ಅಮೀರುಲ್ ಮೂಮಿನೀನ್! ನಿಮ್ಮ ಸಂಗಾತಿಗೆ ಗಂಡು ಮಗುವಿನ ಶುಭವಾರ್ತೆ ನೀಡಿರಿ…

0
784

ಮದೀನಾ ಪಟ್ಟಣದ ಗಲ್ಲಿ ಕೇರಿಗಳಲ್ಲಿ ಖಲೀಫಾ ಉಮರ್(ರ) ರಾತ್ರಿ ಹೊತ್ತು ಗಸ್ತು ತಿರುಗುತ್ತಿದ್ದರು. ಪಟ್ಟಣದ ಹೊರ ವಲಯದಲ್ಲಿ ಒಂದು ಕಡೆ ಒಂದು ಡೇರೆ ಕಾಣಿಸಿತು.

ಉಮರ್ ಹತ್ತಿರ ಹೋದರು.

ಒಳಗಿನಿಂದ ಒಂದು ಆಕ್ರಂದನ ಕೇಳಿಸುತ್ತಿತ್ತು.

ಹೊರಗೆ ಒಬ್ಬ ವ್ಯಕ್ತಿ ಅತ್ತಿತ್ತ  ಅಡ್ಡಾಡುತ್ತಿದ್ದರು.

ಉಮರ್ ಹೋಗಿ ಅವರಿಗೆ ಸಲಾಮ್ ಹೇಳಿದ ನಂತರ ನೀವು ಯಾರು ಎಂದು ಕೇಳಿದರು.”ನಾನೋರ್ವ ಗ್ರಾಮೀಣ.  ಖಲೀಫಾ ಉಮರ್‍ರಿಂದ ಸಹಾಯ ಬೇಡಲು ಬಂದಿದ್ದೇನೆ” ಎಂದು ಆ ವ್ಯಕ್ತಿ ಹೇಳಿದರು.

ಉಮರ್ ಪುನಃ ಪ್ರಶ್ನಿಸಿದರು: ಅದೇನು  ಆಕ್ರಂದನ? ಆ ವ್ಯಕ್ತಿ ಹೇಳಿದರು- “ಸಹೋದರಾ! ನಿಮ್ಮ ದಾರಿ ಹಿಡಿಯಿರಿ. ನಿಮಗೆ ಅಗತ್ಯವಿಲ್ಲದ ವಿಷಯದಲ್ಲಿ ತಲೆ ಹಾಕಬೇಡಿ.”

ಆ ವ್ಯಕ್ತಿಗೆ ಪಾಪ! ತಾನು ಈ ದೇಶದ ಅತಿದೊಡ್ಡ ನಾಯಕನ ಮುಂದೆ ನಿಂತಿದ್ದೇನೆಂದು ಹೇಗೆ ಗೊತ್ತು. ಆದರೂ ಉಮರ್ ಒತ್ತಾಯದಿಂದ  ಕೇಳಿದಾಗ, ಅದು ನನ್ನ ಪತ್ನಿ-ಆಕೆಗೆ ಹೆರಿಗೆ ನೋವು ಆರಂಭವಾಗಿದೆ. ಸಹಾಯ ಮಾಡಲು ಇಲ್ಲಿ ಯಾರೂ ಇಲ್ಲ ಎಂದುತ್ತರಿಸಿದರು ಆ ವ್ಯಕ್ತಿ.

ಉಮರ್ ಕೂಡಲೇ ಮನೆಯತ್ತ ಧಾವಿಸಿದರು. ಪತ್ನಿಯೊಡನೆ ಒಂದು ಪುಣ್ಯ ಕಾರ್ಯದಲ್ಲಿ ಭಾಗಿಯಾಗೋಣವೇ ಎಂದು ಕೇಳಿದರು. ವಿಷಯವೇನೆಂದು ತಿಳಿದ ಉಮರ್‍ರ ಪತ್ನಿ ಉಮ್ಮು ಕುಲ್ಸೂಮ್ ಕೂಡಲೇ ಹೆರಿಗೆಗೆ ಅಗತ್ಯವಾದ ವಸ್ತುಗಳನ್ನೂ ಸ್ವಲ್ಪ ಆಹಾರ  ಪದಾರ್ಥವನ್ನೂ ತೆಗೆದುಕೊಂಡು ಪತಿಯೊಂದಿಗೆ ನಡೆದರು. ಪತ್ನಿಯನ್ನು ಡೇರೆಯೊಳಗೆ ಕಳಿಸಿ ಉಮರ್ ಮತ್ತು ಆ ವ್ಯಕ್ತಿ ಹೊರಗೆ ಕುಳಿತು ಮಾತುಕತೆಯಲ್ಲಿ ತೊಡಗಿದರು.

ಸ್ವಲ್ಪ ಹೊತ್ತಿನಲ್ಲಿ ಆ ಮಹಿಳೆಗೆ ಸುಖ ಪ್ರಸವವಾಯಿತು.

ಉಮ್ಮು ಕುಲ್ಸೂಮ್ ಒಳಗಿನಿಂದಲೇ;  ಅಮೀರುಲ್ ಮೂಮಿನೀನ್ (ಮುಸಲ್ಮಾ ನರ ನಾಯಕರೆ!) ನಿಮ್ಮ ಸಂಗಾತಿಗೆ ಗಂಡು ಮಗುವಿನ ಶುಭವಾರ್ತೆ ನೀಡಿರಿ ಎಂದು ಜೋರಾಗಿ  ಹೇಳಿದರು.

ಇದನ್ನು ಕೇಳಿದ ಕೂಡಲೇ ಆ ವ್ಯಕ್ತಿ ಭಯದಿಂದ ಕಂಪಿಸ ತೊಡಗಿದರು. ತಾನೋರ್ವ ಮಹಾನ್ ವ್ಯಕ್ತಿಯ ಮುಂದೆ ಕುಳಿತಿದ್ದೇನೆಂದು ಅವರಿಗೇನು ಗೊತ್ತು. ಅವರು ಕುಳಿತಲ್ಲಿಂದೆದ್ದು ದೂರ ಸರಿಯತೊಡಗಿದರು. ಆದರೆ ಅಲ್ಲೇ ಕುಳಿತಿರುವಂತೆ ಉಮರ್ ಹೇಳಿದರು.

ಅನಂತರ ಪತ್ನಿ ತಂದಿದ್ದ ಆಹಾರ ಪದಾರ್ಥವನ್ನು ಅವರ ಮುಂದಿಡುತ್ತಾ ರಾತ್ರಿಯಿಡೀ ನಿದ್ದೆಗೆಟ್ಟಿರುತ್ತೀರಿ. ತುಂಬಾ ಹಸಿವಾಗಿರಬಹುದು, ಚೆನ್ನಾಗಿ ಉಣ್ಣಿರಿ ಎಂದು ಹೇಳಿದರು.

ತರುವಾಯ ಅವರೊಡನೆ, “ನಾಳೆ ಬೆಳಿಗ್ಗೆ ನಮ್ಮ ದರಬಾರಿಗೆ ಬರಬೇಕು’ ಎಂದು ಹೇಳಿ ಪತ್ನಿಯೊಡನೆ ಉಮರ್ ಮರಳಿದರು. ಮರುದಿನ ಬೆಳಿಗ್ಗೆ ಆ ವ್ಯಕ್ತಿ ಹೋದಾಗ ಅವರಿಗೆ ಅಗತ್ಯವಾದ ವಸ್ತುಗಳನ್ನೂ ಮಗುವಿಗೆ ಜೀವನಾಂಶವನ್ನೂ ಜೊತೆಗೆ ಕೆಲವು ಉಡುಗೊರೆಗಳನ್ನೂ ಕೊಟ್ಟು ಕಳಿಸಿದರು.

ಇಂತಹ ಉಜ್ವಲ ಇತಿಹಾಸ ಇಸ್ಲಾಮಿನ ಹೊರತು ಇನ್ನಾವ ಸಂಸ್ಕೃತಿಗಿದೆ!