ಬಸನಗೌಡ ಯತ್ನಾಳ್ ಮಹಾನ್ ಸುಳ್ಳುಗಾರ: ಸಿದ್ದರಾಮಯ್ಯ

0
124

ಸನ್ಮಾರ್ಗ ವಾರ್ತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಸಿಸ್ ಬೆಂಬಲಿಗರು ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವ ತನ್ವೀರ್ ಹಾಶ್ಮಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಸಿಎಂ, ‘ಯತ್ನಾಳ್ ಓರ್ವ ಮಹಾನ್ ಸುಳ್ಳುಗಾರ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತನ್ವೀರ್ ಹಾಶ್ಮಿ ಜೊತೆಗೆ ನನಗೆ ಬಹಳ ವರ್ಷಗಳಿಂದಲೂ ಸಂಬಂಧ ಇದೆ. ಆಗೆಲ್ಲ ಯಾಕೆ ಇವರು ಸುಮ್ಮನಿದ್ದರು. ಯತ್ನಾಳ್ ಅವರಿಗೆ ದ್ವೇಷದ ರಾಜಕಾರಣ ಮಾಡೋದೇ ಕೆಲಸ. ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಮಾಡುವ ರಾಜಕಾರಣ ಮಾಡ್ತಾರೆ. ಚುನಾವಣೆ ಗೆಲ್ಲಲು ಅವರು ಈ ರೀತಿ ಮಾಡಬಾರದು ಎಂದು ತಿಳಿಸಿದರು.

‘ಯತ್ನಾಳ್ ಓರ್ವ ಮಹಾನ್ ಸುಳ್ಳುಗಾರ. ರಾಜ್ಯಾಧ್ಯಕ್ಷ, ವಿಪಕ್ಷ ಸ್ಥಾನ ಸಿಗದೆ ಯತ್ನಾಳ್ ಸುಳ್ಳು ಆರೋಪ ಮಾಡ್ತಿದ್ದಾರೆ. ಈಗ ಹಾಶ್ಮಿಯವರೂ ಕೂಡ ಅವರ ಮೇಲಿನ ಆರೋಪ ಸಾಬೀತು ಮಾಡಲಿ ಅಂತ ಹೇಳಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆಯಲ್ಲವೇ? ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಸವಾಲೆಸೆದರು.

“ಬರೀ ಆರೋಪ ಮಾಡುವುದಲ್ಲ. 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿಯವರದ್ದೇ ಸರ್ಕಾರ ಇದೆಯಲ್ವಾ? ಮತ್ತೆ ಏನು ಮಾಡ್ತಾ ಇದ್ರು ಇಷ್ಟರವರೆಗೆ? ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ, ವಿಪಕ್ಷ ಸ್ಥಾನಕ್ಕೆ ಸಾಕಷ್ಟು ಪ್ರಯತ್ನಿಸಿದ್ದರೂ ಸಿಗಲಿಲ್ಲ. ಅದಕ್ಕಾಗಿ ಈ ರೀತಿಯ ಸುಳ್ಳು ಆರೋಪ ಮಾಡ್ತಿದ್ದಾರೆ” ಎಂದು ಮುಖ್ಯಮಂತ್ರಿ ತಿಳಿಸಿದರು.

ಮಂಗಳವಾರದ ಕಾರ್ಯಕ್ರಮದ ಚಿತ್ರ ಮತ್ತು ಕೆಲವು ಹಳೆಯ ಚಿತ್ರಗಳನ್ನು ಹಂಚಿಕೊಂಡಿರುವ ಯತ್ನಾಳ್, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಹುಬ್ಬಳ್ಳಿಯಲ್ಲಿ ಐಸಿಸ್ ಬೆಂಬಲಿಗರು ಮತ್ತು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿರುವ ತನ್ವೀರ್ ಹಾಶ್ಮಿ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ತನ್ವೀರ್ ಅವರು ಮಧ್ಯಪ್ರಾಚ್ಯದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಹಲವು ಬಾರಿ ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಈ ಭಯೋತ್ಪಾದಕ ಸಹಾನುಭೂತಿಯ ಹಿನ್ನೆಲೆ ತಿಳಿದಿದೆಯೇ? ಭಯೋತ್ಪಾದಕರೊಂದಿಗೆ ತನ್ವೀರ್ ಅವರ ನಂಟಿನ ಬಗ್ಗೆ ತನಿಖೆ ನಡೆಸಲು ಗುಪ್ತಚರ ಸಂಸ್ಥೆಗಳು ಮತ್ತು ಎನ್‌ಐಎಯನ್ನು ಒತ್ತಾಯಿಸುತ್ತೇನೆ” ಅಂತ ಹೇಳಿದ್ದಾರೆ. ಅಲ್ಲದೇ, ಕೇಂದ್ರ ಗೃಹ ಸಚಿವ ಅವರಿಗೂ ಪತ್ರ ಬರೆದಿದ್ದಾರೆ. ಅಲ್ಲದೇ, ಎನ್‌ಐಎಯ ಅಧಿಕೃತ ‘ಎಕ್ಸ್’ ಖಾತೆಗೂ ಟ್ಯಾಗ್ ಮಾಡಿದ್ದಾರೆ.