ಗೋರಖ್‌ ಪುರದಲ್ಲಿ ಯೋಗಿ ಆದಿತ್ಯನಾಥ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಝಾದ್

0
515

ಸನ್ಮಾರ್ಗ ವಾರ್ತೆ

ಲಕ್ನೋ: ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ಭೀಮ್ ಆರ್ಮಿ ಮುಖ್ಯಸ್ಥ, ಸಾಮಾಜಿಕ ಹೋರಾಟಗಾರ ಚಂದ್ರಶೇಖರ್ ಆಝಾದ್ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಆಝಾದ್ ಸಮಾಜ್ ಪಾರ್ಟಿ ಮಾಹಿತಿ ನೀಡಿದೆ.

ಆ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ನೇರ ಹೋರಾಟ ನಡೆಸಲಿದ್ದಾರೆ. ಜನವರಿ 18 ರಂದು, ಕಟ್ಟಾ ಬಿಜೆಪಿ ವಿಮರ್ಶಕರಾಗಿರುವ ಆಝಾದ್ ಅವರು ತಮ್ಮ ರಾಜಕೀಯ ಸಂಘಟನೆ – ಆಝಾದ್ ಸಮಾಜ ಪಕ್ಷ ಇತರರೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಕ್ತವಾಗಿದೆ ಮತ್ತು ನಮ್ಮ ಹೋರಾಟ ಯಾವಾಗಲೂ ಆಡಳಿತ ಪಕ್ಷ ಮತ್ತು ಆರೆಸ್ಸೆಸ್ ನೊಂದಿಗೆ ಇರುತ್ತದೆ ಎಂದು ಹೇಳಿದ್ದಾರೆ.

ಇದು ಚಂದ್ರಶೇಖರ್ ಆಝಾದ್ ಅವರ ಮೊದಲ ಚುನಾವಣೆಯಾಗಿದೆ. “ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸ್ಥಾನ ಗೆಲ್ಲುವುದು ನನಗೆ ಮುಖ್ಯವಲ್ಲ. ಯೋಗಿ ಆದಿತ್ಯನಾಥ ಅವರು ವಿಧಾನಸಭೆಗೆ ಬರಬಾರದು ಎಂಬುದು ನನಗೆ ಮುಖ್ಯವಾಗಿದೆ. ಹಾಗಾಗಿ ಅವರು ಎಲ್ಲಿ ಸ್ಪರ್ಧಿಸಿದರೂ ನಾನು ಸ್ಪರ್ಧಿಸುತ್ತೇನೆ” ಎಂದು ಅವರು ಕಳೆದ ವರ್ಷ ಹೇಳಿದ್ದರು. ಚಂದ್ರಶೇಖರ್ ಆಝಾದ್ ನೇತೃತ್ವದ ಭೀಮ್ ಆರ್ಮಿ ಮೇ 2017 ರಲ್ಲಿ ದಲಿತರು ಮತ್ತು ಮೇಲ್ವರ್ಗದ ಠಾಕೂರರ ನಡುವೆ ಸಹರಾನ್‌ಪುರದಲ್ಲಿ ಘರ್ಷಣೆಯ ಸಮಯದಲ್ಲಿ ಗಮನ ಸೆಳೆದಿತ್ತು.

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮತದಾನವು ಫೆಬ್ರವರಿ 10 ರಿಂದ ಪ್ರಾರಂಭವಾಗಲಿದೆ ಮತ್ತು ಮಾರ್ಚ್ 7 ರವರೆಗೆ ಮುಂದುವರಿಯುತ್ತದೆ. ಗೋರಖ್‌ಪುರ ನಗರ ಕ್ಷೇತ್ರದಲ್ಲಿ ಮಾರ್ಚ್ 3 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ.