ನೌ ಜಸ್ಟಿಸ್ ಈಸ್ ಬ್ಯಾಕ್ ಆನ್ ಟ್ರಾಕ್

0
110

✍️ ಅರಫಾ ಮಂಚಿ

ಅಮಿತ್ ಶಾ ವಿರುದ್ಧ ಮಾನಹಾನಿ ಕೇಸಿನಲ್ಲಿ ರಾಹುಲ್ ಗಾಂಧಿಯವರನ್ನು ಸುಲ್ತಾನ್‌ಪುರ ಕೋರ್ಟು ಖುಲಾಸೆಗೊಳಿಸಿದೆ. ಎಲ್ಲ ಕಡೆಯೂ ಆರೆಸ್ಸೆಸ್ ವಿಚಾರ ಪ್ರಭಾವಿಸಿದ ಇಂದಿನ ಮೋದಿ ರಾಜ್‌ನಲ್ಲಿ ಪ್ರತಿಪಕ್ಷ ನಾಯಕನ ಬಗ್ಗೆ ಕೋರ್ಟು ಸರಿಯಾದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ನೋಡಿದಾಗ ಉತ್ತರ ಪ್ರದೇಶ ಸುಲ್ತಾನ್ ಪುರ ನ್ಯಾಯಾಲಯ ತೀರ್ಪು ಕನಿಷ್ಠ ಬಿಜೆಪಿಯವರ ಮಟ್ಟಿಗೆ ಕಮಾಲ್ ಆಗುವಂತಹದ್ದು. ಕಾಂಗ್ರೆಸ್ಸಿಗರು ಕೋರ್ಟಿನ ಹೊರಗಡೆ ಪಟಾಕಿ ಸಿಡಿಸಿ ಡೋಲು ನಗಾರಿ ತೀರ್ಪನ್ನು ಸ್ವಾಗತಿಸಿದ್ದು ನಡೆದಿದೆ.

ಸಾಮಾನ್ಯವಾಗಿ ಮೋದಿ, ಅಮಿತ್ ಶಾರ ವಿರುದ್ಧ ಚಕಾರ ಎತ್ತಿದರೂ ಕೋರ್ಟು ಸ್ಟ್ರಿಕ್ಟ್ ಆಗುತ್ತಿದ್ದದ್ದೆ ಇತ್ತೀಚಲಾಗಿ ದೃಶ್ಯವಾಗುತ್ತಿತ್ತು. ಪೊಲೀಸರು ಯಾವ್ಯಾವ ರಾಜ್ಯಗಳಿಂದ ಯಾವ್ಯಾವುದೋ ರಾಜ್ಯಕ್ಕೆ ಬಂದು ಬಂಧಿಸಿ ಕರೆದೊಯ್ಯುವುದು ನಡೆಯುತ್ತಿತ್ತು. ಕೋರ್ಟಿನಲ್ಲಿ ಬಿಜೆಪಿ ಬೆಂಬಲಿಗರು ಕೊಡುವ ದೂರು ಗಂಭೀರ ಪರಿಗಣನೆಗೊಳ್ಳುತ್ತಿತ್ತು. ಸಿಕ್ಕಸಿಕ್ಕಲ್ಲಿ ಸಂಘಪರಿವಾರದ ಮಂದಿ ದೂರು ಕೊಟ್ಟು ಎಫ್‌ಐಆರ್ ಆಗುತ್ತಿದ್ದುದು ಇಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಒಂದು ಟ್ರಂಡ್ ಎಂಬಂತಾಗಿದೆ.

ನಾವು ಈಗ ಇದಕ್ಕೊಂದು ಸಾಂದರ್ಭಿಕ ಸಾಕ್ಷ್ಯವಾಗಿ ಗುಜರಾತ್‌ನ ಸೂರತ್‌ನ ಮ್ಯಾಜಿಸ್ಟ್ರೇಟ್ ಕೋರ್ಟು ರಾಹುಲ್ ಗಾಂಧಿ ವಿರುದ್ಧ ನೀಡಿದ ತೀರ್ಪನ್ನೇ ಎತ್ತಿಕೊಳ್ಳಬಹುದು. ಗುಜರಾತಿನ ಶಾಸಕ ಪೂರ್ಣೇಶ ಮೋದಿ ಎಂಬವರು 2019ರಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋಲಾರದಲ್ಲಿ ಮೋದಿ ವಿರುದ್ಧ ನೀಡಿದ್ದ ಹೇಳಿಕೆಯನ್ನು ಉದ್ಧರಿಸಿ ಮಾನನಷ್ಟ ದೂರು ನೀಡುತ್ತಾರೆ. ಮ್ಯಾಜಿಸ್ಟ್ರೇಟ್ ಕೋರ್ಟು ಪುರಸ್ಕರಿಸುತ್ತದೆ. ವಿಚಾರಣೆ ನಡೆಸಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತು. ರಾಹುಲ್ ಗಾಂಧಿ ಸಂಸದತ್ವ ಹೋಗಲು ಇಷ್ಟು ಸಾಕಿತ್ತು. ಇದು ಬಿಜೆಪಿಗೆ ಆಗಬೇಕಿತ್ತು. ಮ್ಯಾಜಿಸ್ಟ್ರೇಟರು ನಡೆಸಿದ ಎಲ್ಲ ಪ್ರಕ್ರಿಯೆಗಳು ಬಿಜೆಪಿಗೆ ಪೂರಕವಾಗಿಯೇ ನಡೆದಿತ್ತು. ಈ ತೀರ್ಪಿನ ವಿರುದ್ಧ ರಾಹುಲ್ ಹೈಕೋರ್ಟಿಗೆ ಹೋದಾಗ ಕ್ಯಾರೆ ಮಾಡಲಿಲ್ಲ. ಅಂತಿಮವಾಗಿ ಸುಪ್ರೀಂಕೋರ್ಟು ಮ್ಯಾಜಿಸ್ಟ್ರೇಟ್ ಕೋರ್ಟಿನ ತೀರ್ಪಿಗೆ ಸ್ಟೇ ನೀಡಿದ್ದರಿಂದ ರಾಹುಲ್ ಸದಸ್ಯತ್ವ ರದ್ದತಿ ಗಂಡಾಂತರದಿಂದ ಪಾರಾಯಿತು. ನಡೆದದ್ದು ಇಷ್ಟೇ – ಚುನಾವಣಾ ಪ್ರಚಾರ ಭಾಷಣ ಮಾಡುತ್ತ ಎಲ್ಲ ಕಳ್ಳರಿಗೆ ಮೋದಿ ಹೆಸರು ಯಾಕಿದೆ ಎಂದು ಟೀಕಿಸಿದ್ದು. ಸುಲ್ತಾನಪುರ ಕೇಸು ಇಷ್ಟೇ – ಬೆಂಗಳೂರಿನಲ್ಲಿ ಕೊಲೆ ಆರೋಪಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದೆ ಎಂದು ರಾಹುಲ್ ಟೀಕಿಸಿದ್ದು. ಈಗ ಸುಲ್ತಾನ್ ಪುರ ಕೋರ್ಟಿನ ತೀರ್ಪು ನ್ಯಾಯ ತನ್ನ ಹಳಿಗೆ ಮರಳುವ ಲಕ್ಷಣಗಳೆಂದು ನೀವು ಪರಿಗಣಿಸಬಹುದು. ನೌ ಜಸ್ಟಿಸ್ ಈಸ್ ಬ್ಯಾಕ್ ಆನ್ ಟ್ರಾಕ್.

ಕೋರ್ಟು ಬಿಜೆಪಿ ಹೇಳಿದ್ದು ಕೇಳುತ್ತದಾ? 

ನಿವೃತ್ತ ಸುಪ್ರೀಂ ಕೋರ್ಟು ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಇಂತಹ ಒಂದು ವಿಚಾರವನ್ನು ದೇಶದ ಮುಂದಿರಿಸಿದ್ದಾರೆ. ಕೊಲಿಜಿಯಂ ವಿಚಾರದಲ್ಲಿ ಖ್ಯಾತ ಪತ್ರಕರ್ತ ಕರಣ್ ಥಾಪರ್‌ರೊಂದಿಗೆ ಚರ್ಚಿಸುತ್ತಾ ಸುಪ್ರೀಂಕೋರ್ಟಿನ ನಿವೃತ್ತ ಚೀಫ್ ಜಸ್ಟಿಸ್ ಚಂದ್ರಚೂಡರು ಬಿಜೆಪಿ ಹೇಳಿದ್ದು ಕೇಳುತ್ತಿದ್ದರು ಎಂದು ತಿಳಿಸಿದ್ದಾರೆ. ಜಡ್ಜ್‌ಗಳ ನೇಮಕಾತಿ ಸರಕಾರ ಬಯಸಿದಂತಾಗುತ್ತಿತ್ತು. ಕೊಲಿಜಿಯಂ ಸಭೆಗೂ ಮೊದಲು ಚಂದ್ರಚೂಡರು ಸರಕಾರವನ್ನು ಸಂಪರ್ಕಿಸುತ್ತಿದ್ದರು. ಜಸ್ಟಿಸ್ ಕೌಲ್ ದೇಶದ ಮುಂದಿಟ್ಟದ್ದು ತುಂಬ ಗಂಭೀರ ವಿಚಾರವಾಗಿದೆ. ಸರಕಾರ ಬಯಸಿದಂತೆ ಜಡ್ಜ್ ನಿಯುಕ್ತಿ! ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ನೇತೃತ್ವದ ಪೀಠ ಬಾಬರಿ ಮಸೀದಿ ಪ್ರಕರಣದಲ್ಲಿ ವ್ಯತಿರಿಕ್ತ ತೀರ್ಪು ಕೊಟ್ಟಿತ್ತು. ಈ ಪೀಠದಲ್ಲಿ ಚಂದ್ರಚೂಡರು ಕೂಡ ಇದ್ದರು. ಬಾಬರಿ ವಿರುದ್ಧ ರಾಮಜನ್ಮಭೂಮಿ ಪರ ತೀರ್ಪನ್ನು ಚಂದ್ರ ಚೂಡರೇ ಓದಿದ್ದರು. ಮುಸ್ಲಿಮರಿಗೆ ಮಹಾ ಮೋಸ ಆಗಿತ್ತು. ಜಸ್ಟಿಸ್ ಕೌಲ್ ನೀಡಿದ ಕ್ಲೂ ಆಧಾರದಲ್ಲಿ ಈ ಪ್ರಕರಣವನ್ನು ತೆಗೆದುಕೊಂಡರೆ ಬಾಬರಿ ತೀರ್ಪು ನ್ಯಾಯಾಲಯದ ಬದಲು ಸರಕಾರ ಕೊಟ್ಟಿದೆ ಎಂದಾಗುತ್ತದೆ. ಜಡ್ಜ್ ನೇಮಕದ ಕೊಲಿಜಿಯಂನಲ್ಲಿ ಮೋದಿ ಅಮಿತ್ ಶಾರ ಹಸ್ತಕ್ಷೇಪ ಇದೆ ಎಂದಾದರೆ. ಮುಸ್ಲಿಮರು, ಆಕ್ಟಿವಿಸ್ಟ್‌ಗಳು, ಸಂವಿಧಾನ ಪರ ಧ್ವನಿಎತ್ತುತ್ತಿರುವ ಹೋರಾಟಗಾರರ ವಿರುದ್ಧ ಕೋರ್ಟು ತೀರ್ಪು ಬರುತ್ತಿರುವ ಕಾರಣವೂ ಅರ್ಥವಾಗುತ್ತದೆ. ದಿಲ್ಲಿ ಗಲಭೆ ವಿಚಾರದಲ್ಲಿ ಗದ್ದಾರೋಂಕೊ ಗೋಲಿಮಾರೊ ಎಂಬ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಜಡ್ಜ್ ಮಧುಸೂಧನ್ ಇದ್ದಕ್ಕಿದ್ದಂತೆ ರಾತ್ರೆ ಬೆಳಗಾಗುವುದರೊಳಗೆ ವರ್ಗಾವಣೆಗೊಳ್ಳುತ್ತಾರೆ. ಸರಕಾರವೇ ನ್ಯಾಯವನ್ನು ಹಳಿತಪ್ಪಿಸಿದ್ದು ಎಂದು ಈ ವರ್ಗಾವಣೆ ವಿಚಾರದಲ್ಲಿ ಅಂದು ಚರ್ಚೆಯಾಗಿತ್ತು. ಆದರೆ, ಹಳಿತಪ್ಪಿದ ನ್ಯಾಯದಾನದ ಕುರಿತಂತೆ ಜಸ್ಟಿಸ್ ಚಂದ್ರಚೂಡ್‌ರಿಗೆ ಮಾತ್ರ ಸೀಮಿತಗೊಳಿಸಿ ನೋಡುವ ಹಾಗಿಲ್ಲ. ರಾಜಕಾರಣಿಗಳ ಇಂಗಿತದಂತೆ ದೇಶದಲ್ಲಿ ಎಷ್ಟೆಷ್ಟು ಯಾವ್ಯಾವ ಜಡ್ಜ್‌ಗಳು ಎಲ್ಲಲ್ಲಿ ನೇಮಕಗೊಂಡರೋ ಅಲ್ಲಿ ನ್ಯಾಯ ಹಳಿ ತಪ್ಪುವ ಅಪಾಯ ಇದ್ದೇ ಇರುತ್ತದೆ. ಅಂತಹ ಜಡ್ಜ್‌ಗಳಿಂದ ಹೊರ ಬಂದ ತೀರ್ಪುಗಳು ರಾಹುಲ್ ಗಾಂಧಿಗೆ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟು ನೀಡಿದಂತಿರುತ್ತದೆ. ಸರಕಾರವನ್ನು ವಿರೋಧಿಸುವವರಿಗೆ ಹಾನಿ ಮಾಡುತ್ತೆ. ಬಹುಶಃ ತಿಹಾರ್ ಜೈಲಿನಲ್ಲಿ ಬಂಧಿತರಾಗಿರುವ ಶರ್ಜಿಲ್ ಇಮಾಮ್ ಮತ್ತು ಉಮರ್ ಖಾಲಿದ್‌ರಂತಹವರು ವಿಚಾರಣೆಯೂ ಇಲ್ಲದೆ, ಜಾಮೀನೂ ಇಲ್ಲದೆ ಕಂಬಿ ಹಿಂದೆ ಇರುವ ಗುಟ್ಟಿದು. ಹೀಗಾಗಿಯೇ ಇದ್ದರೆ ಮೋದಿ ಸರಕಾರ ಇರುವವರೆಗೂ ಇವರಿಬ್ಬರು ಮತ್ತು ಇವರಂತಹವರೆಲ್ಲ ಜೈಲಿನಿಂದ ಹೊರಗೆ ಬರುವುದಿಲ್ಲ. ಉತ್ತರ ಪ್ರದೇಶದಲ್ಲಿ ಆಝಂ ಖಾನ್ ಕೂಡ ಜೈಲೊಳಗೆ ಬಿದ್ದುಕೊಳ್ಳುವಂತಾಗಿದೆ. ಆದ್ದರಿಂದ ರಾಹುಲ್ ಗಾಂಧಿ ಖುಲಾಸೆಗೊಳಿಸಿದ ಸುಲ್ತಾನ್ ಪುರ ಕೋರ್ಟಿನ ತೀರ್ಪು; ಇನ್ನು ಮುಂದಕ್ಕೆ ನ್ಯಾಯ ಹಳಿಗೆ ಬರಬಹುದು ಎಂಬ ಆಶಾವಾದ ಗರಿಕೆದರುತ್ತದೆ. ಯೆಸ್,ನೌ ಜಸ್ಟಿಸ್ ಈಸ್ ಬ್ಯಾಕ್ ಆನ್ ಟ್ರಾಕ್.

ಕೋರ್ಟು ಮತ್ತೆ ನೆನಪಿಸಿದ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣ

2005ರ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್ ಗಾಂಧಿಯವರು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಈ ಪ್ರಕರಣದಲ್ಲಿ ಅಮಿತ್ ಶಾ 2014ರ ಡಿಸೆಂಬರ್‌ನಲ್ಲಿ ವಿಶೇಷ ಸಿಬಿಐ ನ್ಯಾಯಾಲಯದ ಮೂಲಕ ಎಲ್ಲಾ ಆರೋಪಗಳಿಂದ ಖುಲಾಸೆಗೊಳ್ಳುತ್ತಾರೆ. ಜಸ್ಟಿಸ್ ಕೌಲ್ ಬಹಿರಂಗ ಪಡಿಸಿದ ಆಧಾರದಲ್ಲಿ ನೋಡಿದರೆ ಇಲ್ಲಿಯೂ ನ್ಯಾಯ ಹಳಿ ತಪ್ಪಿತ್ತು ಎಂದನಿಸುತ್ತದೆ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ 2005 ರಲ್ಲಿ ನಡೆದಿತ್ತು. ಅಮಿತ್ ಶಾ ಇದರಲ್ಲಿ ಆರೋಪಿಯಾಗಿದ್ದರು. ನವೆಂಬರ್ 2005 ರಲ್ಲಿ, ಗುಜರಾತ್ ಪೋಲಿಸರ ಭಯೋತ್ಪಾದನಾ ನಿಗ್ರಹ ಪಡೆ (ATS) ಸೊಹ್ರಾಬುದ್ದೀನ್ ಶೇಕ್ ಎಂಬಾತನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿತ್ತು. ಆತ ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಮತ್ತು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದರು. ಈ ಘಟನೆಯ ಕೆಲವೇ ದಿನಗಳಲ್ಲಿ ಸೊಹ್ರಾಬುದ್ದೀನ್ ಅವರ ಪತ್ನಿ ಕೌಸರ್ ಬಿ ಕಾಣೆಯಾದರು. ನಂತರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದರು. ಈ ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿಯಾಗಿದ್ದ ತುಳಸಿರಾಮ್ ಪ್ರಜಾಪತಿ ಎಂಬಾತನನ್ನು 2006 ರ ಡಿಸೆಂಬರ್‌ನಲ್ಲಿ ಮತ್ತೊಂದು ಎನ್‌ಕೌಂಟರ್‌ನಲ್ಲಿ ಕೊಲೆ ಮಾಡಲಾಯಿತು. 

ಸುಪ್ರೀಂ ಕೋರ್ಟ್ ತನಿಖೆ ಮತ್ತು ಸಿಬಿಐ ಪ್ರವೇಶ 

ಸೊಹ್ರಾಬುದ್ದೀನ್ ಅವರ ಸಹೋದರ ರುಬಾಬುದ್ದೀನ್ ಅವರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ, ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು 2010 ರಲ್ಲಿ ಸಿಬಿಐ ಗೆ ಹಸ್ತಾಂತರಿಸಿತು. ಅಂದಿನ ಗುಜರಾತ್ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರು ಈ ಎನ್‌ಕೌಂಟರ್‌ಗಳ ಹಿಂದಿನ ಮುಖ್ಯ ಸಂಚುಕೋರ ಎಂದು ಸಿಬಿಐ ಆರೋಪಿಸಿತು ಮತ್ತು 2010 ರ ಜುಲೈನಲ್ಲಿ ಅಮಿತ್ ಶಾ ಅವರನ್ನು ಬಂಧಿಸಲಾಯಿತು. 2010 ರ ಅಕ್ಟೋಬರ್‌ನಲ್ಲಿ ಅವರಿಗೆ ಗುಜರಾತ್ ಹೈಕೋರ್ಟ್ ಜಾಮೀನು ನೀಡಿತು. ಸಾಕ್ಷ್ಯಗಳ ಮೇಲೆ ಪ್ರಭಾವ ಬೀರದಂತೆ ತಡೆಯಲು ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಗುಜರಾತ್‌ನಿಂದ ಮುಂಬೈ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಿತು. ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಅಮಿತ್ ಶಾ ಅವರನ್ನು ಈ ಪ್ರಕರಣದಿಂದ ಸಂಪೂರ್ಣವಾಗಿ ಖುಲಾಸೆ ಮಾಡಿತು. ವಿಚಾರಣೆ ಎದುರಿಸುತ್ತಿದ್ದ ಉಳಿದ 22 ಜನ ಆರೋಪಿಗಳನ್ನು (ಹೆಚ್ಚಾಗಿ ಗುಜರಾತ್ ಮತ್ತು ರಾಜಸ್ಥಾನದ ಪೊಲೀಸ್ ಅಧಿಕಾರಿಗಳು) ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಿಬಿಐ ನಂತರದಲ್ಲಿ ಖುಲಾಸೆಗೊಳಿಸಿತು. ಇದೇ ಪ್ರಕರಣವನ್ನು ಮೇ 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ, ರಾಹುಲ್ ಗಾಂಧಿಯವರು ಅಮಿತ್ ಶಾರನ್ನು ಉಲ್ಲೇಖಿಸಿ ಟೀಕಿಸಿದ್ದರು. ಬಿಜೆಪಿ “ಕೊಲೆ ಆರೋಪಿ”ಯನ್ನು ತನ್ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಹೊಂದಿದೆ ಎಂದು ಹೇಳಿದ್ದರು.

ಕೋರ್ಟಿನಿಂದ ಚುನಾವಣಾಆಯೋಗಕ್ಕೆ ನೋಟಿಸು

ಮಹಾರಾಷ್ಟ್ರದ ಮತದಾರರ ಹೆಸರು ಕಿತ್ತು ಹಾಕಿದ ಪ್ರಕರಣದಲ್ಲಿ ವಿವರ ಕೇಳಿ ಸುಪ್ರೀಂ ಕೋರ್ಟು ಚುನಾವಣಾ ಆಯೋಗಕ್ಕೆ ನೋಟಿಸು ನೀಡಿದೆ. ವೋಟರ್‌ಗಳನ್ನು ಕಿತ್ತು ಹಾಕುತ್ತ ಹೋಗುವ ಜ್ಞಾನೇಶ್ ಕುಮಾರ್ ಸರ್ವಾಧಿಕಾರಕ್ಕೆ ಹೀಗೆ ಕೊರ್ಟು ಧಕ್ಕೆ ಕೊಟ್ಟಿದೆ, ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಲಕ್ಷಾಂತರ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮೇಲೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದೆಂದರೆ ಪ್ರಜೆಗಳ ಧ್ವನಿಗೆ ಬಲ ಸಿಕ್ಕಿತು. ಹೌದು ಕೋರ್ಟು ಎಚ್ಚೆತ್ತು ಕೊಂಡದ್ದು ಈಗ ನ್ಯಾಯಾಲಯದ ಈ ಪ್ರಕ್ರಿಯೆಯಿಂದ ಎಲ್ಲರಿಗೂ ಅರ್ಥವಾದೀತು. ಜ್ಞಾನೇಶ್ ಕುಮಾರ್‌ರ ಆಯೋಗ ಮಹಾರಾಷ್ಟ್ರದಲ್ಲಿ ಎಸ್‌ಐಆರ್ ಕರಡು ಮತದಾರರ ಪಟ್ಟಿಯಿಂದ 33 ಪರ್ಸೆಂಟ್ ಮತದಾರರನ್ನು ಕೈ ಬಿಟ್ಟಿದೆ. ಮುಂಬೈ ಪುಣೆಯಲ್ಲಿ ಸುಮಾರು 3,500ರಷ್ಟು ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ. ಜನ ಈ ಕಾರಣದಿಂದ ವಾಸ್ತವ್ಯ ಸ್ಥಳ ಬದಲಿಸುತ್ತಾರೆ. ಜನರನ್ನು ‘ವ್ಯಕ್ತಿ ಪತ್ತೆಯಾಗಿಲ್ಲ’ ಎಂಬ ಕಾರಣ ನೀಡಿ ವ್ಯಾಪಕವಾಗಿ ವೋಟರ್ ಪಟ್ಟಿಯಿಂದ ಅಳಿಸಲಾಗಿದೆ. ತಾಂತ್ರಿಕ ಕಾರಣಗಳನ್ನು ನೀಡಿ ಲಕ್ಷಾಂತರ ಹೆಸರುಗಳನ್ನು ವಜಾಗೊಳಿಸಲಾಗಿದೆ. ಅಳಿಸುವಿಕೆಗೆ ಸಬೂಬು ನೀಡುವ ಕರ್ಮಕ್ಕೆ ಈಗ ಚುನಾವಣಾ ಆಯೋಗ ಸಿಕ್ಕಿಬಿದ್ದಿದೆ. ನ್ಯಾಯ ತನ್ನ ಹಳಿಯಲ್ಲೇ ನಡೆದರೆ ಜನರ ಮೇಲೆ ಅಕ್ರಮದಿಂದ ರಕ್ಷಣೆ ದೊರೆಯುವ ನಿರೀಕ್ಷೆ ಮೂಡುತ್ತದೆ. ಚುನಾವಣಾ ಆಯೋಗದ ಸ್ವೇಚ್ಛಾಚರಕ್ಕೆ ಬ್ರೇಕ್ ಬೀಳಬೇಕು. ಸಿಜೆಪಿ ಸಹಿತ ಪ್ರತಿಪಕ್ಷಗಳು ಜ್ಞಾನೇಶ್‌ರ ಎತ್ತಂಗಡಿಗೆ ಹೋರಾಟಕ್ಕಿಳಿದದ್ದು ಇದಕ್ಕಾಗಿ ಆಗಿದೆ.

ಎರಡೂ ಪ್ರಕರಣದ ಕಾರಣಗಳ ಪಾಠ 

ಬಹುಶಃ ಚೀಫ್ ಜಸ್ಟಿಸ್ ಸೂರ್ಯಕಾಂತ್ ಜೆನ್-ಝಿಗಳನ್ನು ಕಾಕ್ರೋಚ್ ಎಂದ ನಂತರ ದೇಶದ ರಾಜಕೀಯ ಭೂಪಟಲದಲ್ಲಾದ ಏರುಪೇರು ಮತ್ತು ಜೆನ್‌ಝಿಗಳ ಗಾಢ ಪ್ರಭಾವ ಕೋರ್ಟು ಗುರುತಿಸಿದೆ. ಮೋದಿ ಯುಗ ಅಂತಿಮ ಚರಣಕ್ಕೆ ಬಂತಾ? ಬಹುಪಾಲು ಯುವ ಜನತೆ ಅವರ ಹಿಂದಿರುವುದರಿಂದ ಈ ವಿಷಯ ಉದ್ಭವಿಸುವುದು. ಜಸ್ಟಿಸ್ ಕೌಲ್ ನೀಡಿದ ಕ್ಲೂ, ರಾಹುಲ್ ಗಾಂಧಿ ಖುಲಾಸೆ ಗೊಂಡ ಸುಲ್ತಾನಪುರ ಕೋರ್ಟಿನ ತೀರ್ಪು ನ್ಯಾಯಪೂರ್ಣ ಎಂದುದಕ್ಕೆ ಇನ್ನೊಂದು ಕಾರಣವೂ ಇದೆ. ಮೋದಿ, ಅಮಿತ್ ಶಾ ಮುಸ್ಲಿಮರನ್ನು ಚುನಾವಣಾ ಪ್ರಚಾರಗಳಲ್ಲಿ ಅವಮಾನಿಸಿದ್ದು. ಕಾಂಗ್ರೆಸ್ ಅಧಿನಾಯಕಿ ಸೋನಿಯ ಗಾಂಧಿಯನ್ನು ಅವಮಾನಿಸಿದ್ದು. ಶಶಿತರೂರ್‌ರನ್ನು ಪತ್ನಿ ಸುನಂದ ವಿಚಾರದಲ್ಲಿ ಅಪಮಾನಿಸಿದ್ದು. ಇವೆಲ್ಲ ಒಟ್ಟು ಸೇರಿಸಿ ನೋಡಿ. ಎಂಪಿಎಎಲ್ ಕೋರ್ಟಿನಿಂದ ಶಿಕ್ಷೆ ಬಂತಾ? ಚುನಾವಣಾ ಆಯೋಗ ಏನಾದರೂ ಶಿಕ್ಷೆ ಕೊಟ್ಟಿತಾ? ಹಾಗಿರುವಾಗ ರಾಹುಲ್ ಗಾಂಧಿಗೆ ಮಾತ್ರ ಶಿಕ್ಷೆ ಯಾಕೆ ಇರಬೇಕು? 

ಬಾಬರಿ ಮಸೀದಿಯಲ್ಲಿ ವಿಪರೀತ ತೀರ್ಪು ನೀಡಿದ ಎಲ್ಲ ಜಡ್ಜ್‌ಗಳು ಇಂದು ಸರಕಾರದ ಫಲಾನುಭವಿ ಆಗಿದ್ದಾರೆ. ಜಸ್ಟಿಸ್ ಗೊಗೊಯಿ, ಜಸ್ಟಿಸ್ ನಝೀರ್, ಜಸ್ಟಿಸ್ ಚಂದ್ರ ಚೂಡ್ ಎಲ್ಲರೂ ಕೇಂದ್ರ ಸರ್ಕಾರದಿಂದ ಒಂದಲ್ಲ ಒಂದು ಸರಕಾರಿ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಪಡೆದ ಹುದ್ದೆಗಳೆಲ್ಲ ನ್ಯಾಯದ ಮೇಲೆ ಸವಾರಿ ನಡೆಸಿದ ಫಲಶ್ರುತಿ ಹಿನ್ನೆಲೆಯಲ್ಲಿ ಎಂದು ನೀವು ಹೇಳಬಹುದು. ಚುನಾವಣಾ ಆಯೋಗ ಪ್ರಾಮಾಣಿಕವಾಗಿದ್ದಿದ್ದರೆ ಮೋದಿ ಪ್ರಧಾನಿಯಾಗಿರಲು ಮತ್ತು ಅಮಿತ್ ಶಾ ಗೃಹ ಸಚಿವನಾಗಿರುವುದು ಸಾಧ್ಯವಿರುತ್ತಿರಲಿಲ್ಲ. ಈಗ ಸುಲ್ತಾನ್ ಪುರ ಕೋರ್ಟಿನಿಂದ ಬಂದ ತೀರ್ಪನ್ನು ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟಿನ ತೀರ್ಪಿಗೆ ಬರೆ ಎಳೆದಿದೆ. ಹೌದು ನ್ಯಾಯಾಧೀಶರು ಸರಿಯಾದ ನ್ಯಾಯ ನೀಡದೇ ಇದ್ದರೆ ಸಂವಿಧಾನ ನಿಸ್ತೇಜವಾಗುತ್ತದೆ, ಕಾನೂನೇ ಸಂಕುಚಿತಗೊಳ್ಳುತ್ತದೆ, ನ್ಯಾಯ ಮರೀಚಿಕೆಯಾಗುತ್ತದೆ, ಪ್ರಜೆಗಳ ಬದುಕು ಎಲ್ಲವೂ ಇಂತಹ ಕಾರಣಗಳಿಗೆ ಏರುಪೇರಾಗುತ್ತದೆ. ಮೋದಿ, ಅಮಿತ್ ಶಾರನ್ನು ಟೀಕಿಸಿದರೆ ಬಿಜೆಪಿಗರು ಕುದಿಯುತ್ತಾರೆ. ಕೋರ್ಟು ಕೂಡ ಕೆರೆಯುತ್ತದೆ ಎಂಬಂತಾಗಿತ್ತು. ಈಗ ಅದಕ್ಕೆ ಬ್ರೇಕ್ ಬಿತ್ತು. ಜಸ್ಟಿಸ್ ಆಂಡ್ ಡಿಗ್ನಿಟಿ ವಿಚಾರ ಇದು. ನ್ಯಾಯಾಲಯಗಳು ನ್ಯಾಯದ ವೈಭವಕ್ಕೆ ಮರಳಬೇಕು.