ಸನ್ಮಾರ್ಗ ವಾರ್ತೆ
ಪಶ್ಚಿಮ ಬಂಗಾರದ ಮಾಲ್ಡಾ ಜಿಲ್ಲೆಯ 19 ವರ್ಷದ ಮುಸ್ಲಿಂ ಯುವಕನನ್ನು ರಾಜಸ್ಥಾನ ಪೊಲೀಸರು ಬಲವಂತದಿಂದ ಬಾಂಗ್ಲಾದೇಶಕ್ಕೆ ಕಳುಹಿಸಿರುವುದಾಗಿ ವರದಿಯಾಗಿದೆ. ಈ ಯುವಕ ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ಹೊಂದಿದ್ದ ಹೊರತಾಗಿಯೂ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತೃಣ ಮೂಲ ಕಾಂಗ್ರೆಸ್ ಆರೋಪಿಸಿದೆ. ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಅಮೀರ್ ಎಂಬ ಈ ಯುವಕನನ್ನು ಜುಲೈ 22ರಂದು ವಿದೇಶಿ ಪ್ರಜೆ ಎಂದು ಘೋಷಿಸಿದ್ದಲ್ಲದೆ ಗಡಿಯ ಆಚೆಗೆ ಬಲವಂತದಿಂದ ಕಳುಹಿಸಿರುವುದಾಗಿ ಅಬ್ಸರ್ವರ್ ಪೋಸ್ಟ್ ರಿಪೋರ್ಟ್ ಮಾಡಿದೆ.
ಅವನು ರೋಹಿಂಗ್ಯನ್ನೂ ಅಲ್ಲ. ಬಾಂಗ್ಲಾದೇಶಿಯೂ ಅಲ್ಲ. ಬಂಗಾಳಿ ಭಾಷೆ ಮಾತಾಡುವ ಭಾರತೀಯನಾಗಿದ್ದಾನೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಝಮೀರುಲ್ ಇಸ್ಲಾಂ ಹೇಳಿದ್ದಾರೆ.
ಅಮೀರ್ ಎಂಬ ಯುವಕನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬಳಿಕ ಅಮೀರ್ ನ ತಂದೆಗೆ ಒಂದು ಕರೆ ಬಂತು. ಅಮೀರ್ ಬಾಂಗ್ಲಾದೇಶದ ಒಂದು ಗ್ರಾಮದಲ್ಲಿ ಇದ್ದಾನೆ ಎಂದು ಅ ಕರೆ ಮಾಡಿದವರು ತಿಳಿಸಿದರು.
ಪೊಲೀಸರು ಯಾವುದೇ ಪುರಾವೆ ಇಲ್ಲದೆ ಅಮೀರ್ ನನ್ನು ಬಾಂಗ್ಲಾದೇಶಕ್ಕೆ ಕಳುಹಿಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಮಗನನ್ನು ಮರಳಿ ಭಾರತಕ್ಕೆ ಕರೆ ತರಬೇಕು ಎಂದು ಈ ಕುಟುಂಬ ಹೈ ಕೋರ್ಟ್ ಗೆ ಅರ್ಜಿ ಹಾಕಿದೆ.
ಬಾಂಗ್ಲಾದೇಶಕ್ಕೆ ಅಟ್ಟುವುದಕ್ಕಿಂತ ಮೊದಲು ರಾಜಸ್ಥಾನದಲ್ಲಿ ಎರಡು ತಿಂಗಳ ಕಾಲ ಈತನನ್ನು ಬಂಧಿಸಿ ಇಡಲಾಗಿತ್ತು. ನಾಗರಿಕತ್ವಕ್ಕೆ ಸಂಬಂಧಿಸಿದ ಎಲ್ಲಾ ಪುರಾವೆಗಳ ಹೊರತಾಗಿಯೂ ಪೊಲೀಸರು ಈತನನ್ನು ಬಾಂಗ್ಲಾದೇಶಕ್ಕೆ ಅಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅಮೀರ್ ನ ಬಳಿ ಜನನ ಸರ್ಟಿಫಿಕೇಟ್ ಮತ್ತು ಆಧಾರ್ ಕಾರ್ಡ್ ಇತ್ತು ಎಂದು ಕೂಡ ಅರ್ಜಿಯಲ್ಲಿ ತಿಳಿಸಲಾಗಿದೆ.
ಬಂಗಾಳಿ ಭಾಷೆ ಮಾತಾಡುವ ಹಲವು ಮುಸ್ಲಿಮರನ್ನು ಇದಕ್ಕಿಂತ ಮೊದಲು ಬಾಂಗ್ಲಾದೇಶಕ್ಕೆ ಪೊಲೀಸರು ಅಟ್ಟಿರುವುದಾಗಿಯೂ ತಿಳಿದು ಬಂದಿದೆ.












