ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ. 6: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್ಯು)ದ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯಲ್ಲಿ ಮಧ್ಯಪ್ರವೇಶಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ರನ್ನು ಕರೆದು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಬೇಕೆಂದು ಸೂಚಿಸಿದ್ದಾರೆ. ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಸೂಚನೆ ನೀಡಿದ್ದಾರೆ.
ಜೆಎನ್ಯು ರಿಜಿಸ್ಟ್ರಾರ್ ಪ್ರೊ.ವಿ ಸಿ ಇಂದು ಬೆಳಗ್ಗೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ರನ್ನು ಭೇಟಿಯಾಗಿ ಕ್ಯಾಂಪಸ್ನ ಪರಿಸ್ಥಿತಿಯನ್ನು ತಿಳಿಸಿದರು. ಕ್ಯಾಂಪಸ್ಸಿನಲ್ಲಿ ಶುಲ್ಕ ಹೆಚ್ಚಿಸಿದ್ದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಮೇಲೆ ಹಲ್ಲೆ ನಡೆದಿದೆ. ಆಯುಧಗಳೊಂದಿಗೆ ಕ್ಯಾಂಪಸಿಗೆ ಬಂದ ಮುಖವಾಡ ಧರಿಸಿದ ತಂಡ ಅಧ್ಯಾಪಕರ ಸಹಿತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ 23 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಏಮ್ಸ್ ಅಧಿಕಾರಿಗಳು ತಿಳಿಸಿದರು. ಜೆಎನ್ಯು ಕ್ಯಾಂಪಸ್ಗೆ ಬಿಗಿ ಭದ್ರತೆಯನ್ನು ಪೊಲೀಸರು ನೀಡಿದ್ದಾರೆ. ಐಡಿ ಕಾರ್ಡಿರುವವರನ್ನು ಮಾತ್ರ ಪೊಲೀಸರು ಕ್ಯಾಂಪಸ್ಗೆ ಹೋಗಲು ಬಿಡುತ್ತಿದ್ದಾರೆ. ಅಡ್ಮಿಶನ್ ವಿಭಾಗಕ್ಕೂ ಪೊಲೀಸರು ಕಾವಲು ನಿಂತಿದ್ದಾರೆ. ದಾಳಿಗೆ ಸಂಬಂಧಿಸಿ ಪೊಲೀಸರು ಮೂರು ಕೇಸುಗಳನ್ನು ದಾಖಲಿಸಿದ್ದಾರೆ.












