ಕೊರೋನ ನಿಬಂಧನೆಗಳ ನಡುವೆ ಬಿಹಾರ ಚುನಾವಣೆ: ಆಲಿಂಗನ, ಕೈ ಕುಲುಕುವಿಕೆಗೆ ನಿಷೇಧ; ರ್ಯಾಲಿಗಳಲ್ಲಿ ಮಾಸ್ಕ್ ಕಡ್ಡಾಯ

0
744

ಸನ್ಮಾರ್ಗ ವಾರ್ತೆ

ಪಾಟ್ನ,ಅ.10: ಕೊರೋನ ಮಹಾಮಾರಿಯ ನಡುವೆ ಈ ತಿಂಗಳು ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ರಾಜ್ಯ ಸರಕಾರ ಈ ವೇಳೆ ಪಾಲಿಸಬೇಕಾದ ನಿಬಂಧನೆಗಳನ್ನು ಪ್ರಕಟಿಸಿದೆ. ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸುವವರಿಗೆ ಮಾಸ್ಕ್ ಕಡ್ಡಾಯವಾಗಿದೆ. ಮುಚ್ಚಿದ ಹಾಲ್‍ಗಳಲ್ಲಿ 200 ಜನರು ಮಾತ್ರ ಇರಬೇಕು. ಜೊತೆಗೆ ಆರಡಿ ಸಾಮಾಜಿಕ ಅಂತರ ಕಡ್ಡಾಯ ಎಂದು ನಿಯಮವಾಳಿಗಳಲ್ಲಿ ಸರಕಾರ ತಿಳಿಸಿದೆ.

ಮತದಾರರು ಪರಸ್ಪರ ಅಪ್ಪಿಕೊಳ್ಳಬಾರದು, ನಾಯಕರು ಕೈಕುಲುಕುವುದನ್ನು ನಿಷೇಧಿಸಲಾಗಿದೆ. ಕಾರ್ಯಕ್ರಮ ನಡೆಯುವ ವೇದಿಕೆಯಲ್ಲಿ ನ್ಯಾಪ್‍ಕಿನ್‍ಗಳು ಇರಬೇಕು. ಅಣುನಾಶಕ ಪ್ರಯೋಗಿಸಬೇಕು. ಚುನಾವಣಾ ಪ್ರಚಾರಕ್ಕೆ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ನೀಡಿದ್ದ ಸಮಯವನ್ನು ಚುನಾವಣಾ ಆಯೋಗ ದ್ವಿಗುಣಗೊಳಿಸಿದೆ. ಜನರನ್ನು ಭೇಟಿಯಾಗದೆ ಪ್ರಚಾರ ಮಾಡುವುದನ್ನು ಪ್ರೋತ್ಸಾಹಿಸುವ ಉದ್ದೇಶವಿದು.

ಎಲ್ಲ ಪ್ರಾದೇಶಿಕ, ರಾಷ್ಟ್ರೀಯ ಪಾರ್ಟಿಗಳಿಗೆ 90 ನಿಮಿಷಗಳ ಕಾರ್ಯಕ್ರಮಗಳನ್ನು ದೂರದರ್ಶನ ಆಕಾಶವಾಣಿ ಪ್ರಾದೇಶಿಕ ಕೇಂದ್ರಗಳಲ್ಲಿ ನೀಡಲಾಗುತ್ತದೆ. 2015ರ ಚುನಾವಣೆಯನ್ನು ಗಮನದಲ್ಲಿಟ್ಟು ಹೆಚ್ಚುವರಿ ಸಮಯವನ್ನು ನಿಗದಿಗೊಳಿಸಲಾಗುತ್ತದೆ. ಒಂದು ಸೆಶನ್‍ನಲ್ಲಿ ಯಾವ ಪಾರ್ಟಿಗೂ 30 ನಿಮಿಷಕ್ಕಿಂತ ಹೆಚ್ಚು ಸಮಯ ನೀಡಲಾಗದು. ನಾಮಪತ್ರ ಸಲ್ಲಿಸುವ ಕೊನೆಯ ದಿನ ಮತ್ತು ಮತದಾನದ ಎರಡು ದಿವಸದ ಮೊದಲು ಕಾರ್ಯಕ್ರಮ ಪ್ರಸಾರವಾಗಲಿದೆ.

ಅಕ್ಟೋಬರ್ 28, ನವೆಂಬರ್ 3, 7 ಹೀಗೆ ಮೂರು ಹಂತದಲ್ಲಿ ಬಿಹಾರದ ಚುನಾವಣೆ ನಡೆಯಲಿದೆ.