ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಫೆ.19: ಟೂಲ್ ಕಿಟ್ ಪ್ರಕರಣದಲ್ಲಿ ಪರಿಸರ ಕಾರ್ಯಕರ್ತೆ ದಿಶಾ ರವಿಯವರ ಬಂಧನವನ್ನು ಗೃಹ ಸಚಿವ ಅಮಿತ್ ಶಾ ಸಮರ್ಥಿಸಿದ್ದಾರೆ. ವಯಸ್ಸನ್ನು ನೋಡಿ ಕ್ರಮ ಜರಗಿಸುವುದನ್ನು ನಿಲ್ಲಿಸಲಾಗದು ಎಂದು ಅಮಿತ್ ಶಾ ಹೇಳಿದರು.
21 ವರ್ಷದ ದಿಶಾ ರವಿ ಬಂಧನದ ವಿರುದ್ಧ ಪ್ರತಿಭಟನೆ ನಡೆಯುವ ವೇಳೆ ಅಮಿತ್ ಶಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿಲ್ಲಿ ಪೊಲೀಸರ ಮೇಲೆ ರಾಜಕೀಯ ಒತ್ತಡವಿಲ್ಲೆಂದು ಅಮಿತ್ ಶಾ ಹೇಳಿದರು.
ದಿಶಾ ರವಿಯವರ ಕಸ್ಟಡಿ ಸಮಯ ಇಂದಿಗೆ ಕೊನೆಗೊಳ್ಳುತ್ತಿದ್ದು ದಿಶಾರನ್ನು ಪಾಟ್ಯಾಲ ಹೌಸ್ ಕೋರ್ಟಿನಲ್ಲಿ ಹಾಜರುಪಡಿಸಿ ಹೆಚ್ಚಿನ ಕಸ್ಟಡಿಗೆ ಆಗ್ರಹಿಸಲಿದೆ ಎಂದು ತಿಳಿದು ಬಂದಿದೆ. ಜಾಮೀನು ಆಗ್ರಹಿಸಿ ದಿಶಾರ ವಕೀಲರು ಸಲ್ಲಿಸಿದ ಅರ್ಜಿಯನ್ನು ಕೋರ್ಟು ಇಂದು ವಿಚಾರಣೆ ನಡೆಸಲಿದೆ. ಎಫ್ಐಆರ್ ವಿವರಗಳನ್ನು ಸೋರಿಕೆ ಮಾಡಿದ ಮಾಧ್ಯಮಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಿಶಾ ರವಿ ದಿಲ್ಲಿ ಹೈಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿ ಇಂದು ವಿಚಾರಣೆಗೆ ಬರಲಿದೆ. ಈಗಾಗಲೇ ಈ ಕಾರಣದಿಂದ ಟೈಮ್ಸ್ ನೌ,ನ್ಯೂಸ್ 18, ಇಂಡಿಯ ಟುಡೆಗೆ ನೋಟಿಸು ಜಾರಿ ಮಾಡಲಾಗಿದೆ.
ನಿನ್ನೆ ಅರ್ಜಿ ಪರಿಗಣಿಸಿದ್ದ ಕೋರ್ಟು ಕೇಂದ್ರ ಸರಕಾರ, ಎನ್ಬಿಎಸ್ಐಗೂ ನೋಟಿಸು ಜಾರಿ ಮಾಡಿತ್ತು. ನಿಷೇಧಿತ ಸಂಘಟನೆ ಖಾಲಿಸ್ತಾನ್ ವಾದಿಗಳೊಂದಿಗೆ ದಿಶಾರಿಗೆ ಸಂಬಂಧ ಇದೆ ಎಂದು ಪೊಲೀಸರು ಆರೋಪಿಸಿದ್ದು ದೇಶದ್ರೋಹ, ಕ್ರಿಮಿನಲ್ ಸಂಚು, ಸಮಾಜದಲ್ಲಿ ವೈರತ್ವ ಸೃಷ್ಟಿ ಮುಂತಾದ ಸೆಕ್ಷನ್ ಪ್ರಕಾರ ಅವರ ಮೇಲೆ ಕೇಸು ದಾಖಲಾಗಿದೆ.












