ಸೊನ್ನೆ ಸುತ್ತಿದ ಬಿಜೆಪಿಯ 8 ಮುಸ್ಲಿಂ ಅಭ್ಯರ್ಥಿಗಳು: ಅಲ್ಪಸಂಖ್ಯಾತ ಮೋರ್ಚಾವನ್ನೇ ರದ್ದು ಮಾಡಿದ ಅಸ್ಸಾಂ ರಾಜ್ಯಾಧ್ಯಕ್ಷ..!

0
1292

ಸನ್ಮಾರ್ಗ ವಾರ್ತೆ

ಗುವಾಹಟಿ: ಅಸ್ಸಾಮಿನಲ್ಲಿ ಮುಸ್ಲಿಂ ಬಾಹುಳ್ಯದ ಸ್ಥಳಗಳಲ್ಲಿ ಎಂಟು ಮುಸ್ಲಿಂ ಅಭ್ಯರ್ಥಿಗಳನ್ನು ಬಿಜೆಪಿ ನಿಲ್ಲಿಸಿತ್ತು. ಆದರೆ ಅವರನ್ನು ಮತದಾರರು ಗೆಲ್ಲಿಸಿಲ್ಲ. ಹೀಗೆ ಸೊನ್ನೆ ಸುತ್ತಿದ್ದರಿಂದ ಆಕ್ರೋಶಗೊಂಡಿರುವ ಎಲ್ಲ ಅಲ್ಪಸಂಖ್ಯಾತ ಮೋರ್ಚಾದ ವಿಭಾಗಗಳನ್ನು ಬಿಜೆಪಿ ರದ್ದು ಮಾಡಿದೆ.

126 ಮಂದಿ ಸದಸ್ಯರ ವಿಧಾನಸಭೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದ್ದರೂ ಮುಸ್ಲಿಮರ ಪ್ರಾತಿನಿಧ್ಯವನ್ನು ಪಡೆದುಕೊಳ್ಳಲು ಬಿಜೆಪಿಯಿಂದ ಆಗಿಲ್ಲ. ಕೆಲವು ಬೂತ್‍ಗಳಲ್ಲಿ ಈ ಅಭ್ಯರ್ಥಿಗಳಿಗೆ 20 ವೋಟೂ ಬಿದ್ದಿಲ್ಲ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ, ರಾಜ್ಯ, ಜಿಲ್ಲಾ, ಮಂಡಲ ಸಮಿತಿಗಳನ್ನು ವಜಾಗೊಳಿಸಿರುವುದಾಗಿ ಅಸ್ಸಾಂ ಬಿಜೆಪಿ ರಾಜ್ಯಾಧ್ಯಕ್ಷ ರಂಜಿತ್ ದಾಸ್ ತಿಳಿಸಿದರು.

ಚುನಾವಣೆಯಲ್ಲಿ ಎನ್‍ಡಿಎ ಮಿತ್ರಕೂಟ 75 ಸೀಟು ಗೆದ್ದು ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್ ಮಹಾಸಖ್ಯಕ್ಕೆ 50 ಸೀಟುಗಳು ಸಿಕ್ಕಿದೆ. ಜೈಲಿನೊಳಗಿನಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದ ಸಿಎಎ, ಎನ್ ಆರ್ ಸಿ ವಿರೋಧಿ ಕಾರ್ಯಕರ್ತ ಅಖಿಲ್ ಗೊಗೊಯ್ ಒಂದು ದಿನ ಪ್ರಚಾರಕ್ಕೂ ಬರದೆ ಬಹುಮತದಿಂದ ಗೆದ್ದಿದ್ದಾರೆ.

ಈ ಸಲ ಕಾಂಗ್ರೆಸ್ ಸಖ್ಯದಿಂದ 31 ಮಂದಿ ಮುಸ್ಲಿಮರು ಇದ್ದಾರೆ. ಇದೇ ವೇಳೆ ಅಲ್ಪಸಂಖ್ಯಾತ ಮೋರ್ಚಾ ರದ್ದಿನ ಕಾರಣವನ್ನು ಅವರು ತಿಳಿಸಿಲ್ಲ ಎಂದು ಮೋರ್ಚಾದ ಅಧ್ಯಕ್ಷ ಮುಖ್ತಾರ್ ಹುಸೈನ್ ಖಾನ್ ಹೇಳಿದರು.