ಮೃತದೇಹದ ಕಣ್ಣಿನಲ್ಲಿ ಇರುವೆ: ಐವರು ವೈದ್ಯರ ಅಮಾನತು

0
6604

ಸನ್ಮಾರ್ಗ ವಾರ್ತೆ

ಭೋಪಾಲ್: ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಕಣ್ಣಿಗೆ ಇರುವೆ ಕಚ್ಚಿದ ದೃಶ್ಯಗಳು ಮಧ್ಯಪ್ರದೇಶದಲ್ಲಿ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಭೋಪಾಲದಿಂದ 300 ಕಿಲೊಮೀಟರ್ ದೂರದ ಶಿವಪುರಿಯ ಆಸ್ಪತ್ರೆಯಲ್ಲಿ ಐವತ್ತು ವರ್ಷದ ವ್ಯಕ್ತಿಯ ಮೃತದೇಹದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗಿದೆ ಎನ್ನಲಾಗಿದೆ.

ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಮಲ್‍ನಾಥ್ ತನಿಖೆಗೆ ಆದೇಶ ನೀಡಿದ್ದಾರೆ. ಸರ್ಜನ್ ಸಹಿತ ಐವರು ವೈದ್ಯರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇದು ಅಮಾನವೀಯವೆಂದು ಕಮಲ್‍ನಾಥ್ ಟ್ವೀಟ್ ಮಾಡಿ ಘಟನೆಯ ಕುರಿತು ಪ್ರತಿಕ್ರಿಯಿಸಿದರು.

ಟಿಬಿ ರೋಗದಿಂದ ವ್ಯಕ್ತಿ ಮೃತಪಟ್ಟಿದ್ದರು. ಆದರೆ ನಿರ್ಲಕ್ಷ್ಯದಿಂದಾಗಿ ರೋಗಿ ಬಾಲಚಂದ್ರ ಲೋಧಿಯ ಮೃತದೇಹಕ್ಕೆ ಇರುವೆ ಲಗ್ಗೆ ಹಾಕಿತ್ತು. ಆಸ್ಪತ್ರೆಗೆ ದಾಖಲಿಸಿ ಐದು ಗಂಟೆಯಲ್ಲಿ ಲೋಧಿ ಅಸುನೀಗಿದ್ದರು. ಇದನ್ನು ವಾರ್ಡಿನ ಇತರ ರೋಗಿಗಳು ವೈದ್ಯರಿಗೆ ತಿಳಿಸಿದರೂ ಮೃತದೇಹವನ್ನು ವಾರ್ಡಿನಲ್ಲಿ ಇರಿಸಿದ್ದರು.

ಮೃತದೇಹದಲ್ಲಿ ತೆರೆದ ಸ್ಥಿತಿಯಲ್ಲಿಯೇ ಇದ್ದ ಕಣ್ಣಿನಲ್ಲಿ ಇರುವೆ ಹರಿದಾಡುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಮೃತರ ಪತ್ನಿ ರಮಶ್ರೀ ಮೃತದೇಹದಿಂದ ಇರುವೆ ತೆಗೆಯುವ ಚಿತ್ರ ಕಂಡ ಜನರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ. ಡ್ಯೂಟಿ ನರ್ಸ್‌ಗಳು ಇರುವೆಯನ್ನು ತೆಗೆಯುವ ಕೆಲಸವನ್ನೂ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.