ಸನ್ಮಾರ್ಗ ವಾರ್ತೆ
ಮಸೀದಿಯಾ ಲೌಡ್ ಸ್ಪೀಕರ್ ಅನ್ನು ಕಿತ್ತು ಹಾಕಿರುವ ಬಗ್ಗೆ ಮುಂಬ್ರ ದ ತಾಣೆ ಪೊಲೀಸ್ ಕಮಿಷನರ್ ಅನ್ನು ಉನ್ನತಮಟ್ಟದ ಮುಸ್ಲಿಂ ವಿದ್ವಾಂಸರ ನಿಯೋಗ ಭೇಟಿಯಾಗಿದೆ. ಮತ್ತು ತಮ್ಮ ಪ್ರತಿಭಟನೆಯನ್ನ ವ್ಯಕ್ತಪಡಿಸಿದೆ. ಈ ಘಟನೆಯು ರಾಜಕೀಯ ಪ್ರೇರಿತ ಎಂದು ಅದು ದೂರಿದೆ. ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರ ಕರೆಯ ಹಿನ್ನೆಲೆಯಲ್ಲಿ ಈ ಲೌಡ್ ಸ್ಪೀಕರ್ ಅನ್ನು ಕಿತ್ತು ಹಾಕಲಾಗಿದೆ ಎಂದು ನಿಯೋಗ ಆಕ್ಷೇಪ ವ್ಯಕ್ತಪಡಿಸಿದೆ.
ನಿಯೋಗದಲ್ಲಿ ಸ್ಥಳೀಯ ಶಾಸಕ ಜಿತೇಂದ್ರ ಅವಧ್, ಅಲ್ಪಸಂಖ್ಯಾತ ಆಯೋಗದ ಮಾಜಿ ಸದಸ್ಯ ಸೈಯದ್ ಅಲಿ ಅಶ್ರಫ್,, ಶರತ್ ಪವಾರ್ ಬಣದ ಶಮೀಮ್ ಖಾನ್, ಮೈನಾರಿಟಿ ವಿಭಾಗದ ಅಧ್ಯಕ್ಷ ಮುಫ್ತಿ ಆಶ್ರಫ್ ಮತ್ತು ಇತರರು ಭಾಗಿಯಾಗಿದ್ದರು.
ನಿಯೋಗದ ಆಕ್ಷೇಪವನ್ನು ಆಲಿಸಿದ ಪೊಲೀಸ್ ಕಮಿಷನ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇದೇ ವೇಳೆ ಆಯ್ದ ವಿಷಯಗಳಲ್ಲಿ ಮಾತ್ರ ಕ್ರಮ ಕೈಗೊಳ್ಳುವುದರ ವಿರುದ್ಧ ಶಾಸಕ ಅವಧ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮಸೀದಿ ಸ್ಪೀಕರ್ ಅನ್ನು ನೀವು ನಿಷೇಧಿಸುವುದಾದರೆ ಭಜನೆ ಮತ್ತು ಗಣಪತಿ ಹಬ್ಬದ ಆಚರಣೆಯನ್ನು ಕೂಡ ನಿಷೇಧಿಸಬೇಕು. ಒಂದನ್ನು ನಿಷೇಧಿಸಿ ಇನ್ನೊಂದನ್ನು ಒಪ್ಪಿಕೊಳ್ಳುವುದು ಕಾನೂನು ಪ್ರಕಾರ ತಪ್ಪು ಎಂದು ಅವರು ಎಚ್ಚರಿಸಿದ್ದಾರೆ.












