ಬಡ್ಡಿ ಮತ್ತು ನಾವು

0
1857

ಎಂ.ಎಸ್.ಎ. ರಝಾಕ್


ಇಬ್ನು ಮಸ್‍ಊದ್(ರ) ಹೇಳುತ್ತಾರೆ, “ಬಡ್ಡಿ ತಿನ್ನುವವರನ್ನು ಮತ್ತು ಅದನ್ನು ತಿನ್ನಿಸು ವವರನ್ನು ಪ್ರವಾದಿವರ್ಯರು(ಸ) ಶಪಿಸಿರುತ್ತಾರೆ (ಮುಸ್ಲಿಮ್). ಅದರ ಈರ್ವರು ಸಾಕ್ಷಿಗಳನ್ನೂ ಅದನ್ನು ಬರೆಯುವವರನ್ನೂ ಶಪಿಸಿರುತ್ತಾರೆಂದು ತಿರ್ಮಿದಿ ಮತ್ತಿತರ ಗ್ರಂಥಗಳಲ್ಲಿಯೂ ಪ್ರಸ್ತಾಪಿಸಲಾಗಿದೆ.

ಶ್ರೀಮಂತನು ತನ್ನ ಹಣವನ್ನು ನೀಡಿ ಇನ್ನೊಬ್ಬರಿಂದ ಅದರ ಲಾಭ ಪಡೆಯುವುದು ಬಡ್ಡಿಯಾಗಿದೆ. ಬಡ್ಡಿಯನ್ನು ಕುರ್‍ಆನ್ ಬಹಳ ತೀವ್ರವಾಗಿ ಖಂಡಿಸಿದೆ. ನಿಷೇಧಿಸಿದೆ. ಬಡ್ಡಿ ವ್ಯವಹಾರ ಏಳು ಮಹಾಪಾಪಗಳಲ್ಲಿ ಒಂದು ಎಂದು ಇಸ್ಲಾಮ್ ಸಾರುತ್ತದೆ. ಈ ವಿನಾಶಕಾರಿ ಯಾದ ಬಡ್ಡಿ ಸೇವಿಸುವವನು ಇಹಲೋಕದಲ್ಲಿಯೇ ನಾಶದದಂಚಿಗೆ ತಳ್ಳಲ್ಪಡುವನು. ಪರಲೋಕ ದಲ್ಲಿಯೂ ಶಿಕ್ಷೆಗೆ ಗುರಿಯಾಗುವನು. ಬಡ್ಡಿ ವ್ಯವಹಾರದ ಚಟುವಟಿಕೆಯಲ್ಲಿ ಭಾಗಿಯಾಗುವ ಎಲ್ಲರನ್ನೂ ಅಲ್ಲಾಹನು ಶಪಿಸಿರುವನು ಎಂಬು ದನ್ನು ಮೇಲೆ ತಿಳಿಸಿದ ಹದೀಸ್ ಸ್ಪಷ್ಟಪಡಿಸುತ್ತಿದೆ.

ಬಡ್ಡಿಯು ಇತರರ ಪರಿಶ್ರಮವನ್ನು ಶೋಷಿಸು ವುದಾಗಿದೆ. ಬಡ್ಡಿ ವ್ಯವಹಾರವು ಸಮಾಜದಲ್ಲಿ ಭಾರೀ ವಿಪತ್ತು ಸೃಷ್ಟಿಸುತ್ತದೆ. ಆರ್ಥಿಕ, ಧಾರ್ಮಿಕ ಸಾಮಾಜಿಕ ಸಮಸ್ಯೆಗಳನ್ನು ಬಡ್ಡಿಯು ಸೃಷ್ಟಿಸುತ್ತದೆ. ಮೌಲಾನಾ ಅಬುಲ್ ಆಲಾ ಮೌದೂದಿಯವರ ಪ್ರಕಾರ ಬಡ್ಡಿಯು ಧಾರ್ಮಿಕ, ಆಧ್ಯಾತ್ಮಿಕ, ಆರ್ಥಿಕ, ಸಾಂಸ್ಕೃತಿಕ ಅಭಿವೃದ್ಧಿಗೆ ಧಕ್ಕೆಯುಂಟು ಮಾಡುತ್ತದೆ.

ಬಡ್ಡಿಯು ಜನರ ನಡುವೆ ಶತ್ರುತ್ವ, ಮನಸ್ತಾಪಕ್ಕೆ ಕಾರಣವಾಗುತ್ತದೆ. ಪರಸ್ಪರ ಸಹಕಾರ ಮನೋಭಾವವು ಇಲ್ಲವಾಗುತ್ತದೆ. ಮನುಷ್ಯನಲ್ಲಿ ಸ್ವಾರ್ಥತೆ ವೃದ್ಧಿಸಲು ಪ್ರೇರಕವಾಗುತ್ತದೆ. ಸುಖಲೋಲುಪತೆ, ಆಡಂಬರ ಪ್ರಿಯ ಧನಿಕರನ್ನು ಅದು ಸೃಷ್ಟಿಸುತ್ತದೆ. ಸಮಾಜದ ಬಡ ದುರ್ಬಲ ರನ್ನು ಹೆಚ್ಚು ಸಂಕಷ್ಟಕ್ಕೀಡು ಮಾಡುತ್ತದೆ. ಹಣದ ಅಗತ್ಯವಿರುವವನನ್ನು ಶೋಷಿಸುವ ಉಪಾಧಿಯಾಗಿದೆ ಬಡ್ಡಿ.

ದೇಶದ ಬಗ್ಗೆ ಹೇಳುವುದಾದರೆ ಹಲವು ಕಾಲನಿಗಳ ಉದ್ಭವಕ್ಕೆ ಕಾರಣವಾಗುತ್ತದೆ. ಜನ ಸಾಮಾನ್ಯರನ್ನು, ಶ್ರೀಮಂತರನ್ನು, ಮಧ್ಯಮ ವರ್ಗದವರನ್ನು ಬಡ್ಡಿಯು ಸಾಲದ ಉರುಳಲ್ಲಿ ಸಿಲುಕಿಸಿ ಕೊಲ್ಲುತ್ತದೆ. ಬಡ್ಡಿಗೆ ಬ್ಲೇಡ್ ಎಂಬ ಪದವನ್ನು ಬಳಸಲಾಗುತ್ತದೆ. ಮನುಷ್ಯರ ಜೀವಕ್ಕೆ ಕತ್ತಿಯಿಡುವಂತಹ ಹರಿತವಾದ ಬ್ಲೇಡ್ ಆಗಿದೆ ಇದು. ಮನುಷ್ಯನನ್ನು ಕೊಯ್ದು ಅವನ ಜೀವನವನ್ನೇ ನಿರ್ಮೂಲನ ಮಾಡುತ್ತದೆ.

ಸಂಪತ್ತು ಕೂಡಿಟ್ಟು ಶ್ರೀಮಂತರಾಗಬೇಕೆಂಬ ವ್ಯಾಮೋಹವು ಎಲ್ಲ ಮನುಷ್ಯರಿಗೂ ಸಾಮಾನ್ಯ ವಾಗಿದೆ. ಈ ವ್ಯಾಮೋಹ ಕೆಟ್ಟ ಬಯಕೆಯಗಿ ಬೆಳೆದು ಬಡ್ಡಿ ವ್ಯವಹಾರದತ್ತ ವಾಲುತ್ತದೆ. ಅದ ರೊಂದಿಗೆ ಸ್ವಾರ್ಥಿಯಾಗಿ, ಹಣದ, ಸಂಪತ್ತಿನ ಆರಾಧಕರಾಗಿ ಅವರು ಮಾರ್ಪಡುತ್ತಾರೆ. ಅವರ ಮನಸ್ಸು ಬಡ್ಡಿಯ ರೋಗಕ್ಕೆ ಈಡಾಗುತ್ತದೆ. ಸಾಮಾಜಿಕ ಜೀವನದಲ್ಲಿ ಬಡ್ಡಿಯನ್ನೇ ವ್ಯವಹಾರ ಮಾಡಿಕೊಂಡವರು ತೀರಾ ವಿರಳ.

ಆದರೆ ಬಡ್ಡಿಯ ವ್ಯವಹಾರ ನಡೆಸುವವರೊಂದಿಗೆ, ಹಣ ಸುಲಿಗೆ ಮಾಡುವವರೊಂದಿಗೆ ಸಾಲ ಪಡೆದು ವ್ಯವಹಾರವನ್ನು ಬೆಳೆಸಲು ನೋಡುತ್ತಾರೆ. ಬಳಿಕ ಆ ಸಾಲವನ್ನು ತೀರಿಸಲಾಗದೆ ಚಡಪಡಿಸಿ ದೊಡ್ಡ ಮೊತ್ತದ ಸಾಲಗಾರರಾಗಿ ರೂಪುಗೊಳ್ಳು ತ್ತಾರೆ. ಕೊನೆಗೆ ತನ್ನಲಿ ್ಲರುವುದನ್ನೆಲ್ಲವೂ ಮಾರಿದರೂ ಸಾಲ ತೀರಿಸಲಾಗದೆ ಮತ್ತೆ ಪುನಃ ಸಾಲ ಬಾಕಿಯುಳಿಯುವುದು. ಕೊನೆಗೆ ಕುಟುಂಬದ ಸಾಮೂಹಿಕ ಆತ್ಮಹತ್ಯೆಯೆಡೆಗೆ ಸಾಗಿದ ಉದಾಹರಣೆಗಳು ಧಾರಾಳ ಇವೆ.

ಹೆಚ್ಚಿನವರು ಜೀವನದ ಅಗತ್ಯಗಳನ್ನು ಪೂರೈಸಲು ಬಡ್ಡಿಯಿಂದ ಸಾಲ ಪಡೆಯುವುದಿಲ್ಲ. ದೊಡ್ಡ ದೊಡ್ಡ ಐಶಾರಾಮದ ಮನೆ ನಿರ್ಮಿಸಲು, ಅತ್ಯಾಧುನಿಕ ಕಾರು ಖರೀದಿಸಲು, ಸುಖಲೋಲು ಪತೆಯ ಜೀವನ ಸಾಗಿಸಲು ಸಾಲ ಮಾಡುತ್ತಾರೆ.

ಬಡ್ಡಿಯು ಮನುಷ್ಯನನ್ನು ಉರುಳಿನಂತೆ ಕುತ್ತಿಗೆಯನ್ನು ಬಿಗಿಯುತ್ತದೆ. ಈ ಬಿಗಿಯಾದ ಉರುಳಿನಿಂದ ರಕ್ಷಣೆ ಹೊಂದುವುದು ಸುಲಭದ ಕೆಲಸವಲ್ಲ. ಉತ್ಪಾದನೆಯ ಕೊರತೆ ವ್ಯಾಪಾರದ ನಾಶಕ್ಕೂ ಅದು ಹೇತುವಾಗುತ್ತದೆ. ಅಲ್ಲಾಹನು ಮತ್ತು ಆತನ ಸಂದೇಶವಾಹಕರು ನಿಷಿ ದ್ಧಗೊಳಿಸಿ ದಂತಹ ಬಡ್ಡಿ ವ್ಯವಹಾರದಲ್ಲಿ ಲೀನವಾಗುವುದರ ಮತ್ತು ವ್ಯಾಪಾರ ಪ್ರಾರಂಭಿಸುವುದರ ಕುರಿತು ಸಮಾಜದಲ್ಲಿ ಹೆಚ್ಚಿನ ಎಚ್ಚರ ವಹಿಸುತ್ತಿಲ್ಲ.

ಈ ಕುರಿತು ನಿರ್ಲಕ್ಷ್ಯ ಮನೋಭಾವವಿದೆ. ಪ್ರಸಕ್ತ ಸಂದರ್ಭದಲ್ಲಿ ಇಸ್ಲಾಮಿನ ವಿಧಿಗಳ ಕಡೆಗೆ ಗಮನಹರಿಸದೆ ತಾತ್ಸಾರ ಮನೋಭಾವದಿಂದ ಮುಂದುವರಿಯುತ್ತಾರೆ. ಇದು ಬಹಳ ಅಪಾಯ ಕಾರಿ ನಡೆಯೆಂಬುದನ್ನು ಸಮುದಾಯವು ಅರ್ಥೈಸ ಬೇಕಾಗಿದೆ.

ಬಡ್ಡಿ ತಿನ್ನುವವರಿಗೆ ಐಶ್ವರ್ಯ ವೃದ್ಧಿಸದು. ಅವರಿಗೆ ಜನಸಾಮಾನ್ಯರ ಸಂಕಷ್ಟಗಳ ನೋವು ಸಮಸ್ಯೆಯೇ ಅಲ್ಲ.
ಮಾನವೀಯತೆಯನ್ನು ಅವರಿಂದ ನಿರೀಕ್ಷಿಸ ಲಾಗದು. ಬಡ್ಡಿ ತಿನ್ನುವವರು ಶೈತಾನನ ಪೀಡೆಗೆ ಸಿಲುಕಿದಂತವರಂತೆ ವ್ಯವಹರಿಸುತ್ತಾರೆ ಎಂದು ಪವಿತ್ರ ಕುರ್‍ಆನಿನಲ್ಲಿ ನೀಡಿದ ಉಪಮೆಯು ಗಮನಾರ್ಹವಾಗಿದೆ. ಬಡ್ಡಿಕೋರರನ್ನು ಹಣದ ಹುಚ್ಚು ಮತ್ತು ಹಣದ ಅಮಲು ಆವರಿಸಿರುತ್ತದೆ.

ಹಣ ಸಂಪಾದಿಸುವ ಹುಚ್ಚಿನಿಂದ ಎಂತಹ ಕೃತ್ಯಕ್ಕೂ ಅವರು ಹೇಸುವುದಿಲ್ಲ. ಬುದ್ಧಿ ಭ್ರಮಣೆ ಯಾದವರಂತೆ ಹಣದ ಹಿಂದೆ ಓಡುವರು. ಧಾರ್ಮಿಕ ಅನುಭೂತಿ, ಸ್ನೇಹ, ಸಹೋದರತೆ ಇವ್ಯಾವುದನ್ನೂ ಅವರು ಪರಿಗಣಿಸಲಾರರು. “ಬಡ್ಡಿ ತಿನ್ನುವವರು ಪರಲೋಕದಲ್ಲಿ ಹುಚ್ಚು ಹಿಡಿದವರಂತೆ ಎದ್ದೇಳಿಸಲ್ಪಡುವರು” ಎಂದು ಇಬ್ನು ಅಬ್ಬಾಸ್(ರ) ಹೇಳುತ್ತಿದ್ದರು. ಬಡ್ಡಿಕೋರರಿಗೆ ಅತೀ ಭಯಂಕರವಾದ ಕ್ರೂರ ಶಿಕ್ಷೆಯು ಪರಲೋಕ ದಲ್ಲಿ ಲಭಿಸುವುದು ಎಂದು ಪ್ರವಾದಿವರ್ಯರು(ಸ) ತಾಕೀತು ನೀಡಿದ್ದಾರೆ.

ಬಡ್ಡಿಯ ವರಮಾನದಿಂದ ಹೊಟ್ಟೆ ತುಂಬಿಸಿ ಕೊಂಡವರು ಪರಲೋಕದಲ್ಲಿ ಆನೆಯಂತೆ ದೊಡ್ಡ ಹೊಟ್ಟೆಗಳೊಂದಿಗೆ ಬರುವರು ಎಂದು ಪ್ರವಾದಿ ವರ್ಯರು(ಸ) ಹೇಳಿರುತ್ತಾರೆ. (ಅಬೂದಾವೂದ್)

ಆದರೆ ಪ್ರಸಕ್ತ ಸಮಾಜದಲ್ಲಿ ಬಡ್ಡಿ ವ್ಯವಹಾರ ನಡೆಸುವವರನ್ನು ಸಮಾಜದಲ್ಲಿ ಗೌರವಾರ್ಹರಾಗಿ ಕಾಣುತ್ತಾರೆ. ಅಂತಹವರು ನಮ್ಮ ಊರಿನಲ್ಲಿ ಮಸೀದಿಯ ಆಡಳಿತ ಕಮಿಟಿ ಸಹಿತ ಧಾರ್ಮಿಕ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯನ್ನು ನಿಭಾಯಿಸುತ್ತಿರು ತ್ತಾರೆ. ಬಡ್ಡಿಯನ್ನು ತೀರಾ ಕ್ಷುಲ್ಲಕವಾಗಿ ಕಾಣುವ ಕಾರಣದಿಂದ ಈ ಪ್ರಕ್ರಿಯೆ ನಡೆದಿದೆ.

ಇಮಾಮ್ ಮಾಲಿಕ್(ರ) ಹೇಳುತ್ತಾರೆ, “ಅಲ್ಲಾಹನ ಗ್ರಂಥವನ್ನು ನಾನು ಅಧ್ಯಯನ ಮಾಡಿದೆ. ಕುಫ್ರನ್ನು ಹೊರತುಪಡಿಸಿದರೆ ಬಡ್ಡಿಗಿಂತ ಮಹಾಪಾಪ ಬೇರೊಂದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಯಾಕೆಂದರೆ ಅಲ್ಲಾಹ್ ಮತ್ತು ಪ್ರವಾದಿವರ್ಯರು(ಸ) ಬೇರೆ ಯಾವ ಪಾಪ ಮಾಡಿದವರೊಂದಿಗೆ ಯುದ್ಧ ಮಾಡಲು ಆದೇಶಿ ಸಿಲ್ಲ. ಆದರೆ ಬಡ್ಡಿ ವ್ಯವಹಾರ ನಡೆಸುವವರೊಂದಿಗೆ ಅಲ್ಲಾಹ್ ಮತ್ತು ಆತನ ಪ್ರವಾದಿ(ಸ) ಯುದ್ಧ ಮಾಡುವಂತೆ ಘೋಷಿಸಿದ್ದಾರೆ.
(ತಫ್ಸೀರ್ ಖುರ್ತುಬಿ 3/364)

ಹರಾಮ್‍ನಿಂದ ಬೆಳೆದ ದೇಹವು ನರಕವಲ್ಲದೆ ಇನ್ಯಾವುದಕ್ಕೂ ಅರ್ಹವಲ್ಲ ಎಂದು ಪ್ರವಾದಿ
ವರ್ಯರು(ಸ) ಹೇಳಿರುತ್ತಾರೆ. (ತಬ್ರಾನಿ)

ಈಮಾನ್ ಮತ್ತು ಬಡ್ಡಿ ತಿನ್ನುವಿಕೆ ಜೊತೆಯಾಗಿ ಸಾಗದು ಎಂದು ಕುರ್‍ಆನ್ ಎಚ್ಚರಿಸುತ್ತದೆ. ಹಾಗೆಯೇ ಬಡ್ಡಿ ವ್ಯವಹಾರಗಳಿಂದ ದೂರವಿರುವುದು ಕೂಡಾ ತಕ್ವಾ ಮತ್ತು ಸತ್ಯವಿಶ್ವಾಸದ ಲಕ್ಷಣವಾಗಿದೆ. ವ್ಯಭಿಚಾರ ಮತ್ತು ಬಡ್ಡಿಯು ಒಂದು ಸಮಾಜದಲ್ಲಿ ಕಂಡುಬಂದರೆ ಅವರು ಸ್ವಯಂ ದೈವಿಕ ಯಾತನೆಯನ್ನು ಆಹ್ವಾನಿಸುತ್ತಿದ್ದಾರೆಂದು ಪ್ರವಾದಿವರ್ಯರು(ಸ) ಎಚ್ಚರಿಸಿದ್ದಾರೆ.

ಎಲ್ಲ ರೀತಿಯ ಬಡ್ಡಿ ವ್ಯವಹಾರಗಳೂ ಇಸ್ಲಾಮಿನ ಪ್ರಕಾರ ನಿಷಿದ್ಧವಾಗಿದೆ. ಬಡ್ಡಿ ವ್ಯವಹಾರದೊಂದಿಗೆ ಸಾಮ್ಯತೆಯಿರುವ ಇತರೆಲ್ಲಾ ವ್ಯವಹಾರಗಳೂ ನಿಷೇಧದ ವ್ಯಾಪ್ತಿಗೆ ಬರುತ್ತದೆ. ಬಡ್ಡಿ ವ್ಯವಹಾರದಿಂದ ಉಂಟಾಗುವ ಇಹ ಪರದ ನಾಶ-ನಷ್ಟಗಳನ್ನು ಲೆಕ್ಕಿಸದೆ ಅದರೊಂದಿಗೆ ಸೌಮ್ಯ ಮನೋಭಾವದಿಂದ ವರ್ತಿಸುವವರಿದ್ದಾರೆ.

ಅಂತಹವರು ತಮ್ಮ ಚಿಂತನೆಯನ್ನು ಬದಲಿಸಿ ಕೊಳ್ಳಬೇಕು. ವ್ಯಾಪಾರ ವಹಿವಾಟುಗಳ ಸಂದರ್ಭಗಳಲ್ಲಿ ಪಾಲುದಾರರು ಲಾಭ-ನಷ್ಟ ವ್ಯವಹಾರದಲ್ಲಿ ಸಮಾನಪಾಲುದಾರರೆಂಬುದು ಇಸ್ಲಾಮಿನ ನಿಲುವು. ಅದನ್ನು ಉಲ್ಲಂಘಿಸಿ ಮೊದಲೇ ನಿರ್ಧರಿಸುವ ಲಾಭ ಮತ್ತು ಕರಾರು ವಹಿವಾಟುಗಳು ಇಸ್ಲಾವಿೂ ಶಿಷ್ಟಾಚಾರದ ಪ್ರಕಾರ ಬಡ್ಡಿಯ ಸಾಲಿಗೆ ಸೇರುತ್ತದೆ.