ದಿ ಕಾಶ್ಮೀರ್ ಫೈಲ್ಸ್: ಇತಿಹಾಸ ಮತ್ತು ವಾಸ್ತವಗಳ ಒಂದು ಅವಲೋಕನ

0
257

ಲೇಖಕರು: ವೆಂಕಟೇಶ ಈಡಿಗರ, ರಾಣೇಬೆನ್ನೂರು

ಸಮಾಜದ ಪ್ರಗತಿಗಾಗಿ ಇತಿಹಾಸದಿಂದ ಆಯ್ದುಕೊಂಡ ಯಾವುದೇ ವಿಷಯ ವಸ್ತುವು ಜೀವನ ಪ್ರಗತಿಗೆ ಕಾರಣವಾಗಬೇಕು. ಕ್ರೌರ್ಯ ಎಲ್ಲೇ ನಡೆಯಲಿˌ ಯಾರೇ ನಡೆಸಲಿ ಅದು ಅಕ್ಷಮ್ಯ ಅಪರಾಧ. ಪ್ರತಿಯೊಬ್ಬರ ಜೀವವೂ ಅಮೂಲ್ಯವಾದುದು. ಆ ಜೀವಗಳಿಗೆ ಬೆಲೆ ಕಟ್ಟಲಾಗದು.

1990 ಜನವರಿ 04 ರಂದು ನಡೆದ ಕಾಶ್ಮೀರಿ ಪಂಡಿತರ ಹತ್ಯೆಯೂ ಜನರ ಮನಕಲಕುವಂತ ದುರ್ಘಟನೆ. ಅಮಾಯಕ ಜೀವಗಳನ್ನು ಕುರಿ ಕೋಳಿಯಂತೆ ಅಮಾನುಷವಾಗಿ ಕೊಂದು ಹಾಕಿದ್ದು ನಾಗರೀಕ ಸಮಾಜ ಮೆಚ್ಚುವಂತದ್ದಲ್ಲ. ಹಾಗಾದರೆ ಈ ಹತ್ಯಾಕಾಂಡವನ್ನು ಮಾಡಿದ್ದು ಯಾರು? ಯಾಕೆ? ಕೇವಲ ಕಾಶ್ಮೀರಿ ಪಂಡಿತರ ಕೊಲೆಯಾಯಿತೆ? ಅಥವಾ ಉಳಿದ ಇತರ ಜನಾಂಗಗಳ ಕೊಲೆಯೂ ನಡೆಯಿತೆ? ಇಂತಹ ಘನಘೋರ ನರಮೇಧ ಆಗುವಾಗ ಜನರನ್ನು ರಕ್ಷಿಸಬೇಕಾದ ಸರಕಾರ ಏನು ಮಾಡುತ್ತಿತ್ತು? ತಡೆಗಟ್ಟಲು ಸಾಧ್ಯವಾಗಲಿಲ್ಲ ಏಕೆ? ಎಂಬ ಹತ್ತಾರು ಪ್ರಶ್ನೆಗಳು ಸಹಜವಾಗಿ ಸಾಮಾನ್ಯರನ್ನು ಕಾಡುತ್ತಿವೆ.

ಈಗಲೂ ಕೆಲವು ಜನರು 1990 ರ ದಶಕದಲ್ಲಿ ನಡೆದ ಈ ಅಮಾನುಷ ಘಟನೆಗೆ ಸಾಕ್ಷಿ ಎಂಬಂತೆ ಜೀವಂತವಾಗಿದ್ದಾರೆ. ಅವರಿಂದ ಈ ಎಲ್ಲಾ ಪ್ರಶ್ನೆಗಳಿಗೆ ಖಂಡಿತವಾಗಿಯೂ ಉತ್ತರ ಸಿಗಬಹುದು. ಅದನ್ನು ಸಾಮಾನ್ಯರ ಮುಂದಿಡುವ ಅಗತ್ಯವಿದೆ.

THE KASHMIR FILES ಚಲನಚಿತ್ರವು ಎಲ್ಲರ ಮನ ಮರುಗುವಂತೆ ಮಾಡಿರುವುದು ಘಟನೆಯ ನೈಜತೆಯನ್ನು ಎತ್ತಿ ಹಿಡಿಯುತ್ತದೆ. ಜನರು ತಮ್ಮ ಭಾವುಕತೆಯಿಂದ ಕಂಬನಿಯ ಮೂಲಕ ನೋವನ್ನು ಹೊರ ಹಾಕುತಿದ್ದಾರೆ. ತಪ್ಪಲ್ಲ. ಆದರೆ, ಚಿಲನಚಿತ್ರದಲ್ಲಿರುವ ಅಂಶಗಳೆಲ್ಲವೂ ಸತ್ಯವೇ? ಎಂಬ ಸತ್ಯಾಸತ್ಯೆಯನ್ನೂ ಅರಿಯುವ ಅಗತ್ಯವಿದೆ. ಕಾರಣ ಅಭಿನಯ ಎಂಬುದು ನೈಜ ಘಟನೆಯನ್ನು ವೈಭವೀಕರಿಸಿ ತೋರಿಸಿದಾಗ ಸಾಮಾನ್ಯವಾಗಿ ಭಾವತೀವ್ರತೆ ಉಂಟಾಗುವುದು ಸಹಜ. ಅದೇ ಘಟನೆ ಕಣ್ಣ ಮುಂದೆ ನಡೆದಾಗ ಯಾವ ಭಾವನೆಯು ಅಭಿವ್ಯಕ್ತವಾಗದು. ಒಟ್ಟಾರೆ ಇಂತಹ ದುರ್ಘಟನೆಗಳು ಎಲ್ಲೇ ನಡೆದರೂ ಮಾನವ ಸಮಾಜ ಒಪ್ಪಲಾರದು.

ಇಂತಹ ಘಟನೆಗಳು ಇದೆ ಮೊದಲೇನಲ್ಲ. ಮತ್ತು ಕೇವಲ ಒಂದೇ ಜನಾಂಗದ ಮೇಲೆ ನಡೆದ ಘಟನೆಗಳೇನಲ್ಲ. ಅನಾದಿ ಕಾಲದಿಂದಲೂ ದಮನಿತರನ್ನು, ದಲಿತರನ್ನು, ಮಹಿಳೆಯರನ್ನು ಯುವ ಪೀಳಿಗೆಯನ್ನು ಮತ್ತು ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ಬಲಿಷ್ಠರು ಶೋಷಣೆ ಮಾಡುತ್ತಲೇ ಬಂದಿದ್ದಾರೆ. ತಾವು ಶ್ರೇಷ್ಠರು, ಅಧಿಕಾರಸ್ತರು. ಬಲಿಷ್ಠರು ಪ್ರಜ್ಞಾವಂತರು ಎಂಬ ಅಹಮ್ಮಿನಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲರಲ್ಲದವರನ್ನು ಹಿಂಸಿಸುತ್ತಾˌ ದಂಡಿಸುತ್ತಾ ಕಠೋರವಾದ ಶಿಕ್ಷೆಯನ್ನು ನೀಡುತ್ತಾ ಪ್ರಾಣಿಗಳಿಗಿಂತಲೂ ಕಡೆಯಾಗಿ ನಡೆಸಿಕೊಂಡು ಬಂದರು ಕೆಲವರನ್ನು ಕೊಂದರು. ಅವುಗಳಿಗೂ ಮನಮಿಡಿಯಬೇಕಾದ ಅಗತ್ಯವಿದೆ. ಇಂತಹ ಘಟನೆಗಳು ಕೇವಲ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಅನೇಕ ದೇಶಗಳಲ್ಲಿಯೂ ನಡೆದಿವೆ ಹಾಗೆಂದ ಮಾತ್ರಕ್ಕೆ ಇದನ್ನು ಒಪ್ಪಿಕೊಳ್ಳಬೇಕೆಂದಲ್ಲ ಖಂಡಿತವಾಗಿಯೂ ಖಂಡಿಸಲೇಬೇಕು.

ಉದಾಹರಿಸಲು ಭಾರತದಲ್ಲಿಯೇ ಅತ್ಯಂತ ಘನಘೋರ ಘಟನೆಗಳು ನಡೆದಿವೆ. 1968 ರಲ್ಲಿ ತಮಿಳುನಾಡಿನ ಕಿಳ್ವೆನ್ಮಣಿ ನರಮೇಧದಲ್ಲಿ ಜಮೀನ್ದಾರರು ಕೃಷಿ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಕೂಲಿ ದರವನ್ನು ಹೆಚ್ಚಿಸಿ ಎಂದು ಕೇಳಿದ 44 ದಲಿತ ಕೃಷಿ ಕಾರ್ಮಿಕರನ್ನು ಕೊಂದರು. ಗುಡಿಸಲುಗಳಿಗೆ ಬೆಂಕಿ ಇಟ್ಟರು. 44 ಜನರಲ್ಲಿ 23 ಮಕ್ಕಳು. 18 ಹೆಣ್ಣು ಜೀವಗಳು ಇದ್ದವು.ಎಂಬುದು ಮನ ಕಲಕುವ ಸಂಗತಿ. ಇದಕ್ಕೂ ಕಣ್ಣೀರು ಸುರಿಸುವ ಅಗತ್ಯವಿದೆˌ. 1984 ರಲ್ಲಿ ಆಪರೇಷನ್ ಬ್ಲೂಸ್ಟಾರ್ ನಡೆಸಿದ ಪರಿಣಾಮ ಅಂದಿನ ಪ್ರಧಾನಿ ಇಂದಿರಾಗಾಂದಿ ತಮ್ಮ ಅಂಗರಕ್ಷಕರಿಂದಲೇ ಹತರಾದರು. ಈ ಕಾರಣಕ್ಕಾಗಿ ಸುಮಾರು 2800 ಸಿಖ್‌ರು ಬಲಿಯಾದರು.
1991ರ ಚುಂಡೂರು ಘಟನೆಯಲ್ಲಿ ಸಿನಿಮಾ ಮಂದಿರದಲ್ಲಿ ದಲಿತ ತರುಣನೊಬ್ಬನ ಕಾಲು ರೆಡ್ಡಿ ಜಾತಿಯ ವ್ಯಕ್ತಿಗೆ ಬಡಿದ ಪರಿಣಾಮ 12 ಜನ ದಲಿತರ ಮಾರಣ ಹೋಮ ನಡೆಯಿತು. 1996ರ ಬಥಾನಿ ಘಟನೆಯಲ್ಲಿ ಬಲಿಷ್ಠ ಜಾತಿಯ ರಣವೀರಸೇನ 21 ಮಂದಿ ದಲಿತರನ್ನು ಬಲಿ ಪಡೆದ. 1997ರ ಲಕ್ಷ್ಮಣಪುರ ಬಾಥೆ ಘಟನೆಯಲ್ಲಿ ಬಲ್ಲಿಷ್ಠ ಜಾತಿಯಿಂದ 58 ಮಂದಿ ದಲಿತರನ್ನು ಗುಂಡಿಟ್ಟು ಕೊಲ್ಲಲಾಯಿತು. ಈ ಎಲ್ಲಾ ಜೀವಿಗಳಿಗೆ ಬೆಲೆ ಇಲ್ಲವೆ?.

2003ರ ಫೆಬ್ರವರಿ 27ರಂದು ಗುಜರಾತಿನ ಗೋದ್ರಾದ ಸಬರಮತಿ ಎಕ್ಷ್ ಪ್ರೆಸ್ ರೈಲು ಗಾಡಿಗೆ ಕರ ಸೇವಕರಿಂದ ಬೆಂಕಿ ಇಟ್ಟ ಗೋದ್ರಾ ಹತ್ಯಾಕಾಂಡದ ಪರಿಣಾಮ 59 ಮಂದಿ ಆಹುತಿಯಾದರು. ಕಂಬಾಲದ ಘಟನೆ. ಹೀಗೆ ಇಂದಿಗೂ ದಿನಂಪ್ರತಿ ದಮನಿತರು ಬಲಿಷ್ಠ ಸಮುದಾಯಗಳಿಂದ ಅತ್ಯಾಚಾರˌ, ಮೋಸˌ ದರೋಡೆˌ ಕೊಲೆಯಂತಹ ನೂರಾರು ಘಟನೆಗಳು ಯಾವುದೇ ಮುಲಾಜಿಲ್ಲದೆ ನಡೆಯುತ್ತಿವೆ. ನರಕ ಯಾತನೆಯನ್ನು ಸೃಷ್ಠಿಸಿವೆ. ಈ ಜೀವಗಳಿಗೆ ಮರುಗುವ ಮನಗಳಿಲ್ಲವೆ.? ಕಣ್ಣೀರು ಸುರಿಸುವವವರಿಲ್ಲವೆ?
ಹೀಗೆ ಜಾತಿಯ ಬಲ ಉಳ್ಳವರು, ಹಣದ ಸೊಕ್ಕಿನವರು, ಧರ್ಮದುರಂಧರರು, ಪಿತೃ ಪ್ರಧಾನ ಪರಿಪಾಲಕರು, ಪೋಲೀಸರು ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಿರುಕುಳದಿಂದ ಪ್ರತಿ ದಿನವೂ ಸಾವಿರಾರು ಜನ ಶೋಷಣೆಗೆ ಬಲಿಯಾಗುತ್ತಿದ್ದಾರೆ. ಇವರ ಜೀವಗಳಿಗೆ ಬೆಲೆ ಇಲ್ಲವೆ?

ಸಾಮ್ರಾಜ್ಯ ವಿಸ್ತರಣೆಯ ದಾವಂತದಲ್ಲಿ ದೆಶ ದೆಶಗಳ ಮಧ್ಯೆ ನಡೆಯುತ್ತಿರುವ ಇಂದಿನ ಯುದ್ದವನ್ನೊಮ್ಮೆ ಗಮನಿಸಿ. ಯಾವ ಕಾರಣಕ್ಕಾಗಿ ಈ ನರಮೇಧ? ಯಾರ ಉದ್ದಾರಕ್ಕಾಗಿ ಈ ಹಠ? ಇದರಿಂದ ಯಾರಿಗೆ ಲಾಭ? ಕೇವಲ ತಮ್ಮ ಅಸ್ತಿತ್ವದ ಸಲುವಾಗಿ ಅಮಾಯಕ ಜೀವಗಳನ್ನು ಬಲಿಪಡೆಯುವುದು ಎಷ್ಟು ಸರಿ ? ತ್ವರಿತಗತಿಯ ಜೀವನ ಶೈಲಿಯ ಇಂದಿನ ಸಾಮಾಜಿಕ ಜೀವನದಲ್ಲಿ ರಕ್ಷಣೆಯ ಕಡೆಗೆˌ ಪ್ರಗತಿಯ ಕಡೆಗೆˌ ಶಾಂತಿ ಸ್ಥಾಪನೆಯ ಕಡೆಗೆ ಗಮನ ಹರಿಸುವ ಅಗತ್ಯವಿದೆ. ಹಾಗಾಗಿ

ಇತಿಹಾಸದಲ್ಲಿನ ಘಟನೆಗಳು ವಾಸ್ತವ ಜೀವನದ ಉದ್ದಾರಕ್ಕೆ ಮತ್ತು ಭವಿಷ್ಯದ ನೆಮ್ಮದಿಗೆ ಕಾರಣವಾಗಬೇಕೆ ಹೊರತು. ಅಧಃಪತನದ ಕಡೆಗೆˌ ಶಾಂತಿ ಭಂಗದ ಕಡೆಗೆ ಅಥವಾ ಸಮುದಾಯಗಳ ಮಧ್ಯ ಧ್ವೇಷ ಹುಟ್ಟಿಸುವ ಕಡೆಗೆ ನಮ್ಮನ್ನು ಎಳೆದೊಯ್ಯಬಾರದು. ಇತಿಹಾಸದಿಂದ ಆಯ್ದುಕೊಂಡ ಯಾವುದೇ ಯೋಜನಾ ವಸ್ತುವು ಸರ್ವರಿಗೂ ಹಿತವೆನಿಸಬೇಕು. ಸರ್ವರನ್ನು ಒಳಗೊಳ್ಳಬೇಕು. ಮತ್ತು ಸರ್ವರ ನೆಮ್ಮದಿಗೆ ಉದ್ದಾರಕ್ಕೆ ಕಾರಣವಾಗಬೇಕು.