ಹೊಸದಿಲ್ಲಿ, ಜು. 10: ಹಜ್ ಯಾತ್ರಿಕರು ಮರಳುವಾಗ ಝಂಝಂ ನೀರನ್ನು ತರುವುದಕ್ಕೆ ನಿಯಂತ್ರಣವಿಲ್ಲ ಎಂದಿರುವ ಏರ್ ಇಂಡಿಯ, ಅನುಮತಿ ಇರುವ ಬ್ಯಾಗೇಜ್ ಮಿತಿಯಲ್ಲಿ ಪವಿತ್ರ ಜಲವನ್ನು ತರಬಹುದು ಎಂದು ತಿಳಿಸಿದೆ. ಜಿದ್ದ-ಕೊಚ್ಚಿ, ಎಐ964, ಜಿದ್ದ-ಹೈದರಾಬಾದ್-ಮುಂಬೈಎ ಐಎ966 ವಿಮಾನದಲ್ಲಿ ಝಂಝಂ ತರದಂತೆ ನಿಷೇಧ ಹೇರಲಾಗಿದೆ ಎಂದು ಏರ್ ಇಂಡಿಯ ಜಿದ್ದ ಸೇಲ್ಸ್ ವಿಭಾಗ ಪ್ರಕಟಣೆ ನೀಡಿತ್ತು. ಇದರ ಬೆನ್ನಿಗೆ ಸ್ಪಷ್ಟೀಕರಣವನ್ನು ಕೂಡ ಏರ್ ಇಂಡಿಯ ಕಂಪೆನಿ ನೀಡಿದೆ.
ವಿಮಾನದ ವಿನ್ಯಾಸದಲ್ಲಿ ಬದಲಾವಣೆಯಾಗಿ ಸೀಟು ಕಡಿಮೆಯಿರುವ ಕಾರಣ ಸೆಪ್ಟಂಬರ್ ಹದಿನೈದರವರೆಗೆ ಝಂಝಂ ಕ್ಯಾನ್ಗಳನ್ನು ತರಲು ಬಿಡುವುದಿಲ್ಲ ಎಂದು ಟ್ರಾವೆಲ್ ಏಜೆಂಟರುಗಳಿಗೆ ಜುಲೈ ನಾಲ್ಕರಂದು ಏರ್ ಇಂಡಿಯ ಸೂಚನೆ ನೀಡಿತ್ತು. ಆದರೆ, ಈ ಆದೇಶವನ್ನು ರದ್ದುಮಾಡಿ ಮಂಗಳವಾರ ಟ್ವೀಟ್ ಹೊರಬಂದಿದೆ. ” ಎಐ964,ಎಐ966 ಸರ್ವಿಸ್ಗಳಲ್ಲಿ ಕೂಡ ಅನುಮತಿಯಿರುವ ಬ್ಯಾಗೇಜ್ ಮಿತಿಯಲ್ಲಿ ಝಂಝಂ ನೀರು ತರುವುದಕ್ಕೆ ಅಡ್ಡಿಯಿಲ್ಲ. ಇದಕ್ಕೆ ಸಂಬಂಧಿಸಿ ಸೃಷ್ಟಿಯಾದ ಗೊಂದಲಕ್ಕೆ ವಿಷಾದವಿದೆ ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.
ಯಾತ್ರಿಕರು ತಮ್ಮ ಹ್ಯಾಂಡ್ ಬ್ಯಾಗೇಜಿನಲ್ಲಿ 100 ಮಿಲಿಗಿಂತ ಹೆಚ್ಚು ಇರುವ (ಮದ್ದುಗಳು, ವೈದ್ಯರ ಚೀಟಿಯ ಇನ್ಹೇಲರ್ ಗಳು, ಮಕ್ಕಳ ಆಹಾರ ಇತ್ಯಾದಿ ಹೊರತು) ದ್ರಾವಕಗಳನ್ನು ಇರಿಸಬಾರದೆಂದು ಏರ್ ಇಂಡಿಯ ವೆಬ್ಸೈಟ್ನಲ್ಲಿ ಪ್ರಕಟಣೆ ನೀಡಲಾಗಿತ್ತು. ವಿಮಾನ ಯಾನದ ಸುರಕ್ಷೆಗೆ ಸಂಬಂಧಿಸಿ ಮಾರ್ಗಸೂಚಿಯಲ್ಲಿ ಈ ವಿವರವಿದೆ. ಹೀಗೆ ತರುವ ದ್ರಾವಕಗಳನ್ನು ಸುರಕ್ಷೆಯ ವ್ಯಾಪ್ತಿಗೊಳಪಡಿಸಬೇಕೆಂದು ಚೆಕ್ ಇನ್ ಬ್ಯಾಗ್ನಲ್ಲಿ ಇಂತಹ ನಿಯಂತ್ರಣವಿಲ್ಲ ಎಂದು ಏರ್ ಇಂಡಿಯ ತಿಳಿಸಿದೆ.












