ಸನ್ಮಾರ್ಗ ವಾರ್ತೆ
ಮೈಸೂರು: ಪತ್ರಿಕೆಗಳು ಮನುಷ್ಯ ಸಂಬಂಧಗಳನ್ನು ಒಟ್ಟುಗೂಡಿಸುವಂತಹ ವಿಚಾರಗಳನ್ನು, ವಿಷಯಗಳನ್ನು ಪ್ರಚಾರ ಪಡಿಸುವ ಮೂಲಕ ಸಮಾಜದಲ್ಲಿ ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಲು ಸಹಕಾರಿಯಾಗಲಿ ಎಂದು ಮೈಸೂರಿನ ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೊರೇಟರಿಯ ನಿವೃತ್ತ ಸಹಯಕ ನಿರ್ದೇಶಕಿ ಡಾ.ಫರ್ಹತ್ ಖಾನುಮ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಜಮಾಅತೆ ಇಸ್ಲಾಮಿ ಹಿಂದ್ ಕಚೇರಿ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಅನುಪಮ ಮಹಿಳಾ ಮಾಸಿಕದ 20ನೇ ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಪತ್ರಿಕೆಗಳು ವಿಚಾರಧಾರೆಗಳನ್ನು ಪ್ರಸ್ತುತಪಡಿಸುವ ವೇದಿಕೆ. ಸಮಾಜಕ್ಕೆ ಒಳಿತನ್ನು ಮಾಡುವಂತಹ ಗುರಿಯನ್ನಿಟ್ಟುಕೊಂಡು ಕೆಲಸ ಮಾಡಬೇಕು. ಮುಸ್ಲಿಂ ಮಹಿಳೆಯರು ನಡೆಸುತ್ತಿರುವ ಅನುಪಮ ಮಾಸಿಕ 20ನೇ ವರ್ಷಕ್ಕೆ ಕಾಲಿಟ್ಟಿರುವುದು ಶ್ಲಾಘನೀಯ. ಅನುಪಮವು ಸಮಾಜದ ಬದಲಾವಣೆಯಲ್ಲಿ ತನ್ನದೇ ಆದ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೈಸೂರಿನ ಇ ಎನ್ ಟಿ ಸರ್ಜನ್ ಡಾ. ಚಂದ್ರಾವತಿ.ಕೆ., ಅನುಪಮ ಪತ್ರಿಕೆಯು ಹೆಸರಿಗೆ ತಕ್ಕಂತೆ ಅನುಪಮವಾಗಿದೆ. ಸಾಮಾಜಿಕ ಜವಾಬ್ದಾರಿಗಳನ್ನು, ಕಳಕಳಿಯನ್ನು ತೋರುವ ಮೂಲಕ ಪತ್ರಿಕೆಯ ಓದುಗಳಾಗಿದ್ದೇನೆ. ಅನುಪಮ ಪತ್ರಿಕೆಯು ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ಸಾಮಾಜಿಕ ಹೋರಾಟಗಾರ್ತಿ, ನ್ಯಾಯವಾದಿ ಅಸ್ಮಾ ಪರ್ವೀನ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ಶಿಕ್ಷಣದಿಂದ ಹಲವಾರು ಕಡೆ ವಂಚಿತರಾಗುತ್ತಿದ್ದಾರೆ. ಅವರಿಗೆ ಶಿಕ್ಷಣವನ್ನು ಆದ್ಯತೆಯ ಮೂಲಕ ನೀಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಮಹಿಳಾ ಪತ್ರಿಕೆಯಾದ ಅನುಪಮವು ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಲಿ ಎಂದು ಹೇಳಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪತ್ರಿಕೆಯ ಸಂಪಾದಕಿ ಶಹನಾಝ್ ಅಧ್ಯಕ್ಷತೆ ವಹಿಸಿ ಪತ್ರಿಕೆ ಬೆಳೆದು ಬಂದ ದಾರಿಯನ್ನು ವಿವರಿಸಿದರು.
ಸಹ ಸಂಪಾದಕಿ ಕುಲ್ಸುಮ್ ಅಬೂಬಕ್ಕರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಸೂರು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಮುನೀರಾ ಉಪಸ್ಥಿತರಿದ್ದರು.
ಆಮಿನಾ ಫಾಯಿದಾ ಕಿರಾಅತ್ ಪಠಿಸಿದರು. ನಝಾಹತ್ ಜಹಾನ್ ಕಾರ್ಯಕ್ರಮ ನಿರೂಪಿಸಿದರು.















