ಸನ್ಮಾರ್ಗ ವಾರ್ತೆ
ಲಕ್ನೋ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ನಡೆದ ಮತದಾರರ ಪಟ್ಟಿಯ ವಿಶೇಷ ಮತ್ತು ತೀವ್ರ ಪರಿಷ್ಕರಣೆಯ ನಂತರ ಸುಮಾರು 1.27 ಕೋಟಿ ಹಿಂದೂ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯು ಬಿಜೆಪಿ ಪಾಳಯದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇದು ಚುನಾವಣಾ ಫಲಿತಾಂಶವನ್ನು ತಲೆಕೆಳಗು ಮಾಡಬಹುದು ಎಂದು ಪಕ್ಷದ ನಾಯಕತ್ವ ಅಂದಾಜಿಸುತ್ತಿದೆ.
ಹೊರಗುಳಿದಿರುವ ಬಹುಪಾಲು ಮತದಾರರನ್ನು ಮರಳಿ ಪಟ್ಟಿಗೆ ಸೇರಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಬಿಜೆಪಿ ನಾಯಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಈ ಉದ್ದೇಶಕ್ಕಾಗಿ ಪ್ರಸ್ತುತ ನಡೆಯುತ್ತಿರುವ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್ಎಸ್ಆರ್) ಪ್ರಕ್ರಿಯೆಯನ್ನು ಬಳಸಿಕೊಳ್ಳುವಂತೆಯೂ ಪಕ್ಷದ ನಾಯಕತ್ವ ತನ್ನ ಕಾರ್ಯಕರ್ತರಿಗೆ ಸೂಚಿಸಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
2025ರ ಅಕ್ಟೋಬರ್ 27ರಂದು ಉತ್ತರ ಪ್ರದೇಶದಲ್ಲಿ ಆರಂಭವಾಗಿದ್ದ ಎಸ್ಐಆರ್ (SIR) ಪ್ರಕ್ರಿಯೆಯು ಈ ವರ್ಷದ ಏಪ್ರಿಲ್ 10ರಂದು ಪೂರ್ಣಗೊಂಡಿತ್ತು. ಎಸ್ಐಆರ್ ನಂತರ ಉತ್ತರ ಪ್ರದೇಶದಲ್ಲಿದ್ದ 15.44 ಕೋಟಿ ಮತದಾರರ ಸಂಖ್ಯೆ 13.39 ಕೋಟಿಗೆ ಇಳಿಕೆಯಾಗಿದೆ. ಹೊರಗುಳಿದ 1.27 ಕೋಟಿ ಹಿಂದೂ ಮತದಾರರ ಅಂಕಿಅಂಶಗಳನ್ನು ಪರಿಶೀಲಿಸಿದಾಗ, 403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದ ಪ್ರತಿ ಕ್ಷೇತ್ರದಲ್ಲಿ ಸರಾಸರಿ 31,000ಕ್ಕೂ ಹೆಚ್ಚು ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಅಂದಾಜಿಸಲಾಗಿದೆ.
ಈ ಅಂತರವನ್ನು ತುಂಬಲು, ಪ್ರತಿ ಕ್ಷೇತ್ರದಲ್ಲಿ 10,000 ರಿಂದ 25,000 ಮತದಾರರನ್ನು ಮರಳಿ ಪಟ್ಟಿಗೆ ತರುವಂತೆ ಬಿಜೆಪಿ ಜಿಲ್ಲಾ ನಾಯಕರಿಗೆ ಸೂಚಿಸಿದೆ. ಇದರಿಂದ ಪ್ರತಿ ಮತಗಟ್ಟೆಗೆ ಕನಿಷ್ಠ 50 ಹೆಚ್ಚುವರಿ ಮತದಾರರು ಸೇರ್ಪಡೆಯಾಗಲಿದ್ದಾರೆ. ಕರಡು ಮತದಾರರ ಪಟ್ಟಿ ಪ್ರಕಟವಾದ ಮೂರು ದಿನಗಳ ನಂತರ, ಅಂದರೆ ನವೆಂಬರ್ 20ರಂದು ಈ ಅಭಿಯಾನವನ್ನು ಆರಂಭಿಸಲು ಎಸ್ಎಸ್ಆರ್ ಯೋಜಿಸಿದೆ.
ಶುಕ್ರವಾರ ಲಕ್ನೋದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಉಸ್ತುವಾರಿ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು. ಮುಂದಿನ ಒಂದು ತಿಂಗಳನ್ನು ‘ಅಂತಿಮ ಮೌಕಾ’ ಅಂದರೆ ಕೊನೆಯ ಅವಕಾಶ ಎಂದು ಯೋಗಿ ಆದಿತ್ಯನಾಥ್ ಬಣ್ಣಿಸಿದ್ದಾರೆ. ಮತದಾರರನ್ನು ಮರಳಿ ಮತದಾರರ ಪಟ್ಟಿಗೆ ಸೇರಿಸುವ ಈ ಅವಕಾಶವನ್ನು ವ್ಯರ್ಥ ಮಾಡದಂತೆಯೂ ಅವರು ನಾಯಕರಿಗೆ ಸೂಚಿಸಿದ್ದಾರೆ.
ಮುಂದಿನ ಒಂದು ತಿಂಗಳ ಕಾಲ ಬೇರೆ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದೆ, ಸಂಪೂರ್ಣವಾಗಿ ಮತದಾರರ ಪಟ್ಟಿಯನ್ನು ನವೀಕರಿಸುವ ಕೆಲಸದತ್ತ ಗಮನಹರಿಸಲು ಪಕ್ಷ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. “ನಾವು 40 ಲಕ್ಷದಿಂದ 80 ಲಕ್ಷ ಮತದಾರರನ್ನು ಪಟ್ಟಿಗೆ ಸೇರಿಸಲು ಸಾಧ್ಯವಾದರೆ ಅಷ್ಟೇ ಸಾಕು” ಎಂದು ನಾಯಕರೊಬ್ಬರು ಹೇಳಿದ್ದಾರೆ.
ಮತದಾರರ ಪಟ್ಟಿಯಿಂದ ಯಾರು ಹೊರಗುಳಿದಿದ್ದಾರೆ ಎಂಬುದನ್ನು ಕಂಡುಹಿಡಿಯಲು ವಿಧಾನಸಭಾ ಮತದಾರರ ಪಟ್ಟಿ ಮತ್ತು ಪಂಚಾಯತ್ ಚುನಾವಣಾ ಮತದಾರರ ಪಟ್ಟಿಯನ್ನು ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಪಟ್ಟಿಯೊಂದಿಗೆ ಹೋಲಿಸಿ ನೋಡುವಂತೆ ಮುಖ್ಯಮಂತ್ರಿಗಳು ಪಕ್ಷದ ನಾಯಕರಿಗೆ ನಿರ್ದೇಶನ ನೀಡಿದ್ದಾರೆ.
ಎಸ್ಎಸ್ಆರ್ ನಂತರದ ಕರಡು ಮತದಾರರ ಪಟ್ಟಿಯು ನವೆಂಬರ್ 17ರಂದು ಪ್ರಕಟವಾಗಲಿದೆ. ಆದಾಗ್ಯೂ, ಪಟ್ಟಿಗೆ ಸಂಬಂಧಿಸಿದಂತೆ ದೂರುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 16ರವರೆಗೆ ಗಡುವು ಇದೆ. ಅಂತಿಮ ಮತದಾರರ ಪಟ್ಟಿಯು 2027ರ ಜನವರಿ 4ರಂದು ಪ್ರಕಟವಾಗಲಿದೆ. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಲವು ಕ್ಷೇತ್ರಗಳಲ್ಲಿ 1,500 ರಿಂದ 3,000 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಒಂದು ವೇಳೆ ಮತದಾರರ ಪಟ್ಟಿಯಿಂದ 5,000 ರಿಂದ 10,000 ಮತದಾರರು ಹೊರಗುಳಿದರೆ, ಈ ಕ್ಷೇತ್ರಗಳಲ್ಲಿ ತಮ್ಮ ಗೆಲುವಿನ ಸಾಧ್ಯತೆಗಳ ಮೇಲೆ ಪರಿಣಾಮ ಬೀರಬಹುದು ಎಂಬುದು ಬಿಜೆಪಿ ನಾಯಕತ್ವದ ಆತಂಕವಾಗಿದೆ.
2017ರಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ (ಎಸ್ಪಿ) ನಡುವಿನ ಮತಗಳ ಅಂತರ 1.55 ಕೋಟಿ ಇತ್ತು ಮತ್ತು 2022ರಲ್ಲಿ ಅದು 85 ಲಕ್ಷಕ್ಕೆ ಇಳಿದಿದೆ ಎಂದು ಕೇಶವ್ ಪ್ರಸಾದ್ ಮೌರ್ಯ ಸಭೆಯಲ್ಲಿ ಬೆಟ್ಟು ಮಾಡಿ ತೋರಿಸಿದ್ದಾರೆ. ರಾಜ್ಯದೊಳಗೆ ಬೇರೆ ಕ್ಷೇತ್ರಕ್ಕೆ ಸ್ಥಳಾಂತರಗೊಂಡಿರುವ ಅಥವಾ ಬೇರೆ ರಾಜ್ಯಕ್ಕೆ ವಲಸೆ ಹೋಗಿರುವ ಮತದಾರರತ್ತ ಗಮನಹರಿಸಲು ಬಿಜೆಪಿ ನಿರ್ಧರಿಸಿದೆ. ಇದರೊಂದಿಗೆ ಮತದಾರರ ಪಟ್ಟಿಯಲ್ಲಿ ಹೆಚ್ಚಿನ ಮಹಿಳೆಯರು ಮತ್ತು ಯುವಕರನ್ನು ಸೇರಿಸುವತ್ತಲೂ ಗಮನಹರಿಸುವುದಾಗಿ ಅವರು ತಿಳಿಸಿದ್ದಾರೆ.
“ಬಿಜೆಪಿ ಗೆಲುವು ಸಾಧಿಸದ ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳತ್ತ ಪಕ್ಷವು ಹೆಚ್ಚಿನ ಗಮನ ಹರಿಸುವುದಿಲ್ಲ. ಎಸ್ಐಆರ್ ಪ್ರಕ್ರಿಯೆಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಮತದಾರರು ಹೊರಗುಳಿದಿರುವ, ಆದರೆ ಅವರನ್ನು ಮರಳಿ ಸೇರಿಸಿದರೆ ಗೆಲ್ಲುವ ಸಾಧ್ಯತೆಯಿರುವ ಕ್ಷೇತ್ರಗಳಲ್ಲಿ ನಾವು ಕಾರ್ಯಕರ್ತರನ್ನು ನಿಯೋಜಿಸುತ್ತೇವೆ” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ‘ಆಜ್ ತಕ್’ ಆಯೋಜಿಸಿದ್ದ ಸುದ್ದಿ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರನ್ನು ಕೈಬಿಟ್ಟಿರುವ ಕುರಿತು ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.












