ದ ಕಾಶ್ಮೀರ್ ಫೈಲ್ಸ್: ನಿರ್ದೇಶಕರಿಗೆ ಧನ್ಯವಾದ

0
337

ಲೇಖಕರು: ಏ.ಕೆ. ಕುಕ್ಕಿಲ

ದ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಸದ್ಯ ನಡೆಸಲಾಗುತ್ತಿರುವ ಚರ್ಚೆಗಳನ್ನು ನಾಲ್ಕು ರೀತಿಯಾಗಿ ವಿಂಗಡಿಸಬಹುದು.

1. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಗೆ ಅಂದಿನ ರಾಜ್ಯಪಾಲ ಜಗ್ಮೋಹನ್ ಆಗಲಿ, ಬಿಜೆಪಿಯಾಗಲಿ ಜವಾಬ್ದಾರ
ಅಲ್ಲ, ಅದಕ್ಕೆ ಕಾಶ್ಮೀರದ ಆರ್ಟಿಕಲ್ 370 ಕಾರಣ.

2. ಪಂಡಿತರ ಹತ್ಯೆ ಮತ್ತು ವಲಸೆಯನ್ನು ಗೋಧ್ರಾ ಹತ್ಯಾ ಕಾಂಡಕ್ಕೆ ಹೋಲಿಸುವಂತಿಲ್ಲ. ಗೋಧ್ರಾದಲ್ಲಿ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿದುದೇ ಗೋಧ್ರೋತ್ತರ ಹತ್ಯಾಕಾಂಡಕ್ಕೆ ಕಾರಣ.
3. 5 ಲಕ್ಷ ಕಾಶ್ಮೀರಿ ಪಂಡಿತರ ನರಮೇಧ ನಡೆಸಲಾಗಿದೆ.
4. ಗುಜರಾತ್ ಹತ್ಯಾಕಾಂಡದ ಸತ್ಯ ಘಟನೆಯೊಂದನ್ನು ಆಧರಿಸಿ ನಿರ್ಮಿಸಲಾದ ಫರ್ಝಾನಿಯಾ ಸಿನಿಮಾಕ್ಕೆ ಇಲ್ಲದ ತೆರಿಗೆ ವಿನಾಯಿತಿ ದ ಕಾಶ್ಮೀರ್ ಫೈಲ್ಸ್‌ಗೆ ನೀಡಿರುವುದೇಕೆ?

ನಿಜವಾಗಿ,
ಸಂಖ್ಯೆ ಒಂದು: ಇದು ಅಪ್ಪಟ ಸುಳ್ಳು. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ನಡೆದ ಸಂದರ್ಭದಲ್ಲಿ ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ನ್ಯಾಶನಲ್ ಫ್ರಂಟ್ ಸರಕಾರ ಅಸ್ತಿತ್ವದಲ್ಲಿತ್ತು. ಪ್ರಧಾನಿಯಾಗಿದ್ದುದು ವಿಪಿ ಸಿಂಗ್. ಅದು 1989. ಲೋಕಸಭೆಗೆ ನಡೆದ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ 197 ಸ್ಥಾನಗಳು ಸಿಕ್ಕಿತ್ತು. ಜನತಾದಳಕ್ಕೆ 143 ಸ್ಥಾನಗಳು ಮತ್ತು ವಾಜಪೇಯಿ ಮತ್ತು ಆಡ್ವಾಣಿ ನೇತೃತ್ವ ಬಿಜೆಪಿಗೆ 85 ಸ್ಥಾನಗಳು ಲಭಿಸಿದ್ದುವು. ಯಾವ ಪಕ್ಷಕ್ಕೂ ಪೂರ್ಣ ಬಹುಮತ ಲಭಿಸಿರಲಿಲ್ಲ. ತೆಲುಗು ದೇಶಮ್. ಪಕ್ಷದ ನಾಯಕ ಎನ್‌ಟಿ ರಾಮರಾವ್ ನೇತೃತ್ವದಲ್ಲಿ ರಚನೆಯಾದ ನ್ಯಾಶನಲ್ ಫ್ರಂಟ್ ಮೈತ್ರಿಕೂಟವು ಬಿಜೆಪಿ ಬೆಂಬಲದೊAದಿಗೆ ಸರಕಾರ ರಚ ನೆಗೆ ಮುಂದಾಯಿತು. ಚೌಧರಿ ದೇವಿಲಾಲ್ ಉಪ ಪ್ರಧಾನಿಯಾದರು. ಆ ಸಮಯದಲ್ಲಿ ಕಾಶ್ಮೀರದಲ್ಲಿ ಮುಖ್ಯಮಂತ್ರಿ ಯಾಗಿದ್ದ ಫಾರೂಕ್ ಅಬ್ದುಲ್ಲಾರ ಕಟ್ಟಾ ವಿರೋಧಿ ಕಾಶ್ಮೀರದ ಮುಫ್ತಿ ಮುಹಮ್ಮದ್ ಸಈದ್ ಗೃಹ ಸಚಿವರಾದರು. ಈ ಮೈತ್ರಿಕೂಟದಲ್ಲಿ ಡಿಎಂಕೆ, ಅಸ್ಸಾಮ್ ಗಣ ಪರಿಷತ್ ಕೂಡಾ ಸೇರಿಕೊಂಡಿದ್ದುವು. ಬಿಜೆಪಿ ಬೆಂಬಲ ಇಲ್ಲದೇ ಈ ಸರ್ಕಾರ ಅಸ್ತಿತ್ವದಲ್ಲಿರುವುದಕ್ಕೆ ಸಾಧ್ಯವೇ ಇರಲಿಲ್ಲ.

1989ರ ಕೊನೆಯಲ್ಲಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳು ತೀವ್ರವಾಯಿತು. 1989 ಅಕ್ಟೋಬರ್ 14 ರಂದು ಪ್ರಮುಖ ನ್ಯಾಯವಾದಿ ಮತ್ತು ಬಿಜೆಪಿ ನಾಯಕ ಟೀಕಾ ಲಾಲ್ ತಪ್ಲೂ ಎಂಬವರ ಹತ್ಯೆಯಾಯಿತು. ತಿಂಗಳ ಬಳಿಕ ಗೃಹ ಸಚಿವ ಮುಫ್ತಿ ಮುಹಮ್ಮದ್ ಸಈದ್ ಅವರ ಮಗಳು ರುಬಿಯಾ ಸಈದ್‌ರನ್ನು ಪ್ರತ್ಯೇಕತಾವಾದಿಗಳು ಅಪಹರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಲಂಡನ್ ನಲ್ಲಿದ್ದರು. ಅವರು ಲಂಡನ್ ಭೇಟಿ ಮೊಟಕುಗೊಳಿಸಿ ಭಾರತಕ್ಕೆ ಹಿಂತಿರುಗಿದರು. ಮತ್ತು ರುಬಿಯಾರನ್ನು ಬಿಡುಗಡೆಗೊಳಿಸಬೇಕಾ ದರೆ ಜೈಲ್ಲಿನಲ್ಲಿರುವ ಐವರು ಪ್ರತ್ಯೇಕತಾವಾದಿಗಳನ್ನು ಬಿಡುಗಡೆ ಗೊಳಿಸಬೇಕೆಂಬ ಅ ಪಹರಣಕಾರರ ಬೇಡಿಕೆಯನ್ನು ತಿರಸ್ಕರಿಸಿದರು. ಇದರಿಂದ ಕೇಂದ್ರ ಸರಕಾರ ನೇರವಾಗಿ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುತ್ತದಲ್ಲದೆ, ಐವರು ಪ್ರತ್ಯೇಕತಾವಾದಿಗಳನ್ನು ಅಪಹರಣ ಕಾರರಿಗೆ ಹಸ್ತಾಂತರಿಸಿ ರುಬಿಯಾರನ್ನು ಬಿಡುಗಡೆಗೊಳಿಸಿಕೊಳ್ಳು ತ್ತದೆ. ಇದರ ಬೆನ್ನಿಗೇ ಜಗ್ಮೋಹನ್‌ರನ್ನು ಕಾಶ್ಮೀರದ ರಾಜ್ಯಪಾಲ ರಾಗಿ ನೇಮಿಸುವಂತೆ ಪ್ರಧಾನಿ ವಿಪಿ ಸಿಂಗ್ ಮೇಲೆ ಮುಫ್ತಿ ಮುಹಮ್ಮದ್ ಸಈದ್ ಒತ್ತಡ ಹೇರುತ್ತಾರೆ. ಇದರ ಹಿಂದೆಯೂ ಒಂದು ಕತೆಯಿದೆ.

ಈ ಜಗ್ಮೋಹನ್ ಈ ಹಿಂದೆ 1984ರಲ್ಲಿ ಕಾಶ್ಮೀರದ ರಾಜ್ಯ ಪಾಲರಾಗಿದ್ದರು. ಅಲ್ಲದೆ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾರನ್ನು ವಜಾಗೊಳಿಸುವಂತೆ ಆಗಿನ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಶಿಫಾರಸ್ಸೂ ಮಾಡಿದ್ದರು. ಇದನ್ನು ಪ್ರತಿಭಟಿಸಿದ್ದ ಫಾರೂಖ್ ಅಬ್ದುಲ್ಲಾ, ಜಗ್ಮೋಹನ್‌ರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ರಾಜೀವ್ ಗಾಂಧಿಯವರ ಮೇಲೆ ಒತ್ತಡ ಹೇರಿದ್ದರು. ಜೊತೆಗೇ, ಇನ್ನೊಮ್ಮೆ ಜಗ್ಮೋಹನ್ ಕಾಶ್ಮೀರದ ರಾಜ್ಯಪಾಲರಾದರೆ ತಾನು ರಾಜಿನಾಮೆ ನೀಡುವೆ ಎಂದೂ ಘೋಷಿಸಿದ್ದರು. ಇದನ್ನರಿತೇ ಮುಫ್ತಿ ಮುಹಮ್ಮದ್ ಸಈದ್ ಅವರು ಜಗ್ಮೋಹ್‌ರನ್ನು ಮತ್ತೊಮ್ಮೆ ರಾಜ್ಯಪಾಲರನ್ನಾಗಿ ಮಾಡುವಂತೆ ವಿಪಿ ಸಿಂಗ್ ಮೇಲೆ ಒತ್ತಡ ಹೇರಿದ್ದರು ಎಂದೂ ಹೇಳಲಾಗುತ್ತದೆ. ಅಂತೂ,

1990 ಜನವರಿ 18ರಂದು ಜಗ್ಮೋಹನ್ ಕಾಶ್ಮೀರದ ರಾಜ್ಯಪಾಲರಾಗಿ ನೇಮಕಕೊಳ್ಳುತ್ತಾರೆ. ಅದೇ ದಿನ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡುತ್ತಾರೆ ಮತ್ತು ರಾಜ್ಯದಲ್ಲಿ ರಾಷ್ಟçಪತಿ ಆಡಳಿತ ಜಾರಿಯಾಗುತ್ತದೆ. ಜನವರಿ 19ರಂದು ರಾಜ್ಯ ಪಾಲರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ದಿನದಂದೇ ಕಾಶ್ಮೀರದಲ್ಲಿ ಸೇನೆ ಮನೆ ಮನೆ ಶೋಧ ಪ್ರಾರಂಭಿಸುತ್ತದೆ. 300ರಷ್ಟು ಯುವಕರನ್ನು ಬಂಧಿಸುತ್ತದೆ. ಇದ ರಿಂದಾಗಿ ಜನರಲ್ಲಿ ಆತಂಕ ಮತ್ತು ಆಕ್ರೋಶ ಎರಡೂ ಉಂಟಾಗುತ್ತದೆ. ಎರಡು ದಿನಗಳ ನಂತರ- ಅಂದರೆ ಜನವರಿ 21 ರಂದು ದೇಶವನ್ನೇ ಆಘಾತಕ್ಕೆ ತಳ್ಳಿದ ಹತ್ಯಾಕಾಂಡವೊAದೂ ನಡೆಯುತ್ತದೆ. ಶ್ರೀನಗರದ ಗವ್ಕಡಾಲ್ ಎಂಬಲ್ಲಿ ಪ್ರತಿಭಟನಾ ನಿರತರ ಮೇಲೆ ಸಿಆರ್‌ಪಿಎಫ್‌ನ ಯೋಧರು ಮನಬಂದAತೆ ಗುಂಡಿನ ದಾಳಿ ನಡೆಸುತ್ತಾರೆ. ಮರದ ಸೇತುವೆಯಲ್ಲಿ ಸೇರಿಕೊಂಡಿದ್ದ ಈ ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯಲ್ಲಿ ಸರಕಾರಿ ಲೆಕ್ಕ ಪ್ರಕಾರ 50 ಮಂದಿ ಸಾವಿಗೀಡಾಗುತ್ತಾರೆ. ಆದರೆ, ಬದುಕು ಳಿದವರ ಪ್ರಕಾರ, ಸಾವಿಗೀಡಾದವರ ಸಂಖ್ಯೆ 280ಕ್ಕಿಂತಲೂ ಅಧಿಕ. ಅನೇಕ ಮಂದಿ ಸೇತುವೆಯಿಂದ ನದಿಗೆ ಬಿದ್ದು ಪ್ರಾಣ ಕಳಕೊಳ್ಳುತ್ತಾರೆ. ಅಂದಹಾಗೆ,

ಕಾಶ್ಮೀರದ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಈ ಹತ್ಯಾಕಾಂಡ ಮಹತ್ತರ ತಿರುವನ್ನು ನೀಡುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲ ಜಗ್ಮೋಹನ್ ಮೇಲೆ ಪ್ರತ್ಯೇಕತಾವಾದಿಗಳು ಆಕ್ರೋಶಿತ ರಾಗುತ್ತಾರಲ್ಲದೆ, ತಮ್ಮ ಬಂದೂಕನ್ನು ಪಂಡಿತರ ವಿರುದ್ಧ ತಿರು ಗಿಸುತ್ತಾರೆ. ಪ್ರಮುಖ ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡುತ್ತಾರೆ. ಇದರಲ್ಲಿ ಹೈಕೋರ್ಟ್ ನ್ಯಾಯಾಧೀಶರೂ, ಶಿಕ್ಷಕರೂ ಸೇರುತ್ತಾರೆ. ಮತ್ತು ಇದು ಪಂಡಿತರಲ್ಲಿ ಭೀತಿಗೆ ಕಾರಣವಾಗುತ್ತದೆ. ಪೆಬ್ರವರಿ ಮತ್ತು ಮಾರ್ಚ್ ಮಧ್ಯೆ ಪಂಡಿತರು ದೊಡ್ಡ ಸಂಖ್ಯೆಯಲ್ಲಿ ಪಕ್ಕದ ಜಮ್ಮುವಿಗೆ ವಲಸೆ ಹೋಗಲು ಪ್ರಾರಂಭಿಸುತ್ತಾರೆ. ಹಾಗಂತ,
ಗುಜರಾತ್‌ನಲ್ಲಿ ನಡೆದಂತೆ ಪಂಡಿತರ ಸಾಮೂಹಿಕ ನರಮೇಧ ವೇನೂ ಇಲ್ಲಿ ನಡೆದಿಲ್ಲ. ಇಲ್ಲಿ ನಡೆದಿರುವುದು ಬಿಡಿ ಬಿಡಿ ಹತ್ಯೆಗಳು. ವಲಸೆಯೂ ಅಷ್ಟೇ. ಒಮ್ಮೆಲೇ ಸಾಮೂಹಿಕ ವಲಸೆ ನಡೆದಿಲ್ಲ. ವಲಸೆ ನಡೆಯುತ್ತಲೇ ಬಂತು. ಅಂದಹಾಗೆ,

ಈ ಪಂಡಿತರ ಹತ್ಯೆ ಮತ್ತು ವಲಸೆ ನಡೆಯುತ್ತಿರುವಾಗಲೂ ವಾಜಪೇಯಿ ಮತ್ತು ಅಡ್ವಾಣಿ ನೇತೃತ್ವದ ಬಿಜೆಪಿ ಗಾಢ ಮೌನಕ್ಕೆ ಜಾರಿತ್ತು. ಕನಿಷ್ಠ ನ್ಯಾಶನಲ್ ಫ್ರಂಟ್ ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಂಡು ಆಕ್ಷೇಪ ವ್ಯಕ್ತಪಡಿಸುವುದಕ್ಕೂ ಅದು ಮುಂದಾಗಲಿಲ್ಲ. ಜಗ್ಮೋಹನ್‌ರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆಯೂ ಅದು ವಿಪಿ ಸಿಂಗ್ ಸರ್ಕಾರದ ಮೇಲೆ ಒತ್ತಡ ಹೇರಲಿಲ್ಲ. ಗೃಹ ಸಚಿವ ಮುಫ್ತಿ ಮುಹಮ್ಮದ್ ಸಈದ್‌ರ ರಾಜಿ ನಾಮೆಗೂ ಒತ್ತಾಯಿಸಲಿಲ್ಲ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಜಗ್ಮೋಹನ್‌ರನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಂಡಿತಲ್ಲದೇ ಅವರು 3 ಬಾರಿ ಲೋಕಸಭೆಗೆ ಆಯ್ಕೆಯಾದರು ಮತ್ತು ವಾಜಪೇಯಿ ಸರ್ಕಾರದಲ್ಲಿ ಅವರು ಸಚಿವರಾಗಿಯೂ ಗೌರವಿಸಲ್ಪಟ್ಟರು. ಇಷ್ಟೆಲ್ಲಾ ಇದ್ದೂ ಜಗ್ಮೋಹನ್ ಆಗಲಿ ಬಿಜೆಪಿಯಾಗಲಿ ಪಂಡಿತರ ಹತ್ಯೆ ಮತ್ತು ವಲಸೆಗೆ ಜವಾಬ್ದಾರಿ ಅಲ್ಲ ಎಂದಾದರೆ, ಮತ್ತೇಕೆ ನೆಹರೂ, ಇಂದಿರಾ, ರಾಜೀವ್, ಮನ್‌ಮೋಹನ್ ಸಿಂಗ್‌ರನ್ನು ಆಯಾ ಕಾಲದ ಸಮಸ್ಯೆಗಳಿಗೆ ಜವಾಬ್ದಾರರನ್ನಾಗಿ ಮಾಡಬೇಕು? ದೇಶ ವಿಭಜನೆಗೆ ಗಾಂಧಿ-ನೆಹರೂರನ್ನು ಯಾಕೆ ಹೊಣೆಗಾರರನ್ನಾಗಿ ಮಾಡಬೇಕು? ಪಂಡಿತರ ಮೇಲೆ ದೌರ್ಜನ್ಯ ತೀವ್ರವಾದದ್ದೇ ಜಗ್ಮೋಹನ್ ರಾಜ್ಯಪಾಲರಾದ ಬಳಿಕ. ಸಾಮೂಹಿಕ ವಲಸೆಯೂ ಅವರ ಕಾಲದಲ್ಲೇ ನಡೆದಿತ್ತು. ಹೀಗಿದ್ದೂ ಇವರು ಜವಾಬ್ದಾರಲ್ಲದಿದ್ದರೆ ಇನ್ನಾರು ಜವಾಬ್ದಾರರು? ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರವಿತ್ತು. ಕನಿಷ್ಠ ತನ್ನ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊAಡಿದ್ದರೆ ಬಿಜೆಪಿಯನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಬಹುದಿತ್ತು. ಆದರೆ ಅದು ಹಾಗೆ ಮಾಡಿಯೇ ಇಲ್ಲ ಎಂದು ಮಾತ್ರವಲ್ಲ ಪಂಡಿತರ ಸಮಸ್ಯೆಯನ್ನು ಕೆಟ್ಟದಾಗಿ ನಿಭಾಯಿಸಿದ ಜಗ್ಮೋಹನ್‌ರನ್ನೇ ಅದು ಸಚಿವರಾಗಿ ಗೌರವಿಸಿತು. ಇವೆಲ್ಲ ಏ ನು? ಒಂದು ವೇಳೆ ಆರ್ಟಿಕಲ್ 370 ಈ ಹತ್ಯೆ ಮತ್ತು ವಲಸೆಗೆ ಕಾರಣ ಎಂದಾದರೆ, ಗುಜರಾತ್ ಹತ್ಯಾಕಾಂಡ, ಭಾಗಲ್ಪುರ್, ನೆಲ್ಲಿ, ಸಿಖ್ ನರಮೇಧ, ಮುಝ್ಝಫರ್ ನಗರ್ ಹತ್ಯಾಕಾಂಡಗಳಿಗೆಲ್ಲ ಯಾವ ಆರ್ಟಿಕಲ್ ಕಾರಣ? ಅಲ್ಲೇನು ಆರ್ಟಿಕಲ್ 370 ಜಾರಿಯ ಲ್ಲಿತ್ತಾ? ಅಷ್ಟಕ್ಕೂ,

ಆರ್ಟಿಕಲ್ 370 ಎಂಬುದು ಹತ್ಯಾಕಾಂಡಕ್ಕೆ ಲೈಸನ್ಸ್ ಒದಗಿಸುವ ಪರಿಚ್ಛೇದ ಅಲ್ಲ. ಬ್ರಿಟಿಷ್ ಕಾಲದಲ್ಲಿ ದೇಶೀಯ ರಾಜರಿಗಿದ್ದ ಒಳಾಡಳಿತ ಅಧಿಕಾರವನ್ನು ಹಾಗೆಯೇ ಉಳಿಸುವ ಒಂದು ವ್ಯವಸ್ಥೆ ಅಷ್ಟೇ. ಇದರ ಪ್ರಕಾರ, ವಿದೇಶಾಂಗ, ರಕ್ಷಣೆ ಇತ್ಯಾದಿ ಹೊಣೆಗಾರಿಕೆಗಳು ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರು ತ್ತದೆ. ದೇಶೀಯ ರಾಜರಿಗಿದ್ದ ಒಳಾಡಳಿತದ ಅಧಿಕಾರವನ್ನು ಪೂರ್ತಿಯಾಗಿ ಆ ರಾಜ್ಯದ ಮುಖ್ಯಮಂತ್ರಿಗೆ ವಹಿಸುವುದಷ್ಟೇ ಇದರ ಉz್ದೆÃಶ. ಹಾಗಂತ, ಕಾಶ್ಮೀರದ ಈ ಆರ್ಟಿಕಲ್ 370ಕ್ಕೆ ಕಾರಣ ಅಂದಿನ ರಾಜ ರಾಜಾ ಹರಿಸಿಂಗ್. ಭಾರತದೊಂದಿಗೆ ಸೇರಿಕೊಳ್ಳುವುದಕ್ಕೆ ರಾಜಾ ಹರಿಸಿಂಗ್ ವಿಧಿಸಿದ ಷರತ್ತೇ ಈ ಆರ್ಟಿಕಲ್ 370. 1990ರ ವರೆಗೆ ಕಾಶ್ಮೀರಿ ಪಂಡಿತರು ಈ ವಿಶೇಷಾಧಿಕಾರವನ್ನು ಅನುಭವಿಸುತ್ತಾ ಬಂದಿದ್ದಾರೆ ಮತ್ತು ಅಲ್ಲಿವರೆಗೆ ಆರ್ಟಿಕಲ್ 370ಕ್ಕೆ ಯಾವ ಆಕ್ಷೇಪವ ನ್ನೂ ಅವರು ವ್ಯಕ್ತಪಡಿಸಿಲ್ಲ ಎಂಬುದೂ ಗಮನಾರ್ಹ. ಹೀಗಿರುತ್ತಾ ಆರ್ಟಿಕಲ್ 370ರ ಮೇಲೆ ಕಾಶ್ಮೀರಿ ಪಂಡಿತರ ಹತ್ಯೆ-ವಲಸೆಯ ಹೊಣೆಯನ್ನು ವಹಿಸಿ ತಪ್ಪಿಸಿಕೊಳ್ಳುವು ದನ್ನು ಯಾರು ಒಪ್ಪಿಕೊಳ್ಳುತ್ತಾರೆ?

ಸಂಖ್ಯೆ ಎರಡು: ಈ ಪ್ರಶ್ನೆಗೆ ಈಗಾಗಲೇ ಸಂಖ್ಯೆ ಒಂದರ ಪ್ರಶ್ನೆಗೆ ನೀಡಿದ ಉತ್ತರದ ವೇಳೆ ನೀಡಲಾಗಿದೆ. ಕಾಶ್ಮೀರದ ಪ್ರತ್ಯೇಕತಾವಾದಿಗಳ ಬಂದೂಕು ಪಂಡಿತರ ವಿರುದ್ಧ ತಿರುಗಿದ್ದೇ ಗವ್ಕಡಾಲ್ ಹತ್ಯಾಕಾಂಡದ ಬಳಿಕ. ಆ ಹತ್ಯಾಕಾಂಡ ನಡೆಸಿದ ಸಿಆರ್‌ಪಿಎಫ್ ಯೋಧರ ಪೈಕಿ ಒಬ್ಬನೇ ಒಬ್ಬನ ಮೇಲೆ ಈವರೆಗೂ ಕ್ರಮ ಕೈಗೊಳ್ಳಲಾಗಿಲ್ಲ. ಸರ್ಕಾರ ತನಿಖೆಗೂ ಆದೇಶಿ ಸಿಲ್ಲ. ಅಲ್ಲದೆ, ಹತ್ಯಾಕಾಂಡ ನಡೆದು 15 ವರ್ಷಗಳ ಬಳಿಕ ಇಡೀ ಪ್ರಕರಣವನ್ನೇ ಕೊನೆಗೊಳಿಸಲಾಯಿತು. ಹತ್ಯಾಕಾಂಡದಲ್ಲಿ ಭಾಗಿಯಾದವರು ಪತ್ತೆಯಾಗಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸ ಲಾಯಿತು. ಅಂದಹಾಗೆ, ಗೋಧ್ರೋತ್ತರ ಹತ್ಯಾಕಾಂಡಕ್ಕೆ ಗೋಧ್ರ ರೈಲು ದಹನವನ್ನು ತೋರಿಸುವಂತೆಯೇ ಕಾಶ್ಮೀರಿ ಪಂಡಿತರ ಸಮಸ್ಯೆಗೆ ಗವ್ಕಡಾಲ್ ಹತ್ಯಾಕಾಂಡವನ್ನೂ ತೋರಿಸುವವರಿದ್ದಾರೆ.

ಸಂಖ್ಯೆ ಮೂರು: ಇದು ಇನ್ನೊಂದು ಪರಮ ಸುಳ್ಳು. 1981ರ ಸರ್ಕಾರಿ ಜನಗಣತಿ ಪ್ರಕಾರ, ಕಾಶ್ಮೀರದಲ್ಲಿದ್ದ ಪಂಡಿತರ ಸಂಖ್ಯೆ 1,24,078. ಈ ಜನಸಂಖ್ಯೆ 1990ಕ್ಕಾಗುವಾಗ ಒಂದೂವರೆ ಲಕ್ಷ ಎಂದಿಟ್ಟುಕೊAಡರೂ 5 ಲಕ್ಷಕ್ಕೆ ಇನ್ನೂ ಮೂರೂವರೆ ಲಕ್ಷಗಳ ಕೊರತೆ ಎದುರಾಗುತ್ತದೆ. ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯು ಕೊಟ್ಟಿರುವ ಅಂಕಿ-ಅಂಶಗಳ ಪ್ರಕಾರ, 1990ರಲ್ಲಿ 399 ಪಂಡಿತರ ಹತ್ಯೆಯಾಗಿದೆ. ಹೀಗಿರುವಾಗ 5 ಲಕ್ಷ ಪಂಡಿತರ ಹತ್ಯೆಯೆಂದರೆ ಏನು? ಟಿಪ್ಪು ಸುಲ್ತಾನರ ಬಗ್ಗೆಯೂ ಇಂಥದ್ದೇ ಸುಳ್ಳನ್ನು ಆಗಾಗ ಹರಡಲಾಗುತ್ತಾ ಇದೆ. ಕೊಡಗಿನಲ್ಲಿ ಟಿಪ್ಪು ಕೊಂದಿರುವರೆಂದು ನೀಡಲಾಗುವ ಸಂಖ್ಯೆಯು ವಾಸ್ತವದಲ್ಲಿ ಆಗಿನ ಕಾಲದಲ್ಲಿ ಕೊಡಗಿನಲ್ಲಿ ಅದರ ಕಾಲಂಶ ಜನಸಂಖ್ಯೆಯೂ ಇದ್ದಿರಲಿಲ್ಲ ಎಂಬ ಮಾಹಿತಿಗಳಿವೆ. ಹಾಗಂತ, 399 ಪಂಡಿತರ ಹತ್ಯೆಯನ್ನು ನಾವು ಗೌಣವಾಗಿ ಕಾಣಬೇಕಿಲ್ಲ. ಓರ್ವನ ಹತ್ಯೆಯು ಇಡೀ ಮಾನವ ಕೋಟಿಯನ್ನೇ ಕೊಂದ ಪಾಪಕ್ಕೆ ಸಮ ಎಂಬುದೇ ಸಾರ್ವಕಾಲಿಕ ಸತ್ಯ.

ಸಂಖ್ಯೆ ನಾಲ್ಕು: ಗೋಧ್ರಾ ರೈಲಿನಲ್ಲಿ 59 ಕರಸೇವಕರು ಜೀವಂತ ದಹನವಾದ ಬಳಿಕ 2002 ಫೆಬ್ರವರಿ 28ರಂದು ಗುಲ್ಬರ್ಗ್ ಸೊಸೈಟಿ ಎಂಬ ಕಟ್ಟಡಕ್ಕೆ ದಂಗೆಕೋರರು ಬೆಂಕಿ ಹಚ್ಚಿ 69 ಮಂದಿಯನ್ನು ಸಜೀವ ದಹಿಸುತ್ತಾರೆ. ಈ ಘಟನೆ ಯಲ್ಲಿ ಫಾರ್ಸಿ ಕುಟುಂಬವೊAದರ 10ರ ಹರೆಯದ ಮಗ ಅಝರ್ ಮೋದಿ ಕಾಣೆಯಾಗುತ್ತಾನೆ. ಇದೇ ಸತ್ಯ ಘಟನೆಯನ್ನು ಆಧರಿಸಿ ರಾಹುಲ್ ಧೋಳಕಿಯ ಎಂಬವರು ಫರ್ಝಾನಿಯಾ ಎಂಬ ಸಿನಿಮಾ ನಿರ್ಮಾಣಕ್ಕಿಳಿಯುತ್ತಾರೆ.

ನಸೀರುದ್ದೀನ್ ಶಾ ಮತ್ತು ಸಾರಿಕಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ಆ ಸಿನಿಮಾ 2007 ಜನವರಿ 26ರಂದು ತೆರೆ ಕಾಣುತ್ತದೆ. ಆದರೆ ಗುಜರಾತ್‌ನಲ್ಲಿ ಒಂದೇ ಒಂದು ಪ್ರದರ್ಶನ ಕಾಣುವುದಕ್ಕೂ ಈ ಸಿನಿಮಾಕ್ಕೆ ಸಾಧ್ಯವಾಗುವುದಿಲ್ಲ. ಗುಜರಾತ್‌ನ ಯಾವ ಸಿನಿಮಾ ಮಂದಿರದಲ್ಲೂ ಈ ಸಿನಿಮಾವನ್ನು ಪ್ರದರ್ಶಿಸಬಾರದೆಂದು ಸಂಘಪರಿವಾರ ಬೆದರಿಕೆ ಹಾಕುತ್ತದೆ. ರಾಹುಲ್ ದೋಳಕಿಯರಿಗೂ ಜೀವಬೆದರಿಕೆ ಹೋಗುತ್ತದೆ. ಆದರೆ ಇದೀಗ ಅದೇ ಗುಜರಾತ್ ಸರ್ಕಾರ ದ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿದೆ. ಅದು ಮಾತ್ರವಲ್ಲ, ಕರ್ನಾಟಕ, ಮಧ್ಯಪ್ರದೇಶ, ಹರ್ಯಾಣ, ಬಿಹಾರ ಸರ್ಕಾರಗಳೂ ತೆರಿಗೆ ವಿನಾಯಿತಿಯನ್ನು ಘೋಷಿಸಿವೆ. ದ್ವಂದ್ವ ಇರುವುದೇ ಇಲ್ಲಿ. ಗುಜರಾತ್ ಹತ್ಯಾಕಾಂಡ ಆಧಾರಿತ ಸಿನಿಮಾಕ್ಕೆ ತಡೆ ಒಡ್ಡುವ ಗುಜರಾತ್ ಸರ್ಕಾರ, ದ ಕಾಶ್ಮೀರ್ ಫೈಲ್ಸ್ಗೆ ತೆರಿಗೆ ವಿನಾಯಿತಿ ಘೋಷಿಸಿದ್ದೇಕೆ? ಅಷ್ಟಕ್ಕೂ, ಫರ್ಝಾನಿಯಾ ಸಿನಿಮಾಕ್ಕೆ ತಡೆ ಒಡ್ಡುವಾಗ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದುದು ನರೇಂದ್ರ ಮೋದಿ ಎಂಬುದು ಗಮನಾರ್ಹ. ಅಂದಹಾಗೆ,

ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಹೊಣೆಯಿಂದ ಬಿಜೆಪಿ ಮತ್ತು ಅಂದಿನ ರಾಜ್ಯಪಾಲ ಜಗ್ಮೋಹನ್ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಒಂದು ರೀತಿಯಲ್ಲಿ, ದ ಕಾಶ್ಮೀರಿ ಫೈಲ್ಸ್ ಬಿಜೆಪಿಯ ಇನ್ನೊಂದು ಮುಖವನ್ನು ಅನಾವರಣಗೊಳಿಸಿದ ಸಿನಿಮಾ. ಆ ಕಾರಣಕ್ಕಾಗಿ ಚಿತ್ರ ನಿರ್ದೇಶಕ ಅಗ್ನಿಹೋತ್ರಿಗೆ ಧನ್ಯವಾದ ಸಲ್ಲಿಸಬೇಕು.