ಮುಸ್ಲಿಮರು ಒಗ್ಗಟಾಗಿರುವುದು ಇಸ್ಲಾಮಿಕ್ ರಾಷ್ಟ್ರದ ಸ್ಥಾಪನೆಗಲ್ಲ, ಸಂವಿಧಾನದ ಉಳಿವಿಗಾಗಿ

0
1388

ಶಮೀರಾ ಜಹಾನ್

ಸಾಮಾಜಿಕ ಜಾಲತಾಣಗಳು ಜನರ ಹೃದಯಗಳನ್ನು ಜೋಡಿಸಲು ಪರಿಣಾಮಕಾರಿಯಾದ ಮಾಧ್ಯಮ. ಆದರೆ ಇಂದು ಪ್ರತಿಯೊಬ್ಬರೂ ತಮ್ಮ ಸ್ವಾರ್ಥಕ್ಕಾಗಿ, ರಾಜಕೀಯ ಲಾಭಕ್ಕಾಗಿ ಇದನ್ನು ಬಳಸುವ ಮೂಲಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಪ್ರಯತ್ನವನ್ನು ಮಾಡುತ್ತಿರುವುದು ಖೇದಕರ. ಇದೀಗ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ವಿರೋಧದ ಚರ್ಚೆಗಳು, ಕಾರ್ಯಕ್ರಮಗಳು ಕೋಮುದ್ರುವೀಕರಣಕ್ಕೆ ಕಾರಣವಾಗುತ್ತಿದೆ.

ಸಿ.ಎ.ಎ ವಿಚಾರದಲ್ಲಿ ಎಲ್ಲ ಮುಸ್ಲಿಮ್ ಸಂಘಟನೆಗಳು ಒಗ್ಗಟ್ಟಾಗಿವೆ..ಆದ್ದರಿಂದ ಹಿಂದುತ್ವಕ್ಕಾಗಿ /ಹಿಂದುಗಳ ರಕ್ಷಣೆಗಾಗಿ ಹಿಂದುಗಳು ಒಂದಾಗಬೇಕು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದಿಸಲಾಗುತ್ತಿದೆ. ಇತಿಹಾಸದ ದುರ್ವ್ಯಾಖ್ಯಾನ ಮಾಡಲಾಗುತ್ತಿದೆ. ಸಿ.ಎ.ಎ, ಎನ್.ಆರ್.ಸಿ, ಎನ್.ಪಿ.ಆರ್ ಗೆ ಸಂಬಂಧಿಸಿ ಮುಸ್ಲಿಮ್ ಸಂಘಟನೆಗಳು ಮಾತ್ರ ಒಗ್ಗಟ್ಟಾಗಿರುವುದಲ್ಲ. ಎಲ್ಲ ಸಮುದಾಯದವರೂ ಒಗ್ಗಟ್ಟಾಗಿದ್ದಾರೆ. ಮುಸ್ಲಿಮ್ ಸಂಘಟನೆಗಳು ಒಗ್ಗಟ್ಟಾಗಿರುವುದು ಇಸ್ಲಾಮಿಕ್ ರಾಷ್ಟ್ರ ನಿರ್ಮಾಣಕ್ಕಾಗಿಯೋ, ಕೇವಲ ಮುಸಲ್ಮಾನರ ರಕ್ಷಣೆಗಾಗಿಯೋ ಅಲ್ಲ. ಬದಲಾಗಿ ಸಂವಿಧಾನದ ರಕ್ಷಣೆಗಾಗಿ, ಜಾತ್ಯತೀತ ಭಾರತದ ಉಳಿವಿಗಾಗಿ, ದೇಶದ ಆರ್ಥಿಕತೆಯ ಮೇಲೆ ಉಂಟಾಗುವ ಭೀಕರ ಹೊಡೆತಕ್ಕಾಗಿ ಎಂಬುದನ್ನು ಮನವರಿಕೆ ಮಾಡಿಕೊಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ.