ಆಂಧ್ರ: ಖಾಸಗಿ ಡೈರಿ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆ: 14 ಮಹಿಳೆಯರು ಆಸ್ಪತ್ರೆಗೆ ದಾಖಲು

0
281

ಸನ್ಮಾರ್ಗ ವಾರ್ತೆ

ಆಂಧ್ರ ಪ್ರದೇಶ,ಆ.21:ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಖಾಸಗಿ ಹಾಲಿನ ಡೈರಿಯಲ್ಲಿ ಅಮೋನಿಯ ಅನಿಲ ಸೋರಿಕೆಯಾದ ನಂತರ ಆಗಸ್ಟ್ 20ರ ಗುರುವಾರದಂದು ಕನಿಷ್ಠ 14 ಮಹಿಳಾ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ವೆಲ್ಡಿಂಗ್ ಕೆಲಸದ ಸಮಯದಲ್ಲಿ ಎಂಬಂದಪಲ್ಲಿ ಗ್ರಾಮದ ಡೈರಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಅಮೋನಿಯ ಅನಿಲ ಸೋರಿಕೆಯಿಂದ ಅಸ್ವಸ್ಥರಾಗಿದ್ದ ನೌಕರರು ಹಾಗೂ ಎಲ್ಲಾ ಮಹಿಳಾ ಕಾರ್ಮಿಕರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದ್ದು ಆರೋಗ್ಯ ಸ್ಥಿತಿಯು ಪ್ರಸ್ತುತ ಸ್ಥಿರವಾಗಿದೆ ಎಂದಿದ್ದಾರೆ.

“ಅವರೆಲ್ಲರ ಆರೋಗ್ಯವು ಸ್ಥಿರವಾಗಿದ್ದು ಮತ್ತು ಆಮ್ಲಜನಕ ಪೂರೈಕೆಯಲ್ಲಿದ್ದಾರೆ. ಆದರೆ ಮೂವರು ಮಹಿಳೆಯರನ್ನು ಹೆಚ್ಚಿನ‌ ಆರೈಕೆಗಾಗಿ ತಿರುಪತಿಯ ಎಸ್‌ವಿಐಎಂಎಸ್ ಅಥವಾ ರುಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು” ಎಂದು ಚಿತ್ತೂರು ಕಲೆಕ್ಟರ್ ಡಾ.ಭರತ್ ಗುಪ್ತಾ ದಿನಪತ್ರಿಕೆಗೆ ತಿಳಿಸಿದರು. ಈ ಕುರಿತು ಯಾರ ಮೇಲೆಯೂ ಆರೋಪ ಹೊರಿಸುವ ಮೊದಲು ನಿಖರ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಸೋರಿಕೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಗುಪ್ತಾ ಹೇಳಿದ್ದು, “ಘಟಕದ ಹೊರಗೆ ಯಾರಿಗೂ ಯಾವುದೇ ಬೆದರಿಕೆ ಇಲ್ಲ” ಎಂದರು. ಗುಪ್ತಾ ಜೊತೆಗೆ ಜಿಲ್ಲಾ ಅಧೀಕ್ಷಕರು ಕೂಡ ಸ್ಥಳಕ್ಕೆ ಭೇಟಿ ನೀಡಿದರು.

ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಾವರಕ್ಕೆ ಭೇಟಿ ನೀಡಿ ಸೋರಿಕೆಯನ್ನು ತಡೆಯುವ ಕುರಿತು ಗಮನಹರಿಸಿದರು. ಸಚಿವ ಪಿ.ರಾಮಚಂದ್ರನ್ ರೆಡ್ಡಿ ಅವರು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಆಸ್ಪತ್ರೆಗೆ ದಾಖಲಾದವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವಂತೆ ನಿರ್ದೇಶನ ನೀಡಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.