ಸನ್ಮಾರ್ಗ ವಾರ್ತೆ
ವಿಜಯಪುರ: “ಮಹಿಳೆಯರು ಮನಸ್ಸು ಮಾಡಿದರೆ ಏನನ್ನು ಸಾಧಿಸಬಹುದು ಎನ್ನುವುದಕ್ಕೆ ಒಂದು ಜೀವಂತ ಉದಾಹರಣೆ ಅನುಪಮ”. ಅದರ ಮುಖಪುಟದಿಂದ ಹಿಡಿದು ಒಳಪುಟದಲ್ಲಿ ಮೂಡಿ ಬರುವ ಎಲ್ಲಾ ಲೇಖನಗಳು ಅಪೂರ್ವ, ಅದ್ಭುತ ಹಾಗೂ ವೈವಿಧ್ಯಮಯ. ನಿರಂತರವಾಗಿ 20 ವರ್ಷಗಳಿಂದ ಪ್ರಕಟಗೊಳ್ಳುತ್ತಾ ಬಂದ ಅನುಭವದ ಯಶೋಗಾಥೆ ಎಂದರೆ ಅದು ಸಾಹಸಗಾಥೆಯೇ ಸರಿ. ಈ ಮಹಿಳಾ ಮಣಿಗಳು ಈ ಪತ್ರಿಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದರೆ ಅದು ಅತಿಶಯೋಕ್ತಿಯಲ್ಲ.
20ನೆಯ ವರ್ಷದ ಸಂಭ್ರಮಾಚರಣೆಯಲ್ಲಿ ನಾವೆಲ್ಲರೂ ಸಂತಸ ಪಡುತ್ತಿದ್ದೇವೆ ಎಂದರೆ ಅದರ ಹಿಂದಿರುವ ನಿರಂತರ ಪರಿಶ್ರಮ ಹಾಗೂ ಅವರ ಎಡಬಿಡದ ಛಲದ ಪ್ರತಿಬಿಂಬವೇ ಎದ್ದುಕಾಣುತ್ತಿದೆ. `ಸುಂದರ ನಾಳೆಗೆ ಸುಮಧುರ ಬಾಳಿಗೆ’ ಎನ್ನುವ ಧ್ಯೇಯವಾಕ್ಯವನ್ನು ಸಾರ್ಥಕಗೊಳಿಸಿದೆ.
ಅನುಪಮ, ಪತ್ರಿಕಾ ಕ್ಷೇತ್ರದಲ್ಲಿಯೇ ಒಂದು ಮೈಲುಗಲ್ಲಾಗಿ ಪತ್ರಿಕಾ ಧರ್ಮ ಪಾಲಿಸಿದ ತೃಪ್ತಿ ಅದು ಪಡೆದುಕೊಂಡಿದೆ. ಮಾನವೀಯ ಮೌಲ್ಯಗಳನ್ನು ಭಿತ್ತರಿಸಿದ ಪತ್ರಿಕೆಯಿದು. ಕುರ್ಆನಿನ ಸಂದೇಶವನ್ನು ಕನ್ನಡದಲ್ಲಿ ಉಣಬಡಿಸಿದ ವಿಶೇಷ ಪತ್ರಿಕೆ ಇದು. ಪರಸ್ಪರರು ಸೌಹಾರ್ದದಿಂದ ಬಾಳಲು ಮನಸ್ಸನ್ನು ಒಂದುಗೂಡಿಸುವ ಕಾರ್ಯ ಸತತವಾಗಿ ಗೈದಿದೆ ಎಂದು ಡಾ| ರೇಖಾ ಪಾಟೀಲ ಅವರು ಅನುಪಮ 20ನೆಯ ವಾರ್ಷಿಕ ವಿಶೇಷಾಂಕ ಬಿಡುಗಡೆಗೈದು ಮಾತನಾಡುತ್ತಿದ್ದರು.
ಇತ್ತೀಚೆಗೆ ನಗರದ ಅಂಜುಮನ್-ಎ-ಇಸಾಮ್ ಬಿ.ಎಡ್ ಕಾಲೇಜಿನಲ್ಲಿ ಜರುಗಿದ ಈ ಸಮಾರಂಭದಲ್ಲಿ ಎಚ್. ಎಸ್. ನದಾಫ್ರವರು ತಮ್ಮ ಆಶಯ ಭಾಷಣದಲ್ಲಿ ಅನುಪಮ ನಡೆದು ಬಂದ ದಾರಿ’ಯನ್ನು ವಿವರಿಸಿದರು. ಇನ್ನೋರ್ವ ಮುಖ್ಯ ಅತಿಥಿ ಡಾಕ್ಟರ್ ಶಿರೀನ್ ಎ. ಅಂಗಡಿಯವರು ಶ್ಲಾಘಿಸುತ್ತಾ “ವ್ಯಾಪಾರಿ ಮನೋಭಾವವಿಲ್ಲದ, ಒಳಿತಿನ ವಾಹಕ ಈ ಅನುಪಮವಾಗಿದೆ ಎಂಬುದರಲ್ಲಿ ಸಂಶಯವಿಲ್ಲ” ಎಂದು ಶ್ಲಾಘಿಸಿದರು. ವಿಜಯಪುರ ಶಾಖೆ ಅಧ್ಯಕ್ಷ ಮಹಮ್ಮದ್ ಯೂಸುಫ್ ಖಾಝಿಯವರು ಮಾತನಾಡಿ, “ಪ್ರಸ್ತುತ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಜ್ವಲಂತ ಸಮಸ್ಯೆಗಳನ್ನು, ಅವುಗಳ ಪರಿಹಾರವನ್ನು, ಸಮಾಜದ ಆರೋಗ್ಯವನ್ನು ಕಾಪಾಡಲು ಸ್ಪಂದಿಸುವ ಗುಣದಿಂದಾಗಿ ಅನುಪಮ ವಿಶಿಷ್ಟವಾಗಿದೆ” ಎಂದರು.
ಇದಾರಯೆ ಅದಬೆ ಇಸ್ಲಾಮೀ ಹಿಂದ್ ವಿಜಯಪುರ ಅಧ್ಯಕ್ಷ ಪ್ರೊ| ಸಲೀಂ ದೌಲತ್ಕೋಟಿ ಅವರು “ಚಾರಿತ್ರ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ಪತ್ರಿಕೆ ವಹಿಸಿದೆ. ಮೌಲ್ಯವರ್ಧಕ, ಎಲ್ಲಾ ಮಾನದಂಡಗಳ ಅಗ್ನಿ ಪರೀಕ್ಷೆ ದಾಟಿ ಅಪ್ಪಟ ಚಿನ್ನವಾಗಿ ಈ ಅನುಪಮ ಹೊರಹೊಮ್ಮುತ್ತಿದೆ” ಎಂದರು. ಅಂಜುಮನ್-ಎ-ಇಸ್ಲಾಮ್ ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಶಾರದಾಮಣಿ ಎಸ್. ಹುನಶ್ಯಾಳರವರು ಮಾತನಾಡುತ್ತಾ “ಮಹಿಳೆಯರಿಂದ ನಡೆಯುತ್ತ ಬಂದಿರುವ ಈ ಪತ್ರಿಕೆ ಅದ್ವಿತೀಯ ಸಾಧನೆ. ಇದರ ಹಿಂದಿನ ಅವರ ಪರಿಶ್ರಮಕ್ಕೆ ಗೌರವ ಸಲ್ಲಿಸುತ್ತೇನೆ ಹಾಗೂ ಈ ಮಾಸಪತ್ರಿಕೆ ಉತ್ತರೋತ್ತರವಾಗಿ ಹೀಗೆ ಯಶಸ್ಸು ಕಾಣುತ್ತ ಹೋಗಲಿ” ಎಂದು ಹಾರೈಸಿದರು.
ಕೊನೆಯಲ್ಲಿ ಅಧ್ಯಕ್ಷೀಯ ಭಾಷಣಗೈದ ವೈದ್ಯ ಸಾಹಿತಿ ಡಾ| ಅಮಿರುದ್ದೀನ್ ಖಾಝಿಯವರು ಮಾತನಾಡುತ್ತಾ, “ಸ್ಪಷ್ಟ ಗುರಿ, ದೃಢಸಂಕಲ್ಪದೊAದಿಗೆ ಪ್ರಾರಂಭಿಸಿ, ನಿತ್ಯ ನಿರಂತರವಾಗಿ ಸತತ 20 ವರ್ಷಗಳವರೆಗೆ ಯಶಸ್ವಿ ಪೂರ್ವಕವಾಗಿ ಮುನ್ನಡೆಯುತ್ತ ಬಂದಿರುವ ಈ ಪತ್ರಿಕೆ, ಪತ್ರಿಕಾ ಮಾಧ್ಯಮದಲ್ಲಿ ಮಿನುಗುವ ನಕ್ಷತ್ರವಾಗಿದೆ. ಅದರಲ್ಲಿರುವ ಹೂರಣ ಮಾನವೀಯ ಮೌಲ್ಯಗಳನ್ನು ಆಕಾಶದೆತ್ತರಕ್ಕೊಯ್ಯುತ್ತದೆ. ಈ ಸಾಹಸಮಯ ಯಾತ್ರೆಯ ಈ ಸಂಭ್ರಮದ ಕ್ಷಣಗಳಲ್ಲಿ ಅನುಪಮ ಪತ್ರಿಕೆ ಗಂಗಾಜಲದಷ್ಟೇ ಪವಿತ್ರವಾಗಿದೆಯಲ್ಲದೆ, ಸೌಹಾರ್ದದ ಸುವರ್ಣ ಸೇತುವೆಯಾಗಿ ಕಾರ್ಯ ಕಾರ್ಯವೆಸಗುತ್ತಿದೆ” ಎಂದು ಮನದುಂಬಿ ಶ್ಲಾಘಿಸಿದರು.
ನಂತರ ನಡೆದ ಮಹಿಳಾ ಕವಿಗೋಷ್ಠಿಯಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ ಕವಯಿತ್ರಿಯರಾದ ಡಾ| ರೇಖಾ ಪಾಟೀಲ, ರುಕ್ಮಿಣಿ ಚೌಹಾನ್, ಪ್ರೊ| ಇಶ್ರತ್ ಜಹಾಂ ಬೇಗ್, ಮೆಹರುನ್ನಿಸಾ ಮೆಹರು ಹಾಗೂ ಕುಮಾರಿ ಬಿಸ್ಮಿಲ್ಲಾಹ್ ನದಾಫ್ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಇದಾರಯೆ ಅದಬೆ ಇಸ್ಲಾಮೀ ಹಿಂದ್ ವಿಜಯಪುರ ಕಾರ್ಯದರ್ಶಿ ಅಬ್ದುಲ್ ಖಾದಿರ್ ಧನ್ಯವಾದಾರ್ಪಣೆಗೈದರು. ಕುಮಾರಿ ರಿಝ್ವಾನಾ ಚೌಧರಿಯವರು ಕುರ್ಆನ್ ಪಠಿಸಿದರು. ಮೊಹಮ್ಮದ್ ಅಯ್ಯಾಜ್ ಚಡಚಣಕರ, ದಾದಾಪೀರ್ ವಾಲಿಕಾರ್, ಸಕ್ಕೂಬಾಯಿ ಸ್ತುತಿ ಗೀತೆ ಹಾಡಿದರು.












