ಸನ್ಮಾರ್ಗ ವಾರ್ತೆ
ಮಧ್ಯಪ್ರದೇಶದ ಭೋಪಾಲ್ ನಗರದ ಪ್ರಮುಖ 3 ಮುಸ್ಲಿಂ ಇನ್ಸ್ಟಿಟ್ಯೂಷನ್ ಗಳ ಹೆಸರನ್ನು ಬದಲಾಯಿಸಲು ಭೋಪಾಲ್ ಮುನ್ಸಿಪಲ್ ಕಾರ್ಪೊರೇಷನ್ ತೀರ್ಮಾನಿಸಿದೆ. ಈ ಇನ್ಸ್ಟಿಟ್ಯೂಶನ್ ಗಳಿಗೆ ಭೋಪಾಲದ ಕೊನೆಯ ನವಾಬ ಸರ್ ಹಮೀದುಲ್ಲ ಖಾನ್ ಅವರ ನೆನಪಿನಲ್ಲಿ ಹೆಸರನ್ನು ಇಡಲಾಗಿತ್ತು. ಹಮೀದಿಯಾ ಹಾಸ್ಪಿಟಲ್, ಹಮೀದಿಯ ಕಾಲೇಜ್ ಮತ್ತು ಹಮೀದಿಯ ಸ್ಕೂಲ್ ಗಳ ಹೆಸರನ್ನು ಬದಲಾಯಿಸಬೇಕು ಎಂದು ಮುನ್ಸಿಪಲ್ ಕಾರ್ಪೊರೇಷನ್ ನಿರ್ಣಯ ಅಂಗೀಕರಿಸಿದೆ.
ನಾವು ಎರಡು ವರ್ಷಗಳಿಂದ ಈ ಹೆಸರು ಬದಲಾವಣೆಯ ಬಗ್ಗೆ ಒತ್ತಾಯ ಮಾಡುತ್ತಿದ್ದೆವು. ಕೊನೆಗೂ ಅದು ಈಡೇರುವ ಸಂದರ್ಭ ಬಂದಿದೆ ಎಂದು ಕಾರ್ಪೊರೇಷನ್ ಅಧ್ಯಕ್ಷ ಕಿಶನ್ ಸೂರ್ಯವಂಶಿ ಹೇಳಿದ್ದಾರೆ.
ಇದೇ ವೇಳೆ ಈ ಪ್ರಕ್ರಿಯೆಗೆ ವಿರೋಧ ಪಕ್ಷದ ನಾಯಕಿ ಶಬೀಸ್ತಾ ಜಾಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಈ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.
ಹೆಸರು ಬದಲಾವಣೆ ಮುನ್ಸಿಪಲ್ ಕಾರ್ಪೊರೇಷನ್ ನ ಏಜೆಂಡಾದಲ್ಲಿ ಇರಲಿಲ್ಲ. ನಾವು ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ದೂರು ಸಲ್ಲಿಸಿದ್ದೇವೆ. ಹೆಸರು ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಎಲ್ಲವನ್ನೂ ರಹಸ್ಯವಾಗಿ ಮಾಡಲಾಗಿದೆ. ಯಾರಿಗೂ ಗೊತ್ತಿಲ್ಲದಂತೆ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ನವಾಬ್ ಹಮಿದುಲ್ಲಾ ಅವರು 1949ರಲ್ಲಿ ತನ್ನ ಪ್ರದೇಶವನ್ನು ಭಾರತದೊಂದಿಗೆ ಸೇರಿಸಿದ್ದಾರೆ. ಅವರು 300ರಷ್ಟು ಇನ್ಸ್ಟಿಟ್ಯೂಷನ್ ಗಳನ್ನು ಕಟ್ಟಿದ್ದಾರೆ. ಅವೆಲ್ಲವನ್ನೂ ಅವರು ಭಾರತದ ಸುಪರ್ದಿಗೆ ವಹಿಸಿ ಕೊಟ್ಟಿದ್ದಾರೆ ನವಾಬರು ತಮ್ಮ ಆಡಳಿತಾತ್ಮಕ ಕೊಡುಗೆಗಾಗಿ ಗುರುತಿಸಿಕೊಂಡವರು ಮತ್ತು ಹೆಣ್ಣು ಮಕ್ಕಳಿಗೆ ಶಾಲೆಯನ್ನು ನಿರ್ಮಿಸಿರುವುದಕ್ಕಾಗಿ ಪ್ರಸಿದ್ಧಿಯನ್ನು ಪಡೆದವರು. ಅವರನ್ನು ನೀವು ದ್ರೋಹಿ ಎಂದು ಕರೆಯಲಾಗದು ಎಂದು ಇತಿಹಾಸ ತಜ್ಞ ಶಾನವಾಜ್ ಖಾನ್ ಹೇಳಿದ್ದಾರೆ.
ಇದೇ ವೇಳೆ ಈ ಹೆಸರು ಬದಲಾವಣೆಯನ್ನು ಕಿಶನ್ ಸೂರ್ಯವಂಶಿ ಸಮರ್ಥಿಸಿದ್ದಾರೆ. ಭೋಪಾಲ್ ಭಾರತದ ಭಾಗವಾಗುವುದನ್ನು ನವಾಬ್ ಬಯಸಿರಲಿಲ್ಲ. ಜನರ ಪ್ರತಿಭಟನೆಯ ಬಳಿಕ ಅವರು ಭಾರತದೊಂದಿಗೆ ಭೋಪಾಲನ್ನು ಸೇರಿಸಿದರು. ಇಂಥವರ ಹೆಸರನ್ನು ನಾವೇಕೆ ಇಡಬೇಕು ಎಂದವರು ಪ್ರಶ್ನಿಸಿದ್ದಾರೆ.












