ಉಮರ್‌ ಖಾಲಿದ್‌ ಇಲ್ಲದ ಮನೆ, ಅಂತರಂಗ ಬಿಚ್ಚಿಟ್ಟ ತಂದೆ

0
289

ವಿಶೇಷ ಸಂದರ್ಶನ

✍️ ಡಾ. ಎಸ್‌.ಕ್ಯೂ.ಆರ್‌ ಇಲ್ಯಾಸ್‌

ತಂದೆ, ಉಮರ್‌ ಖಾಲಿದ್‌ – ವಿಚಾರಣಾಧೀನ ಖೈದಿ, ತಿಹಾರ್‌ ಜೈಲ್‌, ನವ ದೆಹಲಿ

ಪ್ರಶ್ನೆ: ನಿಮ್ಮ ಮಗ ಉಮರ್‌ ಖಾಲಿದ್‌ ಒಬ್ಬ ವಿಚಾರಣಾಧೀನ ಖೈದಿಯಾಗಿ ಕಳೆದ ಆರು ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಈ ಸುದೀರ್ಘ ಯಾತನೆ ಮತ್ತು ನಿರಂತರ ಅಗಲಿಕೆಯು ಒಬ್ಬ ತಂದೆಯಾಗಿ ನಿಮ್ಮ ಮೇಲೆ ಮತ್ತು ನಿಮ್ಮ ಕುಟುಂಬದ ಭಾವನಾತ್ಮಕ ನೆಮ್ಮದಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ? ದಿನದಿಂದ ದಿನಕ್ಕೆ ಈ ಹೋರಾಟವನ್ನು ಮುಂದುವರಿಸಲು ನೀವು ಸ್ಥೈರ್ಯ ಹೇಗೆ ಪಡೆದುಕೊಳ್ಳುತ್ತೀರಿ?

ಉತ್ತರ: ನನ್ನ ಮಗನ ಸುದೀರ್ಘವಾದ ಮತ್ತು ಅನ್ಯಾಯದಿಂದ ಕೂಡಿದ ಬಂಧನವು ಇಡೀ ಕುಟುಂಬವನ್ನು ಭಾವನಾತ್ಮಕವಾಗಿ ಅಲುಗಾಡಿಸಿದೆ. ಉಮರ್ ಖಾಲಿದ್ ನನ್ನ ಮೊದಲ ಮಗ ಮತ್ತು ಕುಟುಂಬದಲ್ಲಿ ಹಿರಿಯವನು. ಆತ ಪಿಎಚ್‌ಡಿ ಮುಗಿಸಿದ ನಂತರ ಒಳ್ಳೆಯ ಉದ್ಯೋಗವನ್ನು ಪಡೆದುಕೊಂಡು, ನಮ್ಮ ವೃದ್ಧಾಪ್ಯದಲ್ಲಿ ಆಸರೆಯಾಗುತ್ತಾನೆ ಎಂದು ನಾವು ಆಶಿಸಿದ್ದೆವು. ಆದರೆ, ನಾವು ಮುಸ್ಲಿಮರು; ಅಲ್ಲಾಹನ ಇಚ್ಛೆಯಿಲ್ಲದೆ ಏನೂ ಸಂಭವಿಸುವುದಿಲ್ಲ ಎಂದು ವಿಶ್ವಾಸ ಇಡುವವರು. ಅಲ್ಲಾಹನು ಇಚ್ಛಿಸಿದಾಗ, ಜೈಲಿನಿಂದ ಹೊರಬರುವುದನ್ನು ತಡೆಯಲು ಜಗತ್ತಿನಲ್ಲಿ ಯಾವ ಶಕ್ತಿಗೂ ಸಾಧ್ಯ ಆಗುವುದಿಲ್ಲ ಎಂದು ನಾವು ದೃಢವಾಗಿ ನಂಬುತ್ತೇವೆ.

ಪ್ರಶ್ನೆ: ಉಮರ್ ಖಾಲಿದ್‌ ಜೊತೆ ತಮಗೆ ಮಾತನಾಡಲು ಸಾಧ್ಯವಾದಾಗ, ಆತನ ಮಾನಸಿಕ ದೃಢತೆಯ ಬಗ್ಗೆ ನೀವೇನು ಗಮನಿಸಿದ್ದೀರಿ? ಜೈಲುವಾಸವು ಆತನ ಜೀವನದೃಷ್ಟಿ, ಓದು ಮತ್ತು ಬರವಣಿಗೆಯನ್ನು ಹೇಗೆ ರೂಪಿಸುತ್ತಿದೆ ಅಥವಾ ಪ್ರಭಾವಿಸುತ್ತಿದೆ?

ಉತ್ತರ: ನಾನು ಪ್ರತಿ ವಾರ ವೀಡಿಯೊ ಕಾಲ್ ಮೂಲಕ ಉಮರ್ ಜೊತೆ ಮಾತನಾಡುತ್ತೇನೆ ಮತ್ತು ಸಾಂದರ್ಭಿಕವಾಗಿ ಜೈಲಿನಲ್ಲಿ ಭೇಟಿಯೂ ಆಗುತ್ತೇನೆ. ವಿಚಾರಣೆಗಾಗಿ ಆತ ನ್ಯಾಯಾಲಯಕ್ಕೆ ಹಾಜರಾಗುವಾಗಲೆಲ್ಲಾ, ನ್ಯಾಯಾಧೀಶರ ಅನುಮತಿಯೊಂದಿಗೆ ನನ್ನ ಪತ್ನಿ ಮತ್ತು ನಾನು ನ್ಯಾಯಾಲಯದ ಕೊಠಡಿಯಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗುತ್ತದೆ.

ಉಮರ್ ಮಾನಸಿಕವಾಗಿ ಸಾಕಷ್ಟು ಚೆನ್ನಾಗಿದ್ದಾನೆ. ಆದರೆ, ದೀರ್ಘಕಾಲದ ಬಂಧನ ಮತ್ತು ಏಕಾಂಗಿತನವು ಅವನ ದೈಹಿಕ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರಿದೆ ಎಂಬುದರಲ್ಲಿ ಸಂದೇಹವಿಲ್ಲ. ಉಮರ್‌ನನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿರುವುದರಿಂದ ಸಾಮಾನ್ಯ ಕೈದಿಗಳ ಜೊತೆ ವಾಸಿಸುತ್ತಿಲ್ಲ. ಇದರ ಒಂದು ಅನುಕೂಲವೆಂದರೆ ಅವನಿಗೆ ಓದಲು ಮತ್ತು ಬರೆಯಲು ಸಾಕಷ್ಟು ಸಮಯ ಸಿಗುತ್ತದೆ.

ಜೈಲಿನಲ್ಲಿನ ಜೀವನವು ಅವನ ದೈನಂದಿನ ದಿನಚರಿಯಲ್ಲಿ ಒಂದು ನಿರ್ದಿಷ್ಟ ಶಿಸ್ತನ್ನು ತಂದಿದೆ. ಬೇಗನೆ ಮಲಗುತ್ತಾನೆ ಮತ್ತು ಮುಂಜಾನೆ ಬೇಗನೆ ಏಳುತ್ತಾನೆ. ಹೆಚ್ಚಿನ ಸಮಯವನ್ನು ಓದುವುದರಲ್ಲಿ ಮತ್ತು ಬರೆಯುವುದರಲ್ಲಿ ಕಳೆಯುತ್ತಾನೆ. ಈ ಆರು ವರ್ಷಗಳಲ್ಲಿ, ಉಮರ್ ದೊಡ್ಡ ಮತ್ತು ಸಣ್ಣ ಸುಮಾರು 150 ಪುಸ್ತಕಗಳನ್ನು ಓದಿದ್ದಾನೆ. ಇದರಲ್ಲಿ ಕೆಲವು ಮಹತ್ವದ ಸಂಪುಟಗಳೂ ಸೇರಿವೆ. ಅವುಗಳಲ್ಲಿ ಹೆಚ್ಚಿನವು ಇತಿಹಾಸ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಹಾಗೂ ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಕುರಿತು ಪ್ರಸಿದ್ಧ ಲೇಖಕರು ಬರೆದ ಪುಸ್ತಕಗಳಾಗಿವೆ. ತನಗೆ ಬೇಕಾದ ಪುಸ್ತಕಗಳ ಹೆಸರುಗಳನ್ನು ನಮಗೆ ತಿಳಿಸುತ್ತಾನೆ; ನಾವು ಅವುಗಳನ್ನು ತಲುಪಿಸಲು ವ್ಯವಸ್ಥೆ ಮಾಡುತ್ತೇವೆ.

ಕೆಲವು ಸಮಯವನ್ನು ಸಹಕೈದಿಗಳ ಸಮಸ್ಯೆಗಳನ್ನು ಆಲಿಸುವುದರಲ್ಲಿ ಮತ್ತು ಅವುಗಳನ್ನು ಪರಿಹರಿಸಲು ಪ್ರಯತ್ನಿಸುವುದರಲ್ಲಿಯೂ ಕಳೆಯುತ್ತಾನೆ. ಉಮರ್ ಆಳವಾದ ಸೇವಾ ಮನೋಭಾವ, ಸಹಾನುಭೂತಿ ಮತ್ತು ನಿಸ್ವಾರ್ಥ ಗುಣಗಳನ್ನು ಹೊಂದಿದ್ದಾನೆ. ಬಡವರು ಮತ್ತು ಸಹಕಾರ ಬೇಕಿರುವಂತ ಜನರಿಗೆ ಸಹಾಯ ಮಾಡುತ್ತಾನೆ. ಕೆಲವು ಸಂದರ್ಭಗಳಲ್ಲಿ ಕೈದಿಗಳ ಹೆಂಡತಿ ಮತ್ತು ಮಕ್ಕಳಿಗೆ ಸಹಾಯ ಮಾಡಬೇಕಿರುವ ಅಗತ್ಯದ ಬಗ್ಗೆ ನಮ್ಮ ಗಮನಕ್ಕೆ ತರುತ್ತಾನೆ. ಕೆಲವೊಮ್ಮೆ  ಜಗತ್ತಿನ ಹಲವಾರು ಪತ್ರಿಕೆಗಳನ್ನು ಆರ್ಡರ್ ಮಾಡುತ್ತಾನೆ. 

ಉಮರ್ ಸ್ವತಃ ಒಬ್ಬ ಆಕ್ಟಿವಿಸ್ಟ್‌ ಆಗಿರುವುದರಿಂದ ಬಂಧನವು ಅವನಿಗೆ ಸಂಪೂರ್ಣವಾಗಿ ಅನಿರೀಕ್ಷಿತವೇನೂ ಆಗಿರಲಿಲ್ಲ. ಆದರೆ, ಇದು ಇಷ್ಟು ದೀರ್ಘಕಾಲ ಮುಂದುವರಿಯುತ್ತದೆ ಎಂದು ಊಹಿಸಿರಲಿಲ್ಲ.

ಪ್ರಶ್ನೆ: ವಿಚಾರಣೆಯೇ ಪ್ರಾರಂಭವಾಗದೆ ಉಮರ್ ಖಾಲಿದ್‌ ವರ್ಷಗಟ್ಟಲೆ ಜೈಲುವಾಸ ಅನುಭವಿಸುತ್ತಿರುವಾಗ, ದೀರ್ಘಕಾಲದ ವಿಚಾರಣಾಪೂರ್ವ ಬಂಧನವೇ ಶಿಕ್ಷೆಯಂತೆ ಭಾಸವಾಗುವ ಇಂತಹ ನ್ಯಾಯಾಂಗ ಪ್ರಕ್ರಿಯೆಯನ್ನು ತಾವು ಹೇಗೆ ಕಾಣುತ್ತೀರಿ?

ಉತ್ತರ: ನ್ಯಾಯಾಲಯಗಳು ಮತ್ತು ನ್ಯಾಯಾಧೀಶರು ಪದೇ ಪದೇ ಹೇಳುವ “ಜಾಮೀನು ಅನ್ನೊದು ನಿಯಮ ಮತ್ತು ಜೈಲು ಎಂಬುವುದು ಅಪವಾದ” (Bail is the rule and jail is the exception) ಎಂಬ ಹೇಳಿಕೆಯು ಈಗ ಒಂದು ಹಾಸ್ಯದಂತೆ ಧ್ವನಿಸಲು ಪ್ರಾರಂಭಿಸಿದೆ. ಉಮರ್ ಆರು ವರ್ಷಗಳಿಂದ ಬಂಧನದಲ್ಲಿದ್ದಾನೆ, ಆದರೂ ಅವನ ವಿಚಾರಣೆ ಪ್ರಾರಂಭವಾಗಿಲ್ಲ ಮತ್ತು ಅವನಿಗೆ ಇನ್ನೂ ಜಾಮೀನು ನೀಡಿಲ್ಲ. ಈಗಾಗಲೇ ವಿಚಾರಣಾ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ತಲಾ ಎರಡು ಸುತ್ತುಗಳನ್ನು ಪೂರ್ಣಗೊಳಿಸಿದ್ದಾನೆ. ಮೂರನೇ ಸುತ್ತಿನ ಪ್ರಕ್ರಿಯೆ ಈಗ ನಡೆಯುತ್ತಿದೆ. ವಿಚಾರಣಾ ನ್ಯಾಯಾಲಯವು ಮತ್ತೊಮ್ಮೆ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ, ಪ್ರಕರಣ ಮತ್ತೆ ಹೈಕೋರ್ಟ್‌ನಲ್ಲಿದೆ.

ಇಡೀ ನ್ಯಾಯಾಂಗ ಪ್ರಕ್ರಿಯೆಯೇ ಸ್ವತಃ ಒಂದು ಶಿಕ್ಷೆಯಾಗಿ ಮಾರ್ಪಟ್ಟಿದೆ ಎಂಬ ಭಾವನೆ ಹೆಚ್ಚಾಗುತ್ತಿದೆ. ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಎಷ್ಟೊಂದು ಜಟಿಲ ಮತ್ತೆ ವಿಸ್ತಾರವಾಗಿಸಿದೆ ಎಂದರೆ, ಮುಂದಿನ ಹಲವು ವರ್ಷಗಳವರೆಗೆ ಯಾವುದೇ ತೀರ್ಮಾನಕ್ಕೆ ಬರುವುದು ಅಸಾಧ್ಯವೆಂದು ತೋರುತ್ತದೆ. ದೋಷರೋಪಣಾ ಪಟ್ಟಿಯು ಸುಮಾರು 30,000 ಪುಟಗಳನ್ನು ಹೊಂದಿದ್ದು, ಸುಮಾರು 900 ಸಾಕ್ಷಿಗಳನ್ನು ಹೆಸರಿಸಿದೆ. ನಮ್ಮ ಅಭಿಪ್ರಾಯದಲ್ಲಿ ಈ ಸಾಕ್ಷಿಗಳ ಹೇಳಿಕೆಗಳು ಸುಳ್ಳು ಮತ್ತು ಕೃತ್ರಿಮವಾಗಿದೆ.

ಪ್ರಶ್ನೆ: ಪ್ರಸಕ್ತ ಭಾರತದಲ್ಲಿ ರಾಜಕೀಯ ಭಿನ್ನಭಿಪ್ರಾಯ ಹೊಂದಿರುವವರ ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ರಕ್ಷಿಸುವಲ್ಲಿ ನ್ಯಾಯಾಂಗದ ಬದ್ಧತೆಯನ್ನು ನೀವು ಹೇಗೆ ನೋಡುತ್ತೀರಿ?

ಉತ್ತರ: ನಮ್ಮ ದೇಶದ ನಿಧಾನಗತಿಯ ನ್ಯಾಯಾಂಗ ವ್ಯವಸ್ಥೆಯು, ಸರ್ಕಾರದ ಪ್ರಭಾವದಡಿ ಕಾರ್ಯನಿರ್ವಹಿಸುವ ಮತ್ತು ಸುಳ್ಳು ಪ್ರಕರಣಗಳನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಪೊಲೀಸ್ ವ್ಯವಸ್ಥೆಯೊಂದಿಗೆ ಸೇರಿಕೊಂಡು, ಅನೇಕ ಬಾರಿ ಪ್ರಕರಣಗಳನ್ನು ಹೇಗೆ ನಿರ್ಮಿಸುತ್ತದೆ ಎಂದರೆ, ಒಬ್ಬ ನಿರಪರಾಧಿಯು ಹತ್ತು ಅಥವಾ ಇಪ್ಪತ್ತು ವರ್ಷಗಳ ನಂತರ ಜೈಲಿನಿಂದ ಹೊರಬರುವ ಹೊತ್ತಿಗೆ, ಜೀವನದ ಅತ್ಯಮೂಲ್ಯ ವರ್ಷಗಳು ಈಗಾಗಲೇ ಕಳೆದುಹೋಗಿರುತ್ತವೆ. ನ್ಯಾಯಾಲಯಗಳು ನಿರ್ದೋಷಿಯೆಂದು  ಬಿಡುಗಡೆಗೊಳಿಸಿದರೂ, ಆತ ತನ್ನ ಜೀವನವನ್ನು ಮತ್ತೆ ಕಟ್ಟಿಕೊಳ್ಳುವುದು ತುಂಬಾನೇ ಕಷ್ಟಕರವಾಗುವ ಹಂತವನ್ನು ತಲುಪಿರುತ್ತದೆ.

ಅಷ್ಟರಲ್ಲೇ, ಆತನ ಮನೆ, ಕುಟುಂಬ ಮತ್ತು ಸಂಬಂಧಿಕರು ಸಹ ಅಪಾರವಾಗಿ ನರಳಿರುತ್ತಾರೆ. ಸಂವಿಧಾನದ ಪರಿಚ್ಛೇಧ 14, 15 ಮತ್ತು 21 ರಲ್ಲಿರುವ ಮೂಲಭೂತ ಹಕ್ಕುಗಳು ಕೇವಲ ಒಂದು ಹಾಸ್ಯವಾಗಿ ಮಾರ್ಪಡುತ್ತವೆ. ಇಂದು ಲಕ್ಷಾಂತರ ಪ್ರಕರಣಗಳು ನ್ಯಾಯಾಲಯಗಳ ಮುಂದೆ ಬಾಕಿ ಇವೆ. ಮಾಜಿ ಮುಖ್ಯ ನ್ಯಾಯಮೂರ್ತಿಯೊಬ್ಬರ ಪ್ರಕಾರ, ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸದೇ, ಬಾಕಿ ಉಳಿದಿರುವ ಪ್ರಕರಣಗಳನ್ನು ಮಾತ್ರ ವಿಲೇವಾರಿ ಮಾಡಲು 300 ರಿಂದ 400 ವರ್ಷಗಳೇ ಬೇಕಾಗಬಹುದು. ಜೊತೆಗೆ ವಕೀಲರು ವಿಧಿಸುವ ವಿಪರೀತ ಶುಲ್ಕಗಳು ಮತ್ತು ಇತರ ಕಾನೂನು ವೆಚ್ಚಗಳು ಬೇರೆನೇ ಇವೆ. ಜನಸಾಮಾನ್ಯರಿಂದ ಇವುಗಳನ್ನು ಭರಿಸಲು ಖಂಡಿತವಾಗಿಯೂ ಸಾಧ್ಯ ಇಲ್ಲ.

ಪ್ರಶ್ನೆ: ನ್ಯಾಯಾಲಯದಲ್ಲಿನ ಕಾನೂನು ಹೋರಾಟಗಳನ್ನು ಮೀರಿ, ನ್ಯಾಯವನ್ನು ಪಡೆದುಕೊಳ್ಳುವ ಕುರಿತು ನಿಮ್ಮ ಕಾನೂನು ತಂಡ ಮತ್ತು ಕುಟುಂಬಕ್ಕೆ ಏನೇನು ಆಶಾವಾದವನ್ನು ನೀಡುತ್ತದೆ?

ಉತ್ತರ: ಅಲ್‌ ಹಮ್ದುಲಿಲ್ಲಾಹ್, ಭಾರತ ಹಾಗೂ ವಿದೇಶಗಳಲ್ಲಿ ಮಾನವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳಿಗಾಗಿ ಕೆಲಸ ಮಾಡುತ್ತಿರುವ ನಾಗರಿಕ ಸಮಾಜದ ಸಂಸ್ಥೆಗಳು ಮತ್ತು ವ್ಯಕ್ತಿಗಳು – ಸಾಮಾಜಿಕ ಜಾಲತಾಣಗಳು, ಪ್ರತಿಭಟನೆಗಳು, ಧರಣಿಗಳು, ವಿಚಾರಗೋಷ್ಠಿಗಳು ಮತ್ತು ಸಮ್ಮೇಳನಗಳ ಮೂಲಕ ಉಮರ್ ಖಾಲಿದ್ ಹಾಗೂ ಇತರ ಬಂಧಿತರಿಗಾಗಿ ನಿರಂತರವಾಗಿ ಧ್ವನಿಯನ್ನು ಎತ್ತಿದ್ದಾರೆ.

ಉಮರ್ ಖಾಲಿದ್ ಪ್ರಕರಣದಲ್ಲಿ, ಅಂತರರಾಷ್ಟ್ರೀಯ ಬೆಂಬಲವು ವಿಶೇಷವಾಗಿ ಗಮನಾರ್ಹವಾಗಿದೆ. ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು, ವಿಶ್ವಸಂಸ್ಥೆಯ ತಜ್ಞರು, ಯುಎಸ್ ಕಾಂಗ್ರೆಸ್ ಸದಸ್ಯರು ಮತ್ತು ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಸೇರಿದಂತೆ ಹಲವು ಹಂತಗಳಲ್ಲಿ ವ್ಯಕ್ತವಾಗಿದೆ. 

ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು:

ಉಮರ್ ಖಾಲಿದ್‌ನನ್ನು ವಿಚಾರಣೆಯಿಲ್ಲದೆ ದೀರ್ಘಕಾಲ ಬಂಧನದಲ್ಲಿಟ್ಟಿರುವುದರ ಬಗ್ಗೆ ಹಲವಾರು ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಆತನನ್ನು ಬಿಡುಗಡೆ ಮಾಡುವಂತೆ ಅಥವಾ ನ್ಯಾಯಯುತ ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿವೆ.

ಅಮ್ನೆಸ್ಟಿ ಇಂಟರ್ನ್ಯಾಷನಲ್ ಹಲವಾರು ಸಂದರ್ಭಗಳಲ್ಲಿ ಉಮರ್ ಖಾಲಿದ್ ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ಪ್ರಕರಣವನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳಿಗೆ ವಿರುದ್ಧವೆಂದು ಬಣ್ಣಿಸಿ, ತಕ್ಷಣದ ಹಾಗೂ ಬೇಷರತ್ ಬಿಡುಗಡೆಗೆ ಆಗ್ರಹಿಸಿದೆ. ಇಂಟರ್ನ್ಯಾಷನಲ್ ಕಮಿಷನ್ ಆಫ್ ಜ್ಯೂರಿಸ್ (ICJ), FIDH, OMCT, ಫ್ರಂಟ್ ಲೈನ್ ಡಿಫೆಂಡರ್ಸ್, ಸಿವಿಕಸ್ (CIVICUS) ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳು 2025ರ ಸೆಪ್ಟೆಂಬರ್‌ನಲ್ಲಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ, ಉಮರ್ ಖಾಲಿದ್ ಹಾಗೂ ಇತರ ಬಂಧಿತ ಆಕ್ಟಿವಿಸ್ಟ್‌ಗಳ ತಕ್ಷಣದ ಮತ್ತು ಬೇಷರತ್ ಬಿಡುಗಡೆಗೆ ಆಗ್ರಹಿಸಿದ್ದವು.

ಹ್ಯೂಮನ್ ರೈಟ್ಸ್ ಫೌಂಡೇಶನ್ (HRF) 2026ರ ಜನವರಿಯಲ್ಲಿ ಉಮರ್ ಖಾಲಿದ್ ಅವರ ಬಂಧನದ ಕುರಿತು ವಿಶ್ವಸಂಸ್ಥೆಯ  UN Working Group on Arbitrary Detention ಅನ್ನು ಸಂಪರ್ಕಿಸಿತು ಮತ್ತು ಈ ಪ್ರಕರಣವನ್ನು ಅಕ್ರಮ(Arbitrary) ಬಂಧನವೆಂದು ಘೋಷಿಸುವಂತೆ ಕರೆ ನೀಡಿತು. ಉಮರ್ ಖಾಲಿದ್ ಅವರ ತಕ್ಷಣದ ಬಿಡುಗಡೆಗಾಗಿ ಭಾರತದ ಮೇಲೆ ಒತ್ತಡ ತರುವಂತೆ FIDH ಕೂಡ 2026ರ ಫೆಬ್ರವರಿಯಲ್ಲಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿತು.

ವಿಶ್ವಸಂಸ್ಥೆ:

ಇದು ಬಹುಶಃ ಅತ್ಯಂತ ಮಹತ್ವದ ಅಂತರರಾಷ್ಟ್ರೀಯ ಬೆಳವಣಿಗೆಯಾಗಿದೆ. 2026ರ ಮಾರ್ಚ್‌ನಲ್ಲಿ, ವಿಶ್ವಸಂಸ್ಥೆಯ ವಿಶೇಷ ಕಾರ್ಯವಿಧಾನಗಳು (UN Special Procedures) ಉಮರ್ ಖಾಲಿದ್ ರವರ ದೀರ್ಘಕಾಲದ ಮತ್ತು ಅನಿರ್ದಿಷ್ಟಾವಧಿಯ ಬಂಧನದ ಕುರಿತು ಭಾರತ ಸರ್ಕಾರಕ್ಕೆ ಔಪಚಾರಿಕ ಸಂದೇಶವನ್ನು ಕಳುಹಿಸಿತು. ಈ ಸಂದೇಶದಲ್ಲಿ  ಆತನನ್ನು ಮಾನವ ಹಕ್ಕುಗಳ ರಕ್ಷಕ ಮತ್ತು ವಿದ್ಯಾರ್ಥಿ ಕಾರ್ಯಕರ್ತ ಎಂದು ಬಣ್ಣಿಸಲಾಗಿದೆ. ಐದು ವರ್ಷಗಳಿಗೂ ಹೆಚ್ಚು ಕಾಲ ವಿಚಾರಣೆಯಿಲ್ಲದೆ ಬಂಧಿಸಿಟ್ಟಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.

ಮತ್ತಷ್ಟು ಮುಖ್ಯವಾಗಿ, ವಿಶ್ವಸಂಸ್ಥೆಯ UN Working Group on Arbitrary Detention  (UNWGAD) ಯು ಉಮರ್ ಖಾಲಿದ್ ಅವರ ಬಂಧನವನ್ನು ಅಕ್ರಮ ಬಂಧನ(Arbitrary detention) ಎಂದು ಬಣ್ಣಿಸಿದೆ ಎಂಬ ವರದಿಗಳು 2026ರ ಮಾರ್ಚ್‌ನಲ್ಲಿ ಹೊರಬಂದವು.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ವಿಷಯವು ಇನ್ನು ಮುಂದೆ ಎನ್‌ಜಿಒ ಅಥವಾ ರಾಜಕಾರಣಿಗಳ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ; ಇದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವ್ಯವಸ್ಥೆಯನ್ನು ತಲುಪಿದೆ.

ಯುಎಸ್ ಕಾಂಗ್ರೆಸ್ ಮತ್ತು ಸೆನೆಟ್ ಸದಸ್ಯರು:

2025ರ ಡಿಸೆಂಬರ್ ಕೊನೆಯಲ್ಲಿ, ಅಮೆರಿಕದ ಕಾಂಗ್ರೆಸ್‌ನ ಎಂಟು ಸದಸ್ಯರು ಅಮೆರಿಕದಲ್ಲಿರುವ ಭಾರತದ ರಾಯಭಾರಿಗೆ ಪತ್ರ ಬರೆಯುತ್ತಾ, ಉಮರ್ ಖಾಲಿದ್ ಮತ್ತು ಇತರರನ್ನು ವಿಚಾರಣೆಯಿಲ್ಲದೆ ದೀರ್ಘಕಾಲ ಬಂಧನದಲ್ಲಿಟ್ಟಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಉಮರ್ ಖಾಲಿದ್ ಅವರಿಗೆ ಜಾಮೀನು ನೀಡಬೇಕು ಹಾಗೂ ಅಂತರರಾಷ್ಟ್ರೀಯ ಕಾನೂನು ತತ್ವಗಳಿಗೆ ಅನುಗುಣವಾಗಿ ನ್ಯಾಯಯುತ ಮತ್ತು ಕಾಲಮಿತಿಯೊಳಗೆ ವಿಚಾರಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಈ ಪತ್ರವು ವಿಶೇಷ ಮಹತ್ವದ್ದಾಗಿದೆ. ಏಕೆಂದರೆ, ಇದು ಈ ವಿಷಯವನ್ನು ಕೇವಲ  ಭಾರತದ ಆಂತರಿಕ ರಾಜಕೀಯ ಸಮಸ್ಯೆಯಾಗಿ ಮಾತ್ರವಲ್ಲದೆ, ಸಮರ್ಪಕ ಕಾನೂನು ಪ್ರಕ್ರಿಯೆ, ಮಾನವ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಅವಲೋಕಿಸಿತು. 

ಝೊಹ್ರಾನ್ ಮಮ್ದಾನಿ:

ಝೊಹ್ರಾನ್ ಮಮ್ದಾನಿ ಕೂಡ ಉಮರ್ ಖಾಲಿದ್ ಅವರನ್ನು ಬೆಂಬಲಿಸಿ ಸ್ಪಷ್ಟವಾಗಿ ಮಾತನಾಡಿದ್ದಾರೆ. 2026ರ ಜನವರಿಯಲ್ಲಿ ಅವರು ಉಮರ್‌ಗೆ ವೈಯಕ್ತಿಕ ಪತ್ರ ಬರೆದು, ಅವರ ಪೋಷಕರನ್ನು ಭೇಟಿಯಾದದ್ದನ್ನು ಪ್ರಸ್ತಾಪಿಸಿದರು. ಪತ್ರದಲ್ಲಿ ಉಮರ್‌ ಜೊತೆಗೆ ಒಗ್ಗಟ್ಟನ್ನು ವ್ಯಕ್ತಪಡಿಸುತ್ತಾ “ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ.” ಎಂದು ಬರೆದಿದ್ದಾರೆ.

ಮಮ್ದಾನಿಯವರ ಬೆಂಬಲ ಅಲ್ಲಿಗೆ ನಿಲ್ಲಲಿಲ್ಲ. 16 ಜುಲೈ 2026 ರಂದು, ನೆಲ್ಸನ್ ಮಂಡೇಲಾ ಫೌಂಡೇಶನ್‌ನಲ್ಲಿ ನಡೆದ ಮುಖ್ಯ ಭಾಷಣದಲ್ಲಿ, ಮತ್ತೊಮ್ಮೆ ಉಮರ್ ಖಾಲಿದ್ ಅವರನ್ನು ಪ್ರಸ್ತಾಪಿಸಿದರು. ಉಮರ್ ತಮ್ಮ ಕಾರಾಗೃಹವಾಸದ ಆರನೇ ವರ್ಷಕ್ಕೆ ಕಾಲಿಡುತ್ತಿದ್ದರೂ ಇನ್ನೂ ಏಕೆ ಜೈಲಿನಲ್ಲಿದ್ದಾರೆ ಎಂದು ಪ್ರಶ್ನಿಸಿದರು. ನೆಲ್ಸನ್ ಮಂಡೇಲಾ ಅವರ ಮೇಲೆ ಹಿಂದೆ ಹೊರಿಸಲಾಗಿದ್ದ ಭಯೋತ್ಪಾದನಾ ಆರೋಪಗಳಿಗೂ ಮತ್ತು ಉಮರ್ ಅವರ ಬಂಧನಕ್ಕೂ ಅವರು ಹೋಲಿಕೆ ಮಾಡಿದರು.

ಜುಲೈ 2022 ರಲ್ಲಿ, ನೋಮ್ ಚೋಮ್ಸ್ಕಿ, ರಾಜ್‌ಮೋಹನ್ ಗಾಂಧಿ, ಏಂಜೆಲಾ ಡೇವಿಸ್, ಜುಡಿತ್ ಬಟ್ಲರ್, ಕಾರ್ನೆಲ್ ವೆಸ್ಟ್, ಮೀರಾ ನಾಯರ್, ಅರುಂಧತಿ ರಾಯ್, ಪಿ. ಸಾಯಿನಾಥ್ ಮತ್ತು ರೊಮಿಲಾ ಥಾಪರ್ ಸೇರಿದಂತೆ ಪ್ರಪಂಚದಾದ್ಯಂತದ 200 ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳು ಉಮರ್ ಖಾಲಿದ್ ಅವರ ಬಂಧನವನ್ನು ಭಾರತದ ಜಾತ್ಯತೀತ ಪರಂಪರೆಯನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ಸರ್ಕಾರದ ವಿಶಾಲ ನೀತಿಯ ಭಾಗವೆಂದು ಬಣ್ಣಿಸಿದರು.

ಆಗಸ್ಟ್  14 ಮತ್ತು 15, 2026 ರಂದು 100 ಕ್ಕೂ ಹೆಚ್ಚು ಪ್ರಮುಖ ಭಾರತೀಯ ಲೇಖಕರು, ಪತ್ರಕರ್ತರು, ಕಲಾವಿದರು, ಚಲನಚಿತ್ರ ನಿರ್ಮಾಪಕರು, ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಬಹಿರಂಗ ಪತ್ರ ಬರೆದರು. ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರನ್ನು ವಿಚಾರಣೆಯಿಲ್ಲದೆ ಸುಮಾರು ಆರು ವರ್ಷಗಳಿಂದ ಬಂಧನದಲ್ಲಿಟ್ಟಿರುವುದರ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು. ಈ ಪ್ರಕರಣಗಳಲ್ಲಿ ಸ್ವಾತಂತ್ರ್ಯ ಮತ್ತು ಜಾಮೀನಿನ ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯುವಂತೆ ಮನವಿ ಮಾಡಿದರು.

ಭಾರತದಲ್ಲೂ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಉಮರ್ ಖಾಲಿದ್ ಅವರ ಪರವಾಗಿ ಬಂದಿರುವ ಈ ಹಲವಾರು ಬೆಂಬಲದ ಧ್ವನಿಗಳು ನಮಗೆ ಅಪಾರ ಧೈರ್ಯವನ್ನು ನೀಡುತ್ತವೆ. ಸರ್ಕಾರ ಮತ್ತು ನ್ಯಾಯಾಲಯಕ್ಕೆ ಈ ಪ್ರಬಲ ಹಾಗೂ ನಿರಂತರ ಧ್ವನಿಗಳನ್ನು ನಿರ್ಲಕ್ಷಿಸುವುದು ಇನ್ನು ಮುಂದೆ ಅಷ್ಟು ಸುಲಭವಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ.

ಪ್ರಶ್ನೆ: ಉಮರ್ ಖಾಲಿದ್‌ ಅವರ ವ್ಯಕ್ತಿತ್ವವನ್ನು ಸತತವಾಗಿ ಒಂದು ನಿರ್ದಿಷ್ಟ ರಾಜಕೀಯ ನಿರೂಪಣೆಯ ಮೂಲಕವೇ ಕಟ್ಟಿಕೊಡಲಾಗಿದೆ. ಒಬ್ಬ ತಂದೆಯಾಗಿ ಹಾಗೂ ಅನುಭವಿ ಚಿಂತಕರಾಗಿ, ಇಂದಿನ ಭಾರತದಲ್ಲಿ ಭಿನ್ನಸ್ವರ ಮತ್ತು ವಾಕ್‌ಸ್ವಾತಂತ್ರ್ಯಕ್ಕೆ ಇರುವ ಅವಕಾಶವು ಕಿರಿದಾಗುತ್ತಿರುವುದನ್ನು ಈ ಪ್ರಕರಣವು ಹೇಗೆ ಬಿಂಬಿಸುತ್ತದೆ ಎಂದು ನೀವು ಗ್ರಹಿಸುತ್ತೀರಿ? 

ಉತ್ತರ: ಉಮರ್ ಖಾಲಿದ್, ಅವರ ಸಹೋದ್ಯೋಗಿಗಳು ಮತ್ತು ಸರ್ಕಾರದ ನೀತಿಗಳ ವಿರುದ್ಧ ಧ್ವನಿ ಎತ್ತಿದವರ ಧ್ವನಿಯನ್ನು ದಮನ ಮಾಡಲು ಹಾಗೂ ಅವರನ್ನು ಜೈಲಿನಲ್ಲಿಡಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಸಾಂವಿಧಾನಿಕ ಭರವಸೆಯನ್ನು ಗಂಭೀರವಾಗಿ ಮೊಟಕುಗೊಳಿಸಿವೆ. “ಅರ್ಬನ್‌ ನಕ್ಸಲ್” ಮತ್ತು “ದಿಮಾಗಿ ನಕ್ಸಲ್” ಮುಂತಾದ ಲೇಬಲ್‌ಗಳ ಮೂಲಕ ಪ್ರತಿರೋಧಿಸುವವರನ್ನು ಪದೇ ಪದೇ ಹಳಿಯಲಾಗಿದೆ. ಈ ಕ್ರಮಗಳು ದೇಶದ ಪ್ರಜಾಸತ್ವದ ಪರಂಪರೆಗೆ ಗಂಭೀರ ಹಾನಿಯನ್ನುಂಟುಮಾಡಿವೆ.

ಮೂಲಭೂತವಾಗಿ, ಉಮರ್ ಖಾಲಿದ್ ಮತ್ತು ಅವರ ಸಹೋದ್ಯೋಗಿಗಳ ವಿರುದ್ಧದ ಇಡೀ ಕ್ರಮವು ಸಿಎಎ (CAA) ವಿರುದ್ಧದ ರಾಷ್ಟ್ರವ್ಯಾಪಿ ಚಳುವಳಿಯ ಪರಿಣಾಮವಾಗಿದೆ ಎಂದು ನಾವು ನಂಬುತ್ತೇವೆ. ದೆಹಲಿ ಗಲಭೆಗಳಿಗೆ ಸಂಬಂಧಿಸಿದ ಪಿತೂರಿಯ ಆರೋಪಗಳಲ್ಲಿ ಅವರನ್ನು ಸಿಲುಕಿಸುವ ಮೂಲಕ ಸರ್ಕಾರವು ವಾಸ್ತವದಲ್ಲಿ ಪ್ರತಿರೋಧಿಸಿದವರ ಉತ್ಸಾಹವನ್ನು ಮುರಿಯಲು ಮತ್ತು ಅವರಿಗೆ ಪಾಠ ಕಲಿಸಲು ಪ್ರಯತ್ನಿಸಿದೆ. ನಮ್ಮ ಅಭಿಪ್ರಾಯದಲ್ಲಿ, ಇದು ಅಧಿಕಾರ(State) ದೌರ್ಜನ್ಯದ ಗಂಭೀರ ಉದಾಹರಣೆಯಾಗಿದೆ. ಇದರ ಅನಿವಾರ್ಯ ಪರಿಣಾಮವೆಂದರೆ ಭಿನ್ನಮತ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅವಕಾಶವು ಮತ್ತಷ್ಟು ಕುಗ್ಗುತ್ತದೆ.

ಪ್ರಶ್ನೆ:  ಈ ಸುದೀರ್ಘ ವರ್ಷಗಳಲ್ಲಿ, ಅಸಂಖ್ಯಾತ ನಾಗರಿಕರು, ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಕಾನೂನು ತಜ್ಞರು ತಮ್ಮ ಬೆಂಬಲವನ್ನು ನೀಡಿದ್ದಾರೆ. ಸಾರ್ವಜನಿಕರ ಅಂತರಂಗದಲ್ಲಿ ಉಮರ್ ಖಾಲಿದ್‌ ಅವರ ಧ್ವನಿಯನ್ನು ಜೀವಂತವಾಗಿರಿಸುವಲ್ಲಿ ಈ ಐಕ್ಯತೆ ಎಷ್ಟು ಮುಖ್ಯವಾಗಿದೆ?

ಉತ್ತರ: ಉಮರ್ ಖಾಲಿದ್‌ ಮತ್ತು ಅವರ ಸಹೋದ್ಯೋಗಿಗಳ ಪರವಾಗಿ ಎತ್ತಲಾದ ಅಸಂಖ್ಯಾತ ಧ್ವನಿಗಳು ರಾಷ್ಟ್ರದ ಆತ್ಮಸಾಕ್ಷಿಯನ್ನು ನಿರಂತರವಾಗಿ ಚುಚ್ಚುತ್ತಿವೆ. ಈ ಧ್ವನಿಗಳು ಉಮರ್ ಅವರ ಪ್ರಕರಣವನ್ನು ಜೀವಂತವಾಗಿರಿಸುವುದು ಮಾತ್ರವಲ್ಲದೆ, ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಕ್ರಮಗಳನ್ನು ಹಾಗೂ ನ್ಯಾಯಾಂಗ ವ್ಯವಸ್ಥೆಯ ಸಂವೇದನಾರಾಹಿತ್ಯತೆಯ ಬಗ್ಗೆಯೂ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿವೆ.

ಪ್ರಶ್ನೆ: ಪ್ರಜಾಸತಾತ್ಮಕ ತತ್ವಗಳನ್ನು ಜೀವಂತವಾಗಿರಿಸಿಕೊಳ್ಳುವ ನಿರೀಕ್ಷೆಯಿಂದ ಧ್ವನಿ ಎತ್ತುತ್ತಿರುವ ಯುವ ಪೀಳಿಗೆಗೆ ಮತ್ತು ಪ್ರತಿರೋಧಿಸುವವರಿಗೆ ತಾವು ಏನು ಹೇಳ ಬಯಸುತ್ತೀರಿ?

ಉತ್ತರ: ದೇಶದ ಕೋಮುವಾದಿ ಮತ್ತು ತಾರತಮ್ಯದ ಸಿಎಎ (CAA) ನೀತಿಯ ವಿರುದ್ಧ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಮತ್ತು ಅವರ ಸಹೋದ್ಯೋಗಿಗಳು ಕಟ್ಟಿದ ರಾಷ್ಟ್ರವ್ಯಾಪಿ ಹಾಗೂ ಶಾಂತಿಯುತ ಚಳುವಳಿಯು ನಂತರ ರೈತರು ದೊಡ್ಡ ಮಟ್ಟದ ಜನಸಾಮಾನ್ಯರ ಚಳುವಳಿಯನ್ನು ಆರಂಭಿಸಲು ಸ್ಫೂರ್ತಿ ನೀಡಿತು. ಇದು ಅಂತಿಮವಾಗಿ ಸರ್ಕಾರವು ತನ್ನ ಕೆಲವು ನಿರ್ಧಾರಗಳನ್ನು ಹಿಂಪಡೆಯುವಂತೆ ಒತ್ತಾಯಿಸಿತು. ಇತ್ತೀಚೆಗೆ, ಜೆನ್ ಝಿ (Gen Z) ನೇತೃತ್ವದ ಚಳುವಳಿಯೂ ಸಹ ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ.

ಉಮರ್ ಖಾಲಿದ್ ಮತ್ತು ಅವರ ಸಹೋದ್ಯೋಗಿಗಳ ಹೋರಾಟ, ದೃಢನಿಶ್ಚಯ ಮತ್ತು ಧೈರ್ಯವು ದೇಶದ ಯುವ ಪೀಳಿಗೆಗೆ ಒಂದು ಸ್ಪಷ್ಟ ಸಂದೇಶವನ್ನು ನೀಡುತ್ತದೆ: ಶಾಂತಿಯುತ ಪ್ರತಿಭಟನೆ, ಸತ್ಯಾಗ್ರಹ ಮತ್ತು ಪ್ರಜಾಸತಾತ್ಮಕ ಹೋರಾಟದ ಮೂಲಕ ಫ್ಯಾಶಿಸ್ಟ್, ಮರ್ದಕ ಮತ್ತು ಸರ್ವಾಧಿಕಾರಿ ಸರ್ಕಾರಗಳನ್ನು ಸಹ ಪ್ರತಿರೋಧಿಸುವುದು ಮತ್ತು ಅವುಗಳ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ಒತ್ತಾಯಿಸಲು ಸಾಧ್ಯವಿದೆ.