು, ಭಾರತದ ಸಾರ್ವಭೌಮತೆಯ ಮೇಲೆ ಆಕ್ಷೇಪ ಎಂದು ಇದನ್ನು ಒಪ್ಪಿದರೂ ಮೋದಿ ಸರಕಾರ ಮಾಡಿದ್ದೇನು? ನಾಗರಿಕರ ಮೇಲೆ ಯುದ್ಧಕ್ಕಿಳಿದದ್ದು. ಅದನ್ನೇ ವಿಶ್ವಸಂಸ್ಥೆ ಸೂಚಿಸಿದ್ದು. ಅಭಿಜಿತ್ ದಿಪ್ಕೆ, ಮೋದಿ ಸರಕಾರ ನಾಗರಿಕರ ವಿರುದ್ಧ ಯುದ್ಧಕ್ಕಿಳಿದಿದೆ ಅಂದದ್ದು ಇದನ್ನೇ. ಇವೆಲ್ಲ ಯುದ್ಧ ಅಂತ ನಿಮಗೂ ಅನಿಸಿರಬಹುದು.