ಭೀತಿ ಎಂಬ ಲೋಕತಂತ್ರ

0
151

ರೈಹಾನ್.ವಿ.ಕೆ.

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಆ ರಾಜನಿಗೆ ಶಿಕಾರಿ ಮಾಡುವುದು ಎಂದರೆ ಬಹಳ ಇಷ್ಟ. ಹೀಗಿರಲು ಒಮ್ಮೆ ರಾಜನು ಬೇಟೆಯಾಡಲೆಂದು ಕಾಡಿಗೆ ಹೊರಡುತ್ತಾನೆ. ಕಾಡಿನಲ್ಲಿ ಅದ್ಬುತ ದೃಶ್ಯವನ್ನು ಕಂಡು ರಾಜನು ಬೆಚ್ಚಿ ಬೀಳುತ್ತಾನೆ. ಅದೇನೆಂದರೆ ಅಲ್ಲಿದ್ದ ಎಲ್ಲ ಮರಗಳಲ್ಲಿ ಬಾಣವು ನಾಟಿರುತ್ತದೆ. ಮಾತ್ರವಲ್ಲ ಪ್ರತಿಯೊಂದು ಮರದಲ್ಲಿ ಚಿಕ್ಕದಾದ ವೃತ್ತದ ಮಧ್ಯೆ ಬಾಣ ನಾಟಿರುವುದಾಗಿ ಕಂಡು ಬೆಚ್ಚಿ ಬೀಳುತ್ತಾನೆ. ಈ ಆಶ್ಚರ್ಯಕರ ಸಂಗತಿಯು ಕ್ರಮೇಣ ಭೀತಿಯಾಗಿ ಬದಲಾಗುತ್ತದೆ. ಯಾರಿರಬಹುದು ಈ ವೀರ. ಬಿಲ್ಲಾಳಿವೀರ??

ಖಂಡಿತಾ ಈ ವೀರ ನನ್ನನ್ನು ಸೋಲಿಸಬಹುದು ಎಂಬ ನಿರಾಶೆ, ಭಯ ಆವರಿಸತೊಡಗುತ್ತದೆ. ಈ ಆಲೋಚನೆ ರಾಜನನ್ನು ಎಲ್ಲೆಲ್ಲೋ ಕೊಂಡೊಯ್ಯುತ್ತದೆ. ಈ ವೀರ ನನ್ನ ಸಾಮ್ರಾಜ್ಯವನ್ನು ವಶೀಕರಿಸಿ ಬುಡಮೇಲು ಮಾಡಬಹುದು ಎಂದು ಆಲೋಚಿಸುತ್ತಾ ಅಸ್ವಸ್ಥನಾಗಿ ನಿದ್ದೆಯು ದೂರವಾಗುತ್ತದೆ. ಕ್ರಮೇಣ ಹಸಿವು ದೂರವಾಗುತ್ತದೆ. ಹಾಗೆ ನಿಶ್ಯಕ್ತಿಯಿಂದ ದಿನೇ ದಿನೇ ಕ್ಷೀಣಿಸುತ್ತಾ ಹೋಗುತ್ತಾನೆ.

ಊರಿಗೆ ಈ ಬಿಲ್ಲಾಳಿ ವೀರನನ್ನು ಹುಡುಕಿ ತರಲು ಭಟರನ್ನು ಕಳುಹಿಸಲಾಗುತ್ತದೆ. ಊರಿಡೀ ಹುಡುಕಾಡಿದರೂ ಈ ಬಿಲ್ಲುಗಾರ ಸಿಗಲಿಲ್ಲ. ಕೊನೆಗೆ ಒಂದು ಹತ್ತುವರ್ಷದ ಬಾಲಕ ಈ ಕೃತ್ಯ ಮಾಡಿದವನು ನಾನೆಂದು ಒಪ್ಪಿಕೊಳ್ಳುತ್ತಾನೆ. ಆಸ್ಥಾನವು ಆಶ್ಚರ್ಯ ಚಕಿತರಾಗಿ ಈ ಬಾಲಕನೆಡೆಗೆ ನೋಡಿದಾಗ ಹೇಳುತ್ತಾನೆ. ನಿಜವಾಗಿ ಮೊದಲು ಬಾಣ ಹೊಡೆದು ನಂತರ ಚಿಕ್ಕದಾದ ವೃತ್ತಾಕಾರ ಮಾಡಿದೆ.
ಭೀತಿಯನ್ನು ಪಸರಿಸುವುದು ಈಗ ಲೋಕತಂತ್ರ. ಭೀತಿಯನ್ನು ಮಾರಾಟ ಮಾಡುತ್ತಲಿದ್ದಾರೆ. ಭೀತಿಯು ಮನುಷ್ಯನನ್ನು ತಾನು ತನ್ನೆಡೆಗೇ ಮುದುಡಿ ಹೋಗುವಂತೆ ಮಾಡುತ್ತದೆ. ಆದ್ದರಿಂದ ಭೀತಿ ಪಸರಿಸುವುದರ ಬದಲಾಗಿ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಅನಾವಶ್ಯಕವಾಗಿ ಭಯ ಬೀತರಾಗುವುದಕ್ಕಿಂತ ಅದರ ಹಿಂದೆ ಯಾರಿದ್ದಾರೆ ಎಂಬ ಸತ್ಯಾಂಶವನ್ನು ಅರಿಯಲು ಪ್ರಯತ್ನಿಸಿದಾಗ ನಿಜಸ್ಥಿತಿ ಕಥೆಯಲ್ಲಿ ಹೇಳಿದಂತೆ ಅನಾವರಣಗೊಳ್ಳುತ್ತದೆ..

ಮುಸಲ್ಮಾನರನ್ನು ಅವಹೇಳನ ಮಾಡುವ ವೀಡಿಯೊಗಳು ಇದ್ದಲ್ಲಿ ಅತೀ ಹೆಚ್ಚು ಪ್ರಚಾರ ನೀಡುವವರು ಇಂದು ಸಮುದಾಯದ ಜನರೇ ಆಗಿದ್ದಾರೆ. ಒಂದು ಕೊಲೆ ನಡೆದರೆ ಅದನ್ನು ಪ್ರಚಾರ ಮಾಡಿ ನಾವು ಸಾಧಿಸಿದ್ದಾದರೂ ಏನು?

ಇದು ಭೀತಿಯನ್ನು ಮಾರಾಟ ಮಾಡುವ ಒಂದು ಕುತಂತ್ರ. ಆದ್ದರಿಂದ ನಾವು ಆ ಕುತಂತ್ರಕ್ಕೆ ಬಲಿ ಬೀಳಬಾರದು. ಜನರ ಮಧ್ಯೆ ಭೀತಿಯ ಬದಲಾಗಿ ಧೈರ್ಯ ತುಂಬುವ ಕೆಲಸ ವ್ಯಾಪಕವಾಗಿ ನಡೆಯಬೇಕು. ಇತಿಹಾಸವನ್ನು ಅವಲೋಕಿಸಿದಾಗ ಅದೆಷ್ಟೋ ಬಲಾಢ್ಯರು ಗತಿಸಿ ಹೋಗಿದ್ದಾರೆ. ಅವರೆಲ್ಲ ಸಾಧಿಸಿದ್ದಾದರೂ ಏನು? ಖಂಡಿತಾ ಮಿಥ್ಯೆ ಸಾಯಲಿದೆ. ಮತ್ತು ಸತ್ಯಕ್ಕೆ ಸಾವಿಲ್ಲ. ಆದ್ದರಿಂದ ಯಾವುದನ್ನು ಪ್ರಚಾರ ಮಾಡಬೇಕೆನ್ನುವ ವಿವೇಕ ನಮ್ಮಲ್ಲಿರಬೇಕು.