✍️ ಅಬೂ ಅನೀಸ್, ಕಲ್ಲಾಪು
ಕನ್ನಡ ಕರಾವಳಿಯ ಮೂರು ಪ್ರಮುಖ ಭಾಷೆಗಳಿಗೆ ಅದರದೇ ಆದ ಲಿಪಿಯಿಲ್ಲ. ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆ. ಈ ಮೂರು ಭಾಷೆಯವರು ತಮ್ಮ ಅನಿಸಿಕೆ ಮತ್ತು ಇಂಗಿತಗಳನ್ನು ಕನ್ನಡ ದೇವನಾಗರಿ ಭಾಷೆಯಲ್ಲಿ ಬರೆದು ಪ್ರಕಟಪಡಿಸುತ್ತಿದ್ದಾರೆ. ಹೀಗಿರುವಾಗ ಬ್ಯಾರಿ ಭಾಷೆಯನ್ನು ಉರ್ದು ಭಾಷೆಯಂತೆ ಅರೆಬಿಕ್ ಲಿಪಿಯಲ್ಲಿ ಬರೆದು ಪ್ರಯೋಗಿಸಿದರೇನು? ಇದರ ಅರ್ಥ ಈಗ ಚಾಲನೆಯಲ್ಲಿರುವ ಬ್ಯಾರಿ ಭಾಷೆಯಲ್ಲಿರುವ ಕನ್ನಡ ಲಿಪಿಗಳನ್ನು ಪೂರ್ಣವಾಗಿ ತ್ಯಜಿಸಬೇಕೆಂದು ಖಂಡಿತವಾಗಿಯೂ ಅಲ್ಲ.
ಕರಾವಳಿ ಪ್ರದೇಶದ ಬ್ಯಾರಿ ಭಾಷೆ ಮಾತಾಡುವ ಮುಸ್ಲಿಮರಿಗೆ ಅರೆಬಿಕ್ ಅಕ್ಷರ ಮಾಲೆ ಅಪರಿಚಿತವೇನಲ್ಲ. ಅರಬಿ ಭಾಷೆಯಲ್ಲಿರುವ ಪವಿತ್ರ ಕುರ್ಆನ್ ಅರ್ಥ ಅರಿಯದವರು ಅದನ್ನು ಪುಣ್ಯ ಸಂಪಾದನೆಗಾಗಿ ಪಾರಾಯಣ ಮಾಡುತ್ತಿದ್ದಾರೆ. ಅದರಂತೆ ಕೇರಳದಲ್ಲಿ ಮುಸ್ಲಿಮರು ಮಳೆಯಾಳಂ ದೇವನಾಗಿರಿ ಲಿಪಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಆದರೆ ಧಾರ್ಮಿಕ ಶಿಕ್ಷಣ ಕೊಡುವ ಮದ್ರಸಗಳಲ್ಲಿ ಅರೆಬಿಕ್ ಮಲೆಯಾಳಂ ಅನ್ನು ಮಾಧ್ಯಮವಾಗಿರಿಸಿಕೊಂಡು ಧಾರ್ಮಿಕ ಶಿಕ್ಷಣ ನೀಡಲಾಗುತ್ತದೆ.
ಇಸ್ಲಾಮಿನ ಕರ್ಮಶಾಸ್ತ್ರ (ಫಿಕ್ಹ್) ಮತ್ತು ಪ್ರವಾದಿ ಮುಹಮ್ಮದ್(ಸ)ರ ಜೀವನವೃತ್ತಾಂತ ಇತ್ಯಾದಿಗಳನ್ನು ಅರೇಬಿಕ್ ಮಲಯಾಳಮ್ ಭಾಷೆಯಲ್ಲೇ ಕಲಿಸಲಾಗುತ್ತಿದೆ. ಅಲ್ಲದೆ ಸಫೀಹತ್ ಮಾಲೆ, ಮುಹ್ಯುದ್ದೀನ್ ಮಾಲೆ ಇತ್ಯಾದಿ ಸಾಂಪ್ರದಾಯಿಕ ಪದ್ಯವನ್ನು ಮಾತ್ರವಲ್ಲ ಆದ್ಯೆ ಮೈತೆ ಎಂಬ ಪ್ರವಾದಿ(ಸ)ರ ದೌತ್ಯ ಚರಿತ್ರೆಯನ್ನು ಅತ್ಯಂತ ಸಂಕ್ಷಿಪ್ತವಾಗಿ ಮತ್ತು ಕೆಲವೇ ಪಂಕ್ತಿಗಳಲ್ಲಿ ಅದ್ಭುತವಾಗಿ ಕ್ರೋಢೀಕರಿಸಿದ ಕವನವು ಮುಸ್ಲಿಮ್ ವಲಯದಲ್ಲಿ ಇಂದಿಗೂ ಜನಪ್ರಿಯವಾಗಿದೆ. ಕೇರಳದ ಪ್ರಸಿದ್ಧ ಉಲೆಮಾ ದಿವಂಗತ ಕೆ. ಉಮರ್ ಮೌಲವಿಯವರು ಕುರ್ಆನ್ ಅನುವಾದ ಗ್ರಂಥವನ್ನು ಅರಬಿ ಮಲೆಯಾಳದಲ್ಲಿ ಪ್ರಕಟಿಸಿದ್ದಾರೆ.
ಸುಮಾರು 16ನೇ ಶತಮಾನದಲ್ಲಿ ಮದ್ರಸಾ ಮತ್ತು ಪಳ್ಳಿ ದರ್ಸ್ಗಳಲ್ಲಿರುವ ಮುತಅಲ್ಲಿಮ್ಗಳನ್ನು ಕೇಂದ್ರೀಕರಿಸಿಕೊಂಡು ಅಂದಿನ ಕೇರಳದ ಸುಪ್ರಸಿದ್ಧ ಉಲೆಮಾ ಸಯ್ಯದ್ ಸನಾವುಲ್ಲಾ ಮುಕ್ತಿ ತಂಙಳ್ ಎಂಬ ಮಹಾತ್ಮರು ಅರಬಿ ಮಲೆಯಾಳ ಅಕ್ಷರ ಮಾಲೆಯನ್ನು ರಚಿಸಿದರು. ಈ ಅಕ್ಷರ ಮಾಲೆಯನ್ನು ಕೇರಳದ ಮೌಲವಿಗಳು ಮದ್ರಸಾಗಳಲ್ಲಿ ಭಾಷಾ ಮಾಧ್ಯಮವಾಗಿ ಅಳವಡಿಸಿದರು.
ಅದರಂತೆ ಕನ್ನಡ ಕರಾವಳಿಯ ಬ್ಯಾರಿ ಮದ್ರಸಗಳಲ್ಲಿ ಅರಬಿ ಭಾಷೆಯಲ್ಲಿ ಪಠಿಸುವ ಪರಿಣಿತಿಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ಕಲಿಮ ಶಹಾದತ್ ನಮಾಝ್ ಅನುಷ್ಠಾನದಲ್ಲಿ ಹೇಳುವ ಶ್ಲೋಕಗಳ ಅರ್ಥವನ್ನು ಅರಬಿ ಮಲೆಯಾಳದಲ್ಲಿ ಬಾಯಿಪಾಠ ಮಾಡುವ ಕಾಲವೊಂದಿತ್ತು. ಆದರೆ ಇತ್ತೀಚೆಗಿನ ವರುಷಗಳಲ್ಲಿ ಮದ್ರಸಗಳಲ್ಲಿ ಅರಬಿ ಮಲೆಯಾಳವನ್ನು ಬರಹದ ಮೂಲಕ ಕಲಿಸುವ ಪರಿಪಾಠವನ್ನು ಚಾಲನೆಗೆ ತರಲಾಗಿದೆ. ಮಾತ್ರವಲ್ಲ ಬ್ಯಾರಿ ಸಮುದಾಯದಲ್ಲಿ ನಡೆಯುವ ನಿಕಾಹ್(ವಿವಾಹ)ಗಳನ್ನು ನೆರವೇರಿಸುವ ಖಾಜಿಗಳು ಹೆಚ್ಚಾಗಿ ಮಲೆಯಾಳ (ಅರಬಿ, ಮಲೆಯಾಳಿ ಶೈಲಿಯಲ್ಲಿ) ನಿಖಾಹ್ನ ಅರ್ಥೋದ್ದೇಶವನ್ನು ಹೇಳಿಕೊಡಲಾಗುತ್ತದೆ. ಮಸೀದಿಯಲ್ಲಿ ನಡೆಯುವ ಪ್ರವಚನಗಳು ಕೂಡಾ ಅರಬಿ ಮಲಯಾಳದ ಶೈಲಿಯಲ್ಲಿ ನಡೆಯುತ್ತದೆ. ಈ ನಿಯಮವನ್ನು ಕಾಯ್ದುಕೊಂಡಿರುವುದು ಒಂದು ಶ್ಲಾಘನಾರ್ಹ ಹೆಜ್ಜೆಯಾಗಿದೆ.
ಉರ್ದು ಮಾತೃ ಭಾಷೆಯಲ್ಲಿರುವವರ ಶಾಲೆ ಮದ್ರಸಗಳಲ್ಲಿ ಉರ್ದು ಭಾಷೆಯಲ್ಲೇ (ಫಿಕ್ಹ್) ಕರ್ಮಶಾಸ್ತ್ರಗಳನ್ನು ಕಲಿಸಲಾಗುತ್ತಿದೆ. ಮಾತ್ರವಲ್ಲ, ಇಂದು ಉರ್ದು ಭಾಷೆಯಲ್ಲಿ ಕುರ್ಆನ್ ಅನುವಾದ ಗ್ರಂಥ ವ್ಯಾಖ್ಯಾನ ಗ್ರಂಥಗಳು ಚಾಲನೆಯಲ್ಲಿವೆ. ತಫ್ಹೀಮುಲ್ ಕುರ್ಆನ್ ವ್ಯಾಖ್ಯಾನ ಗ್ರಂಥಗಳು 6 ಪರಿಚ್ಛೇದಗಳಲ್ಲಿ ಲಭ್ಯವಿವೆ. ಅದರ ಕನ್ನಡ ಅವತರಣಿಕೆಗಳೂ ಲಭ್ಯವಿವೆ.
ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಕೆಲವು ಮದ್ರಸಗಳಲ್ಲಿ, ಮುಸ್ಲಿಮರ ಮಾಲೀಕತ್ವದಲ್ಲಿರುವ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಇನ್ನು ಕೆಲವೆಡೆ ಕನ್ನಡ ಅಕ್ಷರಗಳಲ್ಲಿ ಮತ್ತು ಬಾಯ್ದರೆಯಾಗಿ ಕರ್ಮಶಾಸ್ತ್ರಗಳನ್ನು ಕಲಿಸಲಾಗುತ್ತಿದೆ. ಇದು ಭವಿಷ್ಯದಲ್ಲಿ ತೀವ್ರ ಗೊಂದಲಮಯವಾಗಿ ಪರಿಣಮಿಸಬಹುದು. ಈ ನಿಟ್ಟಿನಲ್ಲಿ ಸುಲಲಿತ ಮಾತೃ ಭಾಷೆಯಲ್ಲಿ ಧರ್ಮ ವಿಧಿ ಅನುಷ್ಠಾನಗಳನ್ನು ಕಲಿಸುವ ಭಾಷಾ ಮಾಧ್ಯಮವೊಂದರ ತುರ್ತು ಆವಶ್ಯಕತೆ ಇದೆ.
ಅದಕ್ಕಾಗಿ ಅರಬಿಕ್ ಅಕ್ಷರಗಳಲ್ಲಿ ಬ್ಯಾರಿ ಭಾಷೆಯನ್ನು ಚಾಲನೆಗೆ ತರುವ ಕಲೆಯನ್ನು ತರಬೇಕಾಗಿದೆ. ಇಂದು ಅರಬಿ ಮಲಯಾಳ ಭಾಷೆಯಲ್ಲಿ ಮಾತ್ರ ಉರ್ದು ಭಾಷೆಯಲ್ಲಿ ಅರಬಿ ಅಕ್ಷರಗಳನ್ನೇ ಬಳಸಲಾಗುತ್ತಿದೆ. ಅರಬಿಯಲ್ಲಿ ಇಲ್ಲದ ಕೆಲವು ಉಚ್ಚಾರಗಳಿಗೆ ಪರ್ಯಾಯ ಅಕ್ಷರ ರೂಪವನ್ನು ಸಿದ್ಧಪಡಿಸಲಾಗಿದೆ. ಉದಾ: ಚೀಂ. ಪೆ. ಝ್ಹೆ ಮಾತ್ರವಲ್ಲ ಇಂದು ಉರ್ದು ಭಾಷೆ ಯಾವುದೇ ಸಂಕೇತಗಳಿಲ್ಲದ ಅರ್ಥಾತ್ `ಫತಹ್, ಕಸ್ರ್, ಸುಕನ್, ಸದ್ದ್ ಮದ್ದ್ಗಳಿಲ್ಲದೆ ಸುಲಲಿತವಾಗಿ ಬರೆಯುವ ಭಾಷೆಯಾಗಿದೆ. ಉರ್ದು ಭಾಷೆ ಪುರಾತನ ಭಾಷೆಯೇನಲ್ಲ. ಕ್ರಿ.ಶ. 8ನೇ ಶತಕದಲ್ಲಿ ಅರಬಿಗಳು ಮತ್ತು ಸಿಂಧಿಗಳ ಸಂಪರ್ಕದಿಂದ ಉದ್ಭವಿಸಿದ ಭಾಷೆ ಎಂದು ಹೇಳಲಾಗುತ್ತಿದೆ. ಕ್ರಿ.ಶ. 1192 ರಲ್ಲಿ ಮುಹಮ್ಮದ್ ಘೋರಿಯ ಆಕ್ರಮಣದ ಬಳಿಕ ಬೆಳೆದು ಬಂದ ಭಾಷೆಯಾಗಿದೆ. ಅದರಲ್ಲಿ ಅರೆಬಿಕ್, ಪರ್ಷಿಯನ್, ತುರ್ಕಿ ಹಿಂದಿ ಭಾಷೆಯ ಶಬ್ದ ಪ್ರಯೋಗಗಳು ಸೇರಿಕೊಂಡಿವೆ.
15ನೇ ಶತಕದಲ್ಲಿ ಮೊಘಲ ಸಾಮ್ರಾಟ ಶಾಹ್ಜಹಾನನ ಕಾಲದಲ್ಲಿ ಭಿನ್ನ ಕಡೆಗಳಿಂದ ಬಂದು ಸೇರುತ್ತಿರುವ ಸೈನಿಕರ ನೇಮಕಾತಿಯಲ್ಲಿ ಅವರೊಳಗೆ ಏಕೀಕೃತ ಭಾಷೆಯ ಅಗತ್ಯವನ್ನು ಕಂಡು ಉರ್ದು ಭಾಷೆಯನ್ನು ಅಧಿಕೃತವಾಗಿ ಚಾಲನೆಗೆ ತರಲಾಗಿದೆ. ಇಂದು ಹಿಂದಿ ಸಿನಿಮಾಗಳಲ್ಲಿ ಉರ್ದು ಭಾಷೆಯ ಪದಪ್ರಯೋಗಗಳು ಅಧಿಕವಾಗಿವೆ. ಹಿಂದಿ ಸಿನಿಮಾಗಳಲ್ಲಿ ಬರುವ ನ್ಯಾಯಾಲಯ ನ್ಯಾಯದಾನದ ದೃಶ್ಯಗಳಲ್ಲಿ ಅತ್ಯಧಿಕ ಉರ್ದು ಪದಗಳನ್ನೇ ಬಳಸಲಾಗುತ್ತದೆ. ತನ್ಮೂಲಕ ನ್ಯಾಯಾಲಯದ ದೃಶ್ಯಗಳು ಅತ್ಯಂತ ರೋಚಕವಾಗಿ ಮೂಡಿ ಬರುತ್ತಿದೆ. ಉರ್ದು ಭಾಷೆಯು ಅರೆಬಿಕ್, ಪರ್ಷಿಯನ್, ತುರ್ಕಿ, ಹಿಂದಿ ಶಬ್ದಾವಳಿಗಳಿಂದ ಸಮೃದ್ಧ ಭಾಷೆಯಾಗಿ ಬೆಳೆದು ಬಂದಿದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಸುಂದರ ಭಾಷೆಯಾಗಿ ಮೂಡಿ ಬಂದಿದೆ.
ಅದನ್ನೇ ಮಾದರಿಯನ್ನಾಗಿಸಿಕೊಂಡು ಅರೆಬಿಕ್ ಅಕ್ಷರಗಳಲ್ಲಿ ಬ್ಯಾರಿ ಭಾಷೆಯನ್ನು ಪ್ರಯೋಗಿಸಿದರೆ ಮತ್ತು ಅದರಲ್ಲಿ ಸಾಕಷ್ಟು ಉರ್ದು ಅರೆಬಿಕ್, ಮಲಯಾಲಮ್ ಕನ್ನಡ ಶಬ್ದಗಳನ್ನು ಪೋಣಿಸಿದರೆ ಬ್ಯಾರಿ ಭಾಷೆಯು ಸಮೃದ್ಧ ಸುಂದರ ಭಾಷೆಯಾಗಿ ಮೂಡಿ ಬರಬಹುದು. ಮಸೀದಿ ಪಕ್ಕದಲ್ಲಿರುವ ಬ್ಯಾರಿ ಭಾಷಾ ಮದ್ರಸಗಳಲ್ಲಿ ಅರೇಬಿಕ್ ಅಕ್ಷರಗಳಲ್ಲಿರುವ ಬ್ಯಾರಿ ಭಾಷೆಯನ್ನು ಪ್ರಯೋಗಿಸಬೇಕು.
ಇದಕ್ಕಾಗಿ ಬ್ಯಾರಿ ಭಾಷಾ ಧಾರ್ಮಿಕ ವಿದ್ವಾಂಸರು, ಶಿಕ್ಷಣ ತಜ್ಞರುಗಳನ್ನೊಳಗೊಂಡ ಸಮಿತಿಯನ್ನು ಸ್ಥಾಪಿಸಬೇಕಾದೀತು. ಬ್ಯಾರಿ ಭಾಷೆಯ ಙ ಮತ್ತು ಞ ಅಕ್ಷರಗಳಿಗೆ ಪೂರಕವಾದ ಅರಬಿಕ್ ಅಕ್ಷರ ರೂಪವನ್ನು ರಚಿಸಬೇಕು. ಉರ್ದು ಭಾಷೆಯಂತೆ ಫತಹ್, ಕಸ್ರ್, ಸುಕೂನ್, ಸದ್ದ್ ಇಲ್ಲದ ಸರಳವಾದ ಅರೆಬಿಕ್ ಅಕ್ಷರ ಮಾಲೆಯನ್ನು ರೂಪಿಸಬೇಕು. ಮದ್ರಸದ ಪ್ರಥಮ ದರ್ಜೆಯಿಂದ ಈ ಭಾಷೆಯ ಚಾಲನೆ ಮಾಡ ಬೇಕಾದೀತು. ಫಿಕ್ಹ್, ಕ್ರಿಯಾಶಾಸ್ತ್ರಗಳಿಗೆ ಸಂಬಂಧಿಸಿದ ಪಠ್ಯಪುಸ್ತಕಗಳನ್ನು ಅರೆಬಿಕ್ ಬ್ಯಾರಿ ಭಾಷೆಯಲ್ಲಿ ಪ್ರಕಟಿಸಬೇಕಾದೀತು. ಹೀಗಾದರೆ ಮುಂದಿನ ಹತ್ತು ಹದಿನೈದು ವರುಷಗಳಲ್ಲಿ ಅರೆಬಿಕ್ ಬ್ಯಾರಿ ಭಾಷಾ ಪರಿಣಿತಿ ಹೊಂದಿದ ಅನೇಕ ಪ್ರತಿಭೆಗಳನ್ನು ಕಾಣಬಹುದು. ಮಾತ್ರವಲ್ಲ ಅರೆಬಿಕ್ ಬ್ಯಾರಿ ಭಾಷೆಯು ಉರ್ದು ಭಾಷೆಯಂತೆ ಸಮೃದ್ಧ ಭಾಷೆಯಾಗಿ ಮೂಡಿ ಬರಲೂಬಹುದು.












