ನಿಮ್ಮಲ್ಲಿಲ್ಲದ ಒಳಿತುಗಳನ್ನು ಮಕ್ಕಳಿಂದ ನಿರೀಕ್ಷಿಸುತ್ತೀರಾ?

0
13

ಲೇಖಕಿ: ಖದೀಜ ನುಸ್ರತ್

ಮನೆಯಲ್ಲಿ ತಂದೆ ತಾಯಿ ಮತ್ತು ಮಕ್ಕಳ ನಡುವಿನ ಸುದೃಢವಾದ ಸಂಬಂಧವು ಸುಭಧ್ರ ಕುಟುಂಬದ ಅಡಿಪಾಯವಾಗಿರುತ್ತದೆ. ಪೋಷಕರು ಮಕ್ಕಳೊಂದಿಗೆ ವರ್ತಿಸುವ ರೀತಿ ಅವರ ಸ್ವಭಾವ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ಮಕ್ಕಳು ಹೆತ್ತವರು ಹೇಳಿದ ಮಾತನ್ನು ಕೇಳುವುದಿಲ್ಲ, ಹಠ ಸ್ವಭಾವ, ಕಲಿಕೆಯಲ್ಲಿ ಏಕಾಗ್ರತೆ ಇಲ್ಲ, ಅಕ್ರಮ ಮನೋಭಾವ, ಪ್ರೇಮಜಾಲದಲ್ಲಿ ಸಿಲುಕುವುದು, ಹೆತ್ತವರನ್ನು ಗೌರವಿಸುವುದಿಲ್ಲ ಎಂಬುದು ಹೆಚ್ಚಿನ ಹೆತ್ತವರಿಂದ ಕೇಳಿ ಬರುವ ದೂರು ಆಗಿರುತ್ತದೆ. ಕೆಲವೊಮ್ಮೆ ಅವರಿಗೆ ಮನೆಯಲ್ಲಿ ಸಿಗಬೇಕಾದ ಪ್ರೀತಿ, ವಿಶ್ವಾಸದ ಕೊರತೆಯು ಅದಕ್ಕೆ ಒಂದು ಕಾರಣವಾಗಿರಬಹುದು.

ತಂದೆತಾಯಿಯರು ನಿರೀಕ್ಷಿಸುವ ಎಲ್ಲಾ ಒಳಿತು, ಪ್ರತಿಭೆಗಳು ಮಕ್ಕಳಲ್ಲಿರಬೇಕೆಂದಿಲ್ಲ. ನಾವು ನಿರೀಕ್ಷಿಸದ ಮತ್ತು ನಮಗೆ ಅರಿವಿಲ್ಲದಂತಹ ಅನೇಕ ಒಳಿತುಗಳೂ ಅವರಲ್ಲಿರಬಹುದು. ಮಕ್ಕಳಲ್ಲಿ ಇಲ್ಲದಿರುವ ಪ್ರತಿಭೆ, ಸ್ವಭಾವಗಳಿಗೆ ಆಕ್ಷೇಪಿಸಬೇಡಿರಿ. ಬೇರೆ ಮಕ್ಕಳೊಂದಿಗೆ ಎಂದಿಗೂ ಹೋಲಿಕೆ ಮಾಡಬೇಡಿರಿ. ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿರಿ, ಪ್ರೋತ್ಸಾಹಿಸಿರಿ ಮತ್ತು ಉತ್ತಮ ರೀತಿಯಲ್ಲಿ ಮುನ್ನಡೆಯಲು ಮಾರ್ಗದರ್ಶನ ನೀಡಿರಿ. ಅವರ ಪ್ರತಿಭೆಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸದಿದ್ದರೆ ಅದು ದುರುಪಯೋಗವಾಗುವ ಸಾಧ್ಯತೆಗಳಿರುತ್ತದೆ. ಅವರಿಗೆ ಜೀವನದಲ್ಲಿ ಕೆಲವು ಗುರಿ, ಕನಸು, ಉದ್ದೇಶಗಳಿರಬೇಕು ಮತ್ತು ಅದನ್ನು ಸಾಧಿಸುವುದರಲ್ಲಿ ನಿಬಿಢರಾಗಿರಬೇಕು. ಅವರಿಗೆ ಯಾವುದೇ ಗುರಿಯಿಲ್ಲದಿರುವಾಗ ಮಕ್ಕಳು ದಾರಿತಪ್ಪುವ ಸಾಧ್ಯತೆಗಳಿರುತ್ತದೆ.

ತಂದೆ ತಾಯಿ ನಾನು ಮಾಡುವಂತಹ ಎಲ್ಲಾ ಉತ್ತಮ ಕೆಲಸಕಾರ್ಯಗಳನ್ನು ಪ್ರೋತ್ಸಾಹಿಸುತ್ತಾರೆ ಎಂಬ ದೃಢವಿಶ್ವಾಸ ಮಕ್ಕಳಲ್ಲಿರಬೇಕು. ಅವರ ಉತ್ತಮ ಕೆಲಸಗಳನ್ನು ಹೊಗಳುತ್ತಾ, ಸಣ್ಣ ಉಡುಗೊರೆ ನೀಡುತ್ತಾ ಪ್ರೋತ್ಸಾಹಿಸಿರಿ. ಮಕ್ಕಳು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆಂಬ ಭಾವನೆ ಅವರಲ್ಲಿ ಉಂಟು ಮಾಡದೆ ಅವರನ್ನು ತಕ್ಕ ಸಮಯದಲ್ಲಿ ಪ್ರೋತ್ಸಾಹಿಸದೆ, ಅಂಗೀಕರಿಸದೆ, ಅವರೊಂದು ತಪ್ಪು ಮಾಡಿದಾಗ ಮಾತ್ರ ಅದನ್ನು ಎತ್ತಿ ತೋರಿಸಿದರೆ ತಂದೆತಾಯಿ ಮತ್ತು ಮಕ್ಕಳ ನಡುವೆ ಉತ್ತಮ ಸಂಬಂಧ ಉಂಟಾಗಲು ಸಾಧ್ಯವಿಲ್ಲ. ಅವರನ್ನು ದೂರುವ, ಆರೋಪಿಸುವ ಮಾತುಗಳು ಅವರನ್ನು ಪ್ರೋತ್ಸಾಹಿಸುವ ಮಾತಿಗಿಂತ ಹೆಚ್ಚಾಗದಿರದಂತೆ ಜಾಗರೂಕತೆ ವಹಿಸಬೇಕು. ಅವರನ್ನು ನಿರುತ್ಸಾಹಗೊಳಿಸುವ, ತಪ್ಪಿತಸ್ಥರೆಂಬ ಭಾವನೆ ಅವರಲ್ಲಿ ಉಂಟು ಮಾಡಬೇಡಿರಿ. ಇಂದು ಮಕ್ಕಳಿಗೆ ಹೆತ್ತವರೇ ಒಂದು ಸಮಸ್ಯೆಯಾಗುವಂತಹ ಪರಿಸ್ಥಿತಿ ಉಂಟಾಗಿದೆ. ನೀವು ಮಕ್ಕಳಿಗೆ ನೀಡುವ ಉಪದೇಶಗಳು ನಿರಂತರ ಅವರಲ್ಲಿ ಕೋಪವನ್ನುಂಟು ಮಾಡುತ್ತಿದ್ದರೆ ನೀವು ಅವರೊಂದಿಗೆ ಮಾಡುವ ಸಂಭಾಷಣೆ ಮತ್ತು ವಿಷಯಗಳ ಬಗ್ಗೆ ಮಿತಿಮೀರದಂತೆ ಸ್ವತಃ ಅವಲೋಕನ ನಡೆಸಿರಿ. ನಿಮಗೆ ಯಾವುದಾದರೂ ಆಸೆ, ಕನಸುಗಳಿದ್ದು ಈಡೇರಿಸಲು ಅಸಾಧ್ಯವಾದರೆ ಅದಕ್ಕಾಗಿ ಮಕ್ಕಳನ್ನು ಬಲಿಪಶುಗಳನ್ನಾಗಿ ಮಾಡಬೇಡಿರಿ. ಅವರಿಗೂ ಅವರದ್ದೇ ಕನಸುಗಳಿರುತ್ತದೆ. ನಿಮ್ಮ ಕನಸುಗಳಿಗಿಂತ ಮಕ್ಕಳ ಕನಸುಗಳಿಗೆ ಆದ್ಯತೆ ನೀಡಿರಿ.

ಕೆಲವೊಮ್ಮೆ ಮಕ್ಕಳು ತಪ್ಪು ಮಾಡಲಿ. ತಪ್ಪಿನಿಂದ ಪಾಠ ಕಲಿಯಲಿ. ತಮ್ಮ ಪರೀಕ್ಷೆ, ಪ್ರಯೋಗ, ತಪ್ಪುಗಳಿಂದಲೇ ಜನರು ಹೆಚ್ಚಿನ ಪಾಠಗಳನ್ನು ಕಲಿಯುತ್ತಾರೆ. ಮಕ್ಕಳು ತಪ್ಪು ಮಾಡಿದಾಗ ಹೊಡೆಯದೆ, ಕಿರುಚಾಡದೆ, ಸಹನೆ ವಹಿಸುತ್ತಾ ಉಪದೇಶ ನೀಡಬೇಕು. ಅವರು ತಪ್ಪಿದಾಗ ಸರಿದಾರಿಗೆ ತರಲು ತರಭೇತಿ ನೀಡಲು ಹೆತ್ತವರಿಗೆ ಸಿಗುವ ಉತ್ತಮ ಅವಕಾಶಗಳಗಿರುತ್ತದೆ. ಮತ್ತೆ ಆ ತಪ್ಪು ಪುನರಾವರ್ತನೆಯಾಗದಂತೆ ಜವಾಬ್ದಾರಿ ಭಾವನೆ ಅವರಲ್ಲುಂಟಾಗಬೇಕು.

ಮಕ್ಕಳಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿರಿ. ಅದು ಅವರ ಮಾನಸಿಕ ಆರೋಗ್ಯ ಬೆಳವಣಿಗೆಗೆ ಉತ್ತಮವಾಗಿದೆ. ಕೋಪಗೊಳ್ಳಲಿ, ಜಗಳ ಮಾಡಲಿ, ಅಳಲಿ. ಅವರ ಭಾವನೆಗಳನ್ನು ದಮನಿಸಿದರೆ ಅವರಲ್ಲಿ ಆಕ್ರಮಣಶೀಲ ಗುಣ ಹೆಚ್ಚಾಗಬಹುದು ಮತ್ತು ಖಿನ್ನತೆಗೆ ಕಾರಣವಾಗಬಹುದು. ಕೆಲವೊಮ್ಮೆ ಆಲಸ್ಯ ತೋರಿದಾಗ ಕಠಿಣವಾಗಿ ವರ್ತಿಸಬೇಡಿರಿ. ವಾದ ಮಾಡುವ ಅಭ್ಯಾಸವಿರುವ ಕೆಲವು ಮಕ್ಕಳಿಗೆ ವಾದ ಮಾಡಲು ಬಿಡಿರಿ. ಅವರ ಅಭಿಪ್ರಾಯಗಳನ್ನು ಗೌರವಿಸಿರಿ. ಅವರ ಮನದಲ್ಲಿ ಹೊಸ ಚಿಂತನೆ, ಆಲೋಚನೆಗಳು ಮೂಡಿ ಬರಲು ಅದು ಕಾರಣವಾಗಬಹುದು.

LEAVE A REPLY

Please enter your comment!
Please enter your name here