ಬಿಜೆಪಿ ಅಭ್ಯರ್ಥಿಯಿಂದ ಹಲ್ಲೆ: ಪ್ರಾಣ ಉಳಿಸಿಕೊಳ್ಳಲು 15 ಕಿ‌.ಮೀ ಕಾಡಿನೊಳಗೆ ಓಡಿದ ಗುಜರಾತ್ ಕಾಂಗ್ರೆಸ್ ಹಾಲಿ ಶಾಸಕ

0
160

ಸನ್ಮಾರ್ಗ ವಾರ್ತೆ

ಬನಸ್ಕಾಂತ: ಬಿಜೆಪಿ ಅಭ್ಯರ್ಥಿ ಲಡ್ಡು ಪರ್ಖಿ ತನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಗುಜರಾತ್ ಬನಸ್ಕಾಂತ ಜಿಲ್ಲೆಯ ಪರಿಶಿಷ್ಟ ವರ್ಗದ ಮೀಸಲು ದಂತ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕಾಂತಿಭಾಯ್ ಖಾರಾಡಿ ಆರೋಪಿಸಿದ್ದಾರೆ.

ಮತದಾರರನ್ನು ಭೇಟಿಯಾಗಲು ಹೋಗುತ್ತಿದ್ದ ವೇಳೆ ಕಾಂತಿ ಖಾರಾಡಿಯವರ ಮೇಲೆ ಬಿಜೆಪಿ ಅಭ್ಯರ್ಥಿ ಲಡ್ಡು ಪರ್ಖಿ ಹಾಗೂ ಆತನ ಸಹೋದರ ವದನ್ ಮತ್ತು ಎಲ್‍ಕೆ ಬರದ್ ಹಲ್ಲೆ ಮಾಡಿದ್ದಾರೆ.

ಬಾಮೋದರ ಚತುಷ್ಪಥ ಹೈವೆಯಲ್ಲಿ ಹೋಗುವಾಗ ಬಿಜೆಪಿ ಅಭ್ಯರ್ಥಿ ಮತ್ತು ಆತನ ಸಂಗಡಿಗರು ನಮ್ಮ ಕಾರನ್ನು ತಡೆದರು. ನಾವು ಹಿಂತಿರುಗಿ ಹೋಗಲು ಯತ್ನಿಸಿದಾಗ ನಮ್ಮ ಮೇಲೆ ಕತ್ತಿ ಸೇರಿದಂತೆ ಆಯುಧಗಳಿಂದ ಹಲ್ಲೆ ಮಾಡಿದರು ಎಂದು ಶಾಸಕ ಆರೋಪಿಸಿದ್ದಾರೆ.

ಘಟನೆ ದುರದೃಷ್ಟಕರವಾಗಿದ್ದು ಚುನಾವಣೆ ನಡೆಯುತ್ತಿರುವುದರಿಂದ ನಾನು ನನ್ನ ಪ್ರದೇಶಕ್ಕೆ ಹೋಗುತ್ತಿದ್ದೆ. ಹಲ್ಲೆಯ ಭೀತಿಯಿಂದಾಗಿ ಹಿಂತಿರುಗಿ ಹೋಗಲು ಯತ್ನಿಸಿದರೂ ನಮ್ಮ ಕಾರನ್ನು ಕೆಲವು ಕಾರುಗಳು ಹಿಂಬಾಲಿಸಿದವು. ದಂತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಡ್ಡು ಪರ್ಖಿ ಮತ್ತು ಇಬ್ಬರು ಆಯುಧಗಳನ್ನು ಹಿಡಿದುಕೊಂಡು ಬಂದಿದ್ದರು.  ಜೀವ ಉಳಿಸಿಕೊಳ್ಳಲು ನಾವು ಕಾರಿನಿಂದ ಇಳಿದು ಹತ್ತು-ಹದಿನೈದು ಕಿಲೋ ಮೀಟರ್ ದೂರದವರೆಗೆ ಕಾಡಿನಲ್ಲಿ ಓಡಿದೆವು.  ಎರಡು ಗಂಟೆಗಳ ಕಾಲ ಕಾಡಿನಲ್ಲಿ ಅಡಗಿದ್ದೆವು ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳಿದ್ದಾರೆ‌.

ಸೋಲಿನ ಭೀತಿಯಿಂದ ಬಿಜೆಪಿ ಗೂಂಡಾಗಳು ಕಾಂತಿಭಾಯ್ ಅವರ ಮೇಲೆ ಹಲ್ಲೆ ನಡೆಸಿದ್ದು, ಖಾರಾಡಿಯವರನ್ನು ಅಪಹರಿಸಲಾಗಿದೆ  ಎಂದು  ರವಿವಾರ ತಡರಾತ್ರಿ ಕಾಂಗ್ರೆಸ್ ನಾಯಕರು  ಆರೋಪಿಸಿದ್ದರು.