ಮೊಹ್ಸಿನ್ ಕೊಲೆ: ಆರೋಪಿಗಳ ಶಿಕ್ಷೆಯನ್ನು ಎತ್ತಿಹಿಡಿದ ದಿಲ್ಲಿ ಹೈಕೋರ್ಟು

0
302

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಯ ಸಮಯದಲ್ಲಿ ಮುಹ್ಸಿನ್ ಎಂಬ ಯುವಕನನ್ನು ಕೊಲೆಗೈದ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟು ಐವರು ಆರೋಪಿಗಳ ಶಿಕ್ಷೆಯನ್ನು ಎತ್ತಿಹಿಡಿದಿದೆ. 2020ರ ಫೆಬ್ರವರಿ 25ರಂದು ಈಶಾನ್ಯ ದೆಹಲಿಯ ಚಾಂದ್ ಬಾಗ್ ಪ್ರದೇಶದಲ್ಲಿ ಪೀರ್ ಬಾಬಾ ಮಜಾರ್ ಹತ್ತಿರ ಮುಹ್ಸಿನ್ ಎಂಬವರ ಮೇಲೆ ಭೀಕರ ಗುಂಪು ದಾಳಿ ನಡೆದಿತ್ತು. ಘಟನೆಯಲ್ಲಿ ಮುಹ್ಸಿನ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಅವರು ನಂತರ ಮೃತಪಟ್ಟಿದ್ದರು. ಕೆಳಕೋರ್ಟು ನೀಡಿದ್ದ 7 ವರ್ಷಗಳ ಕಠಿಣ ಶಿಕ್ಷೆಯ ತೀರ್ಪನ್ನು ಜಸ್ಟಿಸ್ ಮಧು ಜೈನ್ ಅವರು ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿದ್ದಾರೆ. ಅಮಾನ್ ಕಶ್ಯಪ್, ದೇವೇಂದ್ರ ಕುಮಾರ್, ಪ್ರದೀಪ್ ರಾಯ್, ಆಶಿಶ್ (ಗೋಲಿ) ಮತ್ತು ಅರುಣ್ ಕುಮಾರ್ ಶಿಕ್ಷೆಗೆ ಒಳಗಾದ ಆರೋಪಿಗಳಾಗಿದ್ದಾರೆ.

ಮಾರಕ ಆಯುಧಗಳನ್ನು ಹಿಡಿದುಕೊಂಡು ಹಿಂಸಾಚಾರ ನಡೆಸುತ್ತಿದ್ದ ಸಶಸ್ತ್ರ ಗುಂಪಿನ ಮುಂಚೂಣಿಯಲ್ಲಿದ್ದುಕೊಂಡು ದಾಳಿಯ ನೇತೃತ್ವ ವಹಿಸಿದವರು ಈ ಆರೋಪಿಗಳೇ ಎಂದು ಪ್ರಾಸಿಕ್ಯೂಷನ್ ಸಾಕ್ಷಿಗಳು ಮತ್ತು ಸಾಕ್ಷ್ಯಾಧಾರಗಳು ಸ್ಪಷ್ಟಪಡಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ. ಪೊಲೀಸ್ ಬ್ಯಾರಿಕೇಡ್‌ಗಳ ಬಳಿ ಬಿದ್ದ ಮೇಲೆಯೂ ಆರೋಪಿಗಳು ಮುಹ್ಸಿನ್ ಅವರನ್ನು ಸುತ್ತುವರಿದು ಥಳಿಸಿದ್ದರು.

ಕೊಲೆಯಲ್ಲದ ನರಹತ್ಯೆ ಮತ್ತು ಮಾರಕ ಆಯುಧಗಳೊಂದಿಗೆ ಗಲಭೆ ಸೃಷ್ಟಿಸಿದ ಅಪರಾಧಕ್ಕಾಗಿ ವಿಚಾರಣಾ ನ್ಯಾಯಾಲಯವು 2024 ನವೆಂಬರ್ 20ಕ್ಕೆ ಅಪರಾಧ ಸಾಬೀತುಗೊಂಡಿದೆ ಎಂದು ಹೇಳಿತ್ತು. ನಂತರ 2025 ಜನವರಿ 13ರಲ್ಲಿ ಆರೋಪಿಗಳಿಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 30,000 ರೂಪಾಯಿ ದಂಡ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಸಂಪೂರ್ಣವಾಗಿ ವಜಾಗೊಳಿಸಿದೆ.