ಬಿಹಾರದಲ್ಲಿ ಪಾಸ್ವಾನ್ ಫ್ಯಾಕ್ಟರ್: ವಿಭಜನೆಯಲ್ಲಿ ಲಾಭ ಪಡೆಯಲು ಮುಂದಾದ ಬಿಜೆಪಿ

0
520

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.10: ಎಲ್‍ಜೆಪಿ ಪಾರ್ಟಿಯ ನಾಯಕ ರಾಮ್ ವಿಲಾಸ್ ಪಾಸ್ವಾನ್‍ರ ನಿಧನವು ಬಿಹಾರ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ. ಬಿಹಾರದ ಚುನಾವಣೆಯಲ್ಲಿ ಪ್ರತಿಯೊಂದು ಪಾರ್ಟಿಯ ಮೇಲೆಯೂ ಪ್ರಭಾವ ಬೀರುವುದು ಖಾತರಿಯಾಗಿದೆ. ದಲಿತ ಸಮುದಾಯದ ಉನ್ನತ ನಾಯಕ ಪಾಸ್ವಾನ್ ದಲಿತ ಸಮುದಾಯದಲ್ಲಿ ಮಾತ್ರವಲ್ಲ ಸವರ್ಣೀಯರಲ್ಲಿಯೂ ಪ್ರಭಾವಿಯಾಗಿದ್ದು ಹಿಂದುಳಿದ ವಿಭಾಗಗಳ ಮತಗಳನ್ನು ಕೂಡ ಪಡೆದು ತನ್ನ ಪಕ್ಷವನ್ನು ವಿಸ್ತರಿಸಿದ್ದರು. ಪಾಸ್ವಾನ್‍ರ ರಾಜಕೀಯ ಅವಕಾಶವಾದ ರಾಜಕೀಯವನ್ನು ಎಷ್ಟರವರೆಗೆ ಅನುಸರಿಸುತ್ತಾರೆ ಎನ್ನುವುದರಲ್ಲಿ ಅವರ ಪುತ್ರ ಚಿರಾಗ್ ಮತ್ತು ಎಲ್‍ಜೆಪಿಯ ಭವಿಷ್ಯ ನಿಂತಿದೆ.

ಬಿಜೆಪಿಯ ಜೊತೆ ನಿಂತು ಮುಖ್ಯಮಂತ್ರಿಯಿಂದ ಕೇಂದ್ರ ಸಚಿವ ಸ್ಥಾನದ ಕನಸು ಕಾಣುತ್ತಿರುವ ನಿತೀಶ್‍ರನ್ನು ಶತ್ರುವಾಗಿ ಘೋಷಿಸಿ ಗೃಹ ಸಚಿವ ಅಮಿತ್‍ ಶಾರ ನಿಕಟವರ್ತಿಯಾಗಿಯೇ ಚಿರಾಗ್ ಮುಂದುವರಿಯುತ್ತಿದ್ದಾರೆ. ಜನತಾದಳ(ಯು)ನ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸಲು ಚಿರಾಗ್ ನಿರ್ಧರಿಸಿದ್ದಾರೆ. ಮುಂದಿನ ಮುಖ್ಯಮಂತ್ರಿಯ ಕುರ್ಚಿಯಲ್ಲಿ ಕಣ್ಣಿರಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿಗಳನ್ನು ಬೆಂಬಲಿಸುತ್ತಿರುವುದರಿಂದ ಬೇಗನೆ ಅವರು ಕೇಂದ್ರ ಸಚಿವರಾಗಲೂಬಹುದು.

ಬಿಜೆಪಿಯ ಗುರಿಯೇನೆಂದರೆ ನಿತೀಶರ ಜೆಡಿಯು, ನಂತರ ಮುಂದಕ್ಕೆ ಚಿರಾಗ್‍ರ ಎಲ್‍ಜೆಪಿಯನ್ನು ಮೂಲೆಗುಂಪಾಗಿಸಿ ಅಧಿಕಾರದಲ್ಲಿ ಕೂರುವುದಾಗಿದೆ. ರಾಮ್ ವಿಲಾಸ್ ಪಾಸ್ವಾನ್‍ರಂತೆ ಅವರ ಸಮುದಾಯ ಮಗನನ್ನು ಕಂಡೀತೆಂದು ತಿಳಿಯುವಂತಹ ಪ್ರಭಾವ ಚಿರಾಗ್‌ರಿಗಿಲ್ಲ. ಆದುದರಿಂದ ಬಿಜೆಪಿಯ ಗುರಿ ತುಂಬ ಸುಲಭವಾಗಲಿದೆ. ಇದೇವೇಳೆ, ನಿತೀಶ್-ಚಿರಾಗ್ ಜಗಳ ತೇಜಸ್ವಿ ಯಾದವ್‍ರ ಆರ್ಜೆಡಿ ಕಾಂಗ್ರೆಸ್-ಎಡಪಕ್ಷಗಳ ಸಖ್ಯಕ್ಕೆ ಕೆಲವು ಕ್ಷೇತ್ರದಲ್ಲಿ ಲಾಭವಾಗಬಹುದು. ಅದು ಅಧಿಕಾರಕ್ಕೇರುವಷ್ಟು ಸಂಖ್ಯೆಯನ್ನು ತಂದು ಕೊಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ.