ಸಿಂಘು ಗಡಿಯಲ್ಲಿ ಸ್ಥಳೀಯರೆಂದು ವಾದಿಸಿ ಬಂದವರು ಬಿಜೆಪಿಗರೇ: ಹೌದೆನ್ನುತ್ತಿದೆ ಫೋಟೋಗಳು

0
612

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸಿಂಘು ಗಡಿಯಲ್ಲಿ ಸ್ಥಳೀಯರೆಂದು ವಾದಿಸಿ ಪೊಲೀಸರ ಸಮ್ಮುಖದಲ್ಲೇ ರೈತರ ಡೇರೆ ಗಳಿಗೆ ಕಲ್ಲು ತೂರಾಟ ನಡೆಸಿದವರು ಸ್ಥಳೀಯರಲ್ಲ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತಹ ಫೋಟೋಗಳು ದೊರಕಿರುವ ಬಗ್ಗೆ ಆಲ್ಟ್ ನ್ಯೂಸ್ ವರದಿ ಮಾಡಿದೆ. ಆಲ್ಟ್ ನ್ಯೂಸ್ ನಡೆಸಿದ ಫ್ಯಾಕ್ಟ್ ಚೆಕ್ ನಲ್ಲಿ ಈ ವಿವರ ಬಹಿರಂಗವಾಗಿದೆ.

ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಯನ್ನು ವಿರೋಧಿಸುವುದಾಗಿ ಹೇಳಿಕೊಳ್ಳುವ ‘ಸ್ಥಳೀಯರು’ ಯಾರು? ಅವರು ನಿಜವಾಗಿಯೂ ಸ್ಥಳೀಯರೇ, ಅಥವಾ ಅವರು ಹೊರಗಿನವರು ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರ ಹುಡುಕಿರುವ ಸುದ್ದಿ ತಾಣ, ದೆಹಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದ ವಿರುದ್ಧ ಈ ಹಿಂದೆ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮತ್ತು ಬಿಜೆಪಿ ನಾಯಕರೊಂದಿಗೆ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿರುವ ಇಬ್ಬರು ಭಾರತೀಯ ಜನತಾ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ವರದಿ ಮಾಡಿದೆ.

ಅದರಲ್ಲಿ ಒಬ್ಬಾತ ಅಮನ್ ಕುಮಾರ್ ಹಾಗೂ ಇನ್ನೊಬ್ಬ ಕಿಶನ್ ದಬ್ಬಾಸ್ ಎಂದು ಪತ್ತೆ ಹಚ್ಚಿದೆ. ಅವರ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಹಾಗೂ ಇತರ ವಿವರಗಳು ಬಹಿರಂಗಗೊಂಡಿದೆ. ಸದ್ಯ ತಮ್ಮ ಪ್ರೊಫೈಲ್ ಗಳನ್ನೂ ಲಾಕ್ ಮಾಡಿರುವುದಾಗಿ ತಿಳಿದು ಬಂದಿದೆ.

ರೈತರ ಪ್ರತಿಭಟನೆಯು ನಡೆಯುತ್ತಿರುವ ಸಿಂಘು ಗಡಿಯಲ್ಲಿ ರೈತರ ಮೇಲೆ ದಾಳಿ ನಡೆಸಿರುವುದು ಸ್ಥಳೀಯರಲ್ಲ, ಗೂಂಡಾಗಳು, ರೈತರ ಮೇಲೆ ಕಲ್ಲೆಸೆಯಲು ಸಿಂಘು ಗಡಿಗೆ ಕರೆತರಲಾಗಿತ್ತು ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದನ್ನು ನೆನೆಯಬಹುದು.