ವಿಚ್ಛೇದನ ಕೇಳಿ ಬಂದ ಯುವಕ ನಿರ್ಧಾರ ಬದಲಿಸಿ ಹೋದ

0
473

✍️ ಜಾಸಿಮುಲ್ ಮುತವ್ವ

ಉದಾಸೀನತೆ, ಮರೆವು, ಆಲಸ್ಯ, ನೀರಸತನ ಹೀಗೇ ಯಾವಾಗಲೂ ಇದೇ ರೀತಿ. ಯಾವುದೇ ಹೊಸತನವಿಲ್ಲ. ಹತ್ತು ವರ್ಷಗಳ ಕಾಲ ದೀರ್ಘ ಕಾಲದ ದಾಂಪತ್ಯವನ್ನು ಕೊನೆಗೊಳಿಸಲು ಪತ್ನಿಯೊಂದಿಗೆ ತನ್ನ ಬಯಕೆ ವ್ಯಕ್ತಪಡಿಸಿದ ಯುವಕನೋರ್ವನ ಮಾತುಗಳಿವು.

“ವಿವಾಹದ ಕುರಿತ ಸಮಾಲೋಚನೆಯ ಸಂದರ್ಭದಲ್ಲಿಯೂ ಮದುವೆಯ ಸಂದರ್ಭದಲ್ಲಿಯೂ ಆರಂಭದ ವರ್ಷದಲ್ಲಿಯೂ ಇದ್ದ ಅದೇ ನಡವಳಿಕೆಯು ಜೀವನದ ಮುಸ್ಸಂಜೆಯ ವರೆಗೂ ಮುಂದುವರಿಯಬೇಕೆಂದು ನೀವು ಭಾವಿಸಿದ್ದೀರಾ? ದಾಂಪತ್ಯ ಬದುಕು ಯಾವುದೇ ಟಿ.ವಿ. ಧಾರವಾಹಿಯಂತಲ್ಲ. ವೈವಾಹಿಕ ಬದುಕಿನಲ್ಲಿ ದೈಹಿಕವಾದ, ಮಾನಸಿಕವಾದ ಮತ್ತು ಆರೋಗ್ಯಪೂರ್ಣವಾದ ಹಲವಾರು ಅನುಭವಗಳು ದಾಟಿ ಹೋಗುತ್ತವೆ. ಹಲವಾರು ಭಾವನೆಗಳ ಬದಲಾವಣೆಗಳು ಸಂಭವಿಸುತ್ತವೆ. ಯಾವಾಗಲೂ ಒಂದೇ ರೀತಿಯಲ್ಲಿರಬೇಕೆಂದಿಲ್ಲ. ಸಹನೆ. ಅರ್ಪಣಾ ಮನೋಭಾವ, ತ್ಯಾಗ, ಬದಲಾವಣೆಯ ನಿರೀಕ್ಷೆ ಇವೆಲ್ಲವೂ ವೈವಾಹಿಕ ಬದುಕಿನಲ್ಲಿ ಇರುವುದು ಸ್ವಾಬಾವಿಕ.

ನಿರಾಸೆ ಜಿಗುಪ್ಸೆ, ಅಲಸ್ಯ, ನಿರ್ಲಕ್ಷ್ಯ ಅನುಭವಿಸುವ ದಂಪತಿಗಳ ಮುಂದೆ ಎರಡು ದಾರಿ ಇರುತ್ತದೆ. ಮುಂದೆ ಇದೇ ರೀತಿ ಮುಂದುವರಿಯ ಬಹುದೆಂಬ ಆಶಂಕೆಯಿದ್ದರೆ ವಿಚ್ಛೇದನದ ಬಗ್ಗೆ ಯೋಚಿಸಬೇಕು. ಅಥವಾ ವೈವಾಹಿಕ ಬದುಕಿನಲ್ಲಿ ತಿಳಿದೋ ತಿಳಿಯದೆಯೋ ಬಂದ ಲೋಪ ದೋಷಗಳನ್ನು ತಿದ್ದಿ ಮರೆತು ಸಂಬಂಧಗಳ ಮರು ಜೋಡಣೆಗೆ ಪ್ರಯತ್ನಿಸಿ ದಂಪತಿಗಳೀರ್ವರೂ ಹೊಸ ಬದುಕಿಗೆ ಮುಂದಾಗಬೇಕು. ಗತ ಕಾಲದ ನೆನಪುಗಳು ವರ್ತಮಾನ ಕಾಲದ ಬದುಕಿಗೆ ಪ್ರೇರಕವಾಗುವಂತಹ ರೀತಿಯಲ್ಲಿ ಈರ್ವರೂ ಮುಂದುವರಿಯಬೇಕು.

ಈರ್ವರ ಬೆರೆಯುವಿಕೆ ರಚನಾತ್ಮಕವಾಗಿರಬೇಕು. ದಾಂಪತ್ಯದ ಬದುಕಿನ ಕುರಿತ ಜಿಗುಪ್ಸೆಯನ್ನು ದೂರ ಮಾಡಲು ಹಲವಾರು ದಾರಿಗಳು ಇವೆ. ಅದರಲ್ಲಿ ದಂಪತಿಗಳ ನಡುವಿನ ಸಂಭಾಷಣೆಯಲ್ಲಿ ಬದಲಾವಣೆ ತರುವುದು ಮುಖ್ಯವಾದುದು. ಯಾವಾಗಲೂ ಒಂದೇ ರೀತಿಯ ಪ್ರಶ್ನೆ, ಉತ್ತರ ಎಂಬ ಧೋರಣೆ ಬದಲಾಗಬೇಕು. ಕೆಲಸದ ಕಡೆಯಿಂದ, ವ್ಯಾಪಾರದಿಂದ, ಶಾಲೆಯಿಂದ ಅಥವಾ ಕಚೇರಿಯಿಂದ ಬಂದಾಗ ವರ್ಷಾಂತರಗಳಿಂದ ಕೇಳುವ ಪ್ರಶ್ನೆಯಿದೆಯಲ್ಲಾ… ಉದಾಹರಣೆಗೆ ವಿಶೇಷವೇನಿದೆ? ಅವರು ನಿದ್ದೆ ಮಾಡಿದರೇ? ಅವರು ಎಲ್ಲ ಓದಿದ ಮೇಲೆ ನಿದ್ದೆ ಮಾಡಿದರೇ? ಹೀಗೆ ಓರ್ವ ತಂದೆಯಿಂದ ನಿರಂತರ ಕೇಳಿ ಬರುವ ಪ್ರಶ್ನೆಗಳು. ಇದೇ ಪ್ರಶ್ನೆಗಳು ನಿರಂತರ ಕೇಳಿ ಕೇಳಿ ಅವರಲ್ಲಿ ಅಸಹನೆ ತುಂಬಿರುತ್ತದೆ.

ನಂತರ ಏನೂ ಕೇಳಲಿಕ್ಕಿಲ್ಲದೆ ಮಾತುಗಳು ನಿಂತು ಹೋಗುವುದು. ಇದು ಬದಲಾಗಬೇಕು. ಹೊಸ ರೀತಿಯ ಪಲ್ಲವಿ ಹೊರಡಬೇಕು. ಮನೆಗೆ ಆಗಮಿಸಿದ ಮೊದಲ ಕೆಲ ನಿಮಿಷಗಳು ಪತಿ-ಪತ್ನಿಯರು ತಮ್ಮ ಭಾವನೆಗಳ ಹಂಚುವಿಕೆಗೆ ಅವಕಾಶವಾಗಬೇಕು. ಇತರರ ಕುರಿತ ಪ್ರಶ್ನೊತ್ತರಗಳು ಅಲ್ಲಿರಬಾರದು. ಉದಾಹರಣೆಗೆ ಈ ರೀತಿ ಮಾಡಬಹುದು. “ಇಂದು ಏನೂ ಅಂತ ಗೊತ್ತಿಲ್ಲ, ಹೆಚ್ಚಾಗಿ ನಿನ್ನ ಬಗ್ಗೆಯೇ ಯೋಚಿಸಿದ್ದೆ. ಮನೆಯನ್ನು ನಿಯಂತ್ರಿಸಲು ನೀನು ತುಂಬಾ ಕಷ್ಟಪಡುತ್ತಿದ್ದಿಯಲ್ಲ.. ನಿನಗಾಗಿ ನಾನು ಒಂದು ವಿಶೇಷವಾದ ಉಡುಗೊರೆ ತಂದಿದ್ದೇನೆ…” ಮುಂತಾದ ಸರಸ ಸಲ್ಲಾಪದ ಮಾತುಗಳನ್ನು ಪತಿಯು ಹೇಳಿದಾಗ ಆಕೆಯಿಂದ “ಅಲ್ ಹಮ್ದುಲಿಲ್ಲಾಹ್.. ಸಂತೋಷವಾಯಿತು. ನೀವು ಬರುವ ತನಕ ನನಗೆ ಎದೆ ಢವ ಢವ ಅನ್ನುತ್ತಿತ್ತು.

ಯಾಕೆಂದರೆ ಬಸ್ಸು ಕಾರುಗಳ ಅನಿಯಂತ್ರಿತ ಓಡಾಟದ ನಡುವೆ ಸಾಗಿ ನೀವು ಬರಬೇಕಲ್ಲವೇ? ಎಂಬ ಬಗ್ಗೆ ಚಿಂತಿಸಿದಾಗ ನನ್ನ ಮನಸ್ಸಿನ ನೆಮ್ಮದಿ ಕೆಡುತ್ತಿತ್ತು. ಏನಾದರೂ ಚಿಂತಿಲ್ಲ. ನೀವು ಸುರಕ್ಷಿತರಾಗಿ ಬಂದಿರಲ್ಲಾ ಅದು ಸಾಕು ಎಂಬ ಅನುರಾಗದ ಮಾತುಗಳು ಹೊರಟಾಗ ಅಲ್ಲಿನ ವಾತಾವರಣವೇ ಬೇರೆಯಾಗುತ್ತದೆ. ಇದು ಸಂದರ್ಭಾನುಸಾರವಾಗಿರಬೇಕು. ಮನೆಗೆ ಕಾಲಿರಿಸಿದ ಕೂಡಲೇ ಒಂದಷ್ಟು ದೂರುಗಳು, ಅಗತ್ಯ ಸಾಮಾನುಗಳ ಪಟ್ಟಿ ಸಮರ್ಪಿಸುವ ಹಳೆಯ ರೀತಿಯನ್ನು ಬದಲಿಸಿ ನೋಡಿದಾಗ ದಾಂಪತ್ಯದ ಬಗೆಗಿನ ನೀರಸತನ ಕಡಿಮೆಯಾಗುತ್ತದೆ.

ಜೊತೆಗೆ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಕೆಲವು ಬದಲಾವಣೆ ತರಬೇಕು. ಜೊತೆಯಾಗಿ ಕಡಲ ತೀರಕ್ಕೆ ಅಥವಾ ಪಾರ್ಕುಗಳಲ್ಲಿ ಸಂಚಾರ, ಕುಟುಂಬ ಭೇಟಿ, ಹಳೆಯ ಮಿತ್ರರ ಮನೆಯತ್ತ ಸಂಚಾರ ಹೀಗೆ ಇಂತಹದ್ದನ್ನು ರೂಢಿಸಿಕೊಳ್ಳಬೇಕು. ದಾಂಪತ್ಯ ಬದುಕು ಸಾಕು ಎಂದು ಜಿಗುಪ್ಸೆ ಹುಟ್ಟಿದ ಕೆಲವರಿಗೆ ನಾನು ನೀಡಿದ ಸಲಹೆಗಳೇನೆಂದರೆ “ನೀವು ಈರ್ವರೂ ಜೊತೆಯಾಗಿ ತಹಜ್ಜುದ್ ನಮಾಝ್ ನಿರ್ವಹಿಸಿರಿ. ಅದನ್ನು ರೂಢಿಸಿಕೊಳ್ಳಿರಿ. ಅದು ಬದುಕಿಗೆ ಹೊಸ ದಾರಿ ತೋರುತ್ತದೆ.” ಕೆಲವು ದಿನಗಳ ನಂತರ ಅವರನ್ನು ಭೇಟಿಯಾದಾಗ ಅವರ ಬದುಕಿನಲ್ಲಿ ಹಲವು ಮಾರ್ಪಾಡುಗಳನ್ನು ಗಮನಿಸಿದ್ದೇನೆ. ಕೇವಲ ಲೌಕಿಕ ಬದಲಾವಣೆ ಗಿಂತ ಆಧ್ಯಾತ್ಮಿಕವಾದ ಪ್ರಯತ್ನದಿಂದ ಆದ ಬದಲಾವಣೆಯಿದು.

ಮನೆಗೆಲಸ ಮಾಡಿ ಸಾಕಾಗಿ ಹೋಗಿದೆ ಎಂದು ನನಗೆ ಓರ್ವ ಕೆಲಸದವಳನ್ನು ನೇಮಿಸಬೇಕೆಂದು ಕೇಳಿದ ಮಗಳು ಫಾತಿಮಾರಿಗೆ(ರ) ತಂದೆ ಪ್ರವಾದಿವರ್ಯರು(ಸ) ನೀಡಿದ ಉಪದೇಶ ಸ್ಮರಣೀಯ. “ಸುಬ್ಹಾನಲ್ಲಾಹ್.. ಅಲ್ಹಮ್ದುಲಿಲ್ಲಾಹ್.. ಅಲ್ಲಾಹು ಅಕ್ಬರ್.. ಎಂದು ದಿಕ್ರ್ ಉಚ್ಚರಿಸುತ್ತಿರಲು ಸಲಹೆ ನೀಡಿದರು. ಇದು ಕೆಲಸದವಳಿಗೆ ಬದ ಲಲ್ಲ ಎಂದು ಪ್ರವಾದಿವರ್ಯರಿಗೆ(ಸ) ಚೆನ್ನಾಗಿ ತಿಳಿದಿತ್ತು. ಆದರೆ ಮಗಳು ಫಾತಿಮಾರ(ರ) ಮನೋಭಾವದಲ್ಲಿ ಬದಲಾವಣೆಯುಂಟಾದರೆ ಎಲ್ಲ ಸರಿಹೋಗುತ್ತದೆ.. ಕೆಲಸದವಳಿಲ್ಲ ಎಂಬ ಕೊರಗು ದೂರವಾಗುತ್ತದೆ. ಎಂಬ ಬಗ್ಗೆ ಪ್ರವಾದಿವರ್ಯರಿಗೆ(ಸ) ಅರಿವಿತ್ತು. ಆದ್ದರಿಂದ ನಮ್ಮ ಮನೋಭಾವದಲ್ಲಿ ಬದಲಾವಣೆಯಾದರೆ ಸಮಸ್ಯೆಗಳು ತಾನಾಗಿಯೇ ಕೊನೆಗೊಳ್ಳುತ್ತದೆ.

“ಹೊಸ ರೀತಿಯನ್ನು ನಾನು ಪರೀಕ್ಷಿಸಿ ನೋಡುವೆ. ವಿಚ್ಛೇದನದ ಬಗೆಗಿನ ಚಿಂತನೆ ದೂರ ಮಾಡುವ.. ನನ್ನನ್ನು ಆಶ್ಚರ್ಯಚಕಿತ ಗೊಳಿಸಿದ ಪ್ರಶ್ನೆಯೊಂದಿದೆ. ಇಷ್ಟೆಲ್ಲಾ ಅನಾಸಕ್ತಿ, ಜಿಗುಪ್ಸೆ ಇದ್ದರೂ ದೈನಂದಿನ ಬದುಕಲ್ಲಿ ಯಾವುದೇ ಬದಲಾವಣೆಯಿಲ್ಲದೆ ಮರಣದ ತನಕ ದಾಂಪತ್ಯ ಬದುಕು ಮುಂದುವರಿಯುತ್ತದಲ್ಲಾ ಇದರ ರಹಸ್ಯವೇನು?” ಎಂದು ಆ ವ್ಯಕ್ತಿ ಕುತೂಹಲದಿಂದ ಕೇಳಿದರು.

ಹೀಗೆಲ್ಲಾ ಇದ್ದರೂ ಅದು ಮುಂದುವರಿದು ಕೊಂಡು ಹೋಗುವುದಕ್ಕೆ ಕೆಲವು ಕಾರಣಗಳಿವೆ. ಅದರಲ್ಲೊಂದು ನಮ್ಮ ಧಾರ್ಮಿಕ ಶಾಸ್ತ್ರವಾಗಿದೆ. ಐಹಿಕ ಮತ್ತು ಪಾರತ್ರಿಕವಾದ ವಿಜಯವಾಗಿದೆ. ಸಂಗಾತಿಗಳೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿರಿ ಎಂಬ ಕುರ್‌ಆನ್ ಮತ್ತು ಹದೀಸ್‌ಗಳ ಸಂದೇಶಗಳು. ಎರಡನೇಯದಾಗಿ ಮಕ್ಕಳಾಗಿದ್ದರೆ ದಾಂಪತ್ಯ ಬದುಕು ಯಾವ ಹಂತದಲ್ಲಿದ್ದರೂ ಸರಿ. ಅದು ಮುಂದುವರಿದುಕೊಂಡು ಹೋಗಬೇಕೆಂಬ ನಿಲುವು ತಾಳುವ ಪ್ರಮುಖ ಘಟ್ಟವಾಗಿದೆ. ಮೂರನೆಯದಾಗಿ ಬದಲಾವಣೆಯ ಕುರಿತು ಇರುವ ನಿರೀಕ್ಷೆ.

ಕಾಲ, ಸಂದರ್ಭಗಳು ಬದಲಾದಂತೆ ಮನುಷ್ಯನಲ್ಲಿಯೂ ಬದಲಾವಣೆ ಸಂಭವಿಸುತ್ತದೆ ಅದು ದಾಂಪತ್ಯ ಬದುಕಿಗೂ ಅನ್ವಯಿಸುತ್ತದೆ ಎಂಬ ನಿರೀಕ್ಷೆ ದಂಪತಿಗಳಲ್ಲಿರುತ್ತದೆ. ನಾಲ್ಕನೆಯದಾಗಿ, ಸಮಾಜದಲ್ಲಿ ನಮಗೆ ಇರುವ ಸ್ಥಾನಮಾನದ ಬಗ್ಗೆ ಯೋಚಿಸಿ ವಿಚ್ಛೇದನದ ಕೆಟ್ಟ ಹೆಸರು ಮೈಗಂಟಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಐದನೇಯದಾಗಿ ವಿಚ್ಛೇದನದತ್ತ ಸಾಗಬಾರದು ಎಂಬ ಕುಟುಂಬ ಸದಸ್ಯರ ಉಪದೇಶ ಒತ್ತಡಗಳಿಗೆ ತಲೆಬಾಗುತ್ತಾರೆ. ಆರನೆಯದಾಗಿ, ಸಂಗಾತಿಯ ಭಾವನೆಯನ್ನು ಅರ್ಥೈಸಿ, ಸಹನೆ, ತಾಳ್ಮೆಯಿಂದ ಮುಂದುವರಿಯುವುದು.

ಏಳನೇಯದಾಗಿ ಗತಕಾಲದ ಸಿಹಿ ಕಹಿ ಅನುಭವಗಳನ್ನು ಕಣ್ನೀರು ಮುಗುಳ್ನಗೆ ಮುಂತಾದ ಅನುಭವಗಳ ಬಗ್ಗೆ ಯೋಚಿಸಿ ಎಲ್ಲವನ್ನೂ ಮರೆತು ಮುಂದುವರಿಯಲು ತೋರುವ ಸನ್ಮನಸ್ಸು. ಎಂಟು, ನಮ್ಮ ದಾಂಪತ್ಯ ಬದುಕು ವಿಚ್ಛೇದನಗೊಂಡರೆ ನಮ್ಮ ಮಾತಾಪಿತರು ತೀವ್ರ ನೋವು ಅನುಭವಿಸುವರು ಎಂಬ ಚಿಂತೆ. ಒಂಬತ್ತು ಎಷ್ಟೋ, ವರ್ಷಗಳ ವರೆಗೆ ಜೊತೆಯಗಿ ಜೀವಿಸಿದ ಬದುಕಿನ ಅನುಭವಗಳು ಒಂದು ಮಾತಿನಿಂದ ಕಡಿದು ಹೋಗುತ್ತದಲ್ಲಾ ಎಂಬ ಚಿಂತೆ. ಹತ್ತು, ದಂಪತಿಗಳು ಪರಸ್ಪರ ವೈರುಧ್ಯಗಳಿದ್ದೂ ಬದುಕುತ್ತಿರುವಾಗಲೂ ಪರಸ್ಪರ ಆಶ್ರಯಿಸಿಕೊಂಡಿರಲೇಬೇಕಾದ ಅನಿವಾರ್ಯತೆ. ಅದು ನಮ್ಮ ಬದುಕನ್ನೇ ನಾಶಪಡಿಸಬಹುದು ಎಂಬ ಚಿಂತೆ. ಹನ್ನೊಂದು, ಭವಿಷ್ಯದ ಬಗೆಗಿರುವ ಆತಂಕ, ವಿಚ್ಛೇದನಗೊಂಡರೆ ಏನಾಗಬಹುದೆಂಬ ವ್ಯಥೆ ಹಲವರನ್ನು ಈ ಚಿಂತನೆಯಿಂದ ದೂರ ಸರಿಸುತ್ತದೆ. ಹನ್ನೆರಡು, ವಿಚ್ಛೇದನಗೊಂಡರೆ ಇನ್ನು ದೊರೆಯುವ ಸಂಗಾತಿ ಇದಕ್ಕಿಂತಲೂ ಕೆಟ್ಟದ್ದಾಗಿದ್ದರೆ… ಏನಾಗಬಹುದೆಂಬ ಆತಂಕ…

ಇವೆಲ್ಲವನ್ನೂ ಆಲಿಸಿದ ಬಳಿಕ ಹೋಗಲು ಎದ್ದು ನಿಂತ ಯುವಕ “ವಿಚ್ಛೇದನಗೊಳ್ಳುವ ಚಿಂತನೆಯನ್ನು ಕೈಬಿಟ್ಟ. ನಾವು ಕೊನೆಯ ವರೆಗೂ ಜೊತೆಯಾಗಿ ಬಾಳುತ್ತೇವೆ. ನಿಮಗೆ ಧನ್ಯವಾದಗಳು” ಎಂದು ಹೇಳಿ ಹೋದ.

ಅನು: ಎ.ಎಸ್. ಬೋಳಂಗಡಿ