ಸನ್ಮಾರ್ಗ ವಾರ್ತೆ
ತೆಲಂಗಾಣ: ತೆಲಂಗಾಣದ ಎಸಿಬಿ(ಆ್ಯಂಟಿ ಕರಪ್ಷನ್ ಬ್ಯೂರೋ) ಅಧಿಕಾರಿಗಳು ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ಭ್ರಷ್ಟರ ಬೇಟೆಗೆ ಇಳಿದಿದ್ದು, ಈ ವೇಳೆ ಸಿಕ್ಕಿಬಿದ್ದ ಮೇದಕ್ ಜಿಲ್ಲೆಯ ಅಡಿಷನಲ್ ಕಲೆಕ್ಟರ್ ಗದ್ದಮ್ ನಾಗೇಶ್, ನರ್ಸಾಪುರದ ಕಂದಾಯ ವಿಭಾಗೀಯ ಅಧಿಕಾರಿ(ಆರ್ಡಿಒ) ಬಿ ಅರುಣಾ ರೆಡ್ಡಿ, ಚಿಲ್ಪಿಚೆಡ್ ತಹಸೀಲ್ದಾರ್ ಅಬ್ದುಲ್ ಸತ್ತಾರ್, ಸರ್ವೇ ಆ್ಯಂಡ್ ಲ್ಯಾಂಡ್ ರೆಕಾರ್ಡ್ಸ್ನ ಕಿರಿಯ ಸಹಾಯಕ ವಾಸೀಮ್ ಅಹ್ಮದ್ ಮತ್ತು ಖಾಸಗಿ ವ್ಯಕ್ತಿಯಾದ ಕೊಲಾ ಜೀವನ್ ಗೌಡ್ ಎಂಬುವರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಜಮೀನುದಾರನೊಬ್ಬನಿಂದ ಸುಮಾರು 1.12 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಈ ಪ್ರಕರಣ ಆರಂಭವಾಗಿದ್ದು, ಸೆರಿಲಿಂಗಂಪಲ್ಲಿ ನಿವಾಸಿಯಾದ ಕೆ.ಲಿಂಗ ಮೂರ್ತಿ ಎಂಬುವರು ದೂರು ನೀಡಿದ ಬಳಿಕ. ಇವರು ಎಸಿಬಿಯ ಡೆಪ್ಯುಟಿ ಸೂಪರಿಂಟೆಂಡೆಂಟ್ಗೆ 2020ರ ಫೆಬ್ರವರಿಯಲ್ಲಿ ವರದಿಯೊಂದನ್ನು ನೀಡಿದ್ದರು. ಅದರಲ್ಲಿ ಮೇದಕ್ ಜಿಲ್ಲೆಯ ನರ್ಸಾಪುರ್ ಮಂಡಲದ ಚಿಪ್ಪಲತುರ್ತಿ ಬಳಿಯಿರುವ 59/31, 59/40, 58/1, 58/2 ಸರ್ವೇ ನಂಬರಿನ 112.21 ಎಕರೆ ಭೂ-ಮಾರಾಟದ ಅಳತೆ ಒಪ್ಪಂದಕ್ಕೆ ನಾಲ್ವರೊಂದಿಗೆ ಲಿಂಗಮೂರ್ತಿ ಸಹ ಸಹಿ ಹಾಕಿದ್ದರು.
ಬಳಿಕ ನೋಂದಣಿ ಪ್ರಕ್ರಿಯೆಯ ಭಾಗವಾಗಿ ಆಕ್ಷೇಪಣೆ-ಪ್ರಮಾಣ ಪತ್ರ (ಎನ್ಓಸಿ)ಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು ತಹಶೀಲ್ದಾರ್ ಅಬ್ದುಲ್ ಸತ್ತಾರ್ರಿಗೆ ನೀಡಿದ್ದರು.
22-ಎ ನಿಷೇಧಿತ ಗುಣಲಕ್ಷಣಗಳ ಪಟ್ಟಿಯಲ್ಲಿ ಭೂಮಿ ಸೇರುವುದರಿಂದ ಎನ್ಓಸಿ ಅತ್ಯಗತ್ಯವಾಗಿತ್ತು. ಅದೇ ಸಮಯದಲ್ಲಿ ಅರ್ಜಿಯ ಪ್ರತಿಗಳನ್ನು ಮೇದಕ್ ಜಿಲ್ಲೆಯ ಕಲೆಕ್ಟರ್ ಧರ್ಮ ರೆಡ್ಡಿ ಮತ್ತು ಆರ್ಡಿಒ ಅರುಣಾ ರೆಡ್ಡಿಗೆ ಸಲ್ಲಿಸಿದ್ದರು.
ಬಳಿಕ ಅಡಿಷನಲ್ ಕಲೆಕ್ಟರ್ ಗದ್ದಮ್ ನಾಗೇಶ್ ಎಂಬವರು ಎನ್ಓಸಿ ನೀಡಬೇಕಾದರೆ ಎಕರೆಗೆ 1ಲಕ್ಷ ರೂ.ನಂತೆ 1.12 ಕೋಟಿ ರೂ. ಲಂಚ ನೀಡುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಈಗಾಗಲೇ ಎರಡು ಕಂತುಗಳಲ್ಲಿ ಒಂದು ಬಾರಿ 19.5 ಲಕ್ಷ ರೂ. ಹಾಗೂ ಎರಡನೆ ಬಾರಿ 20.5 ಲಕ್ಷ ರೂ. ನಗದನ್ನು ಕೂಡ ಸ್ವೀಕರಿಸಿರುವ ವಿಚಾರವು ಎಸಿಬಿಯವರು ಬಂಧಿಸಿದ ಬಳಿಕ ಹೊರಬಂದಿದೆ.
ಇತ್ತ ಜಮೀನುದಾರ ಇನ್ನುಳಿದ 72 ಲಕ್ಷ ರೂ. ಹಣವನ್ನು ನೀಡಲು ವಿಫಲವಾದಾಗ ಲಂಚಬಾಕರು 5 ಎಕರೆ ಜಮೀನು ಬರೆದುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಒಪ್ಪಿಕೊಂಡು ಜಮೀನನ್ನು ನಾಗೇಶ್ ಸಂಬಂಧಿ ಕೊಲಾ ಜೀವನ್ ಗೌಡ್ ಬೇನಾಮಿ ಹೆಸರಿಗೆ ಮಾಡಿಕೊಟ್ಟಿದ್ದಾರೆ.
ಇದಲ್ಲದೆ, ಜಮೀನು ನೋಂದಣಿಗೆ ಶ್ಯೂರಿಟಿಯಾಗಿ ಡೆಪ್ಯುಟಿ ಕಲೆಕ್ಟರ್ 8 ಖಾಲಿ ಚೆಕ್ಗಳಿಗೆ ಜಮೀನುದಾರನಿಂದ ಸಹಿ ಮಾಡಿಸಿಕೊಂಡಿದ್ದಾರೆ. ಈ ಲಂಚವಾತಾರ ಇಲ್ಲಿಗೆ ಮುಗಿಯದೇ, ಇದರ ಬೆನ್ನಲ್ಲೇ ನಾಗೇಶ್ ಸೂಚನೆ ಮೇರೆಗೆ ಜ್ಯೂನಿಯರ್ ಅಸಿಸ್ಟೆಂಟ್ ವಾಸಿಮ್ ಅಹ್ಮದ್ ಸಹ ಜಮೀನುದಾರನಿಂದ 5 ಲಕ್ಷ ರೂ. ಲಂಚ ಸ್ವೀಕರಿಸಿದ್ದಾನೆ. ಫೈಲ್ ಪೂರ್ಣಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಲಂಚ ಪಡೆದುಕೊಂಡಿದ್ದಾರೆ.
ಎನ್ಓಸಿ ಪಡೆಯಲು ಮತ್ತು ಭೂಮಿಗೆ ಸಂಬಂಧಿಸಿದ ಆನ್ಲೈನ್ ದಾಖಲೆ ತಿದ್ದುಪಡಿಯನ್ನು ಪೂರ್ಣಗೊಳಿಸಲು ಲಿಂಗ ಮೂರ್ತಿ ಅವರಿಂದ ಲಂಚ ನೀಡಲು ಒತ್ತಾಯಿಸಿರುವುದು ತನಿಖೆಯಲ್ಲೂ ಬಹಿರಂಗವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಎಸಿಬಿಯವರು ಗದ್ದಮ್ ನಾಗೇಶ್ ನಿವಾಸದ ಮೇಲೆ ದಾಳಿ ಮಾಡಿದಾಗ ಸಹಿಯುಳ್ಳ 8 ಖಾಲಿ ಚೆಕ್ಗಳು ಮತ್ತು ಸೇಲ್ ಅಗ್ರಿಮೆಂಟ್ ಸೇರಿದಂತೆ ಇನ್ನಿತರ ದಾಖಲೆಗಳು ಪತ್ತೆಯಾಗಿವೆ.
ಅರುಣಾ ರೆಡ್ಡಿ ಮನೆ ಮೇಲೆ ದಾಳಿ ಮಾಡಿದಾಗ ಅವರ ಬಳಿ ಲೆಕ್ಕವಿಲ್ಲದ 28 ಲಕ್ಷ ರೂ. ನಗದು ಮತ್ತು ಅರ್ಧ ಕೆ.ಜಿ. ಚಿನ್ನ ಪತ್ತೆಯಾಗಿದೆ.
ಸದ್ಯ ಪ್ರಕರಣದಲ್ಲಿ ಈ ಐವರನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












