ಸನ್ಮಾರ್ಗ ವಾರ್ತೆ
ನವದೆಹಲಿ: ಬರೇಲಿಯಲ್ಲಿ ಮೌಲಾನಾ ತೌಕೀರ್ ರಝಾ ಖಾನ್ ಹಾಗೂ ಇತರರನ್ನು ಅನ್ಯಾಯವಾಗಿ ಬಂಧಿಸಿರುವುದನ್ನು ಜಮಾತ್-ಎ-ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿ ತೀವ್ರವಾಗಿ ಖಂಡಿಸಿದ್ದಾರೆ.
“ಗೌರವಾನ್ವಿತ ವಿದ್ವಾಂಸ ಮೌಲಾನಾ ತೌಕೀರ್ ರಝಾ ಖಾನ್ ಅವರ ಬಂಧನವು ಗಂಭೀರ ಕಳವಳಕಾರಿ ವಿಷಯ. ಇದು ಕೋಮು ರಾಜಕೀಯ ಮತ್ತು ದ್ವೇಷಾಧಾರಿತ ಆಡಳಿತವು ದೇಶವನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದೆ ಎಂಬುದರ ಸ್ಪಷ್ಟ ಪ್ರತಿಬಿಂಬವಾಗಿದೆ. ‘ನಾನು ಪ್ರವಾದಿ ಮುಹಮ್ಮದ್ ಅವರನ್ನು ಪ್ರೀತಿಸುತ್ತೇನೆ’ ಎಂಬ ಸರಳ ಘೋಷಣೆಯನ್ನು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಎಂದು ಸಿನಿಕತನದಿಂದ ಚಿತ್ರಿಸಿರುವುದು ವಿಷಾದನೀಯ. ಶಾಂತಿಯುತ ನಂಬಿಕೆಯ ಅಭಿವ್ಯಕ್ತಿಯನ್ನು ವ್ಯಾಪಕ ಎಫ್ಐಆರ್ಗಳು ಹಾಗೂ ಸಾಮೂಹಿಕ ಬಂಧನಗಳ ಮೂಲಕ ಅಪರಾಧೀಕರಿಸುವುದು ಕೇವಲ ನ್ಯಾಯಕ್ಕೆ ವಿರುದ್ಧ ಮಾತ್ರವಲ್ಲ, ಇದು ಭಾರತದ ನಾಗರಿಕತೆಯ ಗೌರವ ಹಾಗೂ ಬಹುತ್ವದ ಮೌಲ್ಯಗಳ ಮೇಲಿನ ನೇರ ದಾಳಿಯಾಗಿದೆ ಎಂದು ಅವರು ಹೇಳಿದ್ದಾರೆ.
ಅವರು ಮುಂದುವರಿದು, “ಮೌಲಾನಾ ಅವರನ್ನು ಮೊದಲು ಗೃಹಬಂಧನಕ್ಕೊಳಪಡಿಸಿ, ಬಳಿಕ ಭಾರತೀಯ ನ್ಯಾಯಸಂಹಿತೆಯ ಕಠಿಣ ನಿಬಂಧನೆಗಳಡಿ ವ್ಯಾಪಕ ಎಫ್ಐಆರ್ಗಳನ್ನು ದಾಖಲಿಸಿರುವುದು ವರದಿಗಳಲ್ಲಿ ಬಂದಿದೆ. ನೂರಾರು ಮುಸ್ಲಿಮರನ್ನು ಸರಿಯಾದ ತನಿಖೆಯಿಲ್ಲದೆ ಹೆಸರಿಸಿರುವುದು ಇನ್ನಷ್ಟು ಕಳವಳಕಾರಿ ವಿಷಯ. ಮೌಲಾನಾ ಅವರಂತಹ ಗೌರವಾನ್ವಿತ ವಿದ್ವಾಂಸರ ವಿರುದ್ಧ ಕೆಲವು ರಾಜಕೀಯ ನಾಯಕರು ಬಳಸಿದ ಅವಹೇಳನಕಾರಿ ಭಾಷೆ ಈ ಘಟನೆಯ ಹಿಂದಿನ ಕೊಳಕು ರಾಜಕೀಯವನ್ನು ಬಯಲಿಗೆಳೆಯುತ್ತದೆ. ರಾಜ್ಯ ಸರ್ಕಾರದ ಇಂತಹ ಅಧಿಕಾರ ದುರುಪಯೋಗವು, ಕಾನೂನಿನ ನಿಯಮವನ್ನು ದುರ್ಬಲಗೊಳಿಸುವುದಷ್ಟೇ ಅಲ್ಲ, ಪರಕೀಯತೆ ಮತ್ತು ಅಪನಂಬಿಕೆಯನ್ನು ಹೆಚ್ಚಿಸುತ್ತದೆ,” ಎಂದು ಹೇಳಿದರು.
“ಭಾರತದ ಪ್ರಜಾಪ್ರಭುತ್ವ ಪ್ರಯಾಣದಲ್ಲಿ ಅನೇಕ ಪ್ರತಿಭಟನೆಗಳು ಮತ್ತು ಆಂದೋಲನಗಳು ನಡೆದಿವೆ. ಕಲ್ಲು ತೂರಾಟ ಅಥವಾ ಆಸ್ತಿಗೆ ಹಾನಿಯಂತಹ ಹಿಂಸಾಚಾರದ ಕೃತ್ಯಗಳನ್ನು ಯಾವಾಗಲೂ ಖಂಡಿಸಲೇಬೇಕು. ಆದರೆ ಸರಿಯಾದ ತನಿಖೆಯಿಲ್ಲದೆ ಯಾವುದೇ ಆರೋಪವು ಸಿಂಧುತ್ವ ಹೊಂದಿರುವುದಿಲ್ಲ. ಕಾನೂನು ಜಾರಿ ಸಂಸ್ಥೆಗಳು ಸಮಾನತೆ ಹಾಗೂ ನ್ಯಾಯತತ್ತ್ವವನ್ನು ಪಾಲಿಸಬೇಕು. ಹಿಂದೆ ಇದೇ ರೀತಿಯ ಆಂದೋಲನಗಳನ್ನು ಕಠಿಣ ಕ್ರಮಗಳಿಲ್ಲದೆ ನಿರ್ವಹಿಸಲಾಗಿದೆ. ಆದರೆ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಆಯ್ದ ಹಾಗೂ ಅತಿಯಾದ ಕ್ರಮ ಕೈಗೊಳ್ಳುವುದು ಸಂವಿಧಾನದ ಚೈತನ್ಯಕ್ಕೂ, ನ್ಯಾಯಯುತ ಆಡಳಿತಕ್ಕೂ ವಿರುದ್ಧವಾಗಿದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
“ರಾಜಕೀಯ ಉದ್ದೇಶಗಳಿಗೆ ರಾಜ್ಯ ಯಂತ್ರೋಪಕರಣ ಮತ್ತು ಕಾನೂನು ಜಾರಿಯನ್ನು ದುರುಪಯೋಗಪಡಿಸಲಾಗುತ್ತಿದೆ. ಕಾನೂನು-ಸುವ್ಯವಸ್ಥೆಯ ಸವಾಲುಗಳನ್ನು ಕೋಮು ಧ್ರುವೀಕರಣದ ಅವಕಾಶಗಳಾಗಿ ಬಳಸಲಾಗುತ್ತಿದೆ. ಚುನಾವಣೆಗಳು ಸಮೀಪಿಸಿದಾಗ ಸಮುದಾಯಗಳನ್ನು ವಿಭಜಿಸುವುದು, ಅಪನಂಬಿಕೆಯನ್ನು ಹುಟ್ಟುಹಾಕುವುದು, ದೇಶದ ಸಾಮಾಜಿಕ ಬಾಂಧವ್ಯವನ್ನು ಕುಂದಿಸುವುದು ಮತ್ತೆ ಮತ್ತೆ ಮರುಕಳಿಸುತ್ತಿದೆ. ಇದು ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ದುರ್ಬಲಗೊಳಿಸುವ ಅಪಾಯಕಾರಿ ದಾರಿ” ಎಂದು ಹೇಳಿದರು.
ಜೆಐಎಚ್ ಅಧ್ಯಕ್ಷರು ಮುಸ್ಲಿಂ ಸಮುದಾಯಕ್ಕೆ ಶಾಂತಿಯುತವಾಗಿ, ದೃಢವಾಗಿ ನಿಲ್ಲುವಂತೆ ಹಾಗೂ ಪ್ರವಾದಿಯವರ ತಾಳ್ಮೆ, ಕರುಣೆ ಮತ್ತು ಸಹಾನುಭೂತಿಯ ಸಂದೇಶದಿಂದ ಮಾರ್ಗದರ್ಶನ ಪಡೆಯುವಂತೆ ಕರೆ ನೀಡಿದ್ದು, ಸರ್ಕಾರವು ಉತ್ಪ್ರೇಕ್ಷಿತ ಆರೋಪಗಳನ್ನು ಹಿಂತೆಗೆದುಕೊಳ್ಳಬೇಕು, ಅಮಾಯಕ ಬಂಧಿತರನ್ನು ಬಿಡುಗಡೆ ಮಾಡಿ, ಆಡಳಿತದಲ್ಲಿ ಸಮಾನತೆ ಹಾಗೂ ನ್ಯಾಯವನ್ನು ಪುನಃಸ್ಥಾಪಿಸಲಿ ಎಂದು ಒತ್ತಾಯಿಸಿದರು.
“ಭಾರತದ ಶಕ್ತಿ ಅದರ ಸಂವಿಧಾನ, ಬಹುತ್ವ ಹಾಗೂ ಪರಸ್ಪರ ಗೌರವದ ಸಾಮಾಜಿಕ ಬಾಂಧವ್ಯದಲ್ಲಿ ಇದೆ. ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ಈ ಅಡಿಪಾಯಗಳನ್ನು ದುರ್ಬಲಗೊಳಿಸುವುದು ಒಂದು ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೇ ಹಾನಿಕಾರಕ,” ಎಂದು ಸೈಯದ್ ಹುಸೇನಿ ಹೇಳಿದರು.












